ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಫಂಗಲ್ ಸೋಂಕಿಗೆ ಕಾರಣ, ಲಕ್ಷಣಗಳೇನು, ಇದನ್ನು ಹೇಗೆ ತಡೆಯಬಹುದು ಎನ್ನುವ ಬಗ್ಗೆ ಮಾಹಿತಿ
ಈಗಾಗಲೇ ಮಳೆಗಾಲ ಆರಂಭವಾಗಿದೆ. ಪ್ರಕೃತಿ ಮಾತೆ ಹಸಿರ ಹೊದ್ದು ಸಂಪನ್ನವಾಗಿ ಕಂಗೊಳಿಸುತ್ತಿದ್ದಾಳೆ. ಮಳೆಗಾಲದ ಚಟುವಟಿಕೆಗಳು ಚುರುಕೊಳ್ಳುತ್ತಿವೆ. ಮಲೆನಾಡು, ಕರಾವಳಿ ಭಾಗದಲ್ಲಂತೂ ವರುಣ ಕಾಲಿರಿಸಿ ಬಹಳ ದಿನಗಳೇ ಕಳೆದಿವೆ. ಮಳೆಗಾಲ ಎಂದರೆ ಒಂದೆಡೆ ಖುಷಿಯಾದರೆ ಇನ್ನೊಂದೆಡೆ ಹರಡುವ ಕಾಯಿಲೆಗಳ ಭಯ.
ಮಳೆಗಾಲದಲ್ಲಿ ಹವಾಮಾನ ಬದಲಾದಂತೆ ಅನೇಕ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಜ್ವರ, ನೆಗಡಿ ಸಾಮಾನ್ಯವಾದರೆ ಮಲೇರಿಯಾ, ಕಾಲಾರಾದಂತಹ ಗಂಭೀರ ಕಾಯಿಲೆಗಳೂ ಕಾಡುತ್ತವೆ. ಸೋಂಕು ಹರಡುವ ಮೂಲಕ ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಕೂಡ ಕಾಡಬಹುದು. ಅವುಗಳಲ್ಲಿ ಒಂದು ಫಂಗಲ್ ಸೋಂಕು ಅಥವಾ ಫಂಗಲ್ ಇನ್ಫೆಕ್ಷನ್.
ಸೋಂಕು ಮಳೆಗಾಲದಲ್ಲಿ ಚರ್ಮದ ಮೇಲೆ ಹೆಚ್ಚು ತೇವಾಂಶವಿರುವಿರು ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಎಲ್ಲೆಲ್ಲಿ ಈ ಸೋಂಕು ಉಂಟಾಗುತ್ತದೆ, ಲಕ್ಷಣ, ಪರಿಹಾರವೇನು ಎನ್ನುವ ಬಗ್ಗೆ ಇಲ್ಲಿದೆ ನೋಡಿ.
ಫಂಗಲ್ ಇನ್ಫೆಕ್ಷನ್
ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಅನೇಕರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಹೆಚ್ಚು ಕಾಲಿನ ಬೆರಳ ನಡುವೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಹಲವು ವಿಧಗಳಿವೆ, ಅವುಗಳೆಂದರೆ ಅಥ್ಲೆಟ್ಸ್ ಫೂಟ್ ಅಥವಾ ಪೆಡಿಸ್, ಜೋಕ್ ಇಚ್, ರಿಂಗ್ವರ್ಮ್ ಮತ್ತು ಯೀಸ್ಟ್ ಸೋಂಕುಗಳು ಸಾಮಾನ್ಯವಾಗಿದೆ.
ಫಂಗಲ್ ಇನ್ಪೆಕ್ಷನ್‌ಗೆ ಕಾರಣಗಳು
- ಯಾರು ಹೆಚ್ಚು ಸಮಯ ನೀರಿನಲ್ಲಿ ಇರುತ್ತಾರೋ ಅವರಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೋಂಕು ಕಾಣಿಸಿಕೊಳ್ಳುತ್ತದೆ.
- ಹೆಚ್ಚು ಬೆವರುವುದರಿಂದಲೂ ಈ ಸೋಂಕು ಕಾಣಿಸಿಕೊಳ್ಳುತ್ತದೆ
- ಇನ್ನು ಒದ್ದೆ ಇರುವ ಬಟ್ಟೆಗಳನ್ನು ಧರಿಸುವುದರಿಂದ ಹಾಗೂ ಸ್ನಾನದ ನಂತರ ದೇಹವನ್ನು ಸರಿಯಾಗಿ ಒರೆಸಿಕೊಳ್ಳದೆ ಶುಚಿತ್ವವನ್ನು ಕಾಪಾಡಿಕೊಳ್ಳದೇ ಇರುವುದರಿಂದ ಈ ಸೋಂಕು ಉಂಟಾಗುತ್ತದೆ.
- ಹೆಚ್ಚು ಬಿಗಿಯಾದ ಬಟ್ಟೆ ಧರಿಸುವುದು ಅಥವಾ ಬೇರೆಯವರ ಬಟ್ಟೆ ಧರಿಸುವುದರಿಂದ ಸೋಂಕು ಉಂಟಾಗುತ್ತದೆ.
- ಕೆಲವರಲ್ಲಿ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತದೆ. ಇದಕ್ಕೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು ಕೂಡ ಕಾರಣವಾಗಿರುತ್ತದೆ.
ಎಲ್ಲೆಲ್ಲಿ ಈ ಸೋಂಕು ಉಂಟಾಗುತ್ತದೆ?
- ಸಾಮಾನ್ಯವಾಗಿ ಕಾಲಿನ ಬೆರಳುಗಳ ಮಧ್ಯೆ ಈ ಸೋಂಕು ಕಾಣಿಸಿಕೊಳ್ಳುತ್ತದೆ
- ತೊಡೆಯ ಭಾಗದಲ್ಲಿಯೂ ಸೋಂಕು ಉಂಟಾಗುತ್ತದೆ
- ಇನ್ನು ಮೊಣಕೈ ಮತ್ತು ಮೊಣಕಾಲುಗಳಲ್ಲಿ ಸೋಂಕು ತಗುಲಬಹುದು
- ಭುಜದ ಕೆಳಗೆ ಕೂಡ ಈ ಫಂಗಲ್ ಇನ್ಫೆಕ್ಷನ್ ಉಂಟಾಗುತ್ತದೆ
ಲಕ್ಷಣಗಳು
- ಫಂಗಲ್ ಸೋಂಕು ಕಾಣಿಸಿಕೊಂಡರೆ ಚರ್ಮ ಒಣಗಿದಂತಾಗುತ್ತದೆ ಅಥವಾ ಸದಾ ಒದ್ದೆಯಾದಂತೆ ಇರುತ್ತದೆ.
- ಸೋಂಕು ತಗುಲಿದ ಜಾಗದಲ್ಲಿ ಅತಿಯಾದ ತುರಿಕೆ ಕಾಣಿಸಿಕೊಳ್ಳುತ್ತದೆ.
- ಚರ್ಮ ಕೆಂಪು ಬಣ್ಣಕ್ಕೆ ತಿರುಗಿ ರಾಶಸ್‌ನಂತೆ ಕಾಣಬಹುದು
- ಉಗುರುಗಳಲ್ಲೂ ಕೂಡ ಈ ಸೋಂಕು ಕಾಣಿಸಿಕೊಂಡು ಉಗುರು ನಷ್ಟವಾಗುವ ಸಾಧ್ಯತೆ ಇರುತ್ತದೆ.
ಫಂಗಲ್ ಸೋಂಕಿನ ನಿವಾರಣೆಗೆ ಹೀಗೆ ಮಾಡಿ
- ಫಂಗಲ್ ಇನ್ಫೆಕ್ಷನ್ ತಡೆಗಟ್ಟಲು ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಹೊರಗಡೆ ಹೋಗಿ ಬಂದ ನಂತರ ಕಾಲು, ಕಾಲುಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ ಒಣಗಿದ ಬಟ್ಟೆಯಲ್ಲಿ ನೀರಿನಾಂಶ ಇರದಂತೆ ಒರೆಸಿಕೊಳ್ಳಬೇಕು.
- ಆದಷ್ಟು ಕಾಟನ್ ಮತ್ತು ಸಡಿಲ ಉಡುಪುಗಳನ್ನೇ ಧರಿಸಿ. ಅವುಗಳು ಸ್ವಚ್ಛ ನೀರಿನಲ್ಲಿ ತೊಳೆದಿರಲಿ. ಜೊತೆಗೆ ಒಣಗಿದ ಬಟ್ಟೆಯನ್ನೇ ಧರಿಸುವ ಅಭ್ಯಾಸ ಮಾಡಿಕೊಳ್ಳಿ.
- ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಇದಕ್ಕಾಗಿ ಹೆಚ್ಚು ತರಕಾರಿಗಳ ಸೇವನೆ ಮಾಡಿ. ಅಥವಾ ಪ್ರತಿದಿನ ಬೇವಿನ ಎಲೆಗಳನ್ನು ಸೇವನೆ ಮಾಡಿವುದರಿಂದಲೂ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
- ಜೇನುತುಪ್ಪ, ಅರಿಶಿನದ ಬಳಕೆ ಹೆಚ್ಚಿರಲಿ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸೋಂಕನ್ನು ನಿವಾರಿಸಲು ಕೂಡ ಸಹಾಯಕವಾಗಿದೆ.
- ಇನ್ನು ಸೋಂಕಿರುವ ಜಾಗದಲ್ಲಿ ಬೇವಿನ ಎಣ್ಣೆ ಅಥವಾ ಬೇವಿನ ಎಲೆಯ ಪೇಸ್ಟ್ ತಯಾರಿಸಿ ಹಚ್ಚುತ್ತಾ ಬಂದರೆ ಸೋಂಕು ಕಡಿಮೆಯಾಗುತ್ತದೆ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ