January 18, 2025
Is-Coconut-Oil-a-Poison

ನಾದಿಕಾಲದಿಂದಲೂ ತೆಂಗಿನೆಣ್ಣೆಯು ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತಿರುವ ಸಂಜೀವಿನಿಯಾಗಿದೆ. ತೆಂಗಿನ ಮರವನ್ನು ನಾವೆಲ್ಲರೂ “ ಕಲ್ಪವೃಕ್ಷ “ಎಂದು ಕರೆಯುತ್ತೇವೆ.

ಇದರ ಕಾಯಿ, ನೀರು, ತಿರುಳು, ಸಿಪ್ಪೆ, ಗೆರಟೆ, ಮರ, ಗರಿ ಹೀಗೆ ಪ್ರತಿಯೊಂದು ಭಾಗವು ಕೂಡ ಪ್ರಕೃತಿ ಮಾನವರಿಗೆ ನೀಡಿದ ಅತ್ಯುತ್ತಮ ವರದಾನವಾಗಿದೆ. ಭಾರತ, ಇಂಡೊನೇಷಿಯಾ, ಫಿಲಿಫ್ಪೈನ್ಸ್, ಬ್ರೆಜಿಲ್ ಹೀಗೆ ಹಲವು ದೇಶಗಳಲ್ಲಿ ತೆಂಗನ್ನು ಬೆಳೆಯುತ್ತಾರೆ. 

ನಮ್ಮ ಪೂರ್ವಜರ ಕಾಲದಿಂದಲೂ ತೆಂಗಿನೆಣ್ಣೆಗೆ ವಿಶಿಷ್ಟವಾದ ಸ್ಥಾನವಿದೆ. ಚರ್ಮ,  ಕೂದಲು, ಅಡುಗೆ ಹೀಗೆ ವಿವಿಧ ಔಷಧೀಯ ಅಗತ್ಯತೆಗಳಿಗೂ ಕೂಡ ಬಳಕೆಯಾಗುತ್ತಿದೆ. ತೆಂಗಿನೆಣ್ಣೆ ಬಳಸದ ಅಡುಗೆಯೇ ವಿರಳ ಎಂದರೆ ತಪ್ಪಾಗಲಾರದು. ಬೇರೆ ಬೇರೆ ಕಂಪೆನಿಗಳ ತರಾವರಿ ಎಣ್ಣೆಗಳು ವರ್ಣರಂಜಿತ ಜಾಹೀರಾತುಗಳಿಂದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದರೂ ಕೂಡಾ, ತೆಂಗಿನ ಎಣ್ಣೆಯ ಬಳಕೆ ಕಡಿಮೆಯಾಗಿಲ್ಲ. ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗಳಿಗೂ ಕೂಡಾ ತೆಂಗಿನೆಣ್ಣೆ ಒಂದಲ್ಲಾ ಒಂದು ರೀತಿಯಲ್ಲಿ ರಾಮಬಾಣವಾಗಿದೆ. ಶಿಶುಗಳಿಂದ ಹಿಡಿದು ಕೋಲೂರುವ ಹಿರಿಯರ ತನಕವೂ ತೆಂಗಿನೆಣ್ಣೆಯನ್ನು ಬಳಸುತ್ತಾರೆ. 

ಹೀಗೆ ಎಲ್ಲಾ ಪೌಷ್ಟಿಕ ತಜ್ಞರು, ಆರೋಗ್ಯ ತಜ್ಞರ ಬಾಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಎಣ್ಣೆ ಎಂದು ಸೈ ಎನಿಸಿಕೊಂಡಿರುವ ತೆಂಗಿನೆಣ್ಣೆ ಈಗ ಹಾರ್ವಾರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರ ಹೇಳಿಕೆಯಿಂದ  “ ವಿಷಕಾರಿ ’’ಯಾದೀತೇ ?. ಅವರ ಪ್ರಕಾರ ತೆಂಗಿನೆಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಅಂಶ (ಸ್ಯಾಚುರೇಟೆಡ್ ಫ್ಯಾಟ್) ಅತಿಯಾಗಿದ್ದು ಇದು ಕೊಲೆಸ್ಟಾರಾಲ್ ಹೆಚ್ಚಿಸಿ ಹೃದಯರೋಗ ತರುತ್ತದೆ. ಹಾಗೆ ನೋಡಿದರೆ ಸಾಂಪ್ರದಾಯಿಕವಾಗಿ ಸಿಗುವ ತೆಂಗಿನ ಎಣ್ಣೆಗಿಂತ ಮಾರುಕಟ್ಟೆಯಲ್ಲಿ ಸಿಗುವ ಜೀರೋ ಫ್ಯಾಟ್ (ಅನ್ ಸ್ಯಾಚುರೇಟೆಡ್ ಫ್ಯಾಟ್) ಎಂದು ಘೋಷಿಸಿಕೊಂಡಿರುವ ಎಣ್ಣೆಗಳು ಆರೋಗ್ಯಕ್ಕೆ ಎಷ್ಟು ಉತ್ತಮ?. ಈಗಲೂ ಭಾರತದ ಹಳ್ಳಿಗಳಲ್ಲಿ ತೆಂಗು, ಅಡಿಕೆ ಕೃಷಿ ಹೊಂದಿರುವವರು ದಿನನಿತ್ಯದ ಅಡುಗೆಗೆ ಯಥೇಚ್ಛವಾಗಿ ಬಳಸಿಕೊಂಡಿರುವುದು ತೆಂಗಿನೆಣ್ಣೆಯನ್ನೇ. ಹಾಗೆ ನೋಡಿದರೆ ಪಟ್ಟಣ ಪ್ರದೇಶದ ಅನ್ ಸ್ಯಾಚುರೇಟೆಡ್ ಫ್ಯಾಟ್ಎಣ್ಣೆ ಬಳಸುವವರಿಗಿಂತ ಹಳ್ಳಿ ಜನರು ಸಧೃಢರಾಗಿಲ್ಲವೇ? ಅಷ್ಟಕ್ಕೂ ತೆಂಗಿನೆಣ್ಣೆಯಲ್ಲಿ ಇರುವ ಕೊಲೆಸ್ಟಾರಾಲ್ ನಿಂದ ಹೃದಯದ ಕಾಯಿಲೆ ಬರುತ್ತದೆ ಎಂಬ ವ್ಯಾಖ್ಯಾನ ಎಷ್ಟು ಸರಿ?. ಕೊಲೆಸ್ಟಾರಾಲ್ 90%  ಲಿವರುಗಳಲ್ಲಿ ಹುಟ್ಟುತ್ತದೆ ಹಾಗೂ 10%  ಮಾತ್ರ ಆಹಾರದ ಮೂಲಕ ದೇಹವನ್ನು ಸೇರುತ್ತದೆ ಎಂದು ವೈದ್ಯರುಗಳೇ ಹೇಳುತ್ತಾರೆ.  ತೆಂಗಿನೆಣ್ಣೆಯನ್ನು ದೂಷಿಸುವಂತಹ ಹಾಗೂ ಹೊಗಳುವಂತಹ ಎಷ್ಟೋ ಅಧ್ಯಯನಗಳು ಈ ಹಿಂದೆಯೇ ನಡೆದು ಹೋಗಿದೆ.

ಒಂದು ಅಧ್ಯಯನ ತೆಂಗಿನೆಣ್ಣೆ, ಬೆಣ್ಣೆ ಮತ್ತು ಮಾಂಸಗಳಿಗಿಂತ ಹೆಚ್ಚಿನ ಕೊಬ್ಬನ್ನು ಹೊಂದಿದೆ ಎಂದು ವರದಿಯನ್ನು ನೀಡಿದರೆ, ಇನ್ನೊಂದು ವಿಷಕಾರಿ ಎಂದು ಹೇಳುತ್ತಿದೆ. ಆದರೂ ಇವೆಲ್ಲವೂ ಬರೆಯ ವ್ಯಾಖ್ಯಾನಗಳಷ್ಟೇ  ಯಾವುದು ದೃಢಪಟ್ಟಿಲ್ಲ. ಇಂತಹ ಹೇಳಿಕೆಗಳಿಂದ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಖರೀದಿಸಲು ಗ್ರಾಹಕರು ಹಿಂದೆ ಮುಂದೆ ನೋಡಬಹುದು. ಇದರಿಂದ ತೆಂಗು ಕೃಷಿಕರಿಗೆ, ಎಣ್ಣೆಯ ವ್ಯಾಪಾರ ವಹಿವಾಟು ನಡೆಸುವವರಿಗೆ ಪೆಟ್ಟುಬೀಳಬಹುದಲ್ಲವೇ?. ವಿಷಕಾರಿ ಎಂದು ಹೀಗೆಲ್ಲಾ ಬಣ್ಣಿಸುತ್ತಿರುವ ಹಾರ್ವಾರ್ಡ್ ವಿಶ್ವವಿದ್ಯಾಲಯವೇ ಈ ಹಿಂದೆ ತೆಂಗಿನೆಣ್ಣೆ ಆರೋಗ್ಯಕರ, ಇದರಲ್ಲಿ ತಾಯಿಯ ಎದೆಹಾಲಿನಲ್ಲಿ ಮಾತ್ರ ಕಂಡುಬರುವ ಮೋನೋರಿಕ್ ಆ್ಯಸಿಡ್ ಇದೆ ಎಂದುವ್ಯಾಖ್ಯಾನಿಸಿತ್ತು.
 

ಪ್ರತಿಯೊಂದು ವಸ್ತುಗಳಿರಲಿ, ಆಹಾರವಾಗಿರಲಿ ತನ್ನದೇ ಆದ ಉಪಯುಕ್ತತೆ ಹಾಗೂ ನ್ಯೂನತೆಗಳನ್ನು ಹೊಂದಿರುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಹೆಚ್ಚಾಗಿ ಸೇವಿಸಿದರೆ ಎಲ್ಲವೂ ವಿಷಕಾರಿಯೇ. ಹಾಗೆಂದು ತೆಂಗಿನಎಣ್ಣೆ ಅಷ್ಟೊಂದು ವಿಷಕಾರಿಯಾಗಿರುತ್ತಿದ್ದರೆ ನಮ್ಮ ಹಿರಿಯರೆಲ್ಲರೂ ಸಧೃಢರಾಗಿರದೆ ರೋಗ ಪೀಡಿತರಾಗಿರಬೇಕಾಗಿತ್ತು. ಮಾನವ ಈ ನಡುವೆ ಆಧುನಿಕ ಆಹಾರ ಪದ್ದತಿಗಳನ್ನು ಸ್ವಲ್ಪ ಬದಿಗೊತ್ತಿ ಸಾಂಪ್ರದಾಯಿಕ, ಆರೋಗ್ಯಕರ ಆಹಾರಗಳತ್ತ ಮುಖ ಮಾಡಿರುವಾಗ, ಎಣ್ಣೆ ವಿಷ, ತರಕಾರಿಗಳು ವಿಷ, ಆಹಾರ ಪದಾರ್ಥಗಳು ವಿಷ ಎಂದು ಒಂದೊಂದು ಅಧ್ಯಯನಗಳು ಒಂದೊಂದು ವ್ಯಾಖ್ಯಾನಗಳನ್ನು ನೀಡಿದರೆ ಮನುಷ್ಯ ತಿನ್ನುವುದಾದರೂ ಯಾವುದನ್ನು?. ಆಹಾರದಲ್ಲಿ ಉಪ್ಪು, ಹುಳಿ, ಖಾರವನ್ನು ದಿನನಿತ್ಯ ಬಳಸಬೇಕೆ ? ಬೇಡವೇ? ಯಾವ ತರಕಾರಿ, ಯಾವ ಹಣ್ಣು ಹಂಪಲು, ಯಾವ ಆಹಾರ ಪದಾರ್ಥಗಳನ್ನು ಬಳಸಬೇಕು? ಎನ್ನುವ ಪ್ರಶ್ನೆ ಮೂಡಲಾರಂಭಿಸುತ್ತದೆ. ಹೀಗೆ ಪ್ರತಿಯೊಂದು ಅಧ್ಯಯನಗಳಿಗೆ ಮಣೆ ಹಾಕಲು ಹೊರಟರೆ ಮುಂದೊಂದು ದಿನ ಹಸಿವಿನ ಗುಳಿಗೆಗಳನ್ನು ತಿಂದು
ಹಸಿವು ನೀಗಿಸಿಕೊಳ್ಳುವ ದಿನ ದೂರವಿಲ್ಲ.                                                                                                                                                                                                                              

ಬರಹ  :  ಸಹ್ಯಾದ್ರಿ ರೋಹಿತ್  ಭಂಡಾರಿ ಕಡಬ

Leave a Reply

Your email address will not be published. Required fields are marked *