November 23, 2024
igo-bhandary

ವಿಶ್ವ ಪ್ರಸಿದ್ಧಿ ಪಡೆದಿರುವ ” ಇಡ್ಲಿ ” ತಿನಿಸಿನ ಪರಿಚಯ ಎಲ್ಲರಿಗೂ ತಿಳಿದಿರುತ್ತದೆ. ಎಲ್ಲೆಡೆ ಹೆಚ್ಚಾಗಿ ಬೆಳಗಿನ
ಉಪಹಾರ ಅಲ್ಲದೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಇಡ್ಲಿ ಇದ್ದೇ ಇದೆ. ಇದರ ಹೆಸರು “ಇಡ್ಲಿ” ಹೇಗೆ ಬಂತು? ಇದರ ಚರಿತ್ರೆ ಇತಿಹಾಸಗಳ ಬಗ್ಗೆ ಯಾರೂ ತಲೆ ಕೆಡಿಸಿ ಕೊಂಡಿಲ್ಲ. ಇದರ ಹುಟ್ಟೂರು ಯಾವುದು? ಇದರ ಕರ್ತರು ಯಾರು? ಇಡ್ಲಿ ಎಂಬ ಪದವು ಯಾವ ಭಾಷೆದ್ದು? ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ.

             ಕೆಲವು ಬರಹಗಾರರು ಇದು ದಕ್ಷಿಣ ಭಾರತದ ಅದರಲ್ಲೂ ಮದರಾಸು (ತಮಿಲು ನಾಡು)ಪ್ರಾಂತ್ಯದ ತಿನಸು ಎನ್ನುವರು. ಮದರಾಸಿನಿಂದ ಭಾರತದ ಎಲ್ಲೆಡೆ ಪಸರಿಸಿ ಶ್ರೀಲಂಕಾ ರಾಷ್ಟ್ರಕ್ಕೆ ಹೋಗಿದೆ. ಈಗ ವಿಶ್ವದಾದ್ಯಂತ ಹರಡಿದೆ ಎನ್ನುವರು. ಎಲ್ಲಾದರೂ ಹುಟ್ಟಿರಲಿ ನಮಗೇನು ಎಂದು ಅದರ ಚಿಂತೆ ಮಾಡಲು ಯಾರೂ ಹೋಗಿಲ್ಲ.


               ನಾನು ಇಲ್ಲಿ ಹೇಳುತ್ತೇನೆ. ಇಡ್ಲಿಯ ಹುಟ್ಟೂರು ನಂದೇ ಊರು. ಅದು ತುಲುನಾಡ್. “ಇಲ್ಲ್”(ಇಲ್ಲು)ಪದದಿಂದ ಅದು ಜನಿಸಿದೆ. “ಇಲ್ಲ್ “ಪದವು ಆದಿಮೂಲದ ಅಪ್ಪಟ ತುಲು ಪದ.ಇಲ್ಲ್ ಪದವನ್ನು”ಇಲ್ಲಿ” ಎಂದಿದ್ದಾರೆ. ಕ್ರಮೇಣ ಮುಂದುವರಿದು ಇಡಲಿ,ಇಡಿಲಿ,ಇಡ್ಲಿ ಎಂದಾಗಿದೆ.
                 ಅಂದು ಪ್ರಥಮವಾಗಿ ಪೃಕತಿ ನಿರ್ಮಿಸಿದ ತುಲುಕಾಡಿಗೆ ಬಂದವರು ಅದೆಷ್ಟೋ ವರ್ಷ ಇಲ್ಲಿ ಕುಡು
(ಹುರುಳಿ)ತಿಂದೇ ಬದುಕುತ್ತಿದ್ದರು. ಇಲ್ಲಿ ದೈವ(ನಾಗ ಮತ್ತು ಬೂತೊಲು)ಆರಾಧನೆ ಸ್ಥಾಪನೆ ಆಗುತ್ತದೆ. ಹೊಲ ಗದ್ದೆಗಳ ರಚನೆ ನಡೆಯುತ್ತದೆ. ಅಕ್ಕಿಯನ್ನು ಬೆಳೆಸುತ್ತಾರೆ. ಕುಡುಅರಿ ಎಸೆದು ತುಲುನಾಡ್ ಸೃಷ್ಟಿ ಆಯಿತು ಎನ್ನುವರು.ಈ ಖುಷಿಯಲ್ಲಿ ಕೆಡ್ಡಸದ ದಿನ ಕುಡರಿ ಹುರಿದು ಪ್ರಸಾದದ ರೂಪದಲ್ಲಿ ತಿನ್ನುತ್ತಾ ಬಂದರು. ಈ ಕಾಲದಲ್ಲೇ ತುಲುನಾಡಲ್ಲಿ ವಿವಿಧ ಅಕ್ಕಿ ಅಡ್ಯೆಗಳು(ತಿನಸುಗಳು)ಜನ್ಮ ತಾಳುತ್ತದೆ.


                ಅಂದಿನ ತುಲುವರು ಪ್ರಥಮವಾಗಿ ತಯಾರಿಸಿದ ಅಕ್ಕಿ ತಿಂಡಿ ಎಂದರೆ‌ ಮನ್ನಿ.ನಂತರದಲ್ಲಿ ಕಪ್ಪಲ್ ಓಡಿನಲ್ಲಿ ಕಪ್ಪ ರುಟ್ಟಿ ತಯಾರಿಸಿ ರುಚಿ ಕಂಡರು. ಒಡೆದ ಗುರ್ಕೆ ತುಂಡಿನಲ್ಲಿ ಓಡು ರುಟ್ಟಿ ಮಾಡಿದರು. ನಂತರದಲ್ಲಿ ಬೇಯಿಸಿ ತಿನ್ನುವ ಅಕ್ಕಿ ಅಡ್ಯೆ ಕಂಡು ಹಿಡಿದರು. ಅವುಗಳು ಎಂದರೆ ವಿವಿಧ ಗಟ್ಟಿ(ಕಡುಬು), ಪುಂಡಿ (ಮುಷ್ಟಿ ಕಡುಬು) ಗಳು. ನೀರಿರುವ ಮಣ್ಣಿನ ಪಾತ್ರೆಯಲ್ಲಿ ತಾರಿ ಗೊರಟು,ತೆಂಗಿನ ಚಿಪ್ಪು ಇಟ್ಟು ಅದರ ಮೇಲೆ ಬೈಹುಲ್ಲು ,ಎಲೆ ಇಟ್ಟು ಗಟ್ಟಿ,ಪುಂಡಿ ಬೇಯಿಸಿದ್ದಾರೆ. ಈ ಕಾಲದಲ್ಲೇ ಸಾರ್ನೆ ಅಡ್ಡೆ ಮಾಡಿ ತಿಂದಿದ್ದಾರೆ. ಇದೇ ಸಮಯದಲ್ಲಿ ಪತ್ರಡ್ಯೆ,ಸೇಮೆದಡ್ಯೆ ಸವಿದಿದ್ದಾರೆ.


           ಕುಡರಿ ಧಾನ್ಯದ ಬಳಿಕ ಇಲ್ಲಿ ಉರ್ಗು(ಉರ್ದು-ಉದ್ದು),ಹೆಸರು, ಎಳ್ಳು ಧಾನ್ಯಗಳನ್ನು ಬೆಳೆಸುತ್ತಾರೆ. ಇನ್ನೂ ಎಣ್ಣೆಯನ್ನು ಉಪಯೋಗಿಸಿ ತಯಾರಿಸುವ ಯಾವುದೇ ಅಡ್ಯೆಗಳು ಜನಿಸಿರಲಿಲ್ಲ. ಈ ಕಾಲದಲ್ಲಿ ಅಕ್ಕಿ ಮತ್ತು ಉದ್ದು ಬೆರಸಿ ದ್ರವ ರೂಪದಲ್ಲಿ ಹಿಟ್ಟು ತಯಾರಿಸಿ ಅಡ್ಯೆ ಮಾಡುವ ಅಂದಾಜು ಮಾಡುತ್ತಾರೆ. ಯಾವ ರೀತಿಯಲ್ಲಿ ಬೇಯಿಸುವುದು ಎಂಬ ಚಿಂತೆ ಇರುವಾಗ ಅವರಿಗೆ ಕಂಡಿದ್ದು ಬೇರೆ ಬೇರೆ ಪಕ್ಕಿದ ಪಟ್ಟ್(ಪಕ್ಕಿದ ಇಲ್ಲ್-ಪಕ್ಷಿಗಳ ಗೂಡು).ವಿವಿಧ ಪಕ್ಷಿಗಳ ವಿವಿಧ ವಿನ್ಯಾಸಗಳ ಗೂಡುಗಳನ್ನು ಕಂಡ ಅಂದಿನ ತುಲುವರು ವಿವಿಧ ಎಲೆಗಳಿಂದ ಅವುಗಳ ಗೂಡಿನ ರಚನೆ ಮಾಡುತ್ತಾರೆ.ಅವುಗಳನ್ನು”ಇಲ್ಲ್” ಎನ್ನುವರು.
          ಬಾಳೆ ಎಲೆಯನ್ನು ಕೆಂಡದಲ್ಲಿ ಬಾಡಿಸಿ ಕೊಟ್ಟೆ ಮುಳ್ಳಿನ ಸಹಾಯದಿಂದ ತಯಾರಿಸಿದ ವಿನ್ಯಾಸದ ಪಟ್ಟ್
(ಇಲ್ಲ್)ಗೆ “ಕೊಟ್ಟಿಗೆ “ಎಂದು ಕರೆದರು. ಇನ್ನೊಂದು ಹಕ್ಕಿ ಗೂಡಿನ ವಿನ್ಯಾಸದ ಪಟ್ಟ್ ಎಂದರೆ ಅದು “ಮೂಡೆ”.
ಅದನ್ನು ಮುಂಡೇವು ಒಲಿಯಿಂದ ತಯಾರಿಸಿದರು. ಇನ್ನೊಂದು ದುಂಡಗಿನ ಗುಂಡಗಿನ ವಿನ್ಯಾಸದ ಪಟ್ಟ್
ಎಂದರೆ ಅದನ್ನು ಹಲಸಿನ ಎಲೆಗಳಿಂದ ತಯಾರಿಸಿದರು. ಅದು ಗೂಡಿನಂತೆ ಕಂಡಿತು. ಅದನ್ನು “ಗುಂಡ” ಎಂದರು. ವಿವಿಧ ವಿನ್ಯಾಸದ ಪಟ್ಟ್ ಗಳನ್ನು ಹಿಡಿದು “ಪಕ್ಕಿದ ಇಲ್ಲ್” ಎಂದಿದ್ದಾರೆ. ಪಟ್ಟ್ ಮತ್ತು ಇಲ್ಲ್ ಎಂದರೆ ಒಂದೇ ಅರ್ಥ.


          ಅಕ್ಕಿ ಮತ್ತು ಉದ್ದು ನೆನೆಸಿ ಅರೆದು(ರುಬ್ಬುವ ಕಲ್ಲು ಅಂದು ಇರಲಿಲ್ಲ) ಉರ್ಗರೆ (ಉಬ್ಬು)ಇಟ್ಟು ನಂತರ ಇಲ್ಲ್ ಗಳಲ್ಲಿ (ಪಟ್ಟ್)ಮೇಲೆ ತಿಳಿಸಿದ ಗಟ್ಟಿ ತಯಾರಿಯಂತೆ ತಯಾರಿಸಿದ ಅಡ್ಯೆಯ ರುಚಿ ಕಂಡರು. ಇಲ್ಲ್ ಗಳಲ್ಲಿ
ತಯಾರಿಸಿದ ಅಡ್ಯೆಗೆ “ಇಲ್ಲಿ”ಎಂದು ಕರೆದರು.


       “ಇಲ್ಲ್”ಎಂದರೆ ಒಂದು ನಿರ್ದಿಷ್ಟ ಜಾಗ ಎಂದು ಅರ್ಥೈಸಿ ಕೊಳ್ಳಬೇಕು. ಹಕ್ಕಿಯ ಪಟ್ಟಿನ ಒಳಗಿನ ಜಾಗ ಅಥವಾ ಸ್ಥಳವನ್ನು”ಇಲ್ಲ್”ಎಂದಿದ್ದಾರೆ. ಆ ಕಾಲದಲ್ಲಿ ಕೋಣೆ ಎಂಬ  ಪದ ತುಲು ಭಾಷೆಯಲ್ಲಿ ಇರಲಿಲ್ಲ ಎಲ್ಲಕ್ಕೂ ಇಲ್ಲ್ ಎನ್ನುತ್ತಿದ್ದರು ಬೂತದ ಇಲ್ಲ್, ಅಟಿಲ್ದ ಇಲ್ಲ್, ಮೀಪಿ ಇಲ್ಲ್, ಬೆಂದ್ರ ಇಲ್ಲ್  ಈ ರೀತಿಯಾಗಿ ಇತ್ತು. ಇಡೀ ಇಲ್ಲ್ ದ ಕಜವು ಅಡ್ಪೊಡು,ಇಡೀ ಇಲ್ಲ್ ತೋರುಂಡು, ಇಡೀ ಇಲ್ಲ್ ಬಿತ್ತಿಲ್ ಮಾರ್ ತಿಂದೆ ಇತ್ಯಾದಿ ಮಾತುಗಳು ಪೂರ್ಣತೆಯನ್ನು ತೋರಿಸುತ್ತದೆ. ಅದರಂತೆ ಇಡಿ+ಇಲ್ಲ್=ಇಡಿಲ್ಲ್ ಆಗಿದೆ.

ಅಂದರೆ ಬೇರೆ ಬೇರೆ ವಿನ್ಯಾಸದ “ಇಲ್ಲ್” ಇದರ ಒಳಗೆ ಪೂರ್ತಿ ಅಕ್ಕಿ ಉದ್ದು ಹಿಟ್ಟನ್ನು ಹಾಕಿ ಬೇಯಿಸಿದ ಅಡ್ಯೆಗೆ
“ಇಡಿಲ್”ಎಂದಿದ್ದಾರೆ. ಇಡಿಲ್ ಪದವೇ ಕ್ರಮೇಣ”ಇಡಿಲಿ” ಎಂದಾಗಿದೆ. ನಾಗರಿಕತೆ ಹೆಚ್ಚಿದಂತೆ “ಇಡ್ಲಿ”ಎಂದರು.
     

ಈಗಲೂ ಕೆಲವರು ” ಇಡಿಲಿ ” ಎನ್ನುವವರು ಸಿಗುತ್ತಾರೆ “ಇಲ್ಲಿ ಕೊಲ್ಲೇ”ಎಂದು ಮಕ್ಕಳು ಕೇಳುವುದು ಇದೆ.”ಇಲ್ಲಿ ತಿನ್ಲೇ” ಎಂದು ಹೇಳುವ ತಾಯಂದಿರನ್ನು ಅಜ್ಜಿಯಂದಿರನ್ನು ನೋಡಲು ಸಿಗುತ್ತಾರೆ.ಕೆಲವು ವರ್ಷಗಳ ಹಿಂದೆ ಹಳ್ಳಿ ಕಡೆ “ಇಲ್ಲಿ” ಎಂದು ಉಚ್ಛಾರ ಮಾಡುವ ಜನರಿದ್ದರು.

    “ಇಲ್ಲ್” ಎಂದರೆ ಒಂದು ನಿರ್ದಿಷ್ಟ ಸ್ಥಳ ಎಂಬುದಕ್ಕೆ ಉದಾಹರಣೆ ಚೆನ್ನೆಮನೆಯ ಗುಳಿಗಳು. ಅವನ್ನು ತುಲು
ಭಾಷೆಯಲ್ಲಿ “ಇಲ್ಲ್”ಎನ್ನುವರು. ಉತ್ತು ಬಿತ್ತಿ ಬೇಲಿ ಹಾಕಿದ ಜಾಗಕ್ಕೆ”ಬಿತ್ತಿಲ್”ಎನ್ನುವರು.ಬಾಟ್+ಇಲ್ಲ್=ಬಟ್ಟಲ್
ಎಂದಾಗಿದೆ. ಬಾಟ್ ಎಂದರೆ ಭೋಜನ. ಇಲ್ಲ್ ಎಂದರೆ ಭೋಜನ ಹಾಕುವ ಸ್ಥಳ. ಅದೇ ರೀತಿಯಲ್ಲಿ ಬಂಜಿ+ಇಲ್= ಬಂಜಿಲ್ ಎಂದಿದ್ದಾರೆ.ಕೊನೆಗೆ “ಬಜಿಲ್” ಆಗಿದೆ. ಅಂದರೆ ಬಂಜಿ ಸ್ಥಳದ ಹಸಿವನ್ನು ನೀಗಿಸುವ ಆಹಾರವೇ ಬಜಿಲ್. ನಂತರದ ಕಾಲದಲ್ಲಿ ಅಪ್ಪದ ಕಾವಲಿಯ ಗುಳಿಗಳನ್ನು “ಇಲ್ಲ್” ಎಂದಿದ್ದಾರೆ.

 ನಾಗರಿಕತೆ ಮುಂದುವರಿದಂತೆ ಇಡ್ಲಿಯನ್ನು ತೆಂಗಿನಕಾಯಿ ಗೆರಟೆ,ಮಣ್ಣಿನ ಪಲ್ಲಾಯಿ,ಗದ್ದವುಗಳಲ್ಲಿ ಇಡೀ ತುಂಬಿಸಿ ‘ಇಡಿಲಿ’ ಮಾಡಿದರು. ನಂತರದಲ್ಲಿ ಬಟ್ಟಲು, ಪಿಂಗಾಣಿ, ಲೋಟೆ ಇವುಗಳಲ್ಲಿ ಪೂರ್ತಿ ತುಂಬಿಸಿ
ಇಡಿಲಿ ಮಾಡಿದರು. ಈ ವಿವಿಧ ವಿನ್ಯಾಸಗಳ ಬೇರೆ ಬೇರೆ ಗಾತ್ರದ ತಿಂಡಿಗಳಿಗೆ ಹಿಟ್ಟು ಮಾತ್ರ ಒಂದೇ ಆಗಿದೆ. ಇಡಿಲಿಯನ್ನು ಕೊಟ್ಟಿಗೆ,ಮೂಡೆ,ಗುಂಡ ಎಂದು ಕರೆದಂತೆ ನಂತರದಲ್ಲಿ ಬಟ್ಟಲ್ಅಡ್ಯೆ, ಗಿಂಡೆದಡ್ಯೆ, ಪಿಂಗಾನಿ ಅಡ್ಯೆ ಎಂದು ಕರೆಯುವುದು ಇತ್ತು.
         ನಂತರದ ಕಾಲದಲ್ಲಿ ತುಲುನಾಡಲ್ಲಿ ಕೊಬ್ಬರಿ ಎಣ್ಣೆ ಬಳಸಿ ಅಕ್ಕಿ ತಿಂಡಿ ತಯಾರಿಸಲು ಕಲಿತರು. ಮೊದಲಾಗಿ “ಉರ್ದ ತೆಲ್ಲಾವು”.ಇಡಿಲಿ ಹಿಟ್ಟನ್ನು ಸ್ವಲ್ಪ ತೆಲು ಮಾಡಿ ಎಣ್ಣೆ ತಾಗಿಸಿ ಬಲಾವು ಕಾವಲಿಯಲ್ಲಿ ಕಾಯಿಸಿದರು. ಬಳಿಕ ಕಪ್ಪ ರುಟ್ಟಿ ಬಂದವನ್ನು ಏಕ್ ದಮ್ ನೀರು ಮಾಡಿ ಬಲವು ಕಾವಲಿಯಲ್ಲಿ ಹೊಯ್ದು “ನೀರ ತೆಲ್ಲವು” ತಯಾರಿಸಿದ್ದಾರೆ. ನಂತರದಲ್ಲಿ ನೆಸಲಡ್ಯೆ,ಅಪ್ಪಡ್ಯೆ ತಯಾರಿಸಿ ತಿಂದಿದ್ದಾರೆ.ಕಬ್ಬಿಣದ ಕಾವಲಿ ಬಂದ ನಂತರವಷ್ಟೇ ಇಲ್ಲಿ ಕೊರಿರುಟ್ಟಿ ತಯಾರಿಸಲು ಆರಂಭವಾಯಿತು. ಕಪ್ಪ ರುಟ್ಟಿ ಮಾಡಲು ಆರಂಭವಾದಾಗ ಬೂತಗಳಿಗೆಂದು “ಬಲ್ಚ್ ಟ್ಟ್” ರುಟ್ಟಿ ತಯಾರಿ ಮಾಡುತ್ತಿದ್ದರು.


       ತುಲುನಾಡಲ್ಲಿ ದೇವರಾಧನೆ ಸ್ಥಾಪನೆಗೆ ಮೊದಲೇ ಎಲ್ಲಾ ತುಲುನಾಡ್ ಅಕ್ಕಿ ತಿನಸುಗಳು ಇಲ್ಲಿ ಜನಿಸಿದ್ದವು.
ತುಲುನಾಡಿಗೆ ವೈಷ್ಣವರು ಬರುತ್ತಾರೆ. ಅವರು ಮಡಿವಂತರು.ಅವರು ತುಲುನಾಡಿನ ಎಲ್ಲಾ ಅಕ್ಕಿ ತಿನಿಸುಗಳನ್ನು ಇಷ್ಟಪಡುತ್ತಾರೆ.ತುಲುನಾಡಲ್ಲಿ “ಉಡುಪಿ ಹೋಟೆಲ್”ಇವರಿಂದ ಸ್ಥಾಪನೆ ಆಗುತ್ತದೆ. “ಇಡಿಲಿ”ಯೇ ಅವರ ಮುಖ್ಯವಾದ ತಿಂಡಿ ಆಗಿರುತ್ತದೆ. ಇಡಿಲಿಗೆ “ಇಡ್ಲಿ”ಎಂಬ ಹೆಸರನ್ನು ಅವರು ಇಡುತ್ತಾರೆ. ತುಲುನಾಡಲ್ಲಿ ಹೋಟೆಲ್ ಉದ್ಯಮಕ್ಕೆ ಪಂಚಾಂಗ ಹಾಕಿದವರೇ ವೈಷ್ಣವರು. ಶುಚಿತ್ವ, ರುಚಿತ್ವಕ್ಕೆ ಹೆಸರು ಬರುತ್ತದೆ. ಮೆಲ್ಲಗೆ ಮೆಲ್ಲನೆ ತಮ್ಮ ಹೋಟೆಲ್ ಉದ್ಯಮವನ್ನು ವಿಸ್ತರಿಸುತ್ತಾ ಮದರಾಸು ತಲುಪುತ್ತಾರೆ.
       ಆ ಕಾಲದಲ್ಲಿ ತುಲುನಾಡ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿರಲಿಲ್ಲ. ಮದರಾಸು ಪ್ರಾಂತ್ಯಕ್ಕೆ ಸೇರಿತ್ತು. ಬೆಂಗಳೂರು ನಗರಕ್ಕಿಂತ ಮದರಾಸು ನಗರದಲ್ಲಿ ಒಡನಾಟ ಹೆಚ್ಚಿತ್ತು. ಮದರಾಸು ನಗರದ ಉಡುಪಿ ಹೋಟೆಲಿನ ಇಡ್ಲಿ ತಿಂಡಿ ಬಹಳ ಫೇಮಸ್ ಆಗುತ್ತದೆ. ಬೆಳಗಿನ ಉಪಹಾರಕ್ಕೆ ಇಡ್ಲಿ ಇಲ್ಲದೆ ಅದು ಉಪಹಾರವೇ ಅಲ್ಲ ಎನ್ನುವಷ್ಟು ಫೇಮಸ್ ಆಗುತ್ತದೆ. ಮದರಾಸು ಪ್ರಾಂತ್ಯದಾದ್ಯಂತ ಉಡುಪಿ ಹೋಟೆಲುಗಳು ತಲೆ ಎತ್ತುತ್ತವೆ. ಇಡ್ಲಿ ತಿಂಡಿಯ ಕಾರುಬಾರು ಜೋರಾಗುತ್ತದೆ.ತಮಿಲರು ಇಡ್ಲಿಯನ್ನು ಸ್ವತಃ ತಯಾರು ಮಾಡುವಷ್ಟು ಜಾಣರಾಗುತ್ತಾರೆ. ಬ್ರಿಟಿಷ್ ಅಧಿಕಾರಿಗಳು ಕೂಡಾ ಉಡುಪಿ ಹೋಟೆಲಿನ ಇಡ್ಲಿ ರುಚಿಗೆ ಸೋಲುತ್ತಾರೆ. ಇಡ್ಲಿ ಹುಟ್ಟಿದ್ದು ತುಲುನಾಡಲ್ಲಿ. ಬೆಳೆದದ್ದು ಮಾತ್ರ ತಮಿಲುನಾಡಲ್ಲಿ. ನಂತರದ ಕಾಲದಲ್ಲಿ ಬೆಂಗಳೂರು ಮೈಸೂರು ಇತ್ಯಾದಿ ನಗರಗಳಲ್ಲಿ ಉಡುಪಿ ಹೋಟೆಲ್ ತಲೆ ಎತ್ತುತ್ತವೆ.ತಿಂಡಿ ತಿನ್ನುವುದಾದರೆ ಉಡುಪಿ ಹೋಟೆಲಲ್ಲಿ ಎನ್ನುವಷ್ಟು ಪ್ರಸಿದ್ಧವಾಗುವುದು.ಇದಕ್ಕೆ ಮುಖ್ಯ ಕಾರಣ ತುಲುನಾಡ್ ಇಡ್ಲಿ ಕಾರಣವಾಗಿತ್ತು. ತುಲುನಾಡಲ್ಲಿ ಉಡುಪಿ ಹೋಟೆಲ್ ಹೆಚ್ಚು ಪ್ರಸಿದ್ಧ ಆಗಲಿಲ್ಲ. ಕಾರಣ ತುಲುವರು ಪ್ರತಿ ಮನೆಯಲ್ಲೂ ಇಡ್ಲಿ ಮಾಡುವವರು. ಹೋಟೆಲಿಗೆ ಹೋಗಿ ತಿನ್ನುವುದು ಅಂದು ಕಡಿಮೆ ಆಗಿತ್ತು. ಅದರಲ್ಲೂ ಹೋಟೆಲಲ್ಲ ಇಡ್ಲಿಯನ್ನು ಕೊಳ್ಳುವವರೇ ಇಲ್ಲ. ಉಡುಪಿ ಬ್ರಾಹ್ಮಣರಿಂದ ತುಲುನಾಡ್ ಇಡ್ಲಿ ಮದರಾಸು ನಗರದಲ್ಲಿ ಭಾರೀ ಫೇಮಸ್ ಆಯಿತು. ಇಡ್ಲಿ ಮದರಾಸು ನಗರದಲ್ಲಿ ಹುಟ್ಟಿತು ಎನ್ನುವಷ್ಟು ಫೇಮಸ್ ಆಯಿತು.ನಂತರದ ಕಾಲದಲ್ಲಿ ಉಡುಪಿ ಹೋಟೆಲ್ ಗಳು ದೇಶಾದ್ಯಂತ ತೆರೆಯುತ್ತದೆ. “ಇಲ್ಲ್” ಎಂಬ ಪದದಿಂದಲೇ ಹುಟ್ಟಿದ ಇಡ್ಲಿ ಇಲ್ಲ್ ಇಲ್ಲ್ ಗಳಲ್ಲಿ ಹುಟ್ಟುತ್ತದೆ. ಹುಟ್ಟಿದ ಮಗುವೇ ಬಾಯಿ ತೆರೆದು”ಇಲ್ಲಿ”ಬೇಕು ಎನ್ನುತ್ತದೆ. ಉಡುಪಿ ಹೋಟೇಲ್ ವಿಶ್ವದಾದ್ಯಂತ ಪಸರಿಸಿ ತುಲುನಾಡ್ ಇಡ್ಲಿಯ ರುಚಿಯನ್ನು ಬಿತ್ತರಿಸಿತು.
   ತುಲುನಾಡಲ್ಲಿ ಹುಟ್ಟಿದ “ಇಡ್ಲಿ”ಯನ್ನು ವಿಶ್ವದಾದ್ಯಂತ ಪಸರಿಸಿದರು ಉಡುಪಿ ಬ್ರಾಹ್ಮಣರು. ಓಂ ಕೃಷ್ಣಾಯ ನಮಃ

-ಇರ್ವತ್ತೂರು ಗೋವಿಂದ ಭಂಡಾರಿ, ಕಾರ್ಕಳ

Leave a Reply

Your email address will not be published. Required fields are marked *