ಇಲ್ಲಿಯವರೆಗೆ…..
ಶಮಿಕಾಳಿಗೆ ತಾಯಿ ಭವಾನಿ ಮೇಲೆ ತನ್ನ ತಂದೆ ಬಗ್ಗೆ ಹೇಳದೆ ಇರುವುದರಿಂದ ಸಂಶಯ ಬಂದು ಅಮ್ಮನ ಡೈರಿ ತೆಗೆದು ಓದುತ್ತಾಳೆ ಅದರಲ್ಲಿ ಭವಾನಿ ಸಣ್ಣ ಮಗುವಾಗಿರುವಾಗ ತಂದೆ ತೀರಿ ಮಾವನ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಗಿಸಿ ಕಾಲೇಜಿನ ಓದಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ನಲ್ಲಿ ಇದ್ದು ಓದು ಮುಗಿಸಿ ಒಂದು ಗ್ರಂಥಾಲಯದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.
ಹೀಗಿರುವಾಗ ಒಂದು ದಿನ ಸಂಜೆ ಕೆಲಸದಿಂದ ಬರುವಾಗ ಕೆಲವು ಪುಂಡರು ಇವಳನ್ನು ಅತ್ಯಾಚಾರ ಮಾಡುತ್ತಾರೆ. ಅದರೂ ದೃತಿಗೆಡದೆ ಕೆಲಸಕ್ಕೆ ಹೋಗುತ್ತಾಳೆ.ಒಂದು ತಿಂಗಳ ನಂತರ ಅವಳು ಮುಟ್ಟಾಗದಿರುವುದು ತಿಳಿದು ಆತ್ಮಹತ್ಯೆ ಮಾಡಲು ತಯಾರಿ ನಡೆಸುತ್ತಾಳೆ ಇದನ್ನು ಶಂಕರ್ ಎನ್ನುವ ಗ್ರಂಥಾಲಯದ ಓದುಗ ತಪ್ಪಿಸುತ್ತಾನೆ. ಇವಳ ಕಷ್ಟದ ಪರಿಸ್ಥಿತಿ ಕಂಡು ಇವಳನ್ನು ಮದುವೆ ಆಗಿ ಬೇರೆ ಬಾಡಿಗೆಗೆ ಮನೆ ಮಾಡಿಸುತ್ತಾನೆ. ಅವಳ ಅಮ್ಮ ತೀರಿ ಕೊಂಡಿರುವುದು ಇವಳಿಗೆ ತಿಳಿಯುತ್ತದೆ… ನಂತರ ಇವಳಿಗೆ ಹೆಣ್ಣು ಮಗು ಆಗುತ್ತದೆ. ಸ್ವಲ್ಪ ಸಮಯದ ನಂತರ ಶಂಕರ್ ಬೇರೆ ಮದುವೆ ಆಗಿ ಇವಳನ್ನು ಮಗುವನ್ನು ಬಿಟ್ಟು ಹೋಗುತ್ತಾನೆ.. ಇದರಿಂದ ಭವಾನಿ ವಿಚಲಿತಳಾಗಿ ಹೊನ್ನಾವರದ ಕ್ರೈಸ್ತ ಸನ್ಯಾಸಿನಿಯವರ ಸಹಾಯದಿಂದ ಮಗು ಶಮಿಕಾ ಮತ್ತು ಭವಾನಿ ಅಲ್ಲಿಯೇ ಹೊನ್ನಾವರದಲ್ಲಿ ಇದ್ದು ಜೀವನ ನಡೆಸುತ್ತಾರೆ. ಶಮಿಕಾಳ ತಂದೆ ಯಾರೆಂದು ಪ್ರಶ್ನೆಗೆ ಭವಾನಿಯ ಮನಸ್ಸಿನ ದುಗುಡಗಳನ್ನು ಶಂಕರ್ ನ ಮೇಲಿರುವ ಪ್ರೀತಿಯನ್ನು ಬರೆದುದನ್ನು ಶಮಿಕಾ ಓದುತ್ತಿದ್ದಾಳೆ.ಡೈರಿ ಓದಿ ಮುಗಿಸಿದ ಮೇಲೆ ಬಾಗಿಲು ಬಡಿದ ಸದ್ದಾಯಿತು ಹೊರಗೆ ಬಂದಾಗ ಭವಾನಿಯನ್ನು ಆಸ್ಪತ್ರೆಗೆ ಸೇರಿಸಿದ್ದು ತಿಳಿಯುತ್ತದೆ. ಆಸ್ಪತ್ರೆಯಲ್ಲಿ ರಮಣಿ ಎನ್ನುವ ಹೆಂಗಸಿನ ಪರಿಚಯ ಆಗಿ ಅವರ ಮಗಳ ಸಾವಿನ ವಿಚಾರ ಗಂಡನಿಗೆ ಆರೋಗ್ಯ ಸರಿ ಇಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಿಳಿಯುತ್ತದೆ.. ಭವಾನಿಗೆ ಪವನ್ ಎನ್ನುವ ವ್ಯಕ್ತಿಯ ಬೈಕ್ ತಾಗಿ ಬಿದ್ದಿರುವುದು ಎಂದು ತಿಳಿಯುತ್ತದೆ. ಭವಾನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮರುದಿನ ಪವನ್ ನ ಅಮ್ಮ ಅಕ್ಕ ಭವಾನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ… ಬಂದು ನೋಡಿದಾಗ ತಿಳಿಯುತ್ತದೆ ಭವಾನಿಯ ಮುಖ್ಯೋಪಾಧ್ಯಾಯಿನಿ ಯವರ ಮಗಳೇ ಪವನ್ ನ ಅಮ್ಮ ಪದ್ಮಜಾ ಎಂದು. ಪದ್ಮಜ ಭವಾನಿ ಯಲ್ಲಿ ತನ್ನ ಅಕ್ಕ ಪದ್ಮಿನಿ ಬಗ್ಗೆ ಇಲ್ಲಿವರೆಗಿನ ಜೀವನ ವೃತ್ತಾಂತವನ್ನು ಹೇಳುತ್ತಾಳೆ. ಅಪ್ಪ ಅಮ್ಮ ನೋಡಿ ಅಕ್ಕನಿಗೆ ಮದುವೆ ಮಾಡಿದ್ದು ಭಾವ ಮಾನಸಿಕ ಹಿಂಸೆ ನೀಡುತ್ತಿದ್ದು.. ಮೂರು ಮಕ್ಕಳು ಇದ್ದು ಅಕ್ಕ ತೀರಿದ ಮೇಲೆ ಮಕ್ಕಳನ್ನು ಪದ್ಮಜಳೇ ನೋಡಿಕೊಳ್ಳುತ್ತಿದ್ದು ತಿಳಿಯುತ್ತದೆ ಭವಾನಿಗೆ. ಶಮಿಕಾಳ ಗೆಳತಿ ಆರತಿಗೆ ಮದುವೆ ಆಗಿ ಎರಡು ತಿಂಗಳಲ್ಲೇ ಅವಳ ಎಲ್ಲ ಕುಟುಂಬ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಇವಳು ಒಬ್ಬಳೇ ಉಳಿಯುತ್ತಾಳೆ.ಆರತಿ ಆಗ ಗರ್ಭಿಣಿಯಾಗಿದ್ದು ಈಗ ಮೂರು ವರ್ಷದ ಹೆಣ್ಣು ಮಗು ಇದೆ. ಆರತಿ ಮತ್ತು ಪವನ್ ಶಮಿಕಾಳ ಮನೆಯಲ್ಲಿ ನೋಡಿ ಪರಸ್ಪರ ಪ್ರೀತಿಸುತ್ತಾರೆ. ಪವನ್ ಆರತಿಯ ಕುಟುಂಬದ ಕುರಿತು ಭವಾನಿಯಲ್ಲಿ ಕೇಳಿ ತಿಳಿದುಕೊಂಡು ಅವಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ……..
ಅಂತರಾಳ – ಭಾಗ 19
ಭವಾನಿ ಈ ಸಮಾಜದಲ್ಲಿ ಇರುವ ಹೆಣ್ಣು ಗಂಡು ತಾರತಮ್ಯವನ್ನು ಹೇಳುವುದು ಕೇಳಿ ಪವನ್ ಗೆ ತನ್ನ ಅಮ್ಮನ ನೆನಪು, ಚಿಕ್ಕಮ್ಮ ನಾವು ಮೂರು ಮಕ್ಕಳಿಗಾಗಿ ಮದುವೆ ಆಗದೆ ಇದ್ದು ತಮ್ಮನ್ನು ಸಾಕಿ ಇಲ್ಲಿ ತನಕ ಬೆಳೆಸಿದ ಬಗ್ಗೆ ಯೋಚನೆ ಬಂದು ಭೂಮಿ ಮೇಲೆ ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳಂತೆ ಮನುಷ್ಯ ಕೂಡ ಒಂದು ಜೀವಿ ಆದರೂ ಮನುಷ್ಯ ಎಲ್ಲರಿಗಿಂತ ತಾನೇ ಮೇಲು ಎಂದುಕೊಂಡು ಅದರಲ್ಲೂ ಗಂಡು ತಾನು ಹೆಣ್ಣಿಗಿಂತ ಮೇಲು ಎಂದೆನಿಸುವುದು ನಗು ಬರುತ್ತದೆ….. ನಾಚಿಕೆಯೂ ಆಗುತ್ತದೆ ಎಂದೆನಿಸಿತು…….
ಭವಾನಿ ಪವನ್ ನ ಮೌನ ಕಂಡು ನಾನು ಇಷ್ಟೆಲ್ಲ ಮಾತನಾಡಿದೆ ಎಂದು ಬೇಸರಿಸಬೇಡ ಪವನ್ ಎಂದಳು…. “ಇಲ್ಲ ಅಂಟಿ ಬೇಸರ ಯಾಕೆ ನೀವು ಹೇಳಿದ್ದು ಹೌದಲ್ಲ ಎಂದೆನಿಸಿತು…. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಅಹಂ ಇದೆ ಯಾಕೆ ಹೀಗೆ? ಆಸ್ತಿ, ಅಂತಸ್ತು, ಅಧಿಕಾರ, ವಿದ್ಯೆ, ಆರೋಗ್ಯ, ರೂಪ,ಲಿಂಗ, ಜಾತಿ, ಧರ್ಮ ಹೀಗೆ ಎನಾದರೂ ಒಂದು ನೆಪ ಸಾಕು ನಾನು ಅವರಿಂದ ಮೇಲು ಎನ್ನಲು…… ಹುಟ್ಟಿದ ಪ್ರತಿ ಜೀವಿಯೂ ಈ ಮಣ್ಣಲಿ ಮಣ್ಣಾಗಬೇಕು!! ಆದರೂ ಈ ಎಲ್ಲ ತೋರ್ಪಡಿಕೆಗಳು ಯಾಕೆ….. ಬಹುಶಃ ಪ್ರಕೃತಿ ಮನುಷ್ಯನಿಗೆ ಯಾವಾಗ ಸಾಯುವುದು ಮತ್ತು ಸತ್ತು ಹೋದ ಮೇಲೆ ಏನಾಗುತ್ತೇವೆ ಎಂದು ಸೂಚನೆ ನೀಡಿದ್ದರೆ ಅವನನ್ನು ಹಿಡಿದಿಡಲು ಸಾಧ್ಯವಿರುತ್ತಿರಲಿಲ್ಲ….. ತಿಳಿಯದೇ ಇಷ್ಟು ಹಾರಾಡುತ್ತಾನೆ….. ತಿಳಿದಿದ್ದರೆ…..”
ಹೌದು ಪವನ್ ನೀನು ಹೇಳಿದ್ದು ನಿಜ… ಮನುಷ್ಯನಷ್ಟು ಕ್ರೂರಿ ಪ್ರಾಣಿ ಯಾರು ಇಲ್ಲ ಮಾಂಸ ತಿನ್ನುವ ಹುಲಿ ಸಿಂಹಗಳೇ ತಮ್ಮ ಹೊಟ್ಟೆ ತುಂಬಿದ ಮೇಲೆ ತಮ್ಮ ಪಕ್ಕ ಬೇಟೆ ಇದ್ದರೂ ಎನೂ ಮಾಡಲಾರದು…ವಿಷ ತುಂಬಿರುವ ವಿಷ ಜಂತುಗಳು ಅದರ ಸಹವಾಸಕ್ಕೆ ನಾವು ಹೋಗದಿದ್ದರೆ ತಾನು ತನ್ನ ಪಾಡಿಗೆ ಇರುತ್ತದೆ… ಆದರೆ ಮನುಷ್ಯ ಎಂಬ ಪ್ರಾಣಿ ಮಾತ್ರ ತನ್ನ ಹೊಟ್ಟೆ ತುಂಬಿರಲಿ, ತನ್ನ ನಂತರ ಹತ್ತು ತಲೆಮಾರು ಕೂತು ತಿನ್ನುವ ಆಸ್ತಿ ಮಾಡಿರಲಿ, ತನ್ನ ಮೈಥುನ ಕ್ರಿಯೆ ಮಾಡಿ ಮುಗಿಸಿರಲಿ ಅವನು ಸುಮ್ಮನೆ ಇರುವ ಪ್ರಾಣಿ ಅಲ್ಲವೇ ಅಲ್ಲ… ಅದಕ್ಕೆ ನೋಡು ಪ್ರಾಣಿ, ಪಕ್ಷಿಗಳು ಮರುದಿನದ ಚಿಂತೆ ಇಲ್ಲದೆ ಆರಾಮವಾಗಿರುತ್ತದೆ …… ಪ್ರಾಣಿಗಳ ದೈಹಿಕ ಮಿಲನಕ್ಕೆ ಒಂದು ಕಾಲ ಎಂಬುದು ಇರುತ್ತದೆ…. ಆದರೆ ಮನುಷ್ಯ ಎಂಬ ಪ್ರಾಣಿಗೆ ವರುಷ ಪೂರ್ತಿ ಇರುತ್ತದೆ……… ಅದರಲ್ಲೂ ಕೆಲ ಗಂಡಸರು ದೈಹಿಕ ಮಿಲನಕ್ಕೆ ಸಮಯ, ಸ್ಥಳ,ಅದು ಯಾರು ಎಂಬ ಪರಿವೆಯೇ ಇಲ್ಲದೆ ಅದಕ್ಕಾಗಿ ಹಾತೊರೆಯುತ್ತಾರೆ… ಜಾತಿ, ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ,ವಿಚಾರ ಎಂದು ಹಾರಾಟ ಮಾಡುವ ಪುರುಷರು ತನ್ನ ಕಾಮದಾಟವನ್ನು ಹೆಣ್ಣು ಸಿಕ್ಕಿದಾಗ ಯಾವ ಜಾತಿ ,ಧರ್ಮ, ಸಂಸ್ಕಾರಗಳು ಅವರಿಗೆ ಅಡ್ಡಿ ಪಡಿಸುವುದಿಲ್ಲ……. ಮುಂದಿನ ಪರಿಣಾಮವನ್ನು ಊಹಿಸುವುದು ಇಲ್ಲ…. ತನ್ನ ಒಂದು ಕ್ಷಣದ ಸುಖಕ್ಕಾಗಿ ಹೆಣ್ಣಿನ ಇಡೀ ಜೀವನವೇ ನರಕ ಮಾಡುತ್ತಾನೆ!!! ಭವಾನಿಗೆ ಕೊನೆಯ ವಾಕ್ಯ ಹೇಳುವಾಗ ಕಣ್ಣಿಂದ ಕಣ್ಣೀರು ಜಾರಿತು……. ಈ ವಿಷಯ ಹೇಳುವಾಗ ಕಣ್ಣಿಂದ ಕಣ್ಣೇರು ಯಾಕೆ ಬಂತು ಎಂದು ಪವನ್ ನ ಯೋಚನೆಯ ಮಧ್ಯೆಯೇ ಭವಾನಿ ಅಂಟಿ ಇಷ್ಟು ಚೆನ್ನಾಗಿ ಹೆಣ್ಣನ್ನು ಅರ್ಥಮಾಡಿಕೊಂಡಿದ್ದಾರೆ….. ಅಲ್ಲದೆ ಮನುಷ್ಯ ನ ಬಗ್ಗೆ ಹೆಣ್ಣಿನ ಬಗ್ಗೆ ಇಷ್ಟು ತಿಳುವಳಿಕೆ ಇದೆ ಎಂದು ಗೊತ್ತಾಗಿ ತುಂಬಾ ಹೆಮ್ಮೆ ಅನಿಸಿತು…. ಮಾತನಾಡುತ್ತಾ ಸಮಯ ಮಧ್ಯಾಹ್ನ ಆದದ್ದೇ ಇಬ್ಬರಿಗೂ ತಿಳಿಯಲಿಲ್ಲ….. ಪವನ್ “ಅಂಟಿ ನಾನು ಮನೆಗೆ ಹೋಗುತ್ತೇನೆ ಅಮ್ಮ ಕಾಯುತ್ತಿರುತ್ತಾರೆ ಎಂದಾಗ ಭವಾನಿ ಸರಿ ಪವನ್ ಆಗಾಗ ಬರುತ್ತಿರು ನನಗೂ ಒಬ್ಬಳೇ ಇದ್ದು ಬೇಸರ ಎಂದು ಹೇಳಿದಾಗ ಪವನ್ ನಗುತ್ತಾ ಇನ್ನೂ ಹೆಚ್ಚು ಬರುತ್ತೇನೆ ಅಂಟಿ ನೋಡುತ್ತೀರಿ ಎಂದು ಹೇಳಿ ಮನೆಗೆ ಹೊರಟನು…..
ಸಂಜೆ ಶಮಿಕಾ ಮನೆಗೆ ಬಂದು ಅಮ್ಮನಲ್ಲಿ ಮಾತನಾಡುತ್ತಾ ಇರುವಾಗ ಭವಾನಿ ಪವನ್ ಮನೆಗೆ ಬಂದು ಮಾತನಾಡಿದ ವಿಷಯ ಆರತಿ ಬಗ್ಗೆ ವಿಷಯ ಕೇಳಿದ್ದು ಹೇಳಿದರು…. ಆಗ ಶಮಿಕಾ ಅಮ್ಮ ಆರತಿಗೆ ಮದುವೆ ಆಗಿ ಮಗು ಇರುವ ವಿಷಯ ಹೇಳಿದ್ದೀರಾ ಎಂದು ಕೇಳಿದಳು.. ಹೌದು ಹೇಳಿದೆ ಅವನಿಗೆ ಅದನು ಕೇಳಿ ತುಂಬಾ ಸಂಕಟವಾಯಿತು…. ತುಂಬಾ ಸಮಯದ ಬಳಿಕ ಆರತಿ ಮದುವೆ ಆಗಬಹುದು ಅಲ್ವಾ ಎಂದು ಕೇಳಿದ ಎಂದು ಹೇಳಿದರು.
ಶಮಿಕಾಳಿಗೆ ಆರತಿ ಮತ್ತು ಪವನ್ ಒಬ್ಬರಿಗೊಬ್ಬರು ಮೆಚ್ಚಿ ಕೊಂಡಿರುವುದು ತನ್ನ ಮನಸ್ಸು ಹೇಳುತ್ತಿದೆ ಎಂದು ಅಮ್ಮನಲ್ಲಿ ಹೇಳಬೇಕಾ ಬೇಡ್ವಾ ಎಂಬ ಹೊಯ್ದಾಟ ಆಗಿ ಈಗ ಬೇಡ ಆರತಿ ಆಗಲಿ, ಪವನ್ ಆಗಲಿ ನನ್ನಲ್ಲಿ ಹೇಳದೆ ನಾನು ಹೇಳುವುದು ತಪ್ಪು ಆಗುತ್ತದೆ ಎಂದು ಆ ಯೋಚನೆಯನ್ನು ಅಲ್ಲಿಗೆ ನಿಲ್ಲಿಸಿದಳು……
ಸಂಜೆ ದಿನಾ ತಾವು ಓದಿದ ಓದಿನ ಕುರಿತು, ಹಗಲಿನಲ್ಲಿ ಏನೆಲ್ಲಾ ಆಯಿತು ಅದರ ಬಗ್ಗೆ ಚರ್ಚೆ ಮಾಡುವುದು ಪವನ್ ಮತ್ತು ಪದ್ಮಜಾಳಿಗೆ ದಿನಚರಿಯೇ ಆಗಿತ್ತು…. ಇವತ್ತು ಪವನ್ ಗೆ ಪದ್ಮಜಾ ಹೇಳುವ ಯಾವ ಮಾತು ಕಿವಿಗೆ ಹೋಗುತ್ತಿಲ್ಲ…. ಪದ್ಮಜಾಳಿಗೆ ಪವನ್ ನ ನಿರಾಸಕ್ತಿ ಕಾಣದೇ ಇರಲಿಲ್ಲ… ಕೇಳಿದರೆ ಹೇಳುತ್ತಾನ ಎಂಬ ಪ್ರಶ್ನೆ ಕೂಡ ಕಾಡಿತು ಅವರಿಗೆ…… ಏಕೆಂದರೆ ನಿನ್ನೆ ಕೇಳಿದಾಗ ಅಮ್ಮ ಸಮಯ ಬಂದಾಗ ನಾನೇ ಹೇಳುತ್ತೇನೆ ಎಂದು ಅವನು ಹೇಳಿದ ಮೇಲೆ ನಾನು ಪುನಃ ಕೇಳುವುದು ಸರಿ ಆಗಲಾರದು ಎಂದು ಸುಮ್ಮನೆ ಆದರು…. ಹೊಸ ಕಾದಂಬರಿ ಓದಲು ಶುರು ಮಾಡಿದರು ಪದ್ಮಜಾ…..
ಸ್ವಲ್ಪ ಹೊತ್ತಿನ ಬಳಿಕ ಪವನ್ ಅಮ್ಮ ನನಗೆ ಒಂದು ಸಂಶಯ ಕಾಡುತ್ತಿದೆ ನಿಮ್ಮನ್ನು ಕೇಳಲೇ ಎಂದು ಕೇಳಿದ….. ಕೇಳು ಪವನ್ ಎಂದರು ಪದ್ಮಜಾ.. ಅಮ್ಮ ಮದುವೆ ಆದ ಹೆಣ್ಣು ಇದ್ದಾಳೆ ಗಂಡ ತೀರಿಕೊಂಡಿದ್ದಾರೆ ಮಗು ಇದೆ ಆ ಹೆಣ್ಣನ್ನು ಮದುವೆ ಆಗಬಹುದೇ….. ಪದ್ಮಜಾಳಿಗೆ ಆಶ್ಚರ್ಯ, ಕೋಪ, ಬೇಸರ ಎಲ್ಲ ಭಾವನೆಗಳೂ ಒಮ್ಮೆಲೇ ಹಾದು ಹೋಯಿತು ……. ಯಾರಿಗೆ ಎಂದು ಸ್ವಲ್ಪ ಕಠಿಣವಾಗಿ ಕೇಳಿದರು…… ಯಾರಿಗೆ ಮತ್ತು ಯಾರು ಎಂಬುದನ್ನು ಮತ್ತೆ ಹೇಳುತ್ತೇನೆ…..ಆಗಬಹುದೇ ಎಂದು ನಾನು ನಿಮ್ಮಲ್ಲಿ ಕೇಳುವುದು ಎಂದಾಗ ಪದ್ಮಜಾಳಿಗೆ ಪೇಚಾಟವಾಯಿತು…. ವಿಷಯ ಏನು ಎಂದು ಇವನು ಹೇಳುವುದಿಲ್ಲ….. ಇವನನ್ನು ಯಾರಾದರೂ ಮದುವೆ ಆಗಿರುವ ಹೆಣ್ಣು ತಲೆ ಕೆಡಿಸಿರಬಹುದೇ?…… ನಾನು ಆಗಬಹುದು ಎಂದರೆ ಇವನು ನಾನು ಆಗುತ್ತೇನೆ ಎಂದು ಹೇಳಿದರೆ ಅಯ್ಯೋ ಹಾಗೆ ಆಗದಿರಲಿ ಎಂದು ಮನಸ್ಸು ಕಾಣದ ದೇವರಿಗೆ ಮೊರೆ ಇಟ್ಟಿತ್ತು.. ಬೇರೆಯವರಿಗೆ ನಾವು ತುಂಬಾ ಸುಲಭವಾಗಿ ಸಲಹೆಗಳನ್ನು ನೀಡಬಹುದು ಆದರೆ ಅದು ನಮ್ಮ ಮನೆಯ ಬಾಗಿಲಿಗೆ ಬಂದಿದೆ ಎಂದರೆ ತುಂಬಾ ಚಿಂತನೆ ಮಾಡಬೇಕಾಗುತ್ತದೆ…. ನಾನು ಮದುವೆ ಆದ ಹೆಣ್ಣಿನ ಮರುಮದುವೆಯ ವಿರೋಧಿ ಅಲ್ಲ ಆದರೆ ಇವನು ಯಾರಿಗೆ ಕೇಳುತ್ತಿದ್ದಾನೆ ಎಂದು ತಿಳಿದರೆ ಸಲಹೆ ಅಥವಾ ಉತ್ತರ ನೀಡಬಹುದು !! ಆ ಹೆಣ್ಣಿಗೆ ಮಗು ಇದೆ ಎಂದು ಕೂಡ ಹೇಳುತ್ತಿದ್ದಾನೆ!!! ಅಲ್ಲ ನಮ್ಮ ಮನೆಯ ವಿಚಾರ ಆದರೆ ಬೇರೆ ಸಲಹೆ ,ಇನ್ನೊಬ್ಬರಿಗೆ ಆದರೆ ಬೇರೆ ಸಲಹೆ ಹೀಗೆ ಮಾಡುವುದು ತಪ್ಪು ಅಲ್ವಾ… ತಪ್ಪು ಯಾರು ಮಾಡಿದರೂ ತಪ್ಪೆ ಒಳ್ಳೆಯ ಕೆಲಸ ಮಾಡಲು ನಾವು ಅವರೊಡನೆ ಸಹಕರಿಸಬೇಕು ಎಂದು ನಾನು ಮಕ್ಕಳಿಗೆ ಪಾಠ ಮಾಡುವಾಗ ಹೇಳುತ್ತಿದ್ದೆ……. ಮತ್ತೇ ಈಗ ಏನು ಹೀಗೆ ಯೋಚನೆ ನನಗೆ …….. ತಪ್ಪು ಆಗಲಿ ಸರಿ ಆಗಲಿ ಪವನ್ ಮಾತ್ರ ಮದುವೆ ಆದ ಹೆಣ್ಣನ್ನು ಮದುವೆ ಆಗುವುದು ಎನಿಸಿದರೆ ಮೈಯೆಲ್ಲಾ ಕಂಪಿಸುತ್ತದೆ…. ಯಾಕೆ ಇವನಿಗೆ ರೂಪ, ಮೈಕಟ್ಟು, ಗುಣ ,ವಿದ್ಯಾಭ್ಯಾಸ, ಇಲ್ವಾ…. ಯಾವುದರಲ್ಲಿ ಕಡಿಮೆ ಇದ್ದಾನೆ….. ಇಷ್ಟು ಚೆನ್ನಾಗಿ ಇರುವ ನನ್ನ ಮಗ ಇಂತಹ ಹೆಣ್ಣನ್ನು ಮದುವೆ ಆಗುವುದು ಸಾಧ್ಯವೇ ಇಲ್ಲ….. ಪವನ್ ಒಂದು ಪ್ರಶ್ನೆ ಕೇಳಿದ ತಕ್ಷಣ ನಾನು ಏನೇನೋ ಕಲ್ಪಿಸಿಕೊಂಡು ಇರುವುದು ನನ್ನ ವಯಸ್ಸಿನ ಸಮಸ್ಯೆಯೇ ಇರಬಹುದು ಪವನ್ ಅಂತಹಾ ಹುಡುಗ ಅಲ್ಲ ನಾನು ಅಂದರೆ ತುಂಬಾನೇ ಗೌರವ ಪ್ರೀತಿ ನೀಡುತ್ತಾನೆ…. ನಾನು ಅಷ್ಟೇ ಅವನ ಅಮ್ಮ ತೀರಿಹೋದ ಮೇಲೆ ಕಣ್ಣು ರೆಪ್ಪೆಯಂತೆ ಜೋಪಾನವಾಗಿ ಸಾಕಿದ್ದೇನೆ…. ಪವನ್ ನನ್ನ ಜೀವ……
ಅಮ್ಮ ಎಂಬ ಧ್ವನಿಗೆ ಪದ್ಮಜಾ ಯೋಚನೆಯಿಂದ ಹೊರ ಬಂದು ಹೇಳು ಪವನ್ ಎಂದಳು…. ಹೇಳಬೇಕಿರುವುದು ನೀವು ಅಮ್ಮ ನನ್ನ ಪ್ರಶ್ನೆಗೆ ನೀವು ಉತ್ತರವೇ ನೀಡಿಲ್ಲ…… ಗಾಢವಾದ ಚಿಂತನೆಯಿಂದ ಹೊರ ಪ್ರಪಂಚದ ಇರುವಿಕೆಯನ್ನು ಮರೆತು ಬಿಟ್ಟಿರಿ ಎಂದು ಪವನ್ ನಕ್ಕಾಗ ಪದ್ಮಜಾಳಿಗೆ ತಿಳಿಯಿತು…. ಪವನ್ ಯಾವುದೇ ಹುಡುಗಿಯ ಬಗ್ಗೆ ಮದುವೆ ಆಗುವ ಯೋಚನೆ ಮಾಡಿರಲಾರ…. ಅಲ್ಲದೆ ನನ್ನ ವಿರುದ್ಧ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಅವನು ಇಷ್ಟ ಪಡುವುದಿಲ್ಲ………. ಎಂದು
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ