January 18, 2025
Antarala

ಇಲ್ಲಿಯವರೆಗೆ…..

ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದಾ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತನ್ನ ತಾಯಿ ತಂದೆಯು ತೀರಿದ ಮೇಲೆ ಅಲ್ಲಿಯ ಜಾಗ ತೋಟ ಮನೆ ಮಾರಿ ಮಂಗಳೂರಿಗೆ ಬಂದು ಮಕ್ಕಳಿಗೆ ಓದಿಸಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡು ಮಗನ ಜೊತೆ ಜೀವನ ಸಾಗಿಸುತ್ತಿದ್ದಾರೆ.

ಅಂತರಾಳ – ಭಾಗ 15

“ಭವಾನಿ ಮದುವೆ ಆದವರು ಸುಖದಿಂದ ಇದ್ದಾರೆ ಎಂದು ಹೇಗೆ ಯೋಚಿಸುತ್ತಿ? ನೀನು ಬಹುಶಃ ಸುಖವಾಗಿರಬಹುದು…. ಆದರೆ ಎಲ್ಲ ಹೆಣ್ಣು ಮಕ್ಕಳು ಮದುವೆ ಆಗಿ ಸುಖವಾಗಿ ಸಂಸಾರ ನಡೆಸುತ್ತಾ ಇದ್ದಾರೆ ಎಂದು ಹೇಳಲು ಸಾಧ್ಯವಿಲ್ಲ……. ಮದುವೆಯೇ ಜೀವನದ ಅಂತಿಮ ಘಟ್ಟ ಅಲ್ಲ ಅಲ್ವಾ”? ಎಂದು ಪದ್ಮಜಾ ಹೇಳಿದಾಗ ಭವಾನಿ ಹಾಗಲ್ಲ ಪದ್ಮಜಾ ಒಬ್ಬ ಹೆಣ್ಣು ಮದುವೆ ಆದರೆ ಅವಳಿಗೆ ಗಂಡನ ಆಸರೆ, ಪೋಷಣೆ, ರಕ್ಷಣೆ ಸಿಗುತ್ತದೆ ಅಲ್ವಾ…. ಒಂಟಿಯಾಗಿ ಈ ಸಮಾಜದಲ್ಲಿ ಬದುಕಲು ತುಂಬಾ ಕಷ್ಟವಿದೆ. ಅಲ್ಲದೆ ಈ ಸಮಾಜದಲ್ಲಿ ಮದುವೆ ಆದ ಹೆಣ್ಣಿಗೆ ಕೊಡುವ ಗೌರವ ಸ್ಥಾನ ಮಾನ ಮರ್ಯಾದೆ ಮದುವೆ ಆಗದೆ ಇರುವ ಹೆಣ್ಣಿಗೆ ನೀಡುವುದಿಲ್ಲ…… ಒಂಟಿ ಬಾಳು ಬಾಳಲ್ಲ ಇದು ನನ್ನ ಭಾವನೆ ಪದ್ಮಜಾ ಮಲ್ಲಿಗೆ ಜೊತೆ ನಾರು ಸ್ವರ್ಗ ಸೇರಿತು ಅಂತಾ ಗಾದೆ ಕೇಳಿಲ್ವ ನೀನು ಎಂದಳು ಭವಾನಿ….
ಅದೆಲ್ಲ ಅವರವರ ಮೂಗಿನ ನೇರಕ್ಕೆ ಮಾತನಾಡುವ ರೀತಿ ಭವಾನಿ.. ಮದುವೆ ಆದ ಹೆಣ್ಣು ಕೂಡಾ ಪ್ರೀತಿ ತೋರದ, ಅರ್ಥಮಾಡಿಕೊಳ್ಳದ ಗಂಡ… ಮಗಳಂತೆ ಎನಿಸದ ಅತ್ತೆ ಮಾವ ಸಿಕ್ಕಿದರೆ ಅವಳ ಜೀವನ ಬೆಂಕಿಯಿಂದ ಬಾಣಲೆಗೆ ಎಂಬಂತಾಗುತ್ತದೆ ….. ಗೌರವ, ಮರ್ಯಾದೆ ಎಂಬುದು ಅವರವರ ಘನತೆಗೆ ಬಿಟ್ಟ ವಿಚಾರ… ವ್ಯಕ್ತಿಯ ಮಾನವೀಯ ಮೌಲ್ಯ, ಇತರರನ್ನು ನಡೆಸಿಕೊಳ್ಳುವ ರೀತಿ, ಗುಣ ನೋಡಿ ಗೌರವ ನೀಡಬೇಕೆ ಹೊರತು ಅವರ ಸಂಪತ್ತು, ಸೌಂದರ್ಯ, ಕೆಲಸ,ಮನೆತನ, ಹುದ್ದೆ, ಪದವಿ, ಯಾರ ಮಗಳು,ಯಾರ ಹೆಂಡತಿ ಯಾರ ಸೊಸೆ ಎಂದು ಗೌರವ ನೀಡಲು ಬಾರದು ! ಪಡೆದುಕೊಳ್ಳಲು ಬಾರದು! ಅಲ್ವಾ ಭವಾನಿ … ಮಲ್ಲಿಗೆ ಜೊತೆ ನಾರು ಸ್ವರ್ಗ ಸೇರಿತು ಎಂದು ಗಾದೆ ಹೇಳಲು ಮತ್ತೆ ಕೇಳಲು ಚಂದ …. ಇದರಲ್ಲಿ ಮಲ್ಲಿಗೆ ಯಾರು? ನಾರು ಯಾರು? ಕೆಲವು ಸಂದರ್ಭಗಳಲ್ಲಿ ಹೆಣ್ಣನ್ನು ಹೂವಿಗೆ ಹೋಲಿಕೆ ಮಾಡುತ್ತಾರೆ…ಈ ಗಾದೆಯಲ್ಲಿ ಮಾತ್ರ ಹೆಣ್ಣನ್ನು ನಾರಿಗೆ ಹೋಲಿಕೆ ಮಾಡಿದ್ದಾರೆ . ಪುರುಷರಿಗೆ ಬೇಕಾದ ಹಾಗೆ ಹೆಣ್ಣನ್ನು ಚಿತ್ರಿಸುತ್ತಾರೆ…ಅವರು ಹೇಳಿದ ಹಾಗೆ ಕೇಳಿದರೆ ಹೆಣ್ಣನ್ನು ದೇವತೆ ದೇವಿ ಎನ್ನುತ್ತಾರೆ. ತಪ್ಪನ್ನು ಪ್ರಶ್ನೆ ಮಾಡಿದಾಗ ರಾಕ್ಷಸಿ ಎಂದು ಕೂಡ ಕರೆಯುತ್ತಾರೆ. ಅವರವರ ಉಪಯೋಗಕ್ಕೆ ತಕ್ಕ ಮಾತನಾಡುವ ಜನ ಎಲ್ಲ ಕಾಲಕ್ಕೂ ಇರುತ್ತಾರೆ ಭವಾನಿ ಎಂದಾಗ ಭವಾನಿ ನಿರುತ್ತರವಾದಳು…..

ಪದ್ಮಜಾ ಮತ್ತು ಭವಾನಿ ಹೇಳುವುದನ್ನು ಕೇಳಿ ಶಮಿಕಾಳ ಮನಸ್ಸು ತುಂಬಾನೇ ಡೋಲಾಯಮಾನ ಆಯಿತು. ನಾವು ಎನಿಸುತ್ತೇವೆ ನಾನು ಒಬ್ಬಳೇ ಕಷ್ಟದಲ್ಲಿ ಇರುವುದು ಬೇರೆ ಎಲ್ಲರೂ ಸಂತೋಷದಿಂದ ಇದ್ದಾರೆ ಎಂದು…. ಆದರೆ ಒಳ ಹೊಕ್ಕು ನೋಡಿದಾಗ ಮಾತ್ರ ಇನ್ನೊಬ್ಬರ ನೋವು ಎನೂ ಕಷ್ಟ ಎಂತದು ಎಂದು ತಿಳಿಯುವುದು… ಮುಖ ನೋಡಿ ಯಾರನ್ನೂ ಅಳೆಯಲು ಸಾಧ್ಯವಿಲ್ಲ….. ಪವನ್ ತುಂಬಾ ಶ್ರೀಮಂತ ವರ್ಗದ ಯಾವ ನೋವು ಬೇಸರ ಇಲ್ಲದ ವ್ಯಕ್ತಿಯ ಹಾಗೆ ಕಾಣುತ್ತಾರೆ! ಆದರೆ ಅಪ್ಪ ಇದ್ದು ಇಲ್ಲದ ಹಾಗೆ!! ಅಮ್ಮ ಇಲ್ಲವೇ ಇಲ್ಲ!

ಪವನ್ ಒಮ್ಮೆಲೇ ಒಳಗೆ ಬಂದದು ನೋಡಿ ಪದ್ಮಜಾ ಎನು ಎಂದು ಅವನನೇ ನೋಡಿದರು. ಭವಾನಿಗೆ ಪವನ್ ತನ್ನ ಮಗನೇ ಎನ್ನುವಷ್ಟು ಅಕ್ಕರೆಯಿಂದ ನೋಡಿದರು.. ಅಮ್ಮ ವೈದ್ಯರು ಬಂದರು ನೀವು ಹೊರಗೆ ಇರಿ ನಾನು ಆಂಟಿಯ ಬಗ್ಗೆ ಹೇಳಿ ಡಿಸ್ಚಾರ್ಜ್ ಕೊಡುತ್ತಾರ ಎಂದು ಕೇಳುತ್ತೇನೆ ಎಂದು ಪವನ್ ಹೇಳಿದಾಗ ಪದ್ಮಜಾ ಹೊರಗೆ ಹೋದರು.
ವೈದ್ಯರು ಬಂದು ಪರೀಕ್ಷಿಸಿ ಚೆನ್ನಾಗಿದ್ದಾರೆ ಇವತ್ತು ನೀವು ಹೋಗಬಹುದು.. ಐದು ದಿನ ಬಿಟ್ಟು ಪರೀಕ್ಷೆ ಮಾಡಲು ಬನ್ನಿ ಎಂದು ಹೇಳಿ ಹೋದರು…
ಹೊರಗೆ ಇದ್ದ ಪದ್ಮಜಾ ಒಳಗೆ ಬಂದು ಭವಾನಿ ಜೊತೆ ಮಾತನಾಡಲು ಕೂತರು.. ಶಮಿಕಾ ಮತ್ತು ಪವನ್ ದಾದಿಯಲ್ಲಿ ಮಾತನಾಡಿ ಡಿಸ್ಚಾರ್ಜ್ ಬಿಲ್ ಬೇಗ ಮಾಡಲು ಹೇಳೋಣ ಎಂದು ಹೊರಗೆ ಬಂದರು.

ಶಮಿಕಾ ತುಂಬಾ ಮೌನವಾಗಿದ್ದಳು… ಪವನ್ ಯಾಕೆ ಶಮಿಕಾ ಅನ್ಯಮನಸ್ಕಳಾಗಿಯೇ ಇದ್ದೀರಿ. ಒಂದು ದುಃಖ ಮರೆಯಲು ನೂರು ಖುಷಿ ಸಾಲದು. ಆದರೆ ಜೀವನವಿಡೀ ಕೊರಗಲು ಒಂದು ದುಃಖ ಸಾಕು…. ಏನೋ ಯೋಚನೆ ಮಾಡಿಕೊಂಡು ಇರುವ ಖುಷಿಯನ್ನು ಯಾಕೆ ಕಳೆದುಕೊಳ್ಳುತ್ತೀರಿ ಎಂದಾಗ. ನನಗೆ ಈ ಜೀವ ಜಗತ್ತಿನಲ್ಲಿ ಯಾರು ಸರಿ ಯಾರು ತಪ್ಪು ಎಂದು ನಿರ್ಣಯಕ್ಕೆ ಬರಲಾಗದೆ ಮಾತು ಬರುವುದಿಲ್ಲ ಎಂದು ಶಮಿಕಾ ಹೇಳಿದಾಗ “ಬದುಕಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ತುಂಬಾ ಬುದ್ಧಿವಂತರಾಗಿ ಇರಬೇಕೆಂದೇನಿಲ್ಲ. ಉತ್ತಮ ಹೃದಯ ಹೊಂದಿದ್ದರೆ ಸಾಕು ಶಮಿಕಾ “ ಎಂದು ಪವನ್ ಹೇಳಿದಾಗ ನೀವು ತುಂಬಾ ಓದುತೀರಾ ಇಷ್ಟೇಲ್ಲಾ ಹೇಳುತ್ತೀರಿ ಎಂದಾಗ ಓದುತ್ತೇನೆ…..ಆದರೆ ಜೀವನದ ಅನುಭವದಿಂದ ಹೇಳುವ ಮಾತಿಗೆ ಹೆಚ್ಚು ಓದಬೇಕಿಲ್ಲ.. ಜೀವನವೇ ಒಂದು ಪಾಠ ಶಾಲೆ ಶಮಿಕಾ. ಹೀಗೆ ಮಾತನಾಡುತ್ತಾ ದಾದಿಯವರು ಇರುವ ಕೌಂಟರ್ ಗೆ ಬಂದು ದಾದಿಯಲ್ಲಿ ಮಾತನಾಡಿ ಹಿಂದೆ ಹೊರಟರು.

ಕಲಿಕೆ ಮತ್ತು ಆಲೋಚನೆಯಿಂದ ಸಿಗುವ ಸಂತೋಷ ನಮ್ಮನು ಇನ್ನಷ್ಟು ಕಲಿಯುವಂತೆ ಮತ್ತು ಆಲೋಚಿಸುವಂತೆ ಮಾಡುತ್ತದೆ ಶಮಿಕಾ ಎಂದು ಪವನ್ ಹೇಳಿದಾಗ ಶಮಿಕಾ ನೀವು ತುಂಬಾ ಶಾಂತವಾಗಿ ಇರುವಂತೆ ಕಾಣುತ್ತೀರಿ ನನಗೆ ಮಾತ್ರ ಯಾರ ಮೇಲೂ ಹಗೆ ಸಾಧಿಸುವ ತನಕ ಮನಸ್ಸಿಗೆ ನೆಮ್ಮದಿ ಇಲ್ಲದ್ದಂತಾಗಿದೆ ಎಂದಳು.. ಆಗ ಪವನ್ ನಿಮಗೆ ಈ ಹಗೆ ಯಾಕೆ ಎಂದು ಗೊತ್ತಿಲ್ಲ ಆದರೆ “ಕಣ್ಣಿಗೆ ಕಣ್ಣು ಎಂದು ಹಗೆ ಸಾಧಿಸುತ್ತಾ ಹೊರಟರೆ ಇಡೀ ಜಗತ್ತೇ ಕುರುಡಾಗ ಬೇಕಾಗುತ್ತದೆ” ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ ನಾವು ಎಷ್ಟು ಅಂತ ಹಗೆ, ಸಿಟ್ಟು, ದ್ವೇಷ ಸಾಧಿಸುತ್ತಾ ಇರಬಹುದು.. ನಮಗೆ ಪ್ರಕೃತಿ ಒಂದು ಜೀವಿತಾವಧಿ ನೀಡಿದೆ ಅದರಲ್ಲಿ ಬರೀ ಹಗೆ ಸಾಧಿಸುತ್ತಾ ಇದ್ದರೆ ಬದುಕಿಗೆ ಅರ್ಥ ಎಲ್ಲಿದೆ ಶಮಿಕಾ? ಜೀವನ ತುಂಬಾ ಕಡಿಮೆ ಅವಧಿಯದು. ಅದನ್ನು ಮತ್ತೊಬ್ಬರ ಆಶಯದಂತೆ ಬದುಕಿ ವ್ಯರ್ಥ ಮಾಡಿಕೊಳ್ಳಬೇಡಿ. ನಿಮ್ಮ ಭಾವಕ್ಕನುಗುಣವಾಗಿ ಬದುಕಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ.

ನೀವು ಗಾಂಧೀಜಿ ಅವರನ್ನು ಇಷ್ಟ ಪಡುತ್ತೀರಿ ಅನ್ನಿ ಎಂದು ಶಮಿಕಾ ಹೇಳಿದಾಗ ಯಾಕೆ ಇಷ್ಟಪಡಬಾರದು? ಹೇಳಿ ಬಾಯಿಯಲ್ಲಿ ಹೇಳಿದ ಹಾಗೆ ಯಾರು ಬದುಕಲು ಸಾಧ್ಯವಿಲ್ಲ……ಹೇಳುವುದು ಶಾಸ್ತ್ರ ಇಕ್ಕುವುದು ಗಾಳ ಎಂಬುದು ಹೆಚ್ಚಿನವರ ಜೀವನ….ಆದರೆ ಗಾಂಧೀಜಿ ಹಾಗಲ್ಲ ಹೇಳಿದಂತೆ ಸರಳ ಜೀವನ ಮಾಡಿ ತೋರಿಸಿದ್ದಾರೆ…….ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ವ್ಯಕ್ತಿಯಾಗಿ ರೂಪಿಸುತ್ತದೆ…..‌.. ಹೀಗೆ ಹೇಳುತ್ತಲೇ ಭವಾನಿ ಇರುವ ಕೊಣೆಗೆ ಬಂದರು.. ಆಗ ಪದ್ಮಜಾ ಶಮಿಕಾಳ ಸಪ್ಪೆ ಮುಖ ನೋಡಿ ಪವನ್ ತುಂಬಾ ಮಾತನಾಡುತ್ತಾನೆ ನೀನೇನು ಬೇಜಾರು ಮಾಡ್ಕೋಬೇಡ….. ಅವನು ಹಾಗೆ ಏನಾದರೂ ಮಾತನಾಡುತ್ತಾನೆ….ಹಗೆ ಸಿಟ್ಟು ಜಗಳ ಬೇಡ ಎಂದು ಹೇಳುತ್ತಿರುತ್ತಾನೆ…. ಅದಕ್ಕೆ ನೋಡು ಪೊಲೀಸ್ ಕೆಲಸಕ್ಕೂ ರಾಜೀನಾಮೆ ನೀಡಿದ್ದಾನೆ…. ಕೆಲವೊಮ್ಮೆ ಅವನು ಹೇಳುವುದು ಸರಿ ಎಂದು ಅನಿಸುತ್ತದೆ ನನಗೆ… ತಪ್ಪು ಪ್ರತಿಯೋರ್ವ ವ್ಯಕ್ತಿಯು ತಿಳಿದು ತಿಳಿಯದೆಯೋ ಮಾಡುತ್ತಿರುತ್ತಾನೆ…. ನಾವು ತಪ್ಪು ಮಾಡಿದಾಗ ಬೇರೆಯೇ ವಾದ ಮಾಡುತ್ತೇವೆ… ಆದರೆ ಅದೇ ತಪ್ಪು ಬೇರೆಯವರು ಮಾಡಿದಾಗ ಶಿಕ್ಷೆ ಬಗ್ಗೆ ಮಾತನಾಡುತ್ತೇವೆ….. ತಪ್ಪುಗಳಲ್ಲಿ ಸಣ್ಣ ತಪ್ಪು ದೊಡ್ಡ ತಪ್ಪು ಅಂತ ಇದೆಯಾ ಎಂಬ ಪ್ರಶ್ನೆ ನನಗೆ ಯಾವಾಗಲೂ ಕಾಡುತ್ತಿರುತ್ತದೆ……… ಆಗ ಪವನ್ ಇಲ್ಲ ಅಮ್ಮ ನಾನು ನಿನ್ನೆಯಿಂದ ಶಮಿಕಾ ಅವರನ್ನು ನೋಡಿದ್ದೇನೆ ಏನೋ ಯೋಚನೆ ಮಾಡಿಕೊಂಡು ಇದ್ದಾರೆ ಎಂದಾಗ ಭವಾನಿ ಹೌದ ಶಮಿಕಾ ಯಾಕೆ ಅಂತಹ ಯೋಚನೆ ಎಂದು ಕೇಳಿದರು ಆಗ ಶಮಿಕಾ ಎನೂ ಇಲ್ಲ ಅಮ್ಮ ತಲೆ ಯಾಕೋ ಒಂಥರಾ ಸಿಡಿಯುತ್ತದೆ ಎಂದಳು…..
ನನಗೆ ಒಂಥರಾ ಮನಸ್ಸಿಗೆ ಖುಷಿ ಆಯಿತು ಪದ್ಮಜಾ ಸಿಕ್ಕಿದ್ದು… ಇಲ್ಲಿ ತನಕ ನಾನು ಶಮಿಕಾ ಯಾರು ಇಲ್ಲದ ಅನಾಥರು ಎಂದೇ ಎನಿಸಿದ್ದೆ…ಈ ಕ್ಷಣದಿಂದ ಜೀವನದ ಮತ್ತು ಜೀವದ ಮೇಲೆ ಪ್ರೀತಿ ಹುಟ್ಟಿತು ಇದ್ದ ನೋವು ಮರೆಯಿತು ಎಂದು ಭವಾನಿ ಹೇಳಿದಾಗ.. ಪದ್ಮಜಾ ಕೂಡ ನಾನು 10 ವರುಷ ಕಡಿಮೆ ಆದ ರೀತಿಯಲ್ಲಿ ಖುಷಿ, ಸಂಭ್ರಮ, ಸಂತೋಷ, ಆನಂದ ಆಗುತ್ತಿದೆ… ಎನ್ನುತ್ತಿದ್ದಂತೆ ದಾದಿ ಬಂದು ಡಿಸ್ಚಾರ್ಜ್ ಬಿಲ್ ತಂದು ದುಡ್ಡು ಕಟ್ಟಿ ಬನ್ನಿ ಎಂದು ಬಿಲ್ ನೀಡಿದರು.. ಪವನ್ ಮತ್ತು ಶಮಿಕಾ ಬಿಲ್ ಕಟ್ಟಲು ಹೊರಗೆ ಕೌಂಟರ್ ಗೆ ಹೋದರು.

( ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *