
ಇಲ್ಲಿಯವರೆಗೆ…..
ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಅಶೋಕ್ ತನ್ನ ಗೆಳೆಯ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರು ಅಶೋಕ್ ನಿಗೆ ಮಗು ಆಗುವುದಿಲ್ಲ ಎಂಬ ಸತ್ಯವನ್ನು ಹೇಳುತ್ತಾರೆ. ಇದನ್ನು ಕೇಳಿ ಅಶೋಕ್ ಮತ್ತು ಸುಶೀಲ ದಂಪತಿಗೆ ತುಂಬಾ ಚಿಂತೆ ಆಗುತ್ತದೆ…..
ಅಂತರಾಳ – ಭಾಗ 21
ಭವಾನಿಯ ಗಾಯ ಒಣಗಿ ಎದ್ದು ಓಡಾಡಲು ಶುರು ಮಾಡಿದರು…. ಶಮಿಕಾಳಿಗೆ ಅಮ್ಮ ಮೊದಲಿನಂತೆ ಆಗುವುದು ಕಂಡು ಆನಂದವಾಯಿತು…. ಶಮಿಕಾ ಕಾಲೇಜಿಗೆ ಹೋದ ಮೇಲೆ ಪದ್ಮಜಾಳ ಮನೆಗೆ ಹೋಗಬೇಕು ಎಂಬ ಯೋಚನೆ ಬಂದು ಶಮಿಕಾಳ ಬಳಿ ಹೇಳಿದರು… ಅದಕ್ಕೆ ಶಮಿಕಾ ನೀವು ಬೇಡ ಅಮ್ಮ ಹೋಗುವುದು! ಕಾಲು ಸರಿ ಗುಣವಾಗಲಿ…..ಪದ್ಮಜಾ ಆಂಟಿಗೆ ಕಾಲ್ ಮಾಡಿ ನಾನೇ ಅವರನ್ನು ಇಲ್ಲಿಗೆ ಬರಲು ಹೇಳುತ್ತೇನೆ ಎಂದಾಗ ಭವಾನಿ ಕೂಡ ಆಗಬಹುದು ಎಂದರು…..
ಪವನ್ ಎದ್ದು ಬೆಳಗಿನ ಅವನು ಮಾಡುವ ಮನೆ ಕೆಲಸ ಮುಗಿಸಿ ತಿಂಡಿ ತಿಂದು ಕುಳಿತಾಗ ತುಂಬಾ ದಿನದಿಂದ ಕೆಲಸಕ್ಕೆ ಹೋಗಿಲ್ಲ. ಕೆಲಸದವರು ಎನೂ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಕೃಷಿ ಕೆಲಸ ಬೇರೆಯವರು ಎಷ್ಟು ಮಾಡಿದರೂ ನಾವು ಸ್ವತಃ ದುಡಿಮೆ ಮಾಡಿದರೆ ಮಾತ್ರ ಅದರ ನೋವು ನಲಿವುಗಳನ್ನು ಅದರಿಂದ ಬರುವ ಆದಾಯವನ್ನು ಅರಿಯಲು ಸಾಧ್ಯ. ಅಲ್ಲದೆ ಆ ಮಣ್ಣಿನ ಪರಿಮಳ ,ಗಿಡ,ಮರ, ಬಳ್ಳಿಗಳ ಬಳಿ ಹೋಗಿ ಮುಟ್ಟಿ ಮಾತನಾಡಿಸಿದಾಗ ಸಿಗುವ ಆನಂದ ಬೇರೆ ಯಾವ ಕೆಲಸವೂ ನೀಡಲಾರದು ಎಂದು ಪವನ್ ಗೆ ಈ ಎರಡು ವರ್ಷಗಳಿಂದ ತಿಳಿದಿದೆ. ಗಿಡ ಮರ ಬಳ್ಳಿಗಳ ಕೆಲಸಕ್ಕೆ ಹೋದರೆ ಸಮಯದ, ಹಸಿವಿನ ಪರಿವೆಯೇ ಪವನ್ ಗೆ ಇರುವುದಿಲ್ಲ. ನಾವು ನಾವೇ ಕೃಷಿ ಮಾಡುವುದರಿಂದ ಯಾರ ಕೈ ಕೆಳಗೂ ದುಡಿಯ ಬೇಕಾಗಿಲ್ಲ. ಯಾರ ಹಂಗೂ ಇಲ್ಲದೆ ಮೇಲಾಧಿಕಾರಿಗಳ ದರ್ಪ ಅಹಂಕಾರಕ್ಕೂ ಬಲಿಯಾಗ ಬೇಕಾಗಿಲ್ಲ, ಬೇಕಾದ ತರಕಾರಿ, ಹಣ್ಣು ಬೆಳೆದು ಮನೆಗೆ ಬೇಕಾದ ಹಣ್ಣು ತರಕಾರಿ ಇಟ್ಟು ಉಳಿದುದನ್ನು ಒಮ್ಮೆ ಗೊತ್ತಾದರೆ ತೆಗೆದುಕೊಂಡು ಹೋಗಲು ಜನ ಬರುತ್ತಾರೆ ಹಾಗೂ ಮಾರುಕಟ್ಟೆಯ ವ್ಯಾಪಾರಿಗಳು ತೋಟಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ….ಈ ಎರಡು ವರ್ಷಗಳಿಂದ ಪವನ್ ಗೆ ತೋಟದಿಂದ ಕೈ ತುಂಬಾ ದುಡ್ಡು ಬಂದಿದೆ….ತೋಟ ಮಾಡಿದ ಪ್ರಾರಂಭದಲ್ಲಿ ತುಂಬಾ ಜನ ನೀನು ಇದ್ದ ಪೋಲೀಸ್ ಕೆಲಸ ಬಿಟ್ಟು ಇದಕ್ಕೆ ಬರಬಾರದಿತ್ತು..ಕೈ ಸುಟ್ಟು ಹೋಗುತ್ತದೆ… ಕೃಷಿ ಮಾಡಿ ಏನು ಉದ್ದಾರ ಆಗುತ್ತಿ….. ಎಲ್ಲರೂ ಇದ್ದ ಜಾಗ ಮಾರಿ ಆರಾಮವಾಗಿ ಕುಳಿತು ಜೀವನ ಮಾಡಲು ಆರಂಭಿಸುತ್ತಾರೆ. ನೀನು ಅದು ಬಿಟ್ಟು ಜಾಗ ತೆಗೆದು ಕೊಂಡು ತರಕಾರಿಗಳನ್ನು ಹಣ್ಣುಗಳನ್ನು ಬೆಳೆಯುತ್ತಿ ಎಂದು ಹೇಳುತ್ತಿ ಅಂತ ಗೇಲಿ ಮಾಡಿದ್ದರು…ಮೊದ ಮೊದಲು ಪವನ್ ಗೆ ಇದು ತುಂಬಾ ಕಷ್ಟ ಇದೆ ಎಂದು ಅನ್ನಿಸಲು ಶುರುವಾಯಿತು ಕ್ರಮೇಣ ಗಿಡ ಬಳ್ಳಿಗಳಲ್ಲಿ ಫಲ ಬರಲು ಶುರುವಾದ ಮೇಲೆ ಇವನಿಗೂ ಸ್ವಲ್ಪಮಟ್ಟಿನ ಭರವಸೆ ಮೂಡಲು ಸಾಧ್ಯವಾಯಿತು… ಅಲ್ಲಿಂದ ಹಿಂದೆ ನೋಡಲೇ ಇಲ್ಲ! ಇಂದು ಗೇಲಿ ಮಾಡಿದ ಇವನ ಸಹೋದ್ಯೋಗಿಗಳು ಪರಿಚಯದವರೇ ತರಕಾರಿ ಹಣ್ಣು ಹಂಪಲು ಕೊಳ್ಳಲು ಇವನ ತೋಟಕ್ಕೆ ಬರುತ್ತಾರೆ… ತೋಟದ ಉಸ್ತುವಾರಿ ನೋಡಲು, ಗಿರಾಕಿಗಳು ಬಂದರೆ ಹಣ್ಣು ತರಕಾರಿ ಮಾರಲು ಎಂದೇ ಒಬ್ಬ ನಂಬಿಕಸ್ತ ಯುವಕನನ್ನು ನೇಮಿಸಲಾಗಿದೆ…… ಪವನ್ ಎರಡು ವಾರ ಹೋಗದಿದ್ದರೂ ಅವನೇ ಅಲ್ಲಿಯ ಎಲ್ಲ ಕೆಲಸ ಮಾಡಿ ಬಂದ ಹಣ, ಕೆಲಸದವರಿಗೆ ಅಗತ್ಯ ಇದ್ದಾಗ ನೀಡಿದ ಹಣಕಾಸಿನ ಬಗ್ಗೆ ಎಲ್ಲಾ ಲೆಕ್ಕಪತ್ರಗಳನ್ನು ಬರೆದಿಟ್ಟು ತುಂಬಾ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಾನೆ… ದಿನಾ ತೋಟದಲ್ಲಿ 4 ರಿಂದ 5 ಜನ ಖಾಯಂ ಆಗಿ ಕೆಲಸ ಮಾಡಲು ಆಳುಗಳಿದ್ದಾರೆ…. ಅಮ್ಮ ಕೂಡ ವಾರದಲ್ಲಿ ಎರಡು ಮೂರು ಬಾರಿ ಆದರೂ ತೋಟಕ್ಕೆ ಬಂದು ಆರಾಮ ಕುರ್ಚಿಯಲ್ಲಿ ಕುಳಿತು ಓದುತ್ತಾ, ಕೆಲಸ ಮಾಡುವವರಲ್ಲಿ ಮಾತನಾಡುತ್ತಾ ಹಣ್ಣು ತರಕಾರಿ ಕೊಯ್ಯಲು ಸಹಾಯ ಮಾಡುತ್ತಾರೆ.. ಕೆಲವೊಮ್ಮೆ ತೋಟದ ಮನೆಯಲ್ಲಿ ರಾತ್ರಿ ಅಮ್ಮ ಮತ್ತು ಪವನ್ ತಂಗುವುದು ಇದೆ… ಶೌಚಾಲಯ, ಅಡುಗೆ ಮಾಡಲು ಬೇಕಾದ ವ್ಯವಸ್ಥೆ ಮಾಡಿ ಸಣ್ಣ ಹೆಂಚಿನ ಚೊಕ್ಕದಾದ ಮನೆ ನಿರ್ಮಾಣ ಮಾಡಲಾಗಿದೆ.. ಹಾಗಾಗಿ ತೋಟಕ್ಕೆ ಹೋದಾಗ ಸಿಗುವ ಆನಂದ, ಸಂತೋಷ ಬೇರೆಲ್ಲೂ ಸಿಗಲಾರದು ಎಂದೇ ಪವನ್ ನ ನಂಬಿಕೆ ಅದು ನಿಜ ಕೂಡ……. ಯೋಚನೆಯಿಂದ ಎಚ್ಚೆತ್ತ ಪವನ್ ಅಮ್ಮ ನಾನು ಇವತ್ತು ತೋಟಕ್ಕೆ ಹೋಗುತ್ತೇನೆ ಸಂಜೆ ವಾಪಸ್ ಬರುವುದು ಎಂದಾಗ ಪದ್ಮಜಾ ಸರಿ ಪವನ್ ಈಗ ನೀನು ಸ್ನಾನಕ್ಕೆ ಹೋದಾಗ ಶಮಿಕಾ ಫೋನ್ ಮಾಡಿ ಮನೆಗೆ ಬರಲು ಹೇಳಿದಳು… ಅವಳು ಹೇಳದಿದ್ದರೂ ನಾನು ಭವಾನಿಯನ್ನು ನೋಡಿ ಮಾತನಾಡಲು ಹೋಗುತ್ತಿದ್ದೆ ಎಂದರು……
ಪವನ್ ಬೈಕ್ ನಲ್ಲಿ ಅಮ್ಮನನ್ನು ಭವಾನಿಯ ಮನೆಗೆ ತಲುಪಿಸಿ ತನ್ನ ತೋಟದ ಕೆಲಸಕ್ಕೆ ಹೋದನು…
ಪದ್ಮಜಾ ಮತ್ತು ಭವಾನಿ ಇಬ್ಬರೇ ಆರಾಮವಾಗಿ ಕುಳಿತು ಮಾತನಾಡಲು ಶುರು ಮಾಡಿದರು…. ಭವಾನಿಯ ಮನಸ್ಸು ಪದ್ಮಜಾ ತಾನು ನೀಡಿದ ಡೈರಿ ಓದಿರಬಹುದು ಎಂದು ಕೇಳೋಣ ಎಂದು ಮನಸ್ಸಲ್ಲೇ ಅಂದುಕೊಂಡಳು…. ಪದ್ಮಜಾ ಮಾತ್ರ ಪವನ್ ಮೊನ್ನೆಯಿಂದ ಅನ್ಯಮನಸ್ಕನಾಗಿಯೇ ಇರುವ ಬಗ್ಗೆ ಭವಾನಿಯಲ್ಲಿ ಕೇಳೋಣವೇ ಎಂಬ ಯೋಚನೆಯಲ್ಲಿ ಇದ್ದು ಪರಸ್ಪರ ಬೇರೆಯೇ ಕಥೆ ಕಾದಂಬರಿ ಓದಿದ ಕುರಿತು ಮಾತನಾಡುತ್ತಾ ತುಂಬಾ ಸಮಯ ಕಳೆದ ಮೇಲೆ ಪದ್ಮಜಾಳಿಗೆ ಮಾತ್ರ ಕೇಳಬೇಕು ಎಂದು ಯೋಚಿಸಿದ್ದು ಕೇಳದೆ ತಡೆಯಲು ಆಗಲಿಲ್ಲ……
ಭವಾನಿ ನಿನ್ನಲ್ಲಿ ಒಂದು ವಿಷಯ ಕೇಳಬೇಕು ಎಂದಾಗ ಧಾರಾಳ ಕೇಳು ಪದ್ಮಜಾ ಎಂದು ಭವಾನಿ ಹೇಳಿದಳು…. ಭವಾನಿ ತನ್ನ ಮತ್ತು ಶಮಿಕಾಳ ವಿಷಯವೇ ಇರಬಹುದು ಎಂದುಕೊಂಡಳು…..
ಪವನ್ ಇತೀಚೆಗೆ ಏನನ್ನೋ ಚಿಂತೆ ಮಾಡುತ್ತಿದ್ದಾನೆ ಭವಾನಿ. ಯಾಕೆ ? ವಿಷಯ ಎನು? ಹೇಳುತ್ತಿಲ್ಲ. ಆದರೆ ಅವನು ಸಣ್ಣ ಇರುವಾಗಿನಿಂದ ಕೂಡ ಯಾವುದೇ ಸಮಸ್ಯೆ, ಘಟನೆ ನಡೆದರೂ ಮುಚ್ಚುಮರೆ ಇಲ್ಲದೆ ಹೇಳುತಿದ್ದ…. ಆದರೆ ಈ ವಿಷಯ ಏನೂ ಹೇಳಲಿಲ್ಲ.. ನಾನು ತುಂಬಾ ಸಲ ಕೇಳಿದ ಮೇಲೆ ಮದುವೆ ಆದ ಹೆಣ್ಣಿನ ಗಂಡ ತೀರಿ ಹೋಗಿ ಮಗು ಇದೆ ಅಂತಹ ಹೆಣ್ಣನ್ನು ಮದುವೆ ಆಗಬಹುದೇ ಎಂದು ಕೇಳಿದ. ಯಾರಿಗೆ ಮತ್ತು ಹೆಣ್ಣು ಯಾರು ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ… ನನಗೆ ಮಾತ್ರ ಇದನ್ನು ಕೇಳಿ ತುಂಬಾ ಸಂಕಟವಾಯಿತು ಹಾಗೂ ಅದೇ ತಲೆಬಿಸಿ ಆಗಿದೆ ಭವಾನಿ ಎಂದು ಒಂದೇ ಉಸಿರಿಗೆ ಹೇಳಿದರು ಪದ್ಮಜಾ….ಭವಾನಿಗೆ ತಕ್ಷಣ ನೆನಪಿಗೆ ಬಂದಿದ್ದು ಆರತಿ ಮತ್ತು ಅವಳ ಮಗಳು.. ಆದರೆ ಇಷ್ಟು ಗಂಭೀರವಾಗಿ ಪವನ್ ಯೋಚನೆ ಮಾಡುತ್ತಾನೆ ಎಂದು ಭವಾನಿ ಅನಿಸಿರಲಿಲ್ಲ…. ಭವಾನಿಗೆ ಆರತಿ ಕುಟುಂಬದ ಕುರಿತು ಹೇಳಬೇಕಾ ಬೇಡ್ವಾ ಎಂಬ ಹೊಯ್ದಾಟ ಆಯಿತು… ಭವಾನಿಯ ಮೌನ ಕಂಡು ಪದ್ಮಜಾ ಯಾಕೆ ಭವಾನಿ ಸುಮ್ಮನೆ ಇದ್ದಿ.. ನಿನಗೆ ಎನಾದರೂ ಗೊತ್ತಿದ್ದರೆ ಹೇಳು ಎಂದರು…..ಭವಾನಿಗೆ ಪದ್ಮಜಾಳ ಬಳಿ ಹೇಳಿದರೆ ಏನಾಗಬಹುದು ಎಂಬ ಜಿಜ್ಞಾಸೆ ಉಂಟಾಯಿತು… ನನ್ನಿಂದ ಒಂದು ಹೆಣ್ಣಿನ ಬಾಳು ಬೆಳಗ ಬೇಕೇ ವಿನಃ ಪುನಃ ಕತ್ತಲು ಆಗಬಾರದು…. ನಾನು ಏನೊ ಹೇಳಿ ಏನೊ ಆದರೆ ಎಂದು ತಕ್ಷಣ ಯಾವುದೇ ಪ್ರತ್ಯುತ್ತರ ನೀಡಲಿಲ್ಲ ಭವಾನಿ…. ಪದ್ಮಜಾ ಭವಾನಿಯ ಮೌನ ಕಂಡು ಯಾಕೆ ಇವಳು ಈ ರೀತಿ ಮಾಡುತ್ತಾಳೆ ಎಂದು ಒಂದು ಕ್ಷಣ ಬೇಸರ ಆಗಿ ಆ ಬೇಸರವೇ ಸಿಟ್ಟಾಗಿ ಒಮ್ಮೆಲೇ ಬಿರುಗಾಳಿಯಂತೆ ಮನಸ್ಸಿನಿಂದ ಮುಖಕ್ಕೆ ನುಗ್ಗಿತು…..
ಅದೇ ಕ್ಷಣ ಭವಾನಿ ಮಾತು ಶುರು ಮಾಡಿದಳು ಬೇಸರ ಸಿಟ್ಟು ಉದ್ರೇಕ ಎಲ್ಲ ಕಾಲಕ್ಕೂ ಅಥವಾ ಎಲ್ಲಾ ವಿಷಯಕ್ಕೂ ಉತ್ತರ ಆಗಲಾರದು ಪದ್ಮಜಾ!!! ಪ್ರತಿ ವಿಷಯದಲ್ಲೂ ಎರಡು ಕಡೆಯಿಂದ ಯೋಚನೆ ಮಾಡಿದಾಗ ಮಾತ್ರ ಉತ್ತರ ಸಿಗುತ್ತದೆ ವಿನಃ …. ಒಂದೇ ಕಡೆಯಿಂದ ಯೋಚನೆ ಮಾಡಿದರೆ ತಪ್ಪು ಆಗುತ್ತದೆ… ಅದಕ್ಕೆ ಅಲ್ವಾ ನ್ಯಾಯ ನೀಡುವ ನ್ಯಾಯಲಯ ಕೂಡ ಎರಡು ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯ ನೀಡುವುದು……ಬರೀ ನಿನ್ನ ಕಡೆಯಿಂದ ಮಾತ್ರ ನೋಡಿದರೆ ನೀನು ಹೇಳುವುದೇ ಸರಿ ಎಂದು ಕಾಣುತ್ತದೆ ಹಾಗೂ ತಪ್ಪು ಎದುರಿನವರದೇ ಎಂದು ಅನಿಸುವುದು ಸಹಜ ತಾನೇ..! ನಾವು ಯಾರ ಬಗ್ಗೆ ಯೋಚನೆ ಮಾಡುತ್ತೇವೆಯೋ ಅವರ ಕಡೆಯಿಂದಲೂ ಯೋಚನೆ ಮಾಡಬೇಕು ಅಲ್ವಾ!!
ಹೆಣ್ಣು ಹೃದಯದಿಂದ ಯೋಚಿಸು…… ಪವನ್ ನ ಅಮ್ಮನಾಗಿ ಅಲೋಚನೆ ಮಾಡಬೇಡ . ಉದಾಹರಣೆಗೆ ನಿನಗೆ ಬೇಕಾದವರು ಒಬ್ಬರು ನಿನ್ನನು ಖಂಡಿತಾವಾಗಿ ಬೇಟಿ ಆಗುತ್ತೇನೆ ಎಂದು ಯಾವ ಸ್ಥಳ, ಸಮಯ ಹೇಳಿರಬಹುದು…. ನೀನು ಮಾತು ಕೊಟ್ಟಂತೆ ಆ ಸಮಯಕ್ಕೆ ಸರಿಯಾಗಿ ಆ ಸ್ಥಳಕ್ಕೆ ಹೋಗಿ ಕಾದು ಕಾದು ಹಿಂತಿರುಗಿ ಬಂದು ನಿನಗೆ ಮಾತು ಕೊಟ್ಟವರಲ್ಲಿ ನನಗೆ ಮೋಸ ಮಾಡಿದ್ದು ಎಂದು ಮಾತು ಬಿಟ್ಟರೆ ಅದು ಸರಿಯಾ? ಆ ಸಮಯಕ್ಕೆ ಯಾಕೆ ಬಂದಿಲ್ಲ ಎನೂ ಕಾರಣ ಇರಬಹುದು ಎಂದು ಅವರ ಕಡೆಯಿಂದ ಕೂಡ ಯೋಚನೆ ಮಾಡಬೇಕು ಅಲ್ವಾ! ಸಮಸ್ಯೆ ತೊಂದರೆ ಎಲ್ಲರಿಗೂ ಇದೆ ಹಾಗೂ ಬರುತ್ತದೆ ಅದನು ನೋಡುವ ದೃಷ್ಟಿಕೊನ ಮತ್ತು ಎದುರಿಸುವ ಧೈರ್ಯ ಬೇರೆ ಬೇರೆ ಇರಬಹುದು ಅಷ್ಟೇ ವ್ಯತ್ಯಾಸ…..ಕೆಲವರು ಹೇಳುತ್ತಾರೆ ಕೆಲವರು ತಮ್ಮ ಬದುಕಿನ ಏಳುಬೀಳುಗಳನ್ನು ಹೇಳದೆ ಮನಸ್ಸಿನ ಆಳದಲ್ಲಿ ನೋವನ್ನು ನುಂಗಿ ಮುಖದಲ್ಲಿ ನಗುತ್ತಿರಬಹುದು ಅಲ್ವಾ!!!!
ಕಾಲ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಬರುತ್ತದೆ ಆದರೆ ಕಾಯುವ ತಾಳ್ಮೆ ಸಂಯಮ ಬೇಕು!!!!
( ಮುಂದುವರಿಯುವುದು)
✍️ ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ