ಹಿಂಸೆ ನೀಡುವ ಗಂಟಲು ನೋವಿಗೆ ಕಾರಣವೇನು, ಹೇಗೆ ತಡೆಗಟ್ಟಬಹುದು, ಗಂಟಲು ನೋವಿನ ಆರೈಕೆ ಹೇಗೆ ಸಲಹೆ ಇಲ್ಲಿದೆ ನೋಡಿ.
ಎಲ್ಲಾ ಕಾಲದಲ್ಲಿಯೂ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಗಂಟಲು ನೋವು ಕೂಡ ಒಂದು. ಅನೇಕ ಕಾರಣಗಳಿಗೆ ಅನೇಕ ವಿಧಗಳಲ್ಲಿ ಬರುವ ಗಂಟಲು ನೋವು ಅತಿಯಾದ ಹಿಂಸೆ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕೆಲವರಿಗೆ ಗಂಟಲಿನ ಭಾಗ ಊದಿಕೊಳ್ಳಬಹುದು, ಇನ್ನು ಕೆಲವರಿಗೆ ಊಟ, ಆಹಾರ ಹಾಗಿರಲಿ ಎಂಜಲು ನುಂಗಲು ಸಹ ಕಷ್ಟವಾಗುತ್ತದೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಹೆಚ್ಚು ಜಾಗೃತೆವಹಿಸುವುದು ಮುಖ್ಯವಾಗಿರುತ್ತದೆ. ಏಕೆಂದರೆ ಇದು ಮುಂದೆ ಶಸ್ತ್ರಚಿಕಿತ್ಸೆಯ ಹಂತಕ್ಕೂ ತಲುಪಬಹುದು.
ಹಾಗಾದರೆ ಯಾವೆಲ್ಲ ರೀತಿಯ ಗಂಟಲು ನೋವು ಬರುತ್ತದೆ, ಮುಂಜಾಗೃತೆ ಹೇಗೆ ತೆಗೆದುಕೊಳ್ಳಬೇಕು, ಎಂತಹ ಆಹಾರ ಸೇವನೆ ಮಾಡಬೇಕು .
ಸಾಮಾನ್ಯವಾಗಿ ಗಂಟಲು ನೋವು ಬರುವುದು ಇದೇ ಕಾರಣಕ್ಕೆ
- ಗಂಟಲಿನ ಧ್ವನಿಪೆಟ್ಟಿಗೆಯಲ್ಲಿ ಅಥವಾ ಅನ್ನನಾಳದಲ್ಲಿ ಹುಣ್ಣಾದರೆ
- ಟಾನ್ಸಿಲ್ ಗ್ರಂಥಿಗೆ ಸೋಂಕು ತಗುಲಿದರೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ
- ಇನ್ನು ಕೆಲವೊಮ್ಮೆ ಲಾಲಾರಸದ ಗ್ರಂಥಿಗಳು ಅಂದರೆ salivary glands ಗಳಿಗೆ ಸೋಂಕು ತಗುಲಿದರೆ ಗಂಟಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
- ಕೆಲವು ಸಂದರ್ಭದಲ್ಲಿ ಕಿವಿಯ ಕೆಳಭಾಗದಲ್ಲಿ ಕುತ್ತಿಗೆಯ ಬಳಿ ನೋವಿನ ಉಂಡೆಗಳ ರೀತಿ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಶೀತ ಅಥವಾ ಸೋಂಕು ತಗುಲಿದ ಕಾರಣ ಉಂಟಾಗುತ್ತದೆ. ಇದು ಕೂಡ ಹೆಚ್ಚಿನ ನೋವನ್ನು ನೀಡುತ್ತದೆ.
ಗಂಟಲು ನೋವಿನ ತಡೆಗೆ ಹೀಗೆ ಮಾಡಿ
- ಇತ್ತೀಚಿನ ದಿನಗಳಲ್ಲಿ ಕೊರೋನಾ ಬಂದ ನಂತರ ಇದರ ಲಕ್ಷಣವಾಗಿಯೂ ಗಂಟಲು ನೋವು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಅದರಿಂದ ದೂರವಿರಲು ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸುವುದು ಮುಖ್ಯ .
- ಆದಷ್ಟು ಹೊರಗಿನ ತಿಂಡಿಗಳನ್ನು ಸೇವನೆ, ನೀರನ್ನು ಕುಡಿಯುವುದನ್ನು ಅವೈಡ್ ಮಾಡಿ. ಬಿಸಿ ನೀರನ್ನು ಕುದಿಸಿ ಆರಿಸಿ ಸೇವಿಸಿ. ಆದರೆ ನೆನಪಿಡಿ, ಒಂದು ಬಾರಿ ಕುದಿಸಿ ಆರಿಸಿಟ್ಟ ನೀರನ್ನು 24 ಗಂಟೆಗಳ ಕಾಲ ಮಾತ್ರ ಬಳಸಿ. ಅದಾದ ನಂತರ ಮತ್ತೆ ನೀರನ್ನು ಕುದಿಸಿಯೇ ಸೇವಿಸಿ.
- ಗಂಟಲಿನ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನುವಾಗ ಆದಷ್ಟು ತಣ್ಣನೆಯ ಮತ್ತು ಹಸಿ ಆಹಾರಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಉದಾಹರಣೆಗೆ ಕೋಸಂಬರಿ, ತರಕಾರಿಗಳ ಸಲಾಡ್ ಇತ್ಯಾದಿ. ಸರಿಯಾದ ಆಹಾರ ಸೇವನೆ ಕೂಡ ಗಂಟಲನ್ನು ಆರೋಗ್ಯವಾಗಿಟ್ಟುಕೊಳ್ಳಲು ನೆರವಾಗುತ್ತದೆ.
- ಗಂಟಲು ನೋವು ಕಾಣಿಸಿಕೊಂಡರೆ ಬಿಸಿ ನೀರಿಗೆ ಉಪ್ಪು ಅಥವಾ ಅರಿಶಿನ ಸೇರಿಸಿ ಗಾರ್ಗಲ್ ಮಾಡುವುದು, ಬಿಸಿ ನೀರನ್ನೇ ಸೇವನೆ ಮಾಡುವುದು ಈ ರೀತಿಯ ಕ್ರಮಗಳಿಂದ ಗಂಟಲಿನ ನೋವನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ.
ಚಿಕಿತ್ಸೆ ಏನು?
ಎಲ್ಲಾ ರೀತಿಯ ಗಂಟಲಿನ ನೋವಿಗೆ ಆಯುರ್ವೇದದಲ್ಲಿ ನೈಸರ್ಗಿಕ ಪದಾರ್ಥಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅದೂ ಅಲ್ಲದೆ ಗಂಟಲಿನ ನೋವಿನ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು .
ಟಾನ್ಸಿಲೈಟಿಸ್ ಆದಾಗ ಟಾನ್ಸಿಲ್ ಗ್ರಂಥಿಗಳು ಸಡಿಲವಾಗಿ ಬಿಳಿಯ ಬಣ್ಣದ ದ್ರವ ತುಂಬಿಕೊಳ್ಳುತ್ತದೆ. ಇದರಿಂದ ತೀವ್ರವಾದ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಇದ್ದಾಗ ಆಯುರ್ವೇದದಲ್ಲಿ ಕ್ಷಾರ ಕರ್ಮ ಎನ್ನುವ ಚಿಕಿತ್ಸೆ ನೀಡಲಾಗುತ್ತದೆ.
ಗಂಟಲು ನೋವು ಇದ್ದಾಗ ಎಂತಹ ಆಹಾರ ಸೇವಿಸಿದರೆ ಒಳ್ಳೆಯದು?
- ಸಾಮಾನ್ಯವಾಗಿ ಕೆಲವರಿಗೆ ಆಹಾರ ಸೇವನೆಗೆ ಕಷ್ವವಾಗುತ್ತದೆ. ಆಗ ಬಿಸಿ ನೀರಿಗೆ ಉಪ್ಪು , ಅರಿಶಿನ ಹಾಕಿ ಒಮ್ಮೆ ಗಾರ್ಗಲ್ ಮಾಡಿಕೊಳ್ಳಿ. ಆಗ ಗಂಟಲಿಗೆ ಹಿತವಾದ ಅನುಭವವಾಗುತ್ತದೆ. ಜೊತೆಗೆ ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸೊಂಕು ನಿವಾರಣೆಯಾಗುತ್ತದೆ.
- ಆದಷ್ಟು ಉಗುರು ಬೆಚ್ಚಿಗಿನ ಆಹಾರವನ್ನು ಸೇವಿಸಿ. ಗಂಜಿಯಂತಹ ಲಘು ಆಹಾರ ಸೇವನೆ ಆರಾಮದಾಯಕ ಅನುಭವ ನೀಡುತ್ತದೆ.
- ಇನ್ನು ಖೀರ್ ಅಥವಾ ಪಾಯಸದಂತಹ ದ್ರವ ಆಹಾರಗಳನ್ನೂ ಸೇವಿಸಬಹುದು. ಇದಕ್ಕೆ ತುಪ್ಪ, ಹಾಲು, ಸಕ್ಕರೆ ಹಾಕಿದಾಗ ದೇಹಕ್ಕೆ ಬೇಕಾದ ಪೌಷ್ಟಿಕಾಂಶವೂ ಸಿಗುತ್ತದೆ. ಜೊತೆಗೆ ಗಂಟಲಿಗೂ ಹೆಚ್ಚು ಕಷ್ಟವಾಗದಂತೆ ಆಹಾರವನ್ನು ಸೇವಿಸಬಹುದಾಗಿದೆ.
ಬಿಸಿ ನೀರಿನ ಗಾರ್ಗಲ್ ಗಂಟಲು ನೋವಿಗೆ ಬೆಸ್ಟ್ ಮದ್ದು
ಸಾಮಾನ್ಯವಾಗಿ ಗಂಟಲು ನೋವಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ತಕ್ಷಣದ ಪರಿಹಾರ ಎಂದರೆ ಬಿಸಿ ನೀರಿಗೆ ಉಪ್ಪು, ಅರಿಶಿನ ಹಾಕಿ ಗಾರ್ಗಲ್ ಮಾಡುವುದು. ಇದು ಗಂಟಲು ನೋವಿನಿಂದ ತ್ವರಿತ ಪರಿಹಾರ ನೀಡುತ್ತದೆ. ಕೆಲವೊಮ್ಮೆ ರಾತ್ರಿ ಒಂದೇ ಸಮನೆ ಗಂಟಲು ನೋವು ಕಾಡಿದರೆ ನೀವು ಈ ರೀತಿ ಮಾಡಬಹುದು. ಒಮ್ಮೆ ಆರಂಭವಾದ ಗಂಟಲು ನೋವನ್ನು ಗುಣಪಡಿಸಿಕೊಳ್ಳಲೇಬೇಕು. ಇದಕ್ಕೆ ಎಷ್ಟೇ ಬಿಸಿ ನೀರು, ಗಾರ್ಗಲ್ ಮಾಡಿದರೂ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ. ಇದರಿಂದ ಗಂಟಲು ನೋವಿನಿಂದಾಗುವ ಗಂಭೀರ ಅಪಾಯಗಳನ್ನು ತಪ್ಪಿಸಬಹುದಾಗಿದೆ.
ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ
ಮೂಲ: ವಿ ಕೆ