ನಾನು ಆಗ ಏಳನೇ ತರಗತಿ.ಅಂದು ಸ್ವಾತಂತ್ರ್ಯ ದಿನವಾದರಿಂದ ನಮ್ಮ ಶಾಲೆಯಲ್ಲಿ ಬಹಳ ಸಂಭ್ರಮದ ವಾತಾವರಣ. ಅಪ್ಪ ತಂದು ಕೊಟ್ಟ ಕೇಸರಿ,ಬಿಳಿ,ಹಸಿರು ಬಳೆ ಕೈಗೆ ಹಾಕಿಕೊಂಡು ಸಮವಸ್ತ್ರ ಧರಿಸಿದೆ. ತಂಗಿ,ತಮ್ಮ ನನ್ನು ಜೊತೆ ಕರೆದುಕೊಂಡು ಹೊರಟೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಿಹಿ ತಿಂದೆವು.ಅಪ್ಪ ವೃತ್ತಿಯಲ್ಲಿ ಕ್ಷೌರಿಕ ಆದ್ದರಿಂದ ಅವರು ಕೆಲಸ ಮಾಡುವ ಅಂಗಡಿ ಸಹ ಶಾಲೆಗೆ ಹತ್ತಿರ ಇತ್ತು.ಶಾಲೆ ಮುಗಿದ ತಕ್ಷಣ ಅಪ್ಪನ ಬಳಿ ಓಡಿ ಹೋಗುವುದು ನಮಗೆ ಪ್ರತಿದಿನ ಖಾಯಂ ಆಗಿತ್ತು. ಅ ದಿನವೂ ಶಾಲೆಯಿಂದ ಹೊರಟವಳೆ ಅಪ್ಪನ ಹತ್ತಿರ ಹೋಗಿ ಹರಟೆ ಹೊಡೆದು ಮತ್ತೆ ಮನೆಗೆ ತೆರಳಿದೆ. ಆದರೆ ಅವತ್ತೇ ಅಪ್ಪ ಮತ್ತು ನಮ್ಮ ಒಡನಾಟಕ್ಕೆ ಕೊನೆ ದಿನವೆಂದು ಭಾವಿಸಿರಲಿಲ್ಲ. ಅಂದು ನಮ್ಮನ್ನು ಬಿಟ್ಟು ಹೋದವರು ಮತ್ತೆ ನಮ್ಮ ಬಳಿಗೆ ಬರಲಿಲ್ಲ. ನಾವು ಅವರನ್ನು ಹುಡುಕಿ, ಭೇಟಿಯಾದೆವು. ಆದರೆ ಮತ್ತೆ ನಮ್ಮೊಂದಿಗೆ ಇರುವ ಯೋಚನೆ ಅವರಿಗಿಲ್ಲ ಎಂದು ತಿಳಿದ ಮೇಲೆ ಅವರಿಂದ ದೂರನೇ ಉಳಿದೆವು.
ಇಂದಿಗೆ ಅಪ್ಪನ ಪ್ರೀತಿಯಿಂದ ವಂಚಿತಳಾಗಿ ಅದೆಷ್ಟೋ ವರ್ಷ ಕಳೆದಿದಾದರೂ ಮನಸ್ಸು ಮತ್ತೆ ಮತ್ತೆ ಬಯಸುವುದು ಆತ ತೋರಿಸುತ್ತಿದ್ದಂತಹ ಪ್ರೀತಿ-ಕಾಳಜಿಯನ್ನೆ. ಎಲ್ಲರಿಗೂ ಆಗಸ್ಟ್ ಹದಿನೈದು ಸ್ವಾತಂತ್ರ್ಯ ಸಿಕ್ಕ ದಿನವಾಗಿ ನೆನಪುಳಿದರೆ ನನಗೆ ಅದರ ಜೊತೆಗೆ ಅಪ್ಪನ ಒಡನಾಟ ಕಳೆದುಹೋದ ದಿನವಾಗಿಯೂ ನೆನಪಾಗಿ ಉಳಿದಿದೆ. ಆತ ನಮ್ಮಿಂದ ದೂರ ಆದ ಸಂದರ್ಭದಲ್ಲಿ ಅಮ್ಮ ಬದುಕಿನ ಬಂಡಿಯನ್ನು ಒಬ್ಬಂಟಿಯಾಗಿ ಸಾಗಿಸುವುದು ಅನಿವಾರ್ಯವಾಗಿತ್ತು. ಆ ಸಮಯದಲ್ಲಿ ಸಾಂತ್ವನ ನೀಡುವುದಕ್ಕಿಂತ ನಮ್ಮನ್ನು ಅವಮಾನ ಮಾಡಿದವರೆ ಹೆಚ್ಚು. ಹಾಗಂತ ಅಪ್ಪ ಬಿಟ್ಟು ಹೋದರೆಂದು ಅವರ ಮೇಲೆ ದ್ವೇಷವೇನಿಲ್ಲ ಬೇಜಾರು ಇದೆ. ಸಮಾಧಾಕರವೆಂದರೆ ಅದೆಷ್ಟೋ ಕಷ್ಟಗಳನ್ನು ಒಬ್ಬಂಟಿಯಾಗಿ ಎದುರಿಸುವ ಧೈರ್ಯ ಹೆಚ್ಚಿದೆ.
ಸಣ್ಣವಳಿದ್ದಾಗ ಅಪ್ಪ ಇಲ್ಲದೇ ಬೇರೆ ಪ್ರಪಂಚವೇ ಕಾಣದ ನನಿಗೆ ಅವನು ದೂರವಾದ ಮೇಲೆ ಜಗತ್ತು ಇನ್ನು ವಿಶಾಲವಾಗಿದೆ ಎಂಬುದರ ಅರಿವಾಯಿತು. ಬದುಕಿನಲ್ಲಿ ಎತ್ತರಕ್ಕೇರಬೇಕು ಎಂಬ ಕನಸು ಮೂಡಿಸಿದಾತ ಅದನ್ನು ಒಬ್ಬಂಟಿಯಾಗಿ ನೆರವೇರಿಸುವ ಜವಬ್ದಾರಿ ನೀಡಿದ.ಅದೆಷ್ಟೋ ಸಲ ಅಪ್ಪ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂದೆನಿಸಿದರೂ ಮತ್ತೆ ನನ್ನನ್ನು ನಾನೇ ಸಮಾಧಾನಿಸುತ್ತೇನೆ.
ಗ್ರೀಷ್ಮಾ ಭಂಡಾರಿ
ವಿ.ವಿ ಕಾಲೇಜು ಮಂಗಳೂರು