December 3, 2024
Antarala

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಭವಾನಿ ಮತ್ತು ಪದ್ಮಜಾನಿಗೆ ಪರಸ್ಪರ ನೋಡಿ ತುಂಬಾ ಆನಂದವಾಗುತ್ತದೆ…..

ಅಂತರಾಳ – ಭಾಗ 14

“ದುಃಖವನ್ನು ಮತ್ತೊಬ್ಬರ ಬಳಿ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ ಎನ್ನುತ್ತಾರೆ ಅದರಲ್ಲೂ ನಮ್ಮ ಪ್ರೀತಿ ಪಾತ್ರರಲ್ಲಿ ಹೇಳಿದರೆ ದುಃಖವೇ ಮಾಯವಾಗಬಹುದು ಭವಾನಿ “ಎಂದು ತನ್ನ ಜೀವನದ ಏಳು ಬೀಳುಗಳನ್ನು ಹೇಳಲು ಪದ್ಮಜಾ ಅಣಿಯಾದರು. ನಿನಗೆ ಗೊತ್ತೇ ಇದೆ ನನ್ನ ಅಕ್ಕ ಪದ್ಮಿನಿ ಮತ್ತು ನಾನು ಇಬ್ಬರೇ ಮಕ್ಕಳು ನನ್ನ ಅಪ್ಪ ಅಮ್ಮನಿಗೆ. ಅಕ್ಕ ಪದ್ಮಿನಿ ನಿಗೆ ಮದುವೆ ಆಗಿದ್ದು ನಿನಗೆ ತಿಳಿದಿದೆ. ಅಪ್ಪ ಅಮ್ಮ ಇಬ್ಬರೂ ನೋಡಿ ಹುಡುಗ ಒಳ್ಳೆಯ ಮನೆತನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಮದುವೆ ಮಾಡಿದ್ದರು…. ಮೊದ ಮೊದಲು ಚೆನ್ನಾಗಿಯೇ ಇದ್ದರು ಭಾವ ಆದರೆ ಯಾವಾಗಲೂ ಅಕ್ಕನ ಮೇಲೆ ಸಂಶಯ…… ಇದು ಮೊದಲೇ ಇತ್ತು ಆದರೆ ಅಕ್ಕ ನಮಗೆ ಯಾರಿಗೂ ಬೇಸರ ಆಗಬಾರದು ಎಂದು ಯಾರಲ್ಲೂ ಹೇಳಲಿಲ್ಲ…. ಅಕ್ಕ ಎಲ್ಲೂ ಹೊರಗೆ ಹೋಗಬಾರದು ಯಾರ ಸಂಬಂಧಿಕರ ಮನೆಯಲ್ಲಿ ರಾತ್ರಿ ಉಳಿಯಬಾರದು, ಒಬ್ಬರೇ ಎಲ್ಲೂ ಹೋಗಬಾರದು, ಪ್ರತಿಯೊಂದು ವಿಷಯಕ್ಕೂ ಗಂಡನಲ್ಲಿ ಕೇಳದೆ ಎನೂ ಮಾಡೋಕು ಅಕ್ಕನನ್ನು ಬಿಡುತ್ತಿರಲಿಲ್ಲ ಭಾವ…...’ ಅತಿ ಬಿಗಿ ಹಿಡಿತದಲ್ಲಿ ಸಂಬಂಧ ಸಾಯುತ್ತದೆ……ಅತಿ ಹಗುರ ಹಿಡಿತದಲ್ಲೂ ಸಂಬಂಧ ಕಳಚಿ ಬೀಳುತ್ತದೆ…….ಇವೆರಡರ ನಡುವಣ ಹಂತದಲ್ಲಿ ಮಾತ್ರ ಸಂಬಂಧ ಅರಳುತ್ತದೆ’ ಭವಾನಿ…

ಹಾಗಾಗಿ ಅಕ್ಕ ನಮ್ಮ ಮನೆಯಲ್ಲಿ ಜೀವನದ ಚಿಲುಮೆ,ಮಾತಿನ ಮಲ್ಲಿ ಆಗಿದ್ದವಳು ಬರಬರುತ್ತಾ ಏಕಾಂಗಿಯಾಗಿ ಮೌನಿಯಾದಳು….. ಈ ಮಧ್ಯೆ ಅವಳಿಗೆ ಎರಡು ಹೆಣ್ಣು ಮಕ್ಕಳು ಪಂಕಜಾ ಮತ್ತು ಪ್ರಮೀಳಾ ಹುಟ್ಟಿದರು ಮಕ್ಕಳು ಹುಟ್ಟಿದ ಮೇಲು ಭಾವ ಬದಲಾಗಲೇ ಇಲ್ಲ……….
.” ತನ್ನ ಮೇಲೆಯೇ ತನಗೆ ನಂಬಿಕೆ ಇಲ್ಲದವನಿಗೆ ಬೇರೆಯವರ ಬಗ್ಗೆ ನಂಬಿಕೆ ಇರೋಲ್ಲ, ಏಕೆಂದರೆ ಅವನು ಸದಾ ನಂಬಿಕೆ- ಅಪನಂಬಿಕೆಗಳ ಮಧ್ಯೆ ತೂಗುಯ್ಯಾಲೆಯಾಗಿರುತ್ತಾನೆ. ತಮ್ಮವರ ಬಗ್ಗೆ ಮಾತನಾಡುವುದಕ್ಕಿಂತಲೂ ಇತರರ ಬಗ್ಗೆಯೇ ಹೆಚ್ಚು ಯೋಚಿಸುತ್ತಿರುತ್ತಾನೆ”
ಇದು ನನ್ನ ಭಾವನ ಪರಿಸ್ಥಿತಿ ಹೀಗಿರುವಾಗ ಭಾವ ಇನ್ನೊಂದು ಗಂಡು ಮಗು ಬೇಕು ಎಂದು ಅಕ್ಕನಲ್ಲಿ ದಿನ ಕಿರಿ ಕಿರಿ. ಅಕ್ಕ ಈಗಾಗಲೇ ನಮಗೆ ಎರಡು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ ಸಾಕು ಎಂದರು ಭಾವ ಕೇಳಿಲ್ಲ…. ಹಾಗೆ ಅಕ್ಕ ಇನ್ನೊಂದು ಗಂಡು ಮಗುವಿಗಾಗಿ ಗರ್ಭಿಣಿಯಾದಳು..‌‌.ಅವಳು ಮಾನಸಿಕವಾಗಿ ತುಂಬಾ ದುರ್ಬಲಗೊಂಡು ಅವಳ ಆರೋಗ್ಯ ಕೂಡ ಸರಿ ಇರಲಿಲ್ಲ…. ಮಗು ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗ ತುಂಬಾ ಆರೋಗ್ಯ ಕೆಟ್ಟಿತು ಹೇಗೋ 8 ತಿಂಗಳು ಕಳೆದು 9 ತಿಂಗಳು ಪೂರ್ತಿ ಆಗುವ ಮುಂಚೆ ಆಸ್ಪತ್ರೆಯಲ್ಲಿ ಅಪರೇಷನ್ ಮೂಲಕ ಮಗುವನ್ನು ಹೊರಗೆ ತೆಗೆದರು. ಭಾವನ ಆಸೆಯಂತೆ ಮಗು ಗಂಡೇ ಆಗಿತ್ತು….. ಆದರೆ ಮಗು ತೆಗೆದ ಮೇಲೆ ರಕ್ತ ಸ್ರಾವ ನಿಲ್ಲದೆ ಅಕ್ಕ ತೀರಿಕೊಂಡಳು ! ಮೂರು ಮುದ್ದಾದ ಮಕ್ಕಳನ್ನು ಅನಾಥ ಮಾಡಿ ತನ್ನ ಕೆಲಸ ಮುಗಿಸಿ ಆಯಿತು ಎಂಬಂತೆ ನಮ್ಮನು ಬಿಟ್ಟು ಹೊರಟೇ ಹೋದಳು….. ನಮ್ಮ ಮನೆಯ ದೀಪ ‌ಆರಿ ಹೋಯಿತು.!!!…..

ಭಾವ ತನಗೆ ಎನೂ ಸಂಬಂಧವೇ ಇಲ್ಲದ ಹಾಗೆ ನಟಿಸಿ ಮೂವರು ಮಕ್ಕಳನ್ನು ನಮ್ಮ ಪಾಡಿಗೆ ಬಿಟ್ಟು ನಂತರ ಮಕ್ಕಳು ಹೇಗಿದ್ದಾರೆ ಎಂದು ನೋಡಲು ಬರಲಿಲ್ಲ. …. ಅಕ್ಕ ತೀರಿಕೊಂಡು ಸರಿಯಾಗಿ 3 ತಿಂಗಳು ಕಳೆದಿರಲಿಲ್ಲ…. ಆವಾಗಲೇ ಇನ್ನೊಂದು ಹುಡುಗಿಯನ್ನು ಮದುವೆ ಆಗಿದ್ದರು….ಅವರ ದೇಹ ವಾಂಛೆಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲದ ಮನುಷ್ಯ ಆತ . ಆದರೆ ಈ ಸಮಾಜ, ಜನ ಹೇಗೆ ಗೊತ್ತಾ ಅಮಾಯಕರು, ಬಡವರು, ನೀತಿ, ನಿಯಮ, ಮಾನವೀಯತೆ ಎಂದು ಇರುವವರನ್ನು ಕಂಡಾಗ ಅವರ ಮೇಲೆ ಸವಾರಿ ಮಾಡಿ ಬಿಡುತ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವರ ಜೀವನವನ್ನು ಮೂರಾಬಟ್ಟೆ ಮಾಡುತ್ತಾರೆ……… ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳದ, ಹೆಣ್ಣು ಮಕ್ಕಳಿಗೆ ಆನ್ಯಾಯ ಮಾಡುವ, ಕೆಲಸ ಕಾರ್ಯಗಳಲ್ಲಿ ಲಂಚ ತಿಂದು ಒಟ್ಟು ಸಮಾಜಕ್ಕೆ ಕಂಟಕ ಇರುವವರನ್ನು ಕಂಡಾಗ ಎಲ್ಲರೂ ನಮಸ್ಕಾರ ಮಾಡಿ ಅಂತವರಿಗೆ ಎಲ್ಲರೂ ಮರ್ಯಾದೆ ನೀಡುತ್ತಾರೆ…….ಯಾಕೆ ಹೀಗೆ ಎಂದು ತಿಳಿಯುತ್ತಿಲ್ಲ… ಮುಂಚೆ ಹೀಗೆ ಇರಲಿಲ್ಲ ಎಂದು ನನ್ನ ಅಪ್ಪ ಯಾವಾಗಲೂ ಹೇಳುತ್ತಿದ್ದರು…. ಮುಂಚೆ ಒಳ್ಳೆಯ ವ್ಯಕ್ತಿ ಇದ್ದರೆ ಅಂತವರನ್ನು ಕಂಡಾಗ ಕೈ ಜೋಡಿಸಿ ನಮಸ್ಕಾರ ಮಾಡುತ್ತಿದ್ದ ಕಾಲ ಹೋಗಿ ಲೋಕ ಕಂಟಕರನ್ನು ಪೂಜೆ ಮಾಡುವ ಕಾಲ ಬಂದಿದೆ…. ಹಾಗಾಗಿ ನನ್ನ ಭಾವ ಮದುವೆ ಆಗಿದ್ದಕೆ ಎಲ್ಲಾರೂ ಪಾಪ ಅವನಿಗೆ ಹೊಟ್ಟೆಗೆ ಅನ್ನ ಬೇಯಿಸಲು ಜನ ಬೇಕಾಲ್ಲ ಎಂದರೆ ಹೊರತು ಹಸಿ ಕೂಸು ಮತ್ತು ಎರಡು ಮುದ್ದಾದ ಹೆಣ್ಣು ಮಕ್ಕಳಿಗೆ ಯಾರು ಹಾರೈಕೆ ಮಾಡುತ್ತಾರೆ ಎಂದು ಯಾರಿಗೂ ಪ್ರಜ್ಞೆಯೇ ಬರಲಿಲ್ಲ. ಒಂದು ವೇಳೆ ಭಾವ ತೀರಿಕೊಂಡು ಅಕ್ಕ ಮೂರು ತಿಂಗಳ ಮುಂಚೆಯೇ ಬೇರೆ ಮದುವೆ ಆಗಿದ್ದರೆ ಈ ಸಮಾಜ,ಜನ ಎನೂ ಹೇಳುತ್ತಿದ್ದರು…..
ಇಲ್ಲಿ ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯ.. ಬಡವನಿಗೆ ಒಂದು ನ್ಯಾಯ ….ಶ್ರೀಮಂತನಿಗೆ ಒಂದು ನ್ಯಾಯ …. ಒಂದೊಂದು ಜಾತಿಗೂ ಒಂದೊಂದು ನ್ಯಾಯ …….ಶ್ರೀಮಂತನ ಮನೆಯಲ್ಲಿ ಇರುವ ನಾಯಿಗೆ ಕೂಡ ಜನ ಮರ್ಯಾದೆ ನೀಡುತ್ತಾರೆ……ಜೀವ ಜಗತ್ತಿನಲ್ಲಿ ಮನುಷ್ಯನಷ್ಟು ಆಸೆ ಬುರುಕ,ಅಹಂಕಾರಿ ಪ್ರಾಣಿ ಇರಲು ಸಾಧ್ಯವೇ ಇಲ್ಲ ಎಂದೆನಿಸುತ್ತದೆ …………

ಅಮ್ಮ ಮತ್ತು ಅಪ್ಪನಿಗೆ ಅಕ್ಕನ ಸಾವು ಬಾರೀ ಆಘಾತವೇ ಆಯಿತು.‌‌.‌‌ಮೂರು ಮಕ್ಕಳು ಅದರಲ್ಲೂ ಒಂದು ದಿನದ ಮಗುವನ್ನು ತಾಯಿ ಇಲ್ಲದೆ ಸಾಕುವ ಕೆಲಸ ಇದೆಯಲ್ಲ ಅಬ್ಬಾ ಈಗ ಎನಿಸಿದರೆ ಸಾಕು….. ಮೈಯೆಲ್ಲಾ ಕಣ್ಣಾಗಿ ರಾತ್ರಿ ನಿದ್ದೆ ಇಲ್ಲದೆ ಮಗುವನ್ನು ಸಾಕ ಬೇಕಲ್ಲ… ಒಬ್ಬ ತಾಯಿಗೂ ತನ್ನ ಮಗುವನ್ನು ಸಾಕಲು ತುಂಬಾ ಅಂದರೆ ಪದಗಳಲ್ಲಿ ಬರೆಯಲು ಸಾಧ್ಯ ಇಲ್ಲದ ರೀತಿ ಕಷ್ಟ ಇದೆ… ಅದರಲ್ಲೂ ಒಂದು ಮಗುವಿಗೆ ತಾಯಿ ಇಲ್ಲದೆ ಸಾಕುವುದು ಇದೆಯಲ್ಲಾ ಅದು ಮಾತ್ರ ತುಂಬಾ ಕಠಿಣ ಕೆಲಸ….. ಅದರಲ್ಲೂ ಮದುವೆ ಆಗದೆ ಮೊದಲು ಮಗುವಿನ ಆರೈಕೆ ಮಾಡಿ ಅಭ್ಯಾಸ ಇಲ್ಲದೆ ತಾಯಿ ಇಲ್ಲದ ಮಗುವನ್ನು ಪೋಷಿಸುವ ಕೆಲಸ ದಟ್ಟ ಕಾಡಿನ ಮದ್ಯೆ ದಾರಿ ತಪ್ಪುವ ಹಾಗೆ ಆಗುತ್ತದೆ..‌….. ತಾಳ್ಮೆ ಸಂಯಮ ಸಹನೆ ಎಲ್ಲವನ್ನೂ ಜೊತೆಗೆ ಕರೆತಂದರು ರಾತ್ರಿ ನಿದ್ದೆ ಬರುತ್ತದೆ ಎನ್ನುವಾಗ ಮಗು ಎದ್ದು ಆಳುವುದು ಇದೆಯಲ್ಲಾ ಅಬ್ಬಾ! ಎಷ್ಟೊಂದು ತಾಳ್ಮೆ ಸಂಯಮ ಇದ್ದರೂ ಆ ಸಮಯಕ್ಕೆ ಕೈ ಕೊಡುತ್ತದೆ… ಅಕ್ಕ ತೀರಿ ಹೋಗಿ ಭಾವ ಮದುವೆ ಆಗಿದ್ದಾರೆ ಎಂಬ ವಿಚಾರ ಕೇಳಿ ಅಮ್ಮ ಅಪ್ಪ ಒಳಗಿಂದೊಳಗೆ ತುಂಬಾ ನೊಂದು ಕೊಂಡಿದ್ದರು…..ಒಂದು ವಾರದಲ್ಲಿ ಅಮ್ಮ ಕೂಡ ಹಠಾತ್ತನೆ ರಾತ್ರಿ ಮಲಗಿದವರು ಬೆಳಿಗ್ಗೆ ಶವವಾಗಿದ್ದರು…. ನಾನು ಅಪ್ಪ ಮೂರು ಮಕ್ಕಳು ಮಾತ್ರ….‌ ಆಗ ನಿನ್ನ ನೆನಪು ತುಂಬಾ ಬಂದಿತ್ತು… ಎಲ್ಲಿ ಇದ್ದಿ ಎಂದು ಗೊತ್ತಾಗಿದ್ದರೆ ನಾನು ನಿನ್ನನ್ನು ಬರಲು ಬೇಡಿಕೊಳ್ಳುತ್ತಿದ್ದೆ ಭವಾನಿ….. ಭವಾನಿ ಮತ್ತು ಶಮಿಕಾ ಪದ್ಮಜಾ ಹೇಳುವುದನ್ನು ತುಟಿಪಿಟಕ್ಕೆನ್ನದೆ ಕೇಳುತ್ತಿದ್ದರು….. ಪಂಕಜಾ ಪ್ರಮೀಳಾ ಹೆಣ್ಣು ಮಕ್ಕಳ ಹೆಸರು ಇರುವುದರಿಂದ ಅದಕ್ಕೆ ಸರಿಯಾಗಿ ಈ ಮಗುವಿಗೆ ಪವನ್ ಎಂದು ಹೆಸರು ಇಟ್ಟೆವು…… ಪವನ್ ಗೆ ಮೂರು ವರ್ಷಗಳು ಆಗುವ ವರೆಗೆ ಅಪ್ಪ ನಮಗೆಲ್ಲಾ ಜೊತೆಯಾದರು ಆದರೆ ಅಮ್ಮ ಅಕ್ಕ ಈ ಮಕ್ಕಳ ಕೊರಗು ನನಗೆ ಮದುವೆ ಮಾಡಿಲ್ಲ ಎಂಬ ಚಿಂತೆಯಲ್ಲಿಯೇ ನಮ್ಮನು ಬಿಟ್ಟು ಅಮ್ಮ ಅಕ್ಕನಲ್ಲಿಗೆ ಹೊರಟೇ ಬಿಟ್ಟರು……. ಅಪ್ಪ ತೋಟದಲ್ಲಿ ಕೃಷಿ ಮಾಡುತ್ತಿದ್ದು ಅಮ್ಮ ಪ್ರಾಥಮಿಕ ಶಾಲಾ ಶಿಕ್ಷಕಿ ಎಂದು ನಿನಗೆ ಗೊತ್ತೇ ಇದೆ… ಅಮ್ಮ ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕಾಗಿ ತನ್ನಿಂದ ಅದಷ್ಟು ಸಹಾಯ ಮಾಡಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸುತ್ತಿದ್ದರು ಆದರೂ ಅಮ್ಮನ ಮಕ್ಕಳಾದ ನಮಗೆ ಎಷ್ಟು ಕಷ್ಟವಾಯಿತು ಈ ಜೀವನ ಎಂಬ ಸಮುದ್ರ ದಾಟಲು…… ಜನರ ಸೇವೆಯೇ ಜನಾರ್ದನನ ಸೇವೆ ಎಂದು ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ ನಿಜವಾಗಿಯೂ ತನ್ನಂತೆ ಇರುವ ಇನ್ನೊಬ್ಬ ವ್ಯಕ್ತಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆ……

ಅಪ್ಪ ತೀರಿದ ಮೇಲೆ ಆ ಊರೇ ಬೇಡ ಎಂದು ನಿರ್ಧರಿಸಿ ಅಲ್ಲಿರುವ ತೋಟ ಗದ್ದೆ ಜಾಗ ಮನೆ ಎಲ್ಲ ಮಾರಿ ಅಲ್ಲಿಯ ಯಾವೊಂದು ಕೆಟ್ಟ ನೆನಪು ಇರಬಾರದು ಎಂದು ಈ ಊರಿಗೆ ಬಂದು ಈ ಮೂರು ಮಕ್ಕಳಿಗೂ ನಾನೇ ಅಮ್ಮನಾಗಿ ಬೆಳೆಸಿ ಓದಿಸಿ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಮುಗಿಸಿ ಈಗ ಮಗನ ಆರೈಕೆಯಲ್ಲಿ ಬೇಕಾದ ಕಥೆ ಕಾದಂಬರಿ ಓದುತ್ತಾ ಇದ್ದೇನೆ….. ಇದು ನನ್ನ ಕಥೆಯೋ ವ್ಯಥೆಯೋ ಗೊತ್ತಿಲ್ಲ? ನೀನೇ ಹೇಳು ಎಂದು ನಿಡಿದಾದ ಉಸಿರು ಚೆಲ್ಲಿದರು ಪದ್ಮಜಾ….

ಆಗ ಭವಾನಿ ಪದ್ಮಜಾ ನೀನು ಯಾಕೆ ಮದುವೆ ಆಗಿಲ್ಲ! ಎಂದಾಗ “ಹೆಣ್ಣು ತನ್ನ ಮೇಲೆ ಶ್ರದ್ಧೆ ತೋರುವ ಗಂಡಿನ ಮೇಲೆ ಅವಳಿಗರಿವಿಲ್ಲದಂತೆ ಅಭಿಮಾನವನ್ನು ಬೆಳೆಸಿಕೊಳ್ಳುತ್ತಾಳೆ” ……ಭವಾನಿ ನನ್ನ ಮೇಲೆ ಅಂತಹ ಶ್ರದ್ಧೆ ತೋರುವ ಗಂಡು ನನಗೆ ಸಿಗಲೇ ಇಲ್ಲ‌..‌…….

( ಮುಂದುವರಿಯುವುದು)

ಲೇಖಕರು : ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *