September 20, 2024

ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ‌ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದಾ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿ ಬರುತ್ತೇನೆ ಎಂದು ಹೇಳಿದಾಗ ಅವಳ ಜೀವನದ ತಿರುವುಗಳನ್ನು ಭವಾನಿ ಯೋಚಿಸುತ್ತಾರೆ… ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಅವಳಿಗೆ ಈಗ ಮೂರು ವರ್ಷದ ಹೆಣ್ಣು ಮಗು ಇರುತ್ತದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ಪರಸ್ಪರ ನೋಡಿ ಪ್ರೀತಿಸಲು ಶುರು ಮಾಡುತ್ತಾರೆ……

ಅಂತರಾಳ – ಭಾಗ 18

ಆರತಿ ಬಂದಾಗ ಮೈಯೆಲ್ಲಾ ಬೆವರಿನಿಂದ ಒದ್ದೆ ಆಗಿತ್ತು. ಬಂದವಳೇ ಸೀದಾ ಸ್ನಾನ ಮುಗಿಸಿ ಸೋಫಾದಲ್ಲಿ ಕುಳಿತು ಕೊಂಡಳು….ಅವಳ ಪಕ್ಕ ಪ್ರೀತಿ ಬಂದು ಆರತಿಯನ್ನು ಅಪ್ಪಿ ಹಿಡಿದು ಗಲ್ಲ ಚುಂಬಿಸಿ ಒರಗಿ ಕುಳಿತಳು.. ಬೇರೆ ಸಮಯದಲ್ಲಿ ಆಗಿದ್ದರೆ ಆರತಿ ತನ್ನ ಎಲ್ಲಾ ನೋವು ಚಿಂತೆ ಮರೆತು ಅವಳ ಜೊತೆ ಆಟ ಆಡುತ್ತಿದ್ದಳು… ಇಂದು ಏಕೋ ಮನಸ್ಸು ತುಂಬಾನೇ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿದೆ. ವಿಶಾಲ್ ತೀರಿಕೊಂಡು ಮೂರು ವರ್ಷ ಆಗಿದೆ ಇಲ್ಲಿ ತನಕ ಯಾವೊಬ್ಬ ಪುರುಷನನ್ನು ಕನಸಿನಲ್ಲೂ ಎನಿಸಿರಲಿಲ್ಲ… ಇವತ್ತು ನನಗೆ ಏನಾಗಿದೆ….. ಮನಸ್ಸು ಪವನ್ ನ ನೆನಪು ತರುತ್ತಿದೆ….. ನಾನು ಈಗ ಈ ರೀತಿ ಯೋಚನೆ ಮಾಡಿದರೆ ವಿಶಾಲ್ ನ ಆತ್ಮಕ್ಕೆ ತಿಳಿಯುತ್ತದಾ? ವ್ಯಕ್ತಿ ಸತ್ತ ಮೇಲೆ ಅವನ ಆತ್ಮ ಅಲ್ಲಿ ಇರುತ್ತದಾ?…….. ನಮ್ಮ ಭ್ರಮೆ ಇರಬಹುದೇ!!…….

ನಾನು ಈಗ ಪ್ರೀತಿ ಪ್ರೇಮ ಎಂದು ಎನಿಸಿದರೆ ಈ ಸಮಾಜ ಜನ ಏನು ಹೇಳಬಹುದು?….. ಏನು ಬೇಕಾದರೂ ಹೇಳಲಿ ನನಗೆ ಏನು? ಹೇಳುವ ಜನರು ಹೇಗೆ ಬೇಕಾದರೂ ಹೇಳುತ್ತಾರೆ! ಪುರಾತನ ಕಾಲದಿಂದಲೂ ಹೆಣ್ಣಿನ ಭಾವನೆಗೆ ಬೆಲೆಯೇ ಇಲ್ಲ…. ರಾಮನ ಹೆಂಡತಿ ಸೀತೆ, ಲಕ್ಷ್ಮಣ ನ ಹೆಂಡತಿ ಊರ್ಮಿಳೆ, ಗೌತಮನ ಹೆಂಡತಿ ಅಹಲ್ಯೆ, ಜಮದಗ್ನಿಯ ಹೆಂಡತಿ ರೇಣುಕಾ ಇರಬಹುದು ಇವರ ಮಾನಸಿಕ ಭಾವನೆಗೆ ಜನ ,ಸಮಾಜ ತಲೆ ಕೆಡಿಸಿಕೊಂಡಿಲ್ಲ… ಇನ್ನು ಜನಸಾಮಾನ್ಯರಾದ ನನ್ನಂತಹ ಹೆಣ್ಣು ಹೆಂಗಸರ ಬಗ್ಗೆ ಯಾರಿಗೆ ಕಾಳಜಿ ಇರುತ್ತದೆ……….. ನನ್ನ ಬಗ್ಗೆ, ನನ್ನ ಮಾನಸಿಕ ನೋವಿನ ಬಗ್ಗೆ, ನನ್ನ ಮಗಳ ಬಗ್ಗೆ ಒಮ್ಮೆ ಅಯ್ಯೋ ಎನ್ನುತ್ತಾರೆ…..ನಂತರ ಯಾರೂ ಏನೂ ಹೇಳಲಾರರು….. ನಾನು ಇಷ್ಟೆಲ್ಲಾ ಪವನ್ ಕುರಿತು ಮನಸ್ಸಿನಲ್ಲಿ ಒಲವು ಇಟ್ಟುಕೊಳ್ಳಲು ಹೇಗೆ ಸಾಧ್ಯ…. ಗಂಡಸು ಯಾವತ್ತೂ ಜವಾಬ್ದಾರಿಯನ್ನು ಹೊರಲು ತಯಾರಿರುವುದಿಲ್ಲ…… ನನಗೆ ಮದುವೆ ಆಗಿದೆ ಮೂರು ವರ್ಷದ ಮಗು ಇದೆ ಎಂದು ಗೊತ್ತಾದರೆ ಬಹುಶಃ ಹಾಗೆ ನೋಡಲಾರ, ಪ್ರೀತಿ ಮಾಡಲಾರ ಎಂದು ಅನಿಸುತ್ತದೆ !!….. ಎಲ್ಲ ಗಂಡಸು ಒಂದೇ ರೀತಿ ಇರುತ್ತಾರಾ………. ಹೌದು ಗಂಡಸು ಎಲ್ಲರೂ ಹೆಣ್ಣಿನ ಬಗ್ಗೆ ಬರುವಾಗ ಅವಳು ತನಗಿಂತ ಎಲ್ಲ ಕಡೆ ಹಿಂದೆ ಇರಬೇಕು ಎಂದು ಆಶಿಸುತ್ತಾನೆ…. ಹೆಣ್ಣು ಅವನಿಗಿಂತ ಮುಂಚೆ ಇದ್ದರೆ ಅವನ ಅಹಂಗೆ ಪೆಟ್ಟು ಬೀಳುತ್ತದೆ…..ಈ ವಿಷಯ ಬಂದಾಗ ಗಂಡಸು ಎಲ್ಲರೂ ಒಗ್ಗಟ್ಟಾಗಿ ಇರುತ್ತಾರೆ……..‌‌ಯೋಚಿಸಿ ಯೋಚಿಸಿ ಆರತಿಗೆ ಮಲಗಿದರೂ ನಿದ್ದೆ ಸುಳಿಯಲಿಲ್ಲ… ಏನೇನೋ ಕನಸುಗಳು, ಆಸೆಗಳು, ದೈಹಿಕ ಬಯಕೆಗಳು ಕಾಡುತ್ತಿದೆ……. ನಿದ್ದೆ ಬಂದ ಮೇಲೆ ಪವನ್, ಆರತಿ, ಪ್ರೀತಿ ನಗುತ್ತಾ ಮಾತನಾಡುತ್ತಾ ಸಮುದ್ರ ತೀರದಲ್ಲಿ ಇದ್ದ ಹಾಗೆ ದೂರದಿಂದ ವಿಶಾಲ್ ಕೈ ಬೀಸುತ್ತಾ ಹೋಗುವ ಹಾಗೆ ಕನಸು ಬಿದ್ದಿತ್ತು….


ಮರುದಿನ ಕಾಲೇಜಿನಲ್ಲಿ ಶಮಿಕಾ ಮತ್ತು ಆರತಿ ಪರಸ್ಪರ ಮಾತನಾಡುತ್ತಿರುವಾಗ ಶಮಿಕಾಳ ಮೊಬೈಲ್ ಗೆ ಪವನ್ ನ ಕಾಲ್ ಬಂದು ಅಂಟಿ ಹೇಗಿದ್ದಾರೆ ಅಂತ ಕೇಳಿ ಆರತಿ ಕಾಲೇಜಿಗೆ ಬಂದಿದ್ದಾರ ಎಂದು ಕೇಳಿ ಬೈ ಎಂದು ಹೇಳಿ ಫೋನ್ ಇಟ್ಟ….. ಶಮಿಕಾ ಆರತಿಯ ಬಳಿ ನಿನ್ನನು ಪವನ್ ಕೇಳಿದರು ಎಂದಾಗ ಆರತಿಯ ಮುಖ ಸೂರ್ಯ ಮುಳುಗುವ ಮುನ್ನ ಕೆಂಪಾಗುವಂತೆ ರಂಗೇರಿತ್ತು…… ನನಗೆ ಕ್ಲಾಸ್ ಇದೆ ಎಂದು ಅಲ್ಲಿಂದ ಆರತಿ ಹೋದಳು…. ಶಮಿಕಾ ಆರತಿಯ ಮುಖದಲ್ಲಿ ಆಗುವ ಬದಲಾವಣೆ ಗಮನಿಸಿ ಇಬ್ಬರು ಒಂದಾಗಲಿ ಎಂದು ಮನಸ್ಸಲ್ಲೇ ಹಾರೈಸಿದಳು….
ಪವನ್ ಬೆಳಿಗ್ಗೆ ಎದ್ದಾಗ ಗಂಟೆ ಎಂಟು ದಾಟಿತ್ತು…. ಮುಖ ಕಣ್ಣು ಊದಿಕೊಂಡಿತ್ತು… ಪದ್ಮಜಾ ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಾ ನಿದ್ದೆ ಬಂದಿಲ್ವ ಪವನ್ ಎಂದು ಕೇಳಿದಳು… ಇಲ್ಲ ಅಮ್ಮ ನಾನು ಇವತ್ತು ಕೆಲಸಕ್ಕೆ ಹೋಗುವುದಿಲ್ಲ ಎಂದಾಗ ಸರಿ ಎಂದರು ಪದ್ಮಜಾ…. ಪವನ್ ಬೆಳಿಗ್ಗೆ ಮಾಡುವ ಎಲ್ಲಾ ಕೆಲಸ ಮುಗಿಸಿ ತಿಂಡಿ ತಿಂದು ಕಾಟಾಚಾರಕ್ಕೆ ಎಂಬಂತೆ ಅಮ್ಮ ಓದುವ ವಿಮುಕ್ತಿ ಪುಸ್ತಕ ಹಿಡಿದು ಓದಲು ಶುರು ಮಾಡಿದ… ಆದರೆ ಓದಲು ಸಾಧ್ಯವಾಗಲಿಲ್ಲ…. ಆರತಿಯ ನೆನಪು ಬಂದು ಅವಳ ಅಪ್ಪ ಅಮ್ಮ ಕುಟುಂಬದ ಬಗ್ಗೆ ವಿಚಾರಿಸಬೇಕು ಎಂದು ಯೋಚಿಸಿ ಶಮಿಕಾಳಿಗೆ ಫೋನ್ ಮಾಡಿದ. ಶಮಿಕಾ ಕಾಲೇಜಿಗೆ ಹೋಗಿದ್ದು ಕೇಳಿ ಪವನ್ ಗೆ ಭವಾನಿ ಅಂಟಿಯಲ್ಲಿ ಕೇಳಿದರೆ ಖಂಡಿತಾ ಅವರು ಎನು ತಪ್ಪು ಎನಿಸಲಾರರೂ ಎಂದೆನಿಸಿತು….. ತಕ್ಷಣ ಎದ್ದು ಅಮ್ಮಾ ನಾನು ಭವಾನಿ ಆಂಟಿಯನ್ನು ನೋಡಿ ಮಾತನಾಡಿಸಿ ಬರುತ್ತೇನೆ ಎಂದು ಹೇಳಿದಾಗ ಪವನ್ ನಾನೇ ಹೇಳಬೇಕು ಎಂದು ಇದ್ದೆ ಟಿಫಿನ್ ಬಾಕ್ಸ್ ನಲ್ಲಿ ತಿಂಡಿ ಹಾಕಿ ಇಟ್ಟಿದ್ದೇನೆ… ಹೋಗುವಾಗ ತೆಗೆದುಕೊಂಡು ಹೋಗು ಎಂದರು ಪದ್ಮಜಾ..
ತಿಂಡಿ ಬಾಕ್ಸ್ ಹಿಡಿದುಕೊಂಡು ಪವನ್ ಭವಾನಿಯ ಮನೆಗೆ ಬಂದಾಗ ಭವಾನಿಗೂ ಪವನ್ ಕಂಡು ಆನಂದವಾಯಿತು….. ಅದು ಇದು ಅಂತ ಮಾತನಾಡಿದ ಮೇಲೆ ಪವನ್ ನೇರವಾಗಿ ಶಮಿಕಾಳ ಗೆಳತಿ ಆರತಿ ಎಲ್ಲಿಯವರು ಅಂಟಿ ಎಂದು ಕೇಳಿದ…. ಭವಾನಿ ಕೂಡ ಯಾವುದೇ ಮುಚ್ಚುಮರೆ ಇಲ್ಲದೆ ಆರತಿಯ ನೋವಿನ ಬಾಳಿನ ಕಥೆ ಅವಳ ಮಗುವಿನ ವಿಚಾರ ಎಲ್ಲವನ್ನೂ ಬಿಡಿ ಬಿಡಿಯಾಗಿ ಹೇಳಿದಾಗ ಪವನ್ ಗೆ ಒಂದು ಕ್ಷಣ ಮಾತೇ ಹೊರಡಲಿಲ್ಲ……… ಉಯ್ಯಾಲೆಯಲ್ಲಿ ಕೂತು ಸಂತೋಷವಾಗಿ ಆಚೆ ಈಚೆ ತೂಗುತ್ತಿರುವ ಮಗು ಒಮ್ಮೆಲೇ ಉಯ್ಯಾಲೆ ತುಂಡಾಗಿ ಬಿದ್ದಾಗ ಆಗುವ ರೀತಿಯ ಹಾಗೆ ಪವನ್ ನ ಮನಸ್ಸು ಮುದುಡಿ ಹೋಯಿತು.. ಆರತಿಯ ಮುಖ ಭಾವ ನೋಡಿದಾಗ ಯಾವೊಂದು ನೋವು ಅಲ್ಲಿ ಇದ್ದ ಹಾಗೆ ಕಾಣುವುದಿಲ್ಲ….. ಪ್ರಶಾಂತ ಮುಖ… ಮನಸ್ಸನ್ನು ಇರಿದು ಇಣುಕುವ ವಿಶಾಲ ಕಣ್ಣುಗಳು……ಮಿನುಗುವ ನಕ್ಷತ್ರದ ಹಾಗಿರುವ ಶುಭ್ರ ಹಲ್ಲುಗಳು……ಗೋಧಿ ಮೈಬಣ್ಣ……. ಮಾತಿನಲ್ಲಿ ಅಥವಾ ನಗುವಿನಲ್ಲಿ ಎಲ್ಲೂ ಕಾಣದ ಆಡಂಬರ….. ಇಂತಹ ಹೆಣ್ಣಿಗೆ ಎಂತಹಾ ನೋವು…… ವಿಧಿ ಬರಹ ಎನ್ನುವುದು ಇದಕ್ಕೇ ಇರಬಹುದೇ …….. ಭೂಮಿ ಮೇಲೆ ಏನೇನೋ ಅನ್ಯಾಯ, ಅನಾಚಾರ, ಮೋಸ ವಂಚನೆ ರಾಜಾರೋಷವಾಗಿ ನಡೆಸುತ್ತಿದ್ದಾರೆ. ಅವರಿಗೆ ಇಲ್ಲದ ವಿಧಿ ಬರಹ ಆರತಿಯಂತಹ ಹೆಣ್ಣು ಮಗಳಿಗೆ ಮಾತ್ರ ಇರುವುದು ವಿಪರ್ಯಾಸ…………… ಎನೂ ಅರಿಯದ ಮುಗ್ಧ ಮಗು ಏನು? ಯಾವ ತಪ್ಪು ಮಾಡಿದೆ?
ತುಂಬಾ ಯೋಚನೆ ಮಾಡಿದ ಮೇಲೆ ಪವನ್ ಭವಾನಿ ಯಲ್ಲಿ ಅಂಟಿ ಆರತಿ ಇನ್ನೊಂದು ಮದುವೆ ಆಗಬಹುದು ಅಲ್ವಾ ಎಂದಾಗ ಭವಾನಿ” ಮದುವೆ ಆಗಬಹುದು ಪವನ್ ಆದರೆ ಆಗುವವರು ಯಾರು? ಗಂಡು ಹೆಂಡತಿ ಸತ್ತ ಮರುದಿನ ಹೆಣ್ಣು ಹುಡುಕಲು ಆರಂಭಿಸುತ್ತಾನೆ. ಸಂಬಂಧಿಕರು ನೆರೆಹೊರೆಯವರು ಕೂಡ ಅಯ್ಯೋ ಪಾಪ ಅವನು ಒಬ್ಬನೇ ಏನೂ ತಾನೇ ಮಾಡುತ್ತಾನೆ ಎಂದು ಹೇಳಿಕೊಳ್ಳುತ್ತಾರೆ!! ಅದೇ ಹೆಣ್ಣಿನ ಗಂಡ ಸತ್ತಾಗ ಅವಳ ಬಗ್ಗೆ ಯೋಚನೆ ಮಾಡುವವರೇ ಇರುವುದಿಲ್ಲ… ಅವಳಿಗೆ ವಿಧವೆ ಎಂಬ ಪಟ್ಟ ನೀಡಿ ಕೈಬಳೆ, ಹೂವು, ಕುಂಕುಮ, ಕರಿಮಣಿ ತೆಗೆದು ಅವಳನ್ನು ಅಮಂಗಳೇ ಎಂದು ಯಾವುದೇ ಶುಭ ಕಾರ್ಯಕ್ಕೆ ಕರೆಯದೇ ಹಿಂದೆ ನಿಲ್ಲಿಸುತ್ತಾರೆ….. ಯಾವ ತಪ್ಪು ಮಾಡದೆ ಎಲ್ಲರೊಡನೆ ನಗು ನಗುತ್ತಾ ಮಾತನಾಡಿದರೂ ಇವಳಿಗೆ ನೋಡು ಗಂಡ ಇಲ್ಲ ಎಂದು ಬೇಸರವೂ ಇಲ್ಲ ಎಂದು ಆಡಿಕೊಳ್ಳುತ್ತಾರೆ…. ಅಂದರೆ ಅವಳು ಗಂಡನನ್ನು ಅವನ ನೆನಪನ್ನು ತಲೆಯಲ್ಲಿ ಹೊತ್ತು ಕೊಂಡೇ ಇರಬೇಕು ಎಂದು ಜನ ಬಯಸುತ್ತಾರೆ…….

(ಮುಂದುವರಿಯುವುದು)

✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ

Leave a Reply

Your email address will not be published. Required fields are marked *