ನನ್ನ ಬಾಲ್ಯದ ಸ್ವಾತಂತ್ರ್ಯ ದಿನಾಚರಣೆ
ನನ್ನ ತಾಯಿ, ಮಾವಂದಿರು, ಅಕ್ಕ ಅಣ್ಣಂದಿರು, ತಮ್ಮ ತಂಗಿಯಂದಿರು ಕಲಿತ ಶಾಲೆಯಲ್ಲೇ ನನ್ನ ಬಾಲ್ಯದ ಆರಂಭದ ವಿದ್ಯಾಭ್ಯಾಸ ಆಗಿತ್ತು. ನನ್ನ ಶಾಲೆಯ ಹೆಸರು ಹಾಯರ್ ಎಲಿಮೆಂಟರಿ ಶಾಲೆ ಕೊಳಕ್ಕೆ ಇರ್ವತ್ತೂರು ಆಗಿತ್ತು.
ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನೇಮಿರಾಜ್ ಕಟ್ಟಡರವರಾಗಿದ್ದರು. ಅವರು ವಿಧಾನಸಭೆಯ ಮಂತ್ರಿ ಮಂಡಲದಂತೆ ವಿದ್ಯಾರ್ಥಿಗಳಿಗೆ ಅದರ ಅರಿವು ತಿಳಿಯಲು ಶಾಲೆಯಲ್ಲಿ ಆರನೆಯ ಮತ್ತು ಏಳನೆಯ ವಿದ್ಯಾರ್ಥಿಗಳಿಗೆ ಮಂತ್ರಿ ಪದವಿ ಕೊಟ್ಟು ಅದರ ಜ್ಞಾನಾರ್ಜನೆ ಕೊಡುತ್ತಿದ್ದರು. ಇದಕ್ಕನುಸಾರವಾಗಿ ನಾನು ಎರಡೂ ವರ್ಷಗಳಲ್ಲಿ ಸಾಂಸ್ಕೃತಿಕ ಮಂತ್ರಿ ಆಗಿದ್ದೆ.ಪ್ರತೀ ಶುಕ್ರವಾರ ಭಜನೆ ಇರುತ್ತಿತ್ತು. ಮತ್ತು ಪ್ರತಿ ಬುಧವಾರ ಡಿಬೆಟ್ ಇರುತ್ತಿತ್ತು. ವರ್ಷದ ಕೊನೆಗೆ ವಾರ್ಷಿಕೋತ್ಸವ ಇರುತ್ತಿತ್ತು.
ನಾನು ಸ್ವಾತಂತ್ರ್ಯ ದಿನಾಚರಣೆ ಮಾಡಿದ ಶಾಲೆ
ಶಾಲೆಯ ಸ್ವಾತಂತ್ರ್ಯ ದಿನಾಚರಣೆ ಯು ಅಂದಿನ ಕಾಲದಲ್ಲಿ ಅಂದಿನ ಮಟ್ಟಕ್ಕೆ ಬಹಳ ವಿಜೃಂಭಣೆಯಿಂದ ಜರಗುತ್ತಿತ್ತು.
ನಮ್ಮ ಶಾಲೆಯ ಪಕ್ಕದಲ್ಲೇ ಅಜ್ಜ- ಅಜ್ಜಿಯ ಕಲ್ಲು ಇದೆ.ಅದಕ್ಕೆ ಬೊಲ್ಕಲ್ಲ್ (ಬಿಳಿಕಲ್ಲು)ಮತ್ತು ಕೇಪುಲ ಹೂವನ್ನು ಹಾಕಿ ನಮಿಸುವ ಪರಿಪಾಠ ನಮ್ಮಲ್ಲಿ ಇತ್ತು.ಮಳೆ ಜೋರಾಗಿ ಬಂದು ಶಾಲೆಗೆ ರಜೆ ಸಿಗಲಿ,ಪೆಟ್ಟು ಕೊಡುವ ಮೇಸ್ಟ್ರುಗಳಿಗೆ ಚಳಿಜ್ವರ ಬಂದು ಅವರು ರಜೆ ಹಾಕಲಿ,ಪರೀಕ್ಷೆ ಸುಲಭವಾಗಿ ಇರಲಿ ಇತ್ಯಾದಿ ಬೇಡಿಕೆಗಳನ್ನು ಅಜ್ಜ ಅಜ್ಜಿಯರಲ್ಲಿ ಪ್ರಾರ್ಥನೆ ಮಾಡಿ ಕಲ್ಲಿಗೆ ಬೊಲ್ಕಲ್ಲ್, ಕೇಪುಲ ಹೂವು ಅರ್ಪಿಸುವ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಳೆ ಬಾರದಿರಲೆಂದು ಅಜ್ಜ ಅಜ್ಜಿಗೆ ಕಲ್ಲಿಗೆ ಅರ್ಪಣೆ ಮಾಡುವುತ್ತಿದ್ದೆವು. ಸ್ವಾತಂತ್ರ್ಯ ದಿನಾಚರಣೆ ದಿನ ನಾನು ಹೊಸ ಬಟ್ಟೆ ಹಾಕಿಕೊಂಡು ಹೋಗುವ ಕ್ರಮ ಇತ್ತು. ಇಲ್ಲಿ ಹೊಸ ಬಟ್ಟೆ ಎಂದರೆ ಹೊಸದಾಗಿ ಖರೀದಿ ಮಾಡುವುದು ಅಲ್ಲ.ಪ್ರತೀ ಯುಗಾದಿ ಹಬ್ಬದ ದಿನ ಹೊಸ ಬಟ್ಟೆ ತಂದರೆ ಅದು ದೀಪಾವಳಿ ದಿನದವರೆಗೂ ಅದನ್ನು ಹೊಸ ಬಟ್ಟೆ ಎಂದೇ ಕರೆಯುವ ಪದ್ಧತಿ. ದೀಪಾವಳಿ ಹಬ್ಬದ ದಿನ ಇನ್ನೊಂದು ಹೊಸ ಜತೆ ಬಂದರೆ ಅದು ಯುಗಾದಿ ದಿನದವರೆಗೂ ಹೊಸದಾಗಿ ಇರುತ್ತದೆ.
ನಮ್ಮ ಮೆರವಣಿಗೆ ಈ ಗೋರಿದಂಡೆಯ ನಾಗಬನಕ್ಕೆ ಬಂದು ವಾಪಸ್ ಶಾಲೆಗೆ ಹೋಗುತ್ತಿತ್ತು.
ಆಗಸ್ಟ್ 15 ರಂದು ನನ್ನನ್ನು ತಂದೆಯವರು ಬೇಗನೆ ಎಬ್ಬಿಸುತ್ತಿದ್ದರು. ತಾಯಿಯವರು ಮೇಲೆ ವರ್ಣಿಸಿದ ನನ್ನ ಹೊಸ ಅಂಗಿ
ಚಡ್ಡಿಯನ್ನು ಕಬ್ಬಿಣದ ಪೆಟ್ಟಿಗೆಯಿಂದ ಹೊರ ತೆಗೆದು ಕೊಡುತ್ತಿದ್ದರು. ತಲೆಗೆ ಗಾಣದ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಾಕಿ ನನ್ನ ಸಿಲ್ಕೀ ತಲೆ ಕೂದಲನ್ನು ಸ್ವತಃ ತಾಯಿಯೇ ಆ ದಿನ ಬಾಚುತ್ತಿದ್ದರು.ಕುಚ್ಚಲಕ್ಕಿ ತಞನ(ಹಿಂದಿನ ದಿನದ ಅನ್ನ)ವನ್ನು ಗಟ್ಟಿ ಮೊಸರಲ್ಲಿ ಕಲಿಸಿ ಕೊಡುವುದು ಇತ್ತು. ನಾನು ಹೊಸ ಅಂಗಿ ಚಡ್ಡಿ ಹಾಕಿದ ಖುಷಿಯಿಂದ ಇರುತ್ತಿದ್ದೆ.ಆ ವರ್ಷಗಳಲ್ಲಿ ಆಟಿ ತಿಂಗಳು ಎಂದರೆ ಬಹಳವಾಗಿ ಮಳೆ ಬರುವುದು ಇತ್ತು. ತಂದೆಯವರು ನೆನಪಿನಿಂದ ಕೊಡೆ ಒಯ್ಯಲು ತಾನೇ ಕೈಯಲ್ಲಿ ಕೊಡುತ್ತಿದ್ದರು.
ಇದೇ ಅಜ್ಜ ಅಜ್ಜಿ ಕಲ್ಲು. ಮಳೆ ಬಾರದಿರಲೆಂದು ಇದರ ಮೇಲೆ ಬೊಲ್ಕಲ್ಲ್, ಕೇಪುಲ ಹೂವು ಅರ್ಪಿಸುತ್ತಿದ್ದೆವು.
ವಿದ್ಯಾರ್ಥಿಗಳು ಎಲ್ಲರೂ ಬೆಳಗ್ಗೆ ಏಳು ಗಂಟೆಗೆ ಶಾಲೆಯನ್ನು ಸೇರುತ್ತಿದ್ದೆವು.ಶಾಲೆಯಲ್ಲಿ ಧ್ವಜಾರೋಹಣ ಆದ ಬಳಿಕ ಎಲ್ಲರೂ ಸಾಲಾಗಿ ಮೆರವಣಿಗೆ ಮೂಲಕ ಎರಡು ಕಿಲೋಮೀಟರ್ ದೂರದವರೆಗೂ ನಡೆದು ಹೋಗುತ್ತಿದ್ದೆವು. ಮಳೆ ಬಂದರೂ ಜಗ್ಗದೆ ಒದ್ದೆಯಾಗಿ ಮೆರವಣಿಗೆ ಮೂಲಕ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದ್ದೆವು.ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ನೆನಪಿಸಿ ಅವರಿಗೆ ಜೈಕಾರ ಮಾಡುತ್ತಿದ್ದೆವು.ನನ್ನ ಬೊಬ್ಬೆಯ ಸೌಂಡ್ ಜೋರಾಗಿ ಇದ್ದರಿಂದ ಹೆಚ್ಚಾಗಿ ನಾನೇ ಮಹಾತ್ಮ ಗಾಂಧೀಜಿ, ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ವಲ್ಲಭಭಾಯಿ ಪಟೇಲ್, ಬಾಲಗಂಗಾಧರ ತಿಲಕ್, ಸರೋಜಿನಿ ನಾಯ್ಡು ಹಾಗೂ ಇತರರಿಗೆ ಜೈಕಾರ ಹಾಕುತ್ತಿದ್ದೆ.
ಶಾಲೆಯಿಂದ ಹೊರಟ ಮೆರವಣಿಗೆ ಊರ ಸಾನದ ಬಾಕ್ಯಾರ್ ದಾಟಿ ಬಸದಿಗೆ ಪ್ರದಕ್ಷಿಣೆ ಮಾಡಿ ವಾಪಸ್ ಶಾಲೆಗೆ ಬಂದು ಅಲ್ಲಿಂದ ಗೋರಿ ದಂಡೆ(ಈಗ ಗೋಳಿ ದಿಂಡ್)ಯ ನಾಗಬನ ಕಂಡು ಶಾಲೆಗೆ ವಾಪಸ್ಸು.
ಮೆರವಣಿಗೆ ಉದ್ದಕ್ಕೂ ಹಳ್ಳಿಯ ಜನರು ನಮ್ಮ ಮೆರವಣಿಗೆ ನೋಡಿ ಸಂತೋಷ ಪಡುತ್ತಿದ್ದರು. ನಮ್ಮ ತಂದೆಯವರೂ ಮೆರವಣಿಗೆಯಲ್ಲಿ ನನ್ನನ್ನು ಕಂಡು ಖುಷಿಯಿಂದ ಇದ್ದ ನೆನಪಾಗುತ್ತದೆ.ಅಂಗಡಿಯವರೆಲ್ಲರೂ ವಿದ್ಯಾರ್ಥಿಗಳಿಗೆಲ್ಲಾ ಪೆಪ್ಪರಮಿಂಟು,ಲಾಡು ಇತ್ಯಾದಿ ಸಿಹಿ ತಿಂಡಿಗಳನ್ನು ಹಂಚುವುದು ಇತ್ತು.ನಾನು ಹೆಚ್ಚು ಬೊಬ್ಬೆ ಹಾಕಿರುವುದಕ್ಕೆ ಕೆಲವು ಅಂಗಡಿಯವರು ನನಗೆ ಹೆಚ್ಚು ಚಾಕಲೇಟ್ ಕೊಟ್ಟಿರುವ ನೆನಪು ಇದೆ.
ಇದು ನಮ್ಮೂರ ಬಸದಿ. ಇದಕ್ಕೆ ಪ್ರದಕ್ಷಿಣೆ ಮಾಡಿ ವಾಪಸ್ಸು ಬರುತ್ತಿದ್ದೆವು.(ಈಗ ಜೀರ್ಣೋದ್ಧಾರ ಆಗಿದೆ)
ಮೆರವಣಿಗೆ ಮುಗಿಸಿದ ಬಳಿಕ ಶಾಲೆಯಲ್ಲಿ ಭಾಷಣ, ದೇಶ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯುತ್ತಿತ್ತು. “ಇದು ಬಾಪೂಜಿ ಬೆಳಗಿದ ಭಾರತ ! ನದಿ ಕಾವೇರಿ ಹರಿಯುವ ಭಾರತ “… ಎಂಬ ಹಾಡನ್ನೇ ನಾನು ಹಾಡಿದ ನೆನಪಿದೆ. ಕೊನೆಯಲ್ಲಿ ಸಿಹಿ ಹಂಚುವ ಕಾರ್ಯಕ್ರಮದೊಡನೆ ಸ್ವಾತಂತ್ರ್ಯ ದಿನಾಚರಣೆ ಮುಗಿಯುತ್ತಿತ್ತು.
ಐ.ಕೆ.ಗೋವಿಂದ ಭಂಡಾರಿ,ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)