ಸಸ್ಯ ಲೋಕ -14 ಸಂಸ್ಕೃತ ದಲ್ಲಿ ಔದುಂಬರ ಎಂದು ಕರೆಯಲ್ಪಡುವ ಈ ಮರ ಯಾವುದು ಅಂತೀರಾ…!? ಅದು ಬೇರಾವುದೂ ಅಲ್ಲ ತುಳುವಿನಲ್ಲಿ ಕರೆಯುವ ಅರ್ತಿಮರ . ಪುರಾಣ ಕಾವ್ಯದಲ್ಲಿ ಉಲ್ಲೇಖವಿರುವ ಮರಗಿಡಗಳ ಬಗ್ಗೆ ಭಾರತೀಯರಿಗೆ ಬಹಳ ನಂಬಿಕೆ ಹಾಗೂ ಪ್ರಾಮುಖ್ಯತೆ ಇದೆ. ಹಾಗಾಗಿ ಅಂತಹ ಮರಗಳ ಉಳಿವಿಗೆ ಮತ್ತು ಬೆಳವಣಿಗೆಗೆ ಜನರು ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತಹ ಮರಗಳಲ್ಲಿ ಅರ್ತಿಮರ ಕೂಡ ಒಂದು. ಅಂಜೂರ, ಅಶ್ವತ್ಥಮರ, ಹಾಗೂ ಆಲದಮರದ ಜಾತಿಗೆ ಸೇರಿದ ಈ ಅರ್ತಿಮರ ಕ್ಕೆ ಹೆಚ್ಚಾಗಿ ಯಾವುದೇ ಆರೈಕೆ ಇಲ್ಲದೆ ಬೆಳೆಯುತ್ತದೆ. ಇದರಲ್ಲಿ ಕಾಯಿ ಬಿಟ್ಟಾಗ ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ ಮತ್ತು ಹಣ್ಣಾದಾಗ ಕೆಂಪಾಗಿ ಮೃದುವಾಗಿರುತ್ತದೆ. ಇದನ್ನು ಹೋಳು ಮಾಡಿದಾಗ ಒಳಗಡೆ ಇರುವೆಗಳಿರುವವು. ಈ ಇರುವೆಗಳು ಪರಾಗಸ್ಪರ್ಶಕ್ಕೆ ನೆರವಾಗುತ್ತದೆ. ಕಾಂಡದಲ್ಲಿ ಗೊಂಚಲು ಗೊಂಚಲಾಗಳಾಗಿ ಕಾಯಿ ಬಿಡುವ ಅತ್ತಿಮರವೂ ಪಶು ಪಕ್ಷಿ ಗಳಿಗೆ ಪ್ರಿಯವಾಗಿದೆ ಅಲ್ಲದೆ ಇದರ ಹಣ್ಣು ಪುಷ್ಠಿದಾಯಕವೂ ಕೂಡ ಹೌದು.
ಉಪಯೋಗ:-
ಅತ್ತಿ ಮರದ ಬೇರನ್ನು ತುಂಡರಿಸಿ ಅದಕ್ಕೆ ಚಿಕ್ಕ ಬಾಟಲಿ ಕಟ್ಟಿ ಮುಚ್ಚಳವನ್ನು ಬಿಗಿದು ಬಟ್ಟೆಯಲ್ಲಿ ಮುಚ್ಚಿ ಇಟ್ಟರೆ ಮರುದಿನ ಬೆಳಗ್ಗೆ ಬಾಟಲಿಯೊಳಗೆ ಮಂದವಾದ ಅಂಟುದ್ರವ ಸಂಗ್ರಹವಾಗುತ್ತದೆ. ಮೂತ್ರ ವಿಸರ್ಜನೆ ಸಲೀಸಾಗುವುದು. ಅತ್ತಿಮರದ ತೊಗಟೆಯ ಕಷಾಯ ಗರ್ಭಕೋಶದ ತೊಂದರೆ, ಮುಟ್ಟು ದೋಷ ತೊಂದರೆ, ಮೂತ್ರಕೋಶದ ತೊಂದರೆಯಲ್ಲಿ ಶಮನಕಾರಿ. ಅತ್ತಿಯ ಹಸಿ ಕಾಯಿಗಳನ್ನು ಉಪ್ಪು ನೀರಲ್ಲಿ ಹಾಕಿಟ್ಟು ಬೇಕಾದಾಗ ತೆಗೆದು ಪಲ್ಯ ಮಾಡಿ ತಿನ್ನಬಹುದು. ಇದರ ಕಾಯಿಯಿಂದ ಚಟ್ನಿ , ಪಲ್ಯ ತಯಾರಿಸುತ್ತಾರೆ. ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ. ಇದರ ಹಣ್ಣನ್ನು ತಿನ್ನುವುದರಿಂದ ಕಫದ ಬಾದೆ , ರಕ್ತನಾಳದ ದೋಷ ಉಪಶಮನವಾಗುತ್ತದೆ.
ಮಳೆಯ ನೀರನ್ನು ಇಂಗಿಸಿ ಅಂತರ್ಜಲ ಅಭಿವೃದ್ಧಿ ಪಡಿಸುವ ಮರಗಳಲ್ಲಿ ಅತ್ತಿ ಮರವೂ ಒಂದು. ನವಗ್ರಹಗಳಲ್ಲಿ ಶುಕ್ರನಿಗೆ ಪೂಜನೀಯ ಮರ ಅತ್ತಿ. ನಕ್ಷತ್ರ ವನದಲ್ಲಿ ‘ಕೃತಿಕಾ’ ನಕ್ಷತ್ರಕ್ಕೆ ಪೂಜನೀಯ ಮರ. ರಾಶಿವನದಲ್ಲಿ ವೃಷಭ ರಾಶಿಗೆ ಗರಿಕೆಯ ಜೊತೆಗೆ ಅತ್ತಿಮರವೂ ಒಂದಾಗಿದೆ.ಇದರ ಹಣ್ಣುಗಳನ್ನು ಹಕ್ಕಿಗಳು ತಿನ್ನುವ ಮೂಲಕ ಬೀಜ ಪ್ರಸಾರವಾಗಿ ಗಿಡಗಳು ಹುಟ್ಟಿಕೊಳ್ಳುತ್ತವೆ. ಆಂಗ್ಲ ಭಾಷೆಯಲ್ಲಿ cluster Fig ಎಂದು ಕರೆಯಲ್ಪಡುವ ಅರ್ತಿ Moraceae ಕುಟುಂಬಕ್ಕೆ ಸೇರಿದೆ. ಸಸ್ಯಶಾಸ್ತ್ರದಲ್ಲಿ ಇದರ ಹೆಸರು Ficus Racemosa ಎಂಬುದಾಗಿದೆ.
✍️ಸುಪ್ರೀತ ಪ್ರಶಾಂತ್ ಭಂಡಾರಿ ಸೂರಿಂಜೆ
|
|