ಸೌಂದರ್ಯವರ್ಧನೆ ಆಧುನಿಕ ಜಗತ್ತಿನಲ್ಲಿ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಕ್ಷೌರ ಸೌಂದರ್ಯ, ಕೇಶ ಕರ್ತನ ಪ್ರಾಚೀನ ಕಾಲದಿಂದಲೂ ನಾಗರಿಕತೆಯ ಸಂಕೇತವೆಂದೇ ಭಾವಿಸಲಾಗಿದೆ. ಕ್ಷೌರಿಕರಿಲ್ಲದಿದ್ದರೆ ಸೌಂದರ್ಯ ಜಗತ್ತು ಕತ್ತಲಾಗುತ್ತದೆ. ಸೌಂದರ್ಯ ವೃದ್ಧಿಸುವ ನಿಮ್ಮ ಅಚ್ಚುಮೆಚ್ಚಿನ ಸೌಂದರ್ಯ ಸಲಹೆಗಾರ ಇಂದು ತೀವ್ರ ಸಂಕಷ್ಟದಲ್ಲಿದ್ದಾನೆ. ನಿಮ್ಮ ಕ್ಷೌರಿಕನ ಬಾಳು ಸರಿಸುಮಾರು ಮುಂದಿನ 3-4 ತಿಂಗಳಿನವರೆಗೆ ಕತ್ತಲಾಗಿರಬಹುದು. ಹೀಗಾದರೆ ಕ್ಷೌರ ಕೆಲಸಗಾರರ ಜೀವನ ಕತ್ತಲಾಗಬಹುದು ಅಥವಾ ಮುಂದೆ ಕ್ಷೌರ ಉದ್ಯಮ ಮುನ್ನಡೆಸಲೂ ಸಾಧ್ಯವಾಗದ ಸ್ಥಿತಿಗೆ ತಲುಪಬಹುದು.
ಕ್ಷೌರಿಕನ ಬಳಿ 3-4 ವಾರಗಳಿಗೊಮ್ಮೆಯಾದರೂ ಹೋಗುವ ನಿಮಗೆ ಕ್ಷೌರಿಕ ಅನಿವಾರ್ಯತೆ ತುಂಬಾನೇ ಇರುತ್ತದೆ. ಆದರೆ ಸಾಮಾಜಿಕ ಅಂತರವೆಂಬ ಹೊಸ ನಿಯಮ ನಿಮ್ಮ ಅನಿವಾರ್ಯತೆಗೆ ತಡೆ ಒಡ್ಡಿದೆ. ನಿಮಗೆ ತಿಳಿದಿರುವಂತೆ ಕೊರೋನಾ ವೈರಸ್ ಹರಡುವಿಕೆ ತಡೆಯಲು ವಿಶ್ವದಾದ್ಯಂತ ಲಾಕ್ ಡೌನ್ ಅಸ್ತ್ರ ಬಳಸಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ. ಅವಶ್ಯಕ ವಸ್ತುಗಳನ್ನು ಹೊರತು ಪಡಿಸಿ ಸೇವಾ ವಲಯ ಮತ್ತು ಕೈಗಾರಿಕಾ ವಲಯವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಜಿಮ್ ಸೆಂಟರ್ ನಿಂದ ಸೆಲೂನ್ ವರೆಗೆ ಎಲ್ಲವೂ ಬಂದ್ ಆಗಿದ್ದು, ಬಂದ್ ಗೂ ಮುನ್ನ ಅತಿ ಹೆಚ್ಚು ಕಾಳಜಿಯನ್ನು ಬ್ಯೂಟಿ ಪಾರ್ಲರ್ ಮತ್ತು ಸೆಲೂನ್ ಗಳಿಗೆ ವಹಿಸಲಾಗಿದೆ. ಜಿಲ್ಲಾಡಳಿತಗಳು ಪ್ರತ್ಯೇಕ ಅಧಿಸೂಚನೆ ಹೊರಡಿಸಿ ಸೆಲೂನ್ ಗಳನ್ನು ಮುಚ್ಚಿಸಿವೆ. ಕಾರಣ ಸೆಲೂನ್ ಗಳಲ್ಲಿ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲು ಕೂಡಾ ಸಾಧ್ಯವಿಲ್ಲ. ಹೀಗಾಗಿ ಸೆಲೂನ್ ಗಳು ಕೋವಿಡ್ -19 ವೈರಸ್ ಹರಡಲು ಅತಿದೊಡ್ಡ ಮಾಧ್ಯಮವೆಂದು ವಿಶೇಷ ಕಾಳಜಿಯಿಂದ ಸೆಲೂನ್ ಉದ್ಯಮಿಗಳೇ ಸ್ವ ಇಚ್ಚೆಯಿಂದ ಸೆಲೂನ್ ಮುಚ್ಚಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿರದ ಸೇವಾ ಉದ್ಯಮದಲ್ಲಿ ಸೆಲೂನ್ ಪ್ರಮುಖವಾಗಿದ್ದು, 21 ದಿನಗಳ ಲಾಕ್ ಡೌನ್ ನಂತರವೂ ಇದರ ಮೇಲಿನ ನಿಯಮ 3-4 ತಿಂಗಳು ಮುಂದುವರೆಯಲೂಬಹುದಾಗಿದ್ದು, ಸೆಲೂನ್ ಬಂದ್ ಯಥಾಸ್ಥಿತಿಯಲ್ಲೇ ಮುಂದುವರೆಯಬಹುದು. ಮನೆ ಮನೆ ಸೇವೆಗೆ ಬೇಡಿಕೆ ಬಂದರೂ ಕೂಡಾ ಇದು ಕೂಡಾ ಕೋರೋನಾ ಸೋಂಕು ಹರಡುವಿಕೆಗೆ ಕಾರಣವಾಗಬಹುದು. ಹೀಗಾಗಿ ಇದಕ್ಕೂ ಅವಕಾಶ ಸಿಗಲಾರದು. ಹೀಗಾಗಿ ಹೇರ್ ಕಟ್ , ಸೌಂದರ್ಯವರ್ಧನೆ ಸಾಧ್ಯವಿಲ್ಲದ ಮಾತಾಗಿದೆ.
ವಿಶ್ವದ ಅನೇಕ ದೇಶಗಳಲ್ಲಿ ಸೇವಾ ವಲಯದ ವೃತ್ತಿದಾರರು ಕೋರೋನಾ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದು, ವ್ಯವಹಾರ ನಿಂತುಹೋಗಿದೆ. ಇದರಲ್ಲಿ ಕ್ಷೌರಿಕರು ಮತ್ತು ಹೇರ್ ಸೈಲಿಸ್ಟ್ಸ್ ಕೂಡಾ ಸೇರಿದ್ದಾರೆ. ಇವರು ಕೆಲ ಕಾರಣಗಳಿಂದ ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಅಮೆರಿಕಾದ ಕ್ಷೌರಿಕ ಕೆವಿನ್ ಬಾಕರ್ ಹೇಳಿರುವಂತೆ “ಸೆಲೂನ್ ಮತ್ತು ಬ್ಯೂಟಿ ಪಾರ್ಲರ್ ಕೆಲಸಗಾರರು ಕಮಿಷನ್ ಆಧಾರಿತ ವೇತನ ಪಡೆಯುವವರಾಗಿದ್ದಾರೆ. ಇವರಿಗೆ ಕೆಲಸ ಇದ್ದರೆ ಮಾತ್ರ ವೇತನ ಹೀಗಾಗಿ ಇವರಿಗೆ ಬೇರೆ ಯಾವ ಆದಾಯ ಇಲ್ಲವಾಗಿದೆ.”
ನ್ಯೂಯಾರ್ಕ್ ನ ಹೇರ್ ಸ್ಟೈಲಿಷ್ಟ್ ರಾಯನ್ ಆಸ್ಟೀನ್ ಹೇಳಿರುವಂತೆ “ಹೇರ್ ಸ್ಟೈಲಿಸ್ಟ್ ಗಳು ಪ್ರೀಲ್ಯಾನ್ಸ್ ಅಥವಾ ಗುತ್ತಿಗೆ ಆಧಾರದಲ್ಲಿ ವೃತ್ತಿ ಮಾಡುತ್ತಿದ್ದು, ಗುತ್ತಿಗೆ ಸಿಕ್ಕಿದ್ದರೂ ಸಾಮಾಜಿಕ ಅಂತರದ ಪರಿಣಾಮ ಕೆಲಸ ಮಾಡಲಾಗದೇ ಆದಾಯ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.”
ಸೆಲೆಬ್ರಿಟಿಸ್ ಹೇರ್ ಸ್ಟೈಲಿಸ್ಟ್ ಗಳು ಕೂಡಾ ಆತಂಕಕ್ಕೊಳಗಾಗಿದ್ದು, ಕೆಲಸ ಮುಂದುವರೆಸಲು ಕೋರೋನಾ ಸೋಂಕಿನ ಭಯ ಕಾಡುತ್ತಿದೆ. ಸೆಲೆಬ್ರಿಟಿಗಳು ಕೂಡಾ ಸಾಮಾಜಿಕ ಅಂತರ ಬಯಸುವುದರಿಂದ ಮುಂದಿನ ದಿನಗಳಲ್ಲಿ ಹೇರ್ ಸ್ಟೈಲಿಸ್ಟ್ ಗಳಿಗೆ ಹಿಂದೆ ಇದ್ದ ಬೇಡಿಕೆ ಕಡಿಮೆಯಾಗುತ್ತದೆ. ಎಂದು ಅಮೆರಿಕಾದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಗಳು ಅಭಿಪ್ರಾಯ ಪಟ್ಟಿದ್ದಾರೆ.
“ಭಾರತದಲ್ಲಿ ಆಧುನಿಕ ಸೆಲೂನ್ ಗಳು ಮತ್ತು ಸಾಂಪ್ರಾದಾಯಿಕ ಸೆಲೂನ್ ಗಳೆಂಬ ಎರಡು ವರ್ಗವಿದ್ದು, ವಿಶ್ವದಾದ್ಯಂತ ಕ್ಷೌರಿಕರು ಪಡುವ ಕಷ್ಟಕ್ಕಿಂತ ಹೆಚ್ಚು ಕಷ್ಟಕ್ಕೆ ಒಳಗಾಗಲಿದ್ದಾರೆ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಸೆಲೂನ್ ಮುನ್ನಡೆಸುವ ಕುಟುಂಬಗಳು ಬಡತನದಿಂದ ಕೂಡಿದ್ದು, ಇವರು ತಮ್ಮ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬಂದು ಬಾಡಿಗೆ ಮನೆ ಮಾಡಿಕೊಂಡು ಸೆಲೂನ್ ಅಂಗಡಿಯನ್ನು ಬಾಡಿಗೆ ಅಥವಾ ಲೀಸ್ ಗೆ ಪಡೆದು ಸೆಲೂನ್ ಕೆಲಸ ಮಾಡುವವರಾಗಿದ್ದಾರೆ. ಇವರು ಆದಾಯವಿಲ್ಲದೇ ಮನೆ ಬಾಡಿಗೆ ಜೊತೆಗೆ ಅಂಗಡಿ ಬಾಡಿಗೆ ಕಟ್ಟಲಾಗದೇ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿಗೆ ಕೆಲವು ಕುಟುಂಬಗಳು ಬರಬಹುದು. ಮನೆ ಮನೆ ತೆರಳಿ ಕ್ಷೌರ ಮಾಡವುದು ಅಪಾಯಕಾರಿಯಾಗಿದ್ದು, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಿಲ್ಲದಾಗಿದ್ದು, ಇದು ಕ್ಷೌರಿಕರು ತಮ್ಮ ಜೀವದ ಜೊತೆ ಆಡುವ ಚೆಲ್ಲಾಟವಾಗುತ್ತದೆ. ಹೀಗಾಗಿ ಯಾರೂ ಮನೆಗೆ ತೆರಳಿ ಕ್ಷೌರ ಸೇವೆ ಒದಗಿಸುವುದು ಕೂಡಾ ಸಾಧ್ಯವಿಲ್ಲ. ಒಟ್ಟಾರೆ ಸಂಪೂರ್ಣ ಆದಾಯದ ಮೂಲವೇ ಸಂಪೂರ್ಣ ನಿಂತುಹೋಗಲಿದೆ. ಮುಂದಿನ ಮೂರು ತಿಂಗಳು ಸೆಲೂನ್ ಕಾರ್ಮಿಕರಿಗೆ ವಿಶೇಷವಾಗಿ ಬಂದ್ ಯಥಾಸ್ಥಿತಿ ಮುಂದುವರೆಯುವ ಲಕ್ಷಣವಿದ್ದು, ತುರ್ತುನಿಧಿಯನ್ನು ಸಮುದಾಯದ ಸಂಘಸಂಸ್ಥೆಗಳು ಒದಗಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲವಾದರೆ ಮುಂದೆ ಇವರು ಕ್ಷೌರ ವೃತ್ತಿಗೆ ಮರಳುವುದು ಕೂಡಾ ಅಸಾಧ್ಯವಾಗಲಿದೆ” ಎಂದು ಬೆಂಗಳೂರಿನ ಸೆಲೂನ್ ಉದ್ಯಮಿ ಪ್ರಕಾಶ್ ಭಂಡಾರಿ ಕಟ್ಲಾ ಅಭಿಪ್ರಾಯಪಟ್ಟಿರುತ್ತಾರೆ.
ಗ್ರಾಹಕರು ತೀವ್ರ ಸಂಕಷ್ಟದಲ್ಲಿರುವ ಕ್ಷೌರಿಕರಿಗೆ ಸಹಕರಿಸಿ ಸ್ಥೈರ್ಯ ತುಂಬುವುದು ಹೇಗೆ??
ಪ್ರತಿಯೊಬ್ಬರಿಗೆ ಒಬ್ಬ ಮೆಚ್ಚಿನ ಅಥವಾ ಖಾಯಂ ಕ್ಷೌರಿಕನೊಬ್ಬ ಇದ್ದೆ ಇರುತ್ತಾನೆ. ಅವರನ್ನು ಸಂಪರ್ಕಿಸಿ ಅವರ ಸ್ಥಿತಿಗತಿಯನ್ನು ತಿಳಿಯಿರಿ , ಅವರ ಸಮಸ್ಯೆಗೆ ಸ್ಪಂದಿಸಲು ಪ್ರಯತ್ನಿಸಿ…
ನೀವೂ ಈ ಕೆಳಗಿನವುಗಳನ್ನು ಪ್ರಯತ್ನಿಸಿ…
1) ನಿಮ್ಮ ಖಾಯಂ ಕ್ಷೌರಿಕರಲ್ಲಿ ಮುಂಗಡ ಬುಕ್ಕಿಂಗ್ ಆರಂಭಿಸಲು ಸಲಹೆ ನೀಡಿ ಬುಕ್ಕಿಂಗ್ ಮಾಡಿಕೊಳ್ಳಿ ನಿಮ್ಮ ನಂಬರ್ ಪಡೆದು ಬಂದ್ ತೆರವುಗೊಂಡ ಕೂಡಲೇ ದಿನಾಂಕ ಸಮಯ ಪಡೆದು ಸೇವೆ ಪಡೆದುಕೊಳ್ಳಿ. ಇದು ನೀವು ಕ್ಷೌರಿಕನಿಗೆ ನೀಡುವ ಆಶಾಭಾವವಾಗಿದೆ. ಇದರಿಂದ ನೊಂದ ಕ್ಷೌರಿಕ ಆಶಾವಾದಿಯಾಗಬಹುದು.
2) ಸೌಂದರ್ಯವರ್ಧಕ ವಸ್ತುಗಳನ್ನು ನಿಮ್ಮ ಹತ್ತಿರದ ಕ್ಷೌರಿಕರು ಮಾರುತ್ತಿದ್ದರೆ ಅವರಿಂದಲೇ ಖರೀದಿಸಿ .
3) ಕ್ಷೌರಿಕರು ಹೇಗೆ ಸಾಮಾಜಿಕ ಅಂತರ ಎಂಬ ನಿಯಮದಿಂದ ಸಂಕಷ್ಟಗೊಳಗಾಗುತ್ತಾರೆ ಕ್ಷೌರಿಕರ ಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕ್ಷೌರಿಕರಿಗೆ ಆತ್ಮಸ್ಥೈರ್ಯ ತುಂಬಿ.
4) ಸೆಲೂನ್ ಗಳು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುವ ಜೊತೆಗೆ ಗಿಪ್ಟ್ ಕಾರ್ಡ್ ಗಳನ್ನು ಮಾರಿದರೆ ತೆಗೆದುಕೊಳ್ಳಿ ನಿಮ್ಮ ಸ್ನೇಹಿತರಿಗೂ ತಿಳಿಸಿ. ಇದರಿಂದ ಸದ್ಯಕ್ಕೆ ಅವರ ಅವಶ್ಯಕತೆಗಳಿಗೆ ಹಣ ನೀಡಿದಂತಾಗುತ್ತದೆ. ಗಿಪ್ಟ್ ಕಾರ್ಡ್ ಗಳನ್ನು ಸೇವೆ ಪಡೆಯವ ಸಮಯದಲ್ಲಿ ಬಳಸಿಕೊಳ್ಳಬಹುದು.
5) ನೀವು ಮುಂದೆ ನೀಡಲಿರುವ ಟಿಪ್ ಅನ್ನು ಮುಂಗಡವಾಗಿ ನೀಡಿ ಅವರ ತುರ್ತು ಅಗತ್ಯಕ್ಕೆ ಸ್ಪಂದಿಸಿ.
6)ಸೆಲೂನ್ ಪ್ರಾರಂಭವಾಗುವವರೆಗೆ ಕಾರ್ಮಿಕರ ರಕ್ಷಣೆಗೆ ಸೆಲೂನ್ ಕಾರ್ಮಿಕರ ಸಂತೃಸ್ತ ನಿಧಿ ಸ್ಥಾಪಿಸಿ ಸಮುದಾಯಕ್ಕೆ ನೀಡಿ. ಇದು ವಿಶ್ವದ ಹಲವು ಕಡೆಗಳಲ್ಲಿ ಆರಂಭವಾಗಿದ್ದು, ಅಮೆರಿಕಾದಲ್ಲಿ ಕ್ಷೌರಿಕ ಸಮುದಾಯದ ಇತರರು ಈಗಾಗಲೇ ತಮ್ಮ ದಾನ ನೀಡಿ ಸಹಕರಿಸಿದ್ದಾರೆ.
7) ಮನೆಯಿಂದಲೇ ಸೌಂದರ್ಯ ಸಲಹೆ ಪಡೆದುಕೊಳ್ಳಿ , ಸೌಂದರ್ಯವರ್ಧಕ ಚಿಕಿತ್ಸೆಯ ಕಿಟ್ ಪಡೆದು ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳಲು ಕ್ಷೌರಿಕರ ಸಲಹೆ ಪಡೆದು ಅವರಿಗೆ ಶುಲ್ಕ ಪಾವತಿಸಿ, ಇದಕ್ಕೆ ವಿಡಿಯೋ ಆ್ಯಪ್, ಇಮೇಲ್ ಅಥವಾ ಇತರ ಮಾಧ್ಯಮ ಬಳಸಿಕೊಳ್ಳಿ.
8) ಸದಾ ನಿಮ್ಮ ಸೌಂದರ್ಯದ ಕಾಳಜಿ ಬಯಸುವ ನಿಮ್ಮ ಕ್ಷೌರಿಕರಿಗೆ ನೈತಿಕ ಬೆಂಬಲ ನೀಡಿ:
ನಿಮ್ಮ ಕೈಲಾದಷ್ಟು ಮುಂಗಡ ಹಣ ನೀಡಿ ಸೆಲೂನ್ ಆರಂಭವಾದ ನಂತರ ಸೌಂದರ್ಯವರ್ದಕ ಸೇವೆ ಅಥವಾ ವಸ್ತುಗಳನ್ನು ಖರೀದಿಸುವ ಮೂಲಕ ಹಿಂಪಡೆಯಿರಿ. ಇಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮಿಷ್ಟದ ಕ್ಷೌರಿಕರ ಬಗ್ಗೆ ಧನಾತ್ಮಕ ಪ್ರಚಾರ ಮಾಡಿ ಅವರ ಸೇವೆಗಳನ್ನು ಪ್ರಚುರಪಡಿಸಿ ನೈತಿಕ ಬೆಂಬಲ ನೀಡಿ ಆತ್ಮ ಸ್ಥೈರ್ಯ ತುಂಬಿ ವೃತ್ತಿ ಮುಂದುವರೆಸಲು ಪ್ರೊತ್ಸಾಹ ನೀಡಿ.
ಕ್ಷೌರಿಕರೇ ನಿಮ್ಮ ಸೆಲೂನ್ ಆರಂಭವಾಗುವ ಮುನ್ನ ನಿಮ್ಮ ಸಿದ್ದತೆ ಹೇಗಿರಬೇಕು?
ಕ್ಷೌರಿಕರು ತಮ್ಮ ಸೆಲೂನು ಮರು ಪ್ರಾರಂಭವಾದ ನಂತರ ತಮ್ಮ ಸೆಲೂನುಗಳನ್ನು ಶುಚಿಗೊಳಿಸಿ, ಆರೋಗ್ಯ ತಜ್ಞರ ಸಲಹೆ ಪಡೆದು ಸಾನಿಟೈಸ್ ಮಾಡಿ.. ಸೆಲೂನುನಲ್ಲಿ ಬಳಸುವ ಎಲ್ಲ ಪರಿಕರಗಳನ್ನು ಶುಚಿಗೊಳಿಸಿ ಅಗತ್ಯವಿದ್ದರೆ ಬದಲಾಯಿಸಿ.
ಮಾಸ್ಕ್ , ಗ್ಲೌಸ್ ಧರಿಸಿ ಕೆಲಸ ನಿರ್ವಹಿಸಿ ಗ್ರಾಹಕರ ಜೊತೆಗೆ ಮಾತುಕತೆ ಅಗತ್ಯವಿದ್ದಷ್ಟು ಮಾತ್ರ ಸಾಕು. ಕ್ಷೌರ ಆದ ನಂತರ ಹರಟೆ ಹೊಡೆದು ಕಾಲ ಕಳೆಯಲು ಬಿಡಬೇಡಿ ಅವರನ್ನು ಮನೆಗೆ ಹೋಗಲು ಮನವಿ ಮಾಡಿ. ಸೆಲೂನ್ ಒಳಗಡೆ ಹತ್ತಕ್ಕಿಂತ ಕಡಿಮೆ ಜನಸಂಖ್ಯೆ ಇರುವಂತೆ ನೋಡಿಕೊಳ್ಳಿ
ಪ್ರತಿ ಕ್ಷೌರದ ನಂತರ ಆರೋಗ್ಯ ತಜ್ಞರ ಸಲಹೆ ಪಡೆದು ಅದರ ಪ್ರಕಾರ ಸ್ವಚ್ಚಗೊಳಿಸಿ ನಿಯಮಗಳನ್ನು ಸರಿಯಾಗಿ ಪಾಲಿಸಿ…
-ಭಂಡಾರಿ ವಾರ್ತೆ
Very nice article if it is in English I can share to our entire community