November 22, 2024
hows-the-josh-deekshit

ಅದು ಫೆಬ್ರವರಿ 14, 2019. ಭಾರತದ ಪಾಲಿಗೆ ಕರಾಳ ದಿನವದು. ಜೈಶ್ ಉಗ್ರರ ದಾಳಿಗೆ ನಮ್ಮ ಹೆಮ್ಮೆಯ 49 ಯೋಧರು ಹುತಾತ್ಮರಾದರು. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಅವರ ತಾಣಗಳನ್ನು ಧ್ವಂಸ ಮಾಡಿರುವುದು ದೇಶದೆಲ್ಲೆಡೆ ಪ್ರಶಂಸೆಗೆ ಪಾತ್ರವಾಯಿತು. ಈ ಬಗ್ಗೆ ದೇಶದೆಲ್ಲೆಡೆ ಪರ, ವಿರೋಧಗಳ ಚರ್ಚೆಯೂ ಆಯಿತು. ಆದರೆ  ನಮ್ಮ ಹೆಮ್ಮೆಯ ಯೋಧರು ಎಷ್ಟು ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು, ನಮ್ಮನ್ನು ಕಾಯುತಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರದ ಸಂಗತಿ. ಒಬ್ಬ ಯೋಧನ ಮನದಾಳದ ಮಾತನ್ನು how`s the josh ಎಂಬ ಕಿರುಚಿತ್ರದ ಮೂಲಕ ಸಮಾಜದ ಮುಂದಿಡುವ ಪ್ರಯತ್ನವನ್ನು ನಮ್ಮ ಭಂಡಾರಿ ಸಮಾಜದ ಯುವ ಪ್ರತಿಭೆ ದೀಕ್ಷಿತ್ ಭಂಡಾರಿಯವರು ಮಾಡಿದ್ದಾರೆ.

ಹೌದು ಯಶಸ್ವಿ ನೀತಿ ಕಿರುಚಿತ್ರದ ಬಳಿಕ ದೀಕ್ಷಿತ್ ಭಂಡಾರಿಯವರು ನೂತನ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಪುಲ್ವಾಮಾ ದಾಳಿಯ ವಿಚಾರವನ್ನು ಮುಂದಿಟ್ಟುಕೊಂಡು ಕಿರುಚಿತ್ರವನ್ನು ತಯಾರಿಸಿದ್ದಾರೆ. ನಮ್ಮ ಯೋಧರ ಮೇಲೆ ದಾಳಿ ನಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ, ಮನೆ ಮನೆಗಳಲ್ಲಿ ಯುದ್ಧ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಆದರೆ ನಮ್ಮ ಜನರಿಗೆ ದೇಶದ ಬಗ್ಗೆ ಎಷ್ಟು ಗೊತ್ತು ಅನ್ನೋದೆ ವಿಚಾರ. ಹೀಗೆ ತಮಗೆ ಮನಬಂದಂತೆ ಮಾತನಾಡುವ ಜನರ ಮನಸ್ಸನ್ನು ಓರ್ವ ಯೋಧ ಹೇಗೆ ಬದಲಾಯಿಸುತ್ತಾನೆ ಅನ್ನೋದೇ ಚಿತ್ರದ ಕಥೆ.


ಚಿತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಸ್ಮಿತೇಶ್ ಬಾರ್ಯ, ನಿರ್ಮಾಪಕರಾದ ವಿನೋದ್ ಸಾಲ್ಯಾನ್, ಸಹ ನಟರಾಗಿ ರಕ್ಷಣ್, ಸಂತೋಷ್ ಕುಮಾರ್ ಜೈನ ನಟಿಸಿದ್ದಾರೆ . ದೀಕ್ಷಿತ್ ಭಂಡಾರಿ ಉಜಿರೆಯವರ ನಿರ್ದೇಶನ ಮತ್ತು ಛಾಯಾಗ್ರಹಣ ಚಿತ್ರಕ್ಕಿದೆ. ಕ್ಯಾಮೆರಾ ಸಹಾಯಕರಾಗಿ ಕಿಶೋರ್ ಓಡದ ಕರಿಯ ಕಾರ್ಯ ನಿರ್ವಹಿಸಿದ್ದಾರೆ. ಕೇವಲ 2 ಗಂಟೆಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಚಿತ್ರದ ಟ್ರೇಲರ್ ನಿಮ್ಮ ಮುಂದೆ ಬರಲಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದೀಕ್ಷಿತ್ ಭಂಡಾರಿ

ಶ್ರೀ ವಸಂತ್ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ವಸಂತ್ ಭಂಡಾರಿ ದಂಪತಿಗಳ ಪುತ್ರ ಶ್ರೀ ದೀಕ್ಷಿತ್ ಭಂಡಾರಿ ಉಜಿರೆ ನಿನ್ನಿಕಲ್ ನಲ್ಲಿ ತಮ್ಮ 22ನೇ ವರ್ಷದ ಹುಟ್ಟು ಹಬ್ಬವನ್ನು 16 ಮಾರ್ಚ್ 2019 ರ ಶನಿವಾರದಂದು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ದೀಕ್ಷಿತ್ ಗೆ ತಂದೆ,ತಾಯಿ,ಅಜ್ಜಿ,ಮಾವಂದಿರು,ಸಹೋದರಿಯರಾದ ದಿವ್ಯ ಭಂಡಾರಿ,ನವ್ಯ ಭಂಡಾರಿ, ಸ್ನೇಹಿತರು ಮತ್ತು ಬಂಧು ಬಳಗದವರು ಶುಭ ಹಾರೈಸಿದ್ದಾರೆ.

ಇಪ್ಪತ್ತೊಂದರ ಎಳವೆಯಲ್ಲಿಯೇ ನೃತ್ಯಕಲೆ, ಫೋಟೋಗ್ರಫಿ, ವೀಡಿಯೋಗ್ರಫಿ,ಎಡಿಟಿಂಗ್, ಕಿರುಚಿತ್ರ…. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಮನ ಸೆಳೆದು ತಮ್ಮದೇ ಆದ ಛಾಪು ಮೂಡಿಸುತ್ತ ಸದಾ ಲವಲವಿಕೆಯಿಂದಿರುವ ದೀಕ್ಷಿತ್ ಭಂಡಾರಿ ಇನ್ನೂ ಹತ್ತು ಹಲವು ಸಾಧನೆಗಳನ್ನು ಮಾಡಲಿ,ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತದೆ.

— ಭಂಡಾರಿವಾರ್ತೆ


Leave a Reply

Your email address will not be published. Required fields are marked *