ಪ್ರತಿ ವರ್ಷ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಉತ್ತರಾರ್ಧ ಗೋಳದಲ್ಲಿ ಸೂರ‍್ಯ ಅಂದು ಧೀರ್ಘವಾಗಿರುತ್ತಾನೆ. ಆ ದಿನ ಹಗಲು ಧೀರ್ಘವಾಗಿದ್ದು, ವಿಶ್ವದ ಹಲವಾರು ಖಂಡಗಳಲ್ಲಿ ಪ್ರಖರವಾಗಿ ಕಾಣಿಸಿಕೊಳ್ಳುತ್ತಾನೆ. ಆ ದಿನ ಸೂರ‍್ಯ ನಮಸ್ಕಾರ, ಯೋಗಕ್ಕೆ ಸೂಕ್ತ ದಿನ. 153 ರಾಷ್ಟ್ರಗಳಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ
ಇಂದಿನ ಬ್ಯುಸಿ ಲೈಫ್ ನಲ್ಲಿ ದೇಹವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಲು, ಚಿಂತೆ, ಒತ್ತಡಗಳಿಂದ ಮುಕ್ತಿ ಹೊಂದಲು ಜನ ನಾನಾ ವಿಧಾನಗಳ ಮೊರೆ ಹೋಗೋದು ಸಾಮಾನ್ಯ. ಈ ಆಧುನಿಕ ಯುಗಕ್ಕೆ ತೆರೆದುಕೊಳ್ಳುವ ಭರದಲ್ಲಿ ಆರೋಗ್ಯ ಕೆಡಿಸುವ ಆಹಾರಗಳತ್ತ ಜನ ಹೆಚ್ಚು ಒಲವು ತೋರಿಸುತ್ತಾರೆ. ಈ ಜಂಕ್ ಫುಡ್ ಗಳ ಜಂಜಾಟದಲ್ಲಿ ನಮ್ಮ ಆರೋಗ್ಯದ ಹಿತವನ್ನೂ ಕೆಲವೊಮ್ಮೆ ನಾವು ಮರೆತು ಬಿಡುತ್ತೇವೆ. ಆದರೆ ನಮ್ಮ ಹಿರಿಯರನ್ನು ಒಮ್ಮೆ ನೋಡಿದರೆ, ಇಳಿವಯಸ್ಸಿನಲ್ಲೂ ಅವರ ಬತ್ತದ ಉತ್ಸಾಹ ಎಂತಹ ಯುವಕರನ್ನೂ ನಾಚಿಸಿಬಿಡುತ್ತದೆ. ಇದಕ್ಕೆ ಕಾರಣ ಆಗಿನ ಕಾಲದ ಆರೋಗ್ಯಯುತ ಆಹಾರ ಕ್ರಮದ ಜೊತೆಗೆ ಶ್ರಮದ ದುಡಿಮೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಆರೋಗ್ಯ ಕಾಪಾಡಿಕೊಳ್ಳಲು ಜಿಮ್, ಯೋಗ ಸೇರಿದಂತೆ ವಿವಿಧ ವ್ಯಾಯಾಮಗಳ ಮೊರೆ ಹೋಗುತ್ತಿದ್ದಾರೆ.
ಯೋಗ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಭೋಧನಾ ಶಾಖೆ. ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಹಠಯೋಗ. ಋಷಿ ಮುನಿಗಳ ಕಾಲದಲ್ಲಿ ಆಚರಣೆಯಲ್ಲಿದ್ದ ಯೋಗಕ್ಕೆ ಹಲವು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ. ಅಲ್ಲದೆ ಮಾನಸಿಕ ನೆಮ್ಮದಿಯನ್ನು ಪಡೆಯಲೂ ಯೋಗ ಸಹಕಾರಿ. ಅದಕ್ಕಾಗಿಯೇ ದಿನದಲ್ಲಿ 10 ರಿಂದ 15 ನಿಮಿಷ ಯೋಗಕ್ಕಾಗಿ ಮೀಸಲಿಟ್ಟರೆ ಜೀವನದಲ್ಲಿ ಸದೃಢವಾಗಿ ಬಾಳ್ವೆ ನಡೆಸಬಹುದು.
ಇನ್ನು ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಯೋಗ ಈ ಒಂದು ದಿನಕ್ಕಷ್ಟೇ ಸೀಮಿತವಾಗದೆ ವರ್ಷವಿಡೀ ಅನುಸರಿಸುವಂತಾಗಬೇಕು. ಇದಕ್ಕಾಗಿಯೇ ಹಲವು ಸಂಸ್ಥೆಗಳು ಇಂದು ಉಚಿತವಾಗಿ ಯೋಗ ಶಿಬಿರವನ್ನು ಅಲ್ಲಲ್ಲಿ ಆಯೋಜನೆ ಮಾಡುತ್ತಿವೆ. ದೇಶದಲ್ಲಿರುವ ಎಲ್ಲಾ ಜನತೆ ಯೋಗವನ್ನು ಚಾಚೂ ತಪ್ಪದೆ ಅನುಸರಿಸಿಕೊಂಡು ಬಂದಲ್ಲಿ ಮುಂದೊಂದು ದಿನ ನಮ್ಮ ಭಾರತ ಆರೋಗ್ಯ ಮತ್ತು ಸದೃಢ ಭಾರತವಾಗಿ ಹೊರ ಹೊಮ್ಮುವುದರಲ್ಲಿ ಎರಡು ಮಾತಿಲ್ಲ.
-ವೈಶಾಖ್ ಭಂಡಾರಿ, ಮಿಜಾರು
Nice article….Happy yoga day to all