ಮನೆಯ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆಯಾ? ಹಾಗಾದ್ರೆ ತಪ್ಪದೇ ಈ ಟ್ರಿಕ್ಸ್ ಅನುಸರಿಸಿ….
ವಿದ್ಯುತ್‌ನ ಉಳಿತಾಯ ಪ್ರತಿಯೊಬ್ಬರ ಜವಾಬ್ದಾರಿ. ಇದರಿಂದ ಸ್ವಂತ ಹಣವನ್ನು ಉಳಿತಾಯ ಆಗುವುದು ಮಾತ್ರವಲ್ಲದೆ, ದೇಶಕ್ಕೆ ಕೂಡ ದೊಡ್ಡ ಮಟ್ಟದಲ್ಲಿ ಲಾಭವಾಗುವುದು. ಇನ್ನು ಮನೆಯಲ್ಲಿ ತಿಂಗಳ ಅಂತ್ಯಕ್ಕೆ ಕರೆಂಟ್ ಬಿಲ್ ಜಾಸ್ತಿ ಬರುತ್ತಿದ್ದರೆ, ಮೊದಲು ಹಳೆಯ ಬಲ್ಬ್ ಬದಲಿಗೆ ಎಲ್‌ಇಡಿಬಲ್ಬ್ ಗಳನ್ನು ಬಳಕೆ ಮಾಡಿ….
ನಾಲ್ಕು ಜನ ಇರುವ ಮನೆಯಲ್ಲಿ ಸಣ್ಣ-ಪುಟ್ಟ ಖರ್ಚು ವೆಚ್ಚಗಳು ಬರುತ್ತಾ ಇರುತ್ತವೆ! ಅದು ಕೂಡ ಈ ಸಿಟಿ ಲೈಫ್ ಅಂತೂ ಕೇಳುವುದೇ ಬೇಡ! ಒಂದು ಲೋಟ ನೀರು ಕುಡಿಯಬೇಕು ಎಂದರೆ ಕೂಡ ದುಡ್ಡು ಕೊಟ್ಟೇ ಕುಡಿಯುವ ಪರಿಸ್ಥಿತಿ, ಹೀಗಿರಬೇಕಾದರೆ ಪ್ರತಿದಿನದ ಖರ್ಚು ವೆಚ್ಚಗಳು, ತಿಂಗಳಿಗೊಮ್ಮೆ ಲೆಕ್ಕ ಹಾಕುತ್ತಾ ಹೋದರೆ, ಬೆಲೆ ಗಗನಕ್ಕೆ ಏರಿರುತ್ತದೆ!
ತಿಂಗಳಿಗೊಮ್ಮೆ ಸಿಗುವ ಸಿಗುವ ಅಷ್ಟೋ-ಇಷ್ಟೋ ಹಣವನ್ನು ಮನೆಗೆ ದಿನಸಿ ಸಾಮಾನು, ಮಕ್ಕಳ ವಿದ್ಯಾಭ್ಯಾಸಕ್ಕೆ, ಇದರ ನಡುವೆ ಇನ್ನಿತರ ಖರ್ಚು-ವೆಚ್ಚಗಳಿಗೆ ಸರಿಯಾಗಿ ಬಿಡುತ್ತದೆ! ಇದರ ನಡುವೆ ತಿಂಗಳಿಗೊಮ್ಮೆ ಕಟ್ಟಬೇಕೆಂದು ಬರುವ ಈ ವಿದ್ಯುತ್ ಬಿಲ್, ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಿ ಬಿಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ವಿದ್ಯುತ್ ನ ಉಳಿತಾಯ ಮಾಡುವ ಕಡೆಗೆ ಗಮನ ಹರಿಸಬೇಕು. ಇದರಿಂದ, ಪ್ರತಿತಿಂಗಳು, ಆರ್ಥಿಕ ಹೊರೆ ಕಡಿಮೆ ಆಗುವುದು ಮಾತ್ರವಲ್ಲದೆ, ದೇಶಕ್ಕೆ ಕೂಡ, ನಮ್ಮಿಂದಾಗಿ ದೊಡ್ಡ ಮಟ್ಟದಲ್ಲಿ ಉಳಿತಾಯವಾಗಿದಂತೆ ಆಗುತ್ತದೆ…
ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ
- ಮನೆಯಲ್ಲಿ ಆದಷ್ಟು ಹಳೆ ಬಲ್ಬ್‌ಗಳ ಬದಲಿಗೆ ಆದಷ್ಟು ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ, ಇದರಿಂದ ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾಗುವುದು ಮಾತ್ರವಲ್ಲದೆ, ಮನೆಯ ಪ್ರಕಾಶವು ಹೆಚ್ಚಾಗುವುದು
- ಇಲ್ಲಿ ಎಲ್‌ಇಡಿ ಬಲ್ಬ್‌ಗಳು, ಸ್ವಲ್ಪ ದುಬಾರಿಯಾದರೂ ಕೂಡ, ಮುಂದಿನ ದಿನಗಳಲ್ಲಿ ಇದರಿಂದ ಲಾಭಗಳು ಖಂಡಿತ ಸಿಗುತ್ತದೆ. ಹೀಗಾಗಿ ಮನೆಯಲ್ಲಿ ಹಳೆಯ ಬಲ್ಬ್ ಗಳು ಹಾಳಾದ ಬಳಿಕ ಎಲ್‌ಇಡಿ ಬಲ್ಬ್‌ಗಳನ್ನು ಹಾಕಿಕೊಳ್ಳಿ
5 ಸ್ಟಾರ್ ಇರುವಂತಹ ರೇಟಿಂಗ್
- ಮನೆಯ ದಿನನಿತ್ಯದ ಅಗತ್ಯಕ್ಕೆ ಬೇಕಾಗುವ ಮಿಕ್ಸಿ, ಫ್ರಿಡ್ಜ್, ಫ್ಯಾನ್, ಗ್ರ್ಯಾಂಡರ್ ಹೀಗೆ ಇತರ ಯಾವುದೇ ಬಗೆಯ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿ ಮಾಡುವ ಮೊದಲು, ಅದರ ರೇಟಿಂಗ್‌ನ್ನು ಗಮನಿಸಿ. ಯಾಕೆಂದರೆ ಕಡಿಮೆ ರೇಟಿಂಗ್ ಇರುವ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ಜಾಸ್ತಿ ಪ್ರಮಾಣದಲ್ಲಿ ವಿದ್ಯುತ್ ತೆಗೆದುಕೊಳ್ಳುತ್ತದೆ.
- ಹೀಗಾಗಿ 5 ಸ್ಟಾರ್ ಇರುವಂತಹ ರೇಟಿಂಗ್‌ನ್ನು ಖರೀದಿ ಮಾಡಿ. ಉದಾಹರಣೆಗೆ ಮನೆಗೆ ಫ್ರಿಡ್ಜ್ ಖರೀದಿ ಮಾಡುವಾಗ ಮೊದಲು, ಇದರ ರೇಟಿಂಗ್ ಚೆಕ್ ಮಾಡಿ, ಆಮೇಲೆ ಖರೀದಿಸಿ. ಇಲ್ಲಾಂದ್ರೆ ಕಡಿಮೆ ಸ್ಟಾರ್ ಇರುವಂತಹ ಫ್ರಿಡ್ಜ್ ಮನೆಯ ಕರೆಂಟ್ ಬಿಲ್ಲನ್ನು ಇನ್ನಷ್ಟು ಹೆಚ್ಚು ಮಾಡಿ ಬಿಡುತ್ತದೆ!
ಏಸಿ ಬೇಡ-ಫ್ಯಾನ್ ಇರಲಿ!
- ಈಗಂತೂ ಮಳೆಗಾಲ ಬಿಡಿ, ಹೆಚ್ಚಾಗಿ, ಫ್ಯಾನ್ ಅಥವಾ ಏಸಿಯ ಅವಶ್ಯಕತೆ ಇರುವುದಿಲ್ಲ, ಆದರೆ ಬೇಸಿಗೆ ಸಮಯದಲ್ಲಿ, ಸಹಿಸಿಕೊಳ್ಳಲು ಸಾಧ್ಯವಾಗದಷ್ಟು ಸೆಖೆ ಕಾಡುತ್ತಲೇ ಇರುತ್ತದೆ. ಹೀಗಾಗಿ ಹೆಚ್ಚಿನವರು ಮನೆಯಲ್ಲಿ ಅಥವಾ ಆಫೀಸ್‌ಗಳಲ್ಲಿ ಏರ್ ಕಂಡೀಷನರ್ ಹಾಕಿಸಿಕೊಂಡಿರುವರು.
- ಮನೆಯಲ್ಲಿ ಫ್ಯಾನ್ ಇದ್ದರೂ ಕೂಡ, ರಾತ್ರಿ ಮಲಗುವಾಗ ಏಸಿ ಹಾಕಿಯೇ ಮಲಗುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಏಸಿ ಬಳಕೆಯಿಂದ ಕರೆಂಟ್ ಬಿಲ್ ಜಾಸ್ತಿ ಬರುವುದರ ಜೊತೆಗೆ, ಆರೋಗ್ಯದ ಮೇಲೆ ಇನ್ನಿಲ್ಲದ ಸಮಸ್ಯೆಗಳು ಕೂಡ ಬರುವ ಅಪಾಯ ಇರುತ್ತದೆ. ಹೀಗಾಗಿ ಕೋಲು ಕೊಟ್ಟು ಪೆಟ್ಟು ತಿನ್ನುವ ಬದಲು, ಸಾಧ್ಯವಾದಷ್ಟು ಮಟ್ಟಿಗೆ ಫ್ಯಾನ್ ಬಳಸಿ
ಈ ವಿಷ್ಯ ಗೊತ್ತಿರಲಿ
- ಕೆಲವೊಮ್ಮೆ ನಮ್ಮ ಅಜಾಗರೂಕತೆ ಇಂದ ಕೂಡ ವಿದ್ಯುತ್ ಬಿಲ್ ಹೆಚ್ಚಾಗಲು ಕಾರಣವಾಗಿ ಬಿಡುತ್ತದೆ!ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಮನೆಯಲ್ಲಿ ಬಿಸಿ ನೀರು ಕಾಯಿಸಲು, ನೀರಿನ ಬಕೆಟ್‌ನಲ್ಲಿ ವಾಟರ್ ಹೀಟರ್ ಆನ್ ಮಾಡಿ, ಬೇರೆ ಕೆಲಸದಲ್ಲಿ ಮಗ್ನರಾಗಿ ಬಿಡುತ್ತೇವೆ. ಇಲ್ಲಾಂದ್ರೆ ಟಿವಿ ನೋಡುತ್ತಾ ಕಾಲಹರಣ ಮಾಡುತ್ತಾ ಇರುತ್ತೇವೆ.
- ಅಲ್ಲಿ ನೀರು ಬಿಸಿಯಾಗಿ ಹೊಗೆ ಬರುತ್ತಿದ್ದರೂ, ನಮಗೆ ಅದರ ಗೊಡವೆಯೇ ಇರುವುದಿಲ್ಲ! ಆದರೆ ನಿಮಗೆ ಗೊತ್ತಿರಲಿ, ಇಂತಹ ಎಲೆಕ್ಟ್ರಾನಿಕ್ ಹೀಟರ್ ವಿದ್ಯುತ್ ಬಿಲ್ ಹೆಚ್ಚಾಗಲು ಕಾರಣವಾಗುವುದು ಮಾತ್ರವಲ್ಲದೆ, ಕೆಲವೊಮ್ಮೆ ಆಪತ್ತು ಕೂಡ ಸಂಭವಿಸಲು ಕಾರಣವಾಗಿ ಬಿಡುತ್ತದೆ.
- ಇನ್ನು ಕೆಲವೊಮ್ಮೆ ನಮಗೆ ಅರಿವಿಲ್ಲದೇ ಲೈಟ್, ಫ್ಯಾನ್ ಮತ್ತು ಎಸಿಯನ್ನು ನಾವೆಲ್ಲರೂ ಹಾಗೆ ಬಿಟ್ಟು, ಮನೆಯ ರೂಮಿನಿಂದ ಹೊರಗೆ ಹೋಗುತ್ತೇವೆ…ಇದೇ ಎಲ್ಲಾ ನಿರ್ಲಕ್ಷ್ಯದಿಂದ, ತಿಂಗಳಿಗೆ ಬರುವ ಮನೆಯ ಕರೆಂಟ್ ಬಿಲ್ ಗಗನಕ್ಕೆ ಹೋಗಿರುತ್ತದೆ.
- ಹೀಗಾಗಿ ಸದಾ ನೆನೆಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷ್ಯ ಏನೆಂದರೆ ನಮ್ಮ ಕೆಲಸ ಮುಗಿದ ಬಳಿಕ ಅಥವಾ ಹೊರಗೆ ಹೋಗುವ ವೇಳೆ, ಮನೆಯ ಫ್ಯಾನ್, ಫ್ರಿಡ್ಜ್ ಆಫ್ ಮಾಡಲು ಮರೆಯದಿರುವುದು. ಇದರಿಂದ ವಿದ್ಯುತ್‌ನ ಉಳಿತಾಯ ಆಗುವುದು, ಜೊತೆಗೆ ತಿಂಗಳ ಅಂತ್ಯಕ್ಕೆ ಕೈ ಸೇರುವ ಕರೆಂಟ್ ಬಿಲ್ ಕೂಡ ಕಡಿಮೆ ಬರುವುದು.
ಈ ಟ್ರಿಕ್ಸ್ ಟ್ರೈ ಮಾಡಿ
ಇನ್ನು ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಏಸಿ ಇರುವವರು, ಅದನ್ನು ಯಾವಾಗಲೂ 24 ಡಿಗ್ರಿ ತಾಪಮಾ ನದಲ್ಲೇ ಸೆಟ್ ಮಾಡಿ ಇಟ್ಟುಕೊಳ್ಳಿ. ಯಾಕೆಂದ್ರೆ ಏಸಿಯನ್ನು 24 ಡಿಗ್ರಿ ತಾಪಮಾನಕ್ಕೆ ಸೆಟ್ ಮಾಡಿ ಕೊಂಡರೆ, ಬಹಳ ಬೇಗನೇ ರೂಮ್ ತಂಪಾಗುವುದು, ಜೊತೆಗೆ ಇದಕ್ಕೆ ತಗಲುವ ಕರೆಂಟ್ ವೆಚ್ಚ ಕೂ ಕಡಿಮೆ ಎಂದು ಹೇಳಬಹುದು.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ