January 18, 2025
BSS-bengaluru2019
ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿರುವ ಭಂಡಾರಿ ಬಂಧುಗಳಿಂದಲೇ ನಮ್ಮ ಸಮಾಜಕ್ಕೆ ಘನತೆ,ಮಾನ್ಯತೆ ಸಿಕ್ಕಿರುವುದು. ಆದ್ದರಿಂದ ವೃತ್ತಿ ಬಾಂಧವರನ್ನು ಗೌರವಿಸುವ ಕೆಲಸವಾಗಬೇಕು ಎಂಬ ವಲಯಾಧ್ಯಕ್ಷರ ಮಾತಿನಂತೆ ಈ ಬಾರಿಯ ವಾರ್ಷಿಕ ಮಹಾಸಭೆ, ಕೌಟುಂಬಿಕ ಸ್ನೇಹಕೂಟದಲ್ಲಿ ಒಂದು ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.ಅದರಂತೆ ಕಾರ್ಯಕ್ರಮಕ್ಕೆ ಆಗಮಿಸುವ ಕುಲವೃತ್ತಿ ಮಾಡಿಕೊಂಡಿರುವ ಪ್ರತಿಯೊಬ್ಬ ಸಮಾಜದ ಬಂಧುವಿಗೆ ಒಂದು ನೆನಪಿನ ಕಾಣಿಕೆಯನ್ನು ನೀಡುವುದು, ವಲಯದ ಕಟ್ಟಕಡೆಯ ವೃತ್ತಿನಿರತ ಬಂಧುವಿಗೂ ಈ ರೀತಿಯಲ್ಲಿ ಗೌರವ ಸಮರ್ಪಣೆ ಮಾಡುವ ನಿರ್ಧಾರ ಮಾಡಲಾಗಿತ್ತು.ಅದರಂತೆ ಸುಮಾರು ನೂರಾ ಇಪ್ಪತ್ತಕ್ಕೂ ಹೆಚ್ಚು ಬಂಧುಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. 
 
 
 
ಕಾರ್ಯಕ್ರಮಕ್ಕೆ ಆಗಮಿಸಿದ ಮಕ್ಕಳ ಮುಖದ ಮೇಲೆ ನಗು ಮೂಡಿಸುವ ಉದ್ದೇಶದಿಂದ ಹದಿನೈದು ವರ್ಷದೊಳಗಿನ ಭಂಡಾರಿ ಸಮಾಜದ ಪ್ರತಿಯೊಂದು ಮಗುವಿಗೂ ಒಂದು ನೆನಪಿನ ಕಾಣಿಕೆಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅದರಂತೆ ಕಾರ್ಯಕ್ರಮದಲ್ಲಿ ಹಾಜರಿದ್ದು ನೋಂದಣಿ ಮಾಡಿಕೊಂಡಿದ್ದ ನೂರಕ್ಕೂ ಹೆಚ್ಚು ಮಕ್ಕಳಿಗೆ ವೇದಿಕೆಗೆ ಆಹ್ವಾನಿಸಿ ನೆನಪಿನ ಕಾಣಿಕೆಯನ್ನು ಭಂಡಾರಿ ಸಮಾಜದ ಗಣ್ಯರಿಂದ ವಿತರಿಸಲಾಯಿತು.
 
 
ಬೆಳಗಿನ ಲಘು ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸಮಾಜದ ಬಂಧುಗಳಿಗೆ,ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
 
 
 
ಈ ಬಾರಿಯ ವಾರ್ಷಿಕ ಮಹಾಸಭೆಯಲ್ಲಿ ಭಂಡಾರಿ ಬಂಧುಗಳಿಗೆ ಇನ್ನೊಂದು ವಿಶೇಷ ಅವಕಾಶವನ್ನು ನೀಡಲಾಗಿತ್ತು. ಭಂಡಾರಿ ಸಮಾಜ ಸಂಘ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು,ಇನ್ನಷ್ಟು ಪ್ರಭಾವಶಾಲಿಯಾಗಲು ತನ್ನ ಕಾರ್ಯಶೈಲಿಯನ್ನು ಬದಲಾಯಿಸಿಕೊಳ್ಳಲು ಭಂಡಾರಿ ಬಂಧುಗಳಿಂದ ಸಲಹೆ ಸೂಚನೆಗಳನ್ನು ಅಹ್ವಾನಿಸಲಾಗಿತ್ತು.ಬಂಧುಗಳು ತಮ್ಮ ಸಲಹೆ,ಸೂಚನೆಗಳನ್ನು ಪ್ರಶ್ನೆಯ ರೂಪದಲ್ಲಿ ಬರೆದು ತಮ್ಮ ಮೊಬೈಲ್ ನಂಬರ್ ನಮೂದಿಸಿ ನಿಗದಿ ಪಡಿಸಿದ ಬಾಕ್ಸ್ ನಲ್ಲಿ ಹಾಕಲು ವಿನಂತಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ನಿರ್ಣಾಯಕರು ಆಯ್ಕೆ ಮಾಡಿದ ಮೂರು ಅತ್ಯುತ್ತಮ ಪ್ರಶ್ನೆಗಳಿಗೆ ವಲಯಾಧ್ಯಕ್ಷರು ಉತ್ತರಿಸುವುದಲ್ಲದೇ ಬಹುಮಾನವನ್ನು ನೀಡಲಾಗುವುದೆಂದು ಘೋಷಿಸಲಾಗಿತ್ತು.ಸುಮಾರು ಐವತ್ತಕ್ಕೂ ಹೆಚ್ಚಿನ ಪ್ರಶ್ನೆಗಳನ್ನು ಬಂಧುಗಳು ಬರೆದು ಹಾಕಿದ್ದರು.ಶ್ರೀ ಸುಧಾಕರ ಬನ್ನಂಜೆ, ಶ್ರೀ ಶೇಖರ್ ಭಂಡಾರಿ ಕಾರ್ಕಳ, ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಶ್ರೀ ಪ್ರಕಾಶ್ ಭಂಡಾರಿ ಕಟ್ಲರವರನ್ನು ಒಳಗೊಂಡ ನಿರ್ಣಾಯಕರ ತಂಡ ಮೂರು ಪ್ರಶ್ನೆಗಳನ್ನು ಅತ್ಯುತ್ತಮವೆಂದು ಆಯ್ಕೆ ಮಾಡಿತು. 
 
 
ಭಂಡಾರಿ ಸಮಾಜದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಓದುವುದಿದ್ದರೆ ಅದಕ್ಕೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಒಂದು ಭಂಡಾರಿ ಸಮಾಜದ ವಿದ್ಯಾಮಂದಿರ ಸ್ಥಾಪಿಸಲು ಸಾಧ್ಯವೇ? ಸರ್ಕಾರ ಸವಿತಾ ಮಹರ್ಷಿಗಳ ಜನ್ಮ ದಿನಾಚರಣೆ ಮತ್ತು ಹಡಪದ ಅಪ್ಪಣ್ಣ ಜನ್ಮ ದಿನಾಚರಣೆಗಾಗಿ ನೀಡುವ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರಿ ಅಧಿಕಾರಿಗಳು ಉತ್ಸವ ಆಚರಿಸಿ ವ್ಯರ್ಥಗೊಳಿಸುವುದಕ್ಕಿಂತ ಸಮಾಜದ ಬಡ ವಿದ್ಯಾರ್ಥಿಗಳ, ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೆ ವಿನಿಯೋಗಿಸಲು ಕಾರ್ಯಯೋಜನೆ ರಚಿಸಲು ಸಾಧ್ಯವೇ? ದೇವಸ್ಥಾನದ ಸಮಿತಿ ಅಥವಾ ಮಹಾಮಂಡಳದವರು ನೇರವಾಗಿ ಘಟಕಗಳಿಗೆ ಭೇಟಿ ಕೊಟ್ಟು ಕೇಂದ್ರ ವಲಯದ ಅನುಮತಿ ಇಲ್ಲದೆ ದೇಣಿಗೆ ಸಂಗ್ರಹಿಸುವುದು, ಪದಾಧಿಕಾರಿ ಬದಲಾವಣೆ ಈ ರೀತಿಯ ಚಟುವಟಿಕೆಗಳನ್ನು ಮಾಡಬಹುದೇ? ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ಸ್ಥಳೀಯ ಘಟಕಗಳ ಪದಾಧಿಕಾರಿಗಳು ನೀತಿ ನಿಯಮಗಳನ್ನು ಮೀರಿದರೆ ಅವರನ್ನು ಮೂರು ವರ್ಷಗಳ ಅವಧಿಗೆ ಅಮಾನತ್ತಿನಲ್ಲಿಡಲು ಸಾಧ್ಯವಿಲ್ಲವೇ? ಎಂದು ಕೇಳಿದ ಸಾಗರ ಭಂಡಾರಿ ಸಮಾಜ ಸಂಘದ ಕಾರ್ಯದರ್ಶಿಗಳಾದ ಶ್ರೀ ರವಿ ಪ್ರಕಾಶ್ ಭಂಡಾರಿ ಹೆಗ್ಗೋಡು ಪ್ರಶ್ನೆಗೆ ಪ್ರಥಮ ಬಹುಮಾನ ನೀಡಲಾಯಿತು. 
 
 
 
ಇಂದಿನ ದಿನಮಾನದಲ್ಲಿ ಭಂಡಾರಿ ಸಮಾಜದ ಯುವಕರು ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಕಡೆಗಣಿಸುತ್ತಿದ್ದಾರೆ,ಹೀಗೇ ಮುಂದುವರಿದರೆ ನಮ್ಮ ಕುಲಕಸುಬಿನ ಭವಿಷ್ಯ ಏನು? ಈ ದೃಷ್ಟಿಯಲ್ಲಿ ಭಂಡಾರಿ ಸಮಾಜ ಸಂಘ ಏನಾದರೂ ಕ್ರಮ ಕೈಗೊಂಡಿದೆಯೇ? ಎಂದು ಕೇಳಿದ ಶಿರಾಳಕೊಪ್ಪದ ಭಾಸ್ಕರ್ ಭಂಡಾರಿಯವರ ಪ್ರಶ್ನೆಗೆ ಎರಡನೇ ಬಹುಮಾನ. 
 
 
ಉನ್ನತ ವ್ಯಾಸಂಗ ಮಾಡಿ ನೀಟ್ ಅಥವಾ ಸಿಇಟಿ ಪರೀಕ್ಷೆಯನ್ನು ಎದುರಿಸುವ ಭಂಡಾರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಬೆಂಗಳೂರು ಭಂಡಾರಿ ಸಮಾಜ ಸಂಘ ಯಾವುದಾದರೂ ಯೋಜನೆಗಳನ್ನು ರೂಪಿಸಿದೆಯೇ? ಎಂದು ಕೇಳಿದ ಸೊರಬದ ಕುಮಾರಿ ಚೈತ್ರಾ ಬಾಬು ಭಂಡಾರಿಯವರ ಪ್ರಶ್ನೆಗೆ ಮೂರನೇ ಬಹುಮಾನವನ್ನು ನೀಡಲಾಯಿತು.
 
 
ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕರಾದ ರಾಜಶೇಖರ ಭಂಡಾರಿ ಬೆಂಗಳೂರು ರವರು ವಂದನಾರ್ಪಣೆಯನ್ನು ನೆರವೇರಿಸಿದರು.ಬೆಂಗಳೂರು ವಲಯ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರಿ ಸಾಗರ, ಕೋಶಾಧಿಕಾರಿಗಳಾದ ಶ್ರೀ ಕುಶಲ್ ಕುಮಾರ್, ಕಾರ್ಯದರ್ಶಿಗಳಾದ ಶ್ರೀ ಸುಧಾಕರ ಭಂಡಾರಿ,ಸೊರಬ-ಶಿರಾಳಕೊಪ್ಪ ಘಟಕದ ಅಧ್ಯಕ್ಷರಾದ ಶ್ರೀ ಜೋಗು ಭಂಡಾರಿ,ಕಾರ್ಯದರ್ಶಿಗಳಾದ ಶ್ರೀ ಸತೀಶ್ ಭಂಡಾರಿ ಸೊರಬ ಮತ್ತು ಕೋಶಾಧಿಕಾರಿಗಳಾದ ಶ್ರೀ ನಾಗರಾಜ್ ಭಂಡಾರಿಯವರಿಗೆ ವಂದನೆಗಳನ್ನು ಅರ್ಪಿಸಲಾಯಿತು. ಈ ದಿನದ ವಾರ್ಷಿಕ ಮಹಾಸಭೆಯ ಯಶಸ್ಸಿಗಾಗಿ ದುಡಿದ ಪ್ರತಿಯೊಬ್ಬರಿಗೂ ವಂದನೆಗಳನ್ನು ಅರ್ಪಿಸಲಾಯಿತು.  
 
ನೋಂದಣಿ ಕಾರ್ಯಕ್ರಮದ ಜವಾಬ್ದಾರಿಯನ್ನು  ವಹಿಸಿಕೊಂಡ ಶ್ರೀಮತಿ ವಸಂತಮ್ಮ ಜೋಗು ಭಂಡಾರಿ ನೇತೃತ್ವದ ತಂಡದ ಉಷಾ ರಮೇಶ್ ಭಂಡಾರಿ,ಬಿಂದು ಮಾಧವ ಭಂಡಾರಿ,ತನುಶ್ರೀ ಗೋಪಾಲಭಂಡಾರಿ,ತೇಜಸ್ವಿನಿ ಬಾಬು ಭಂಡಾರಿ,ಚೈತ್ರ ಬಾಬು ಭಂಡಾರಿ,ಸುನೀತಾ ರಂಜನ್ ಭಂಡಾರಿ,ಪುಷ್ಪ ಗಣೇಶ್ ಭಂಡಾರಿ,ಗೀತಾ ಸುಧಾಕರ ಭಂಡಾರಿ,ನವ್ಯ ಭಾಸ್ಕರ ಭಂಡಾರಿ,ಅನುಷ ಪ್ರಭಾಕರ್ ಭಂಡಾರಿ,ನೇತ್ರ ರತ್ನಾಕರ್ ಭಂಡಾರಿ,ಯಶೋಧ ಗಣೇಶ್ ಭಂಡಾರಿ,ನಿರೀಕ್ಷ ಭಂಡಾರಿ,ಜ್ಯೋತಿಕ ಸುರೇಶ್ ಭಂಡಾರಿ,ವೈಷ್ಣವಿ ಸುಧಾಕರ ಭಂಡಾರಿ ಇವರಿಗೆ ಮಾರ್ಗದರ್ಶನ ನೀಡಿದ ರಾಘವೇಂದ್ರ ಭಂಡಾರಿ ಬಸ್ರೂರು,ಕರಣ್ ಸುಧಾಕರ್ ಭಂಡಾರಿ ಅವರನ್ನು ಅಭಿನಂದಿಸಲಾಯಿತು.
 
 
ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನಾಗರಾಜ್ ಭಂಡಾರಿ,ಉಳವಿ ಗಣೇಶ್ ಭಂಡಾರಿ ಮತ್ತು ರಂಜನ್ ಜೋಗು ಭಂಡಾರಿ ಅವರನ್ನು,ಸಹಕರಿಸಿದ ಸುರೇಶ್ (ಉಪ್ಪಿ) ಭಂಡಾರಿ, ಸೊರಬದ ಪ್ರಸನ್ನ ಭಂಡಾರಿ,ಸುರೇಶ್ ಭಂಡಾರಿ,ಶ್ರೀಧರ್ ಭಂಡಾರಿ,ಪ್ರಕಾಶ್ ಭಂಡಾರಿ,ವಕೀಲರೂ ಘಟಕದ ಮಾಜೀ ಕಾರ್ಯದರ್ಶಿಗಳೂ ಆದ ಉಮೇಶ್ ಭಂಡಾರಿಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
 
 
 
 
ಕಾರ್ಯಕ್ರಮದ ನೇರಪ್ರಸಾರವನ್ನು ಯೂ ಟ್ಯೂಬ್ ನಲ್ಲಿ ಬಿತ್ತರಿಸುವ ಮೂಲಕ ಭಂಡಾರಿ ಬಂಧುಗಳ ತಾಂತ್ರಿಕ ಗುಣಮಟ್ಟವನ್ನು ಜಗತ್ತಿಗೆ ಪಸರಿಸಿದ ಭಂಡಾರಿವಾರ್ತೆಯ ಪ್ರಶಾಂತ್ ಭಂಡಾರಿ ಕಾರ್ಕಳ ರವರಿಗೆ ವಂದನೆಗಳನ್ನು ಅರ್ಪಿಸಲಾಯಿತು.
 
 
ಕಾರ್ಯಕ್ರಮ ಕಳೆಗಟ್ಟಲು ತಮ್ಮ ಹೆಚ್ಚಿನ ಪರಿಶ್ರಮವನ್ನು ಹಾಕಿ ವೇದಿಕೆಯನ್ನು ವರ್ಣರಂಜಿತವಾಗಿ ಅಲಂಕರಿಸಿ,ಆಕರ್ಷಕ ಸ್ವಾಗತ ಕಮಾನು ನಿರ್ಮಿಸಿ,ಫೋಟೋ ಬೂತ್ ನಿರ್ಮಾಣ ಮಾಡುವುದರೊಂದಿಗೆ ಚಿಣ್ಣರಿಗಾಗಿ ಬಣ್ಣ ಬಣ್ಣದ ಟ್ಯಾಟೂಗಳನ್ನು ಹಾಕಿ ಸುಮಾರು ಐವತ್ತು ಅರುವತ್ತು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಂಡು ಮಹಿಳೆಯರು ನಿರುಮ್ಮಳರಾಗಿ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಟ್ಟ ಕಲಾವಿದ ರತ್ನಾಕರ್ ಭಂಡಾರಿಯವರಿಗೆ ವಿಶೇಷವಾದ ವಂದನೆಗಳನ್ನು ಅರ್ಪಿಸಲಾಯಿತು.
 
 
 
 
ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಮಾಡಿಕೊಂಡಿದ್ದ ವಿವಿಧ ಸಮಿತಿಗಳ ಮೇಲ್ವಿಚಾರಣೆಯನ್ನು ನಿರ್ವಹಿಸಿದ ಸೊರಬದ ರಘು ಭಂಡಾರಿ,ಶಿರಾಳಕೊಪ್ಪದ ರಮೇಶ್ ಭಂಡಾರಿ ಮತ್ತು ಗಣೇಶ್ ಭಂಡಾರಿಯವರನ್ನು ಅಭಿನಂದಿಸಲಾಯಿತು. ನಮ್ಮ ಆತ್ಮೀಯ ಕರೆಗೆ ಓಗೊಟ್ಟು ಕಾರ್ಯಕ್ರಮದ ಪ್ರತಿ ಕ್ಷಣವನ್ನೂ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದುಕೊಟ್ಟ ನಾಗರಾಜ್ ಮತ್ತು ಸೊರಬದ ಇಂಜಿನಿಯರ್ ದರ್ಶನ್ ರಘು ಭಂಡಾರಿಯವರ ಛಾಯಾಗ್ರಹಣ ವ್ಯವಸ್ಥೆಯನ್ನು ಸ್ಮರಿಸಿಕೊಳ್ಳಲಾಯಿತು.
 
 
 
 
 
ಶಾಮಿಯಾನ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಿಕೊಟ್ಟು ಸಹಕರಿಸಿದ ಹಂಸಭಾವಿಯ ಉಜ್ಜಪ್ಪ ಅವರನ್ನು ಅಭಿನಂದಿಸಲಾಯಿತು.
 
 
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರಿ ಸಾಗರ ಅವರು ಸಭೆಗೆ ಕೈಮುಗಿದು ತಮ್ಮ ಹೃದಯಾಂತರಾಳದ ಅಭಿನಂದನೆಗಳನ್ನು ಅರ್ಪಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಅಂತಿಮ ತೆರೆ ಎಳೆಯಲಾಯಿತು.
 
 
 
ಭಂಡಾರಿವಾರ್ತೆ.
ವರದಿ : ಭಾಸ್ಕರ ಭಂಡಾರಿ ಶಿರಾಳಕೊಪ್ಪ.
 
 
 

1 thought on ““ಕ್ಷೌರಿಕ ವೃತ್ತಿನಿರತ ಭಂಡಾರಿ ಬಂಧುಗಳಿಂದಲೇ ನಮ್ಮ ಸಮಾಜಕ್ಕೆ ಮಾನ್ಯತೆ.ಅವರನ್ನು ಗೌರವದಿಂದ ಕಾಣಬೇಕು – ಮಾಧವ ಭಂಡಾರಿ ಸಾಗರ.”

  1. ಸಾಧನೆಯ ಹಾದಿಯಲ್ಲಿ ಭಂಡಾರಿ ಸಮುದಾಯಕ್ಕೆ ಸೇರಿದ ಎಲ್ಲಾ ನನ್ನ ಪ್ರೀತಿಯ ಸವಿತಾ ಸಮಾಜದ ಬಂಧುಗಳಿಗೆ ಚಳ್ಳಕೆರೆ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಹಾಗೂ ಖಜಾಂಚಿ ಹೆಚ್ ಪ್ರಕಾಶ್ ವತಿಯಿಂದ ವಂದನೆ ಅಭಿನಂದನೆ ಸಲ್ಲಿಸುತ್ತೇನೆ

Leave a Reply

Your email address will not be published. Required fields are marked *