January 18, 2025
supritaaa

ಇಂದಿನ ಸಂಚಿಕೆಯಲ್ಲಿ ಎಲ್ಲರಿಗೂ ಚಿರಪರಿಚಿತವಾಗಿರುವ ನೆಲ್ಲಿಕಾಯಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿಯೋಣ.

ನೆಲ್ಲಿಕಾಯಿಯನ್ನು ಕೇವಲ ಬಾಯಿ ರುಚಿಗೋಸ್ಕರ ತಿನ್ನುವ ಬದಲು ಅದರ ಔಷಧೀಯ ಗುಣ ಮತ್ತು ಮಹತ್ವ ಅರಿತು ತಿಂದರೆ ನಾಲಿಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಸಿಹಿ. ಯಾವುದೇ ಹಣ್ಣು ಮತ್ತು ಕಾಯಿಗಳಲ್ಲಿ ಇಲ್ಲದಿರುವಂತಹ ಹೆಚ್ಚಿನ ” ವಿಟಮಿನ್ ಸಿ” ನೆಲ್ಲಿಯಲ್ಲಿದೆ. ಇದು ರೋಗನಿರೋಧಕ ಶಕ್ತಿ ಗೆ ಅತ್ಯಗತ್ಯ. ಮುಖ್ಯವಾಗಿ ಶರೀರ ದೃಢವಾಗಿ ಆರೋಗ್ಯವಾಗಿರಲು ಅಗತ್ಯವಾದ ಶಕ್ತಿ ನೆಲ್ಲಿಕಾಯಿ ನೀಡುತ್ತದೆ.
ಹೆಚ್ಚಿನ ಹಣ್ಣು ಅಥವಾ ಕಾಯಿಗಳು ಒಣಗಿದರೆ ಅವುಗಳಲ್ಲಿ ಪೋಷಕಾಂಶ ಇರುವುದಿಲ್ಲ. ಆದರೆ ನೆಲ್ಲಿಕಾಯಿ ಹಾಗಲ್ಲ ಒಣಗಿದ ಮೇಲೂ ಸಹ ಅದರಲ್ಲಿನ ವಿಟಮಿನ್ ಸಿ  ನಶಿಸಿ ಹೋಗುದಿಲ್ಲ ಅದೇ ಇದರ ವಿಶೇಷತೆ. ಹೆಚ್ಚಾಗಿ ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನುತ್ತೇವೆ. ಆದರೆ ಅದನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಕೂಡ ಉಪಯೋಗಿಸಬಹುದಾಗಿದೆ. ರೋಗ ನಿರೋಧಕ ಶಕ್ತಿ ಹಾಗೂ ವೃದ್ದಾಪ್ಯವನ್ನು ಮುಂದೂಡಲು ಬಯಸುವವರು ಪ್ರತಿನಿತ್ಯ ನೆಲ್ಲಿಕಾಯಿ ಸೇವಿಸುವುದು ಉತ್ತಮ. ಇದನ್ನು ಸಂಗ್ರಹಿಸಿ ಬಳಸಲು ಸಾಧ್ಯವಾಗದು ಎಂಬುವವರು ನೆಲ್ಲಿಕಾಯಿಯಿಂದ ತಯಾರಿಸಿದ ಟಾನಿಕ್ ಅನ್ನು ಸೇವಿಸಬಹುದು. ಅಥವಾ ಚೂರ್ಣವನ್ನು ಬಳಸಬಹುದು. ನೆಲ್ಲಿಕಾಯಿಯಲ್ಲಿ ಔಷಧೀಯ ಗುಣಗಳಿಗೆ ಪ್ರಮುಖ ಕಾರಣ ಇದರಲ್ಲಿರುವ ಜೀವಸತ್ವ ಹಾಗೂ ಪೋಷಕಾಂಶ. ಇದು ವಿಟಮಿನ್ ಸಿ  ಯ ಆಗರ. ವಿಟಮಿನ್ ಸಿ ಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುದರ ಜೊತೆಗೆ ಆರೋಗ್ಯಪೂರ್ಣ ಎಲುಬು, ಹಲ್ಲು, ವಸಡು ಮತ್ತು ಕೂದಲ ಬೆಳವಣಿಗೆಗೆ ಸಹಕಾರಿ. ಇವಿಷ್ಟೇ ಅಲ್ಲದೇ ವಿಟಮಿನ್ ಬಿ, ಬಿ2, ಕಬ್ಬಿನಾಂಶ ಹಾಗೂ ರಂಜಕಾಂಶಗಳು ಅಡಕವಾಗಿದೆ. ಇವೆಲ್ಲವುಗಳ ಸಂಪೂರ್ಣ ಲಾಭ ಪಡೆಯಬೇಕಾದರೆ ನೆಲ್ಲಿಯನ್ನು ಹಸಿಯಾಗಿ ತಿನ್ನುವುದು ಅತ್ಯುತ್ತಮ. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಒಂದು ಉತ್ತಮ ರಸಾಯನ ದ್ರವ್ಯವೆಂದು ಪರಿಗಣಿಸಲಾಗಿದೆ. ಅಂದರೆ ದೇಹದ ರಸಾದಿ ಧಾತುಗಳನ್ನು ಷೋಷಣೆ ಮಾಡಿ, ರೋಗ ನಿರೋಧಕ ಶಕ್ತಿ ವರ್ಧಿಸಿ ಮುಪ್ಪನ್ನು ಮುಂದೂಡಿ ತಾರುಣ್ಯ ನೀಡುವ ಔಷಧ.

 

Nellikai | Shree Thamanaa

ಹೇಗೆ ಸೇವಿಸಬೇಕು?

ಊಟಕ್ಕಿಂತ 10 ನಿಮಿಷಗಳ ಮೊದಲು ನೆಲ್ಲಿಕಾಯಿ ಅಥವಾ ಚೂರ್ಣವನ್ನು ತೆಗೆದುಕೊಂಡರೆ ಜೀರ್ಣರಸಗಳು ವೃದ್ಧಿಯಾಗಿ ಹಸಿವು ಹೆಚ್ಚಾಗುತ್ತದೆ. ತಿಂದದ್ದು ಸಂಪೂರ್ಣ ಜೀರ್ಣವಾಗುತ್ತದೆ. ಸಾಧಾರಣವಾಗಿ ಅಸಿಡಿಟಿ ಅನ್ನುವ ಪದ ಹೆಚ್ಚಿನವರ ಬಾಯಿಯಿಂದ ಕೇಳಿರುತ್ತೇವೆ ಹೊಟ್ಟೆಯಲ್ಲಿ ಉರಿ, ಹುಳಿ, ತೇಗು ಇದರ ಲಕ್ಷಣಗಳು. ಅಂತಹ ಸಮಯದಲ್ಲಿ 1ಚಮಚ ನೆಲ್ಲಿಕಾಯಿ ಚೂರ್ಣದಲ್ಲಿ ಬೆಲ್ಲವನ್ನು ಬೆರೆಸಿ ತೆಗೆದುಕೊಂಡರೆ ಉಪಶಮನವಾಗುತ್ತದೆ. ಮೂತ್ರದಲ್ಲಿ ಉರಿ, ನೋವಿನಂತಹ ಲಕ್ಷಣಗಳು ಕಂಡು ಬಂದರೆ ನೆಲ್ಲಿಕಾಯಿ ಕಷಾಯವನ್ನು ಬೆಲ್ಲದಲ್ಲಿ ಬೆರೆಸಿ ತೆಗೆದುಕೊಂಡರೆ ಪರಿಹಾರ ಸಿಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ನೆಲ್ಲಿಕಾಯಿ ಚೂರ್ಣ ಅಥವಾ ಲೇಹ್ಯ ಹೆಚ್ಚಿನ ಕಾಲ ಉಪಯೋಗಿಸುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಸಕ್ಕರೆ ಕಾಯಿಲೆ ಇರುವವರು 1ಚಮಚ ನೆಲ್ಲಿಕಾಯಿ ರಸ ಮತ್ತು 30ಮಿ.ಲೀಟರ್ನಷ್ಟು ಹಾಗಲಕಾಯಿ ರಸವನ್ನು ಬೆರೆಸಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಕುಡಿಯುತ್ತಾ ಬಂದರೆ ಸಹಜವಾಗಿಯೇ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯಾಗಿ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.

 

Amla oil: Does it really work for hair growth?
ಇನ್ನು ಸೊಗಸಾದ ಕೂದಲಿಗೆ ಆಗುವ ಉಪಯೋಗ ಅಷ್ಟಿಷ್ಟಲ್ಲ. ಕಳೆದ ಎರಡು ಸಂಚಿಕೆಯಲ್ಲಿ ತಿಳಿಸಿದಂತೆ ಮೆಂತೆ ಹಾಗೂ ಅಲೋವೆರಾ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೋ ಅದೇ ರೀತಿ ನೆಲ್ಲಿಕಾಯಿ ಕೂಡ ಕೂದಲು ಕಪ್ಪಾಗಿ ಮೃದುವಾಗಿ ಆರೋಗ್ಯವಾಗಿ ಇರಿಸಲು ಸಹಕಾರಿ. ನೆಲ್ಲಿಕಾಯಿ ಟಾನಿಕ್ ಅನ್ನು ಯಾವುದೇ ವಯಸ್ಸಿನ ಅಂತರವಿರದೇ ಎಲ್ಲ ವಯಸ್ಸಿನವರು ಮನೆಯಲ್ಲೇ ತಯಾರಿಸಿಕೊಂಡು ಉಪಯೋಗಿಸಬಹುದು. ಆದರೆ ಟಾನಿಕ್ ರೆಡಿ ಆಗುವವರೆಗೆ ತಾಳ್ಮೆ ಬೇಕಷ್ಟೇ

 

ಹಾಗಾದರೆ ಟಾನಿಕ್ ಮಾಡುವ ವಿಧಾನ ತಿಳಿಯೋಣ….

 

Fat Melting Amla Tonic - Boosts Immunity, Hair Growth, Weight Loss & Glowing Skin -Nellikka Arishtam - YouTube
ಮೊದಲು ನೆಲ್ಲಿಕಾಯಿಯಿಂದ 250ಮಿ.ಲೀಟರ್ನಷ್ಟು ರಸ ತೆಗೆದುಕೊಂಡು ಶುಚಿಯಾದ ಒದ್ದೆ ಇಲ್ಲದ ಗಾಜಿನ ಸೀಸದಲ್ಲಿ ಹಾಕಬೇಕು. ನಂತರ 125ಗ್ರಾಂ ನಷ್ಟು ಬೆಲ್ಲವನ್ನು ಬಿಳಿ ಬಣ್ಣದ ಕಾಟನ್ ಬಟ್ಟೆಯಲ್ಲಿ ಕಟ್ಟಿ ಸೀಸದ ಒಳಗೆ ಹಾಕಬೇಕು. ಬೆಲ್ಲ ಕರಗಿ ನೆಲ್ಲಿಕಾಯಿ ರಸದೊಂದಿಗೆ ಬೆರೆಯುತ್ತದೆ. ಬೆಲ್ಲದಲ್ಲಿರುವ ಮಲಿನವು ಬಟ್ಟೆಯಲ್ಲಿ ಉಳಿಯುತ್ತದೆ. ನಂತರ ಆ ಬಟ್ಟೆಯನ್ನು ಹೊರಕ್ಕೆ ತೆಗೆದು ಗಾಜಿನ ಸೀಸಕ್ಕೆ 125ಗ್ರಾಂ ಜೇನು ಸೇರಿಸಿ 1ತಿಂಗಳ ಕಾಲ ಸ್ವಲ್ಪ ಸಮಯ ಬಿಸಿಲಿನಲ್ಲಿ ಇಡುತ್ತಿರಬೇಕು. 1ತಿಂಗಳ ಬಳಿಕ ಟಾನಿಕ್ ಬಳಸಲು ಯೋಗ್ಯವಾಗಿರುತ್ತದೆ. ಇದನ್ನು 2 ಹೊತ್ತು 10 ಮಿ.ಲೀ ನೀರಿನಲ್ಲಿ ಬೆರೆಸಿ ಸೇವಿಸಬೇಕು. ಇದರಿಂದ ಕೆಮ್ಮು, ಆಯಾಸ ಕಡಿಮೆಯಾಗಿ ಶರೀರಕ್ಕೆ ಶಕ್ತಿ ದೊರೆಯುತ್ತದೆ ಹಾಗೂ ಜೀರ್ಣಶಕ್ತಿ ವೃದ್ಧಿಸುತ್ತದೆ.

 

ಕೂದಲ ಆರೈಕೆಗೆ ಎಣ್ಣೆ
ಇನ್ನು ಕೂದಲ ಬಗ್ಗೆ ಕಾಳಜಿ ಇರುವವರು ನೆಲ್ಲಿಕಾಯಿಯನ್ನು ಉಪಯೋಗಿಸಿಕೊಂಡು
ಮನೆಯಲ್ಲಿಯೇ ತಲೆಕೂದಲಿಗೆ ಎಣ್ಣೆಯನ್ನು ಹೇಗೆ ತಯಾರಿಸಬಹುದೆಂದು ತಿಳಿಸಿಕೊಡುತ್ತೇನೆ.

ಅರ್ಧ ಲೀಟರ್ ತೆಂಗಿನೆಣ್ಣೆ, 50 ಮಿ.ಲೀ ಹರಳೆಣ್ಣೆ, 10ರಿಂದ 15 ಕೆಂಪು ದಾಸವಾಳ ದ ಎಲೆ, ಅದರ ಹೂ 7ರಿಂದ8 , ಕರಿಬೇವಿನ ಎಲೆ 20, ಮೆಂತೆ ಕಾಳು 3-4 ಚಮಚ, ತುಳಸೀ ಎಲೆ 15, ನೆಲ್ಲಿಕಾಯಿ ಪುಡಿ ಅಥವಾ ಒಣಗಿಸಿದ 10 ಭಾಗಗಳು, ಕಹಿಬೇವಿನ ಎಲೆ-10, ಮದರಂಗಿ ಎಲೆ ಒಂದು ಅರ್ಧ ಹಿಡಿಯಷ್ಟು, 50 ಗ್ರಾಂ ನಷ್ಟು ಕಾಲೊಂಜಿ ಬೀಜ ಅಥವಾ onion seeds

 

How to Make Amla Hair oil at Home | Grow your hair longer and Stop Grey Hair Very Fast - YouTube

 

ತಯಾರಿಸುವ ವಿಧಾನ :

ಎಲ್ಲಾ ಎಲೆಗಳನ್ನು ಮೊದಲೇ ತೊಳೆದಿಟ್ಟುಕೊಂಡು ನೀರಿನ ಪಸೆ ಇರದಂತೆ ನೆರಳಿನಲ್ಲಿ ಒಣಗಿಸಿ ಕೊಂಡಿರಬೇಕು. ಮೆಂತೆ ಕಾಳು ಹಾಗೂ ಕಾಲೊಂಜಿ ಬೀಜವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
ಕಬ್ಬಿಣದ ಬಾಣಲೆ ಇದ್ದರೆ ತುಂಬಾ ಒಳ್ಳೆಯದು ಇಲ್ಲದಿದ್ದರೆ ಮನೆಯಲ್ಲಿರುವ ಯಾವುದಾದರೂ ಬಾಣಲೆಯಲ್ಲಿ ತೆಂಗಿನೆಣ್ಣೆ ಮತ್ತು ಹರಳೆಣ್ಣೆ ಬೆರೆಸಿ ಹದ ಉರಿಯಲ್ಲಿ ಕುದಿಸಿ. ನಂತರ ಒಂದೊಂದಾಗಿ ಎಲ್ಲ ಎಲೆಗಳನ್ನು ತುಂಡಾಗಿ ಕತ್ತರಿಸಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಬೆರೆಸಿ 2 ನಿಮಿಷದ ಬಳಿಕ ಮೆಂತೆ, ಕಾಲೊಂಜಿ ಪುಡಿ ಹಾಗೂ ನೆಲ್ಲಿಕಾಯಿ ಅಥವಾ ಅದರ ಪುಡಿಯನ್ನು ಹಾಕಿ ಕುದಿ ಬರುವವರೆಗೆ ಹಾಗೆ ಮಗುಚುತ್ತಾ ಇರಬೇಕು ನಂತರ ಗ್ಯಾಸ್ ಆರಿಸಿ ತಣಿಯಲು ಬಿಟ್ಟು ಗಾಜಿನ ಬಾಟಲಿಗೆ ಸೋಸಿ ಸಂಗ್ರಹಿಸಿಟ್ಟುಕೊಳ್ಳಿ . ಇದನ್ನು 6 ತಿಂಗಳ ಕಾಲ ಬಳಸಬಹುದಾಗಿದೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ತಲೆಗೆ ಹಚ್ಚಿಕೊಳ್ಳಿ 4-5ಗಂಟೆ ಬಿಟ್ಟು ಸ್ನಾನ ಮಾಡುತ್ತ ಬಂದರೆ ಹೆಚ್ಚು ಕೂದಲಿನ ಸಮಸ್ಯೆ ಇರುವವರಿಗೆ ಖಂಡಿತ ಈ ಎಣ್ಣೆ ಯಿಂದ ಪರಿಹಾರ ದೊರಕುತ್ತದೆ. ಇವಿಷ್ಟೇ ಅಲ್ಲದೇ ಆಹಾರದಲ್ಲಿ ಹಾಲು, ಮೊಸರು, ನೆಲ್ಲಿಕಾಯಿ, ಹಣ್ಣುಗಳು, ಪಿನಟ್ ,ನೀರು ಹಾಗೂ ಪ್ರೊಟಿನ್ ಯುಕ್ತ ಆಹಾರ ಸೇವಿಸುತ್ತ ಬಂದರೆ ಕೂದಲಿನ ಸಮಸ್ಯೆ ಇರದು. ಯಾಕೆಂದರೆ ಕೂದಲ ಬೆಳವಣಿಗೆಗೆ ಬರೀ ಎಣ್ಣೆ, ಶ್ಯಾಂಪೂ ಮಾತ್ರ ಸಾಲದು ವಿಟಮಿನ್ ಸಿ ಹೆಚ್ಚು ಇರುವ ಆಹಾರವನ್ನು ಸೇವಿಸುವುದು ಒಳಿತು. ವಿಟಮಿನ್ ಸಿ ಕ್ಯಾಪ್ಸೂಲ್ ಬಳಸುವುದಕ್ಕಿಂತ ಪ್ರಕೃತಿದತ್ತವಾಗಿ ಸಿಗುವಂತವುಗಳನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಅಲ್ಲವೇ..

 

 

 

 

 

-ಸುಪ್ರಿತಾ ಭಂಡಾರಿ ಸೂರಿಂಜೆ

Leave a Reply

Your email address will not be published. Required fields are marked *