
ಇರುಳು ಕನಸಲಿ ಬಂದು
ಕೈಯ ರೇಖೆಗಳಲ್ಲಿ
ಚಿತ್ತಾರ ಬರೆದವನು ನೀನಲ್ಲವೇ?
ಗೆಳೆಯ ನೀನಲ್ಲವೇ?
ಅಂಗಳದ ಚಿತ್ರದಲಿ
ಚುಕ್ಕಿ ರೂಪದಿ ಬಂದು
ಕಚಗುಳಿಯ ಇಟ್ಟವನು ನೀನಲ್ಲವೇ?
ಗೆಳೆಯ ನೀನಲ್ಲವೇ?
ಕನ್ನಡಿಯ ಮೂಲೆಯಲಿ
ನನ್ನೇ ದಿಟ್ಟಿಸಿ ನೋಡಿ
ನಸುನಕ್ಕವನು ನೀನಲ್ಲವೇ?
ಗೆಳೆಯ ನೀನಲ್ಲವೇ?
ಕಣ್ಣ ಕಾಡಿಗೆಯಲ್ಲಿ
ಕೊಂಕು ನೋಟವ ಬೀರಿ
ಕಣ್ಣು ಮಿಟುಕಿಸಿದವನು ನೀನಲ್ಲವೇ?
ಗೆಳೆಯ ನೀನಲ್ಲವೇ?
ಮುಂಗುರುಳ ತುದಿಯಲ್ಲಿ
ಕೆನ್ನೆ ಚುಂಬಿಸಿ ನೀನು
ಮತ್ತು ಬರಿಸಿದವನು ನೀನಲ್ಲವೇ?
ಗೆಳೆಯ ನೀನಲ್ಲವೇ?
ನೆರಳಿನಂದದಿ ಬಂದು
ಮತ್ತೆ ಜಂಗುಳಿಯಲ್ಲಿ
ಬೆರಳ ತುದಿ ಸೋಕಿದವ ನೀನಲ್ಲವೇ?
ಗೆಳೆಯ ನೀನಲ್ಲವೇ…?
ಪ್ರೀತಿ ಮಾಯೆಯ ಒಳಗೆ
ಜಾರಿ ಬಿದ್ದಿಹೆ ನಾನು
ಎಲ್ಲೆಲ್ಲೂ ಕಾಣಿಸುವ ಕಾರಣವು ನೀನು….
ಗೆಳೆಯ ಕಾರಣವು ನೀನು….
✍ ಭಾಸ್ಕರ್ ಭಂಡಾರಿ.
ಶಿರಾಳಕೊಪ್ಪ