November 22, 2024

ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವೇ?

ಹೆಣ್ಣು ಎಲ್ಲಿ ಆರಾಧಿಸಲ್ಪಡುತ್ತಳೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳುವ, ಸ್ತ್ರೀಯರನ್ನು ಶಕ್ತಿ ಸ್ವರೂಪಿಯಾಗಿ, ದೇವಿ ಎಂದು ಆರಾಧಿಸುತ್ತಿರುವ ದೇಶ ನಮ್ಮದು. ಆದರೆ ನಿಜದಲ್ಲಿ ಭಾರತದ ಮಹಿಳೆಯರನ್ನು ದೇವಿ ಎಂದು ಪೂಜಿಸುವುದು ಬೇಡ ಅವಳು ನಮ್ಮಂತೆ ಒಬ್ಬ ವ್ಯಕ್ತಿ ಎನ್ನುವ ಅವಳಿಗೂ ಯೋಚನೆ ಮಾಡುವ ಶಕ್ತಿ ಇದೆ ಎಂದು ಕಾಳಜಿ ವಹಿಸುವ ಸಾಮಾಜಿಕ ವ್ಯವಸ್ಥೆ ನಮ್ಮಲ್ಲಿ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ..
ಅದಕ್ಕೆ ಕಾರಣ ಇತ್ತೀಚೆಗೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು, ಶೋಷಣೆ ಕೌಟುಂಬಿಕ ಅಸಮಾನತೆ!! ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ? ಅದರಲ್ಲೂ ನಮಗೆ ಮಹಿಳೆಯರಿಗೆ ಎಲ್ಲಿದೆ ಸ್ವಾತಂತ್ರ್ಯ? ನಮ್ಮ ದೇಶದಲ್ಲಿ ಇರುವ ಕಾಮುಕರಿಂದ, ನರ ಭಕ್ಷಕರಿಂದ ಹೆಣ್ಣು ಅಂದರೆ ಭೋಗದ ವಸ್ತು ಎಂದು ಪರಿಗಣಿಸುವ ಗಂಡು ಸಮಾಜದಿಂದ ಇಂದಿಗೂ ಬಿಡುಗಡೆ ಪಡೆದಿಲ್ಲ. ಇತ್ತೀಚಿನ ದಿನಗಳಲ್ಲಂತು ತಂದೆ ಮಗಳ ಮೇಲೆ, ಅಣ್ಣ ತಂಗಿಯ ಮೇಲೆ, ಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸುತ್ತಿರುವುದು ಬಹಳ ಶೋಚನೀಯ. ಜಾಗತೀಕರಣದಿಂದ ಹೆಣ್ಣು ಅನೇಕ ಪ್ರಯೋಜನಗಳನ್ನು ಪಡೆದಿದ್ದರೂ ಆಕೆ ಶೋಷಣೆ, ವರದಕ್ಷಿಣೆ, ಅತ್ಯಾಚಾರಗಳಿಂದ, ಕೌಟುಂಬಿಕ ದೌರ್ಜನ್ಯದಿಂದ ಮುಕ್ತವಾಗಿಲ್ಲ.  ಬಾಹ್ಯಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ ಮಹಿಳಾ ಸುರಕ್ಷೆಯ ವಿಷಯದಲ್ಲಿ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಿದೆ.

ಸ್ವತಂತ್ರವಾಗಿ ಚಿಂತಿಸುವ, ಪ್ರಗತಿಪರವಾಗಿ ಯೋಚಿಸುವ, ಹಿಂಸೆಯ, ಶೋಷಣೆಯ ವಿರುದ್ಧ ದನಿ ಎತ್ತುವ, ಜೀವವಿರೋಧಿ ಸಿದ್ಧಾಂತದ ವಿರುದ್ಧ ಪ್ರತಿಭಟಿಸುವ ಹೆಣ್ಣುಮಕ್ಕಳನ್ನು ಸಮಾಜದಲ್ಲಿ ಸಮಾಜದ ಸ್ವಾಸ್ಥ್ಯ ಬಯಸದ ಗಂಡು ಲೋಕ ಎದುರಿಸುವುದೇ ಆಕೆಯ ಮಾನಸಿಕ ತೇಜೋವಧೆಯ ಮೂಲಕ. ಯಾಕೆಂದರೆ ಅಂತವರಿಗೆ ಧೈರ್ಯ ವಂತ ಹೆಣ್ಣನ್ನು ಸುಲಭವಾಗಿ ಬಗ್ಗು ಬಡಿಯಲು ಅದು ಸುಲಭ ಸಾಧನ ಎಂದು ಅವರು ತಿಳಿದುಕೊಂಡಿದ್ದಾರೆ. ಕಾರಣ ಮಹಿಳೆಯರು ಒಗ್ಗಟ್ಟಾಗಿ ಇದರ ಬಗ್ಗೆ ಹೋರಾಟ ಮಾಡಲು ಖಂಡಿಸಲು ಇನ್ನೂ ಆರ್ಥಿಕ ಸಾಮಾಜಿಕ ರಾಜಕೀಯದ ಸಮ ಬಲವನ್ನು ಮಹಿಳೆಯರು ಪಡೆದಿಲ್ಲ.

ಹಾಗೆ ನೋಡಿದರೆ ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ದುಡಿಯುವ ವರ್ಗ ಎಂದರೆ ಮಹಿಳೆಯರೇ. ಅದು ಎಲ್ಲಾ ರಂಗಗಳಿಗೂ ಅನ್ವಯಿಸುತ್ತದೆ. ಆದರೆ ಅವಳಿಗೆ ಅದಕ್ಕೆ ಸರಿಯಾದ ಸ್ಥಾನಮಾನ, ವೇತನ ದೊರಕುತ್ತಿದೆಯಾ? ಎಂಬುದು ಇವತ್ತಿಗೂ ಕೂಡ ಪ್ರಶ್ನೆಯೆ. ಅದರಲ್ಲೂ ತೀರಾ ಅಸಮಾನತೆಗೆ ಒಳಗಾಗುವವರು ನಮ್ಮ ಗೃಹಿಣಿಯರು ಮತ್ತು ಕೂಲಿ ಕಾರ್ಮಿಕ ಮಹಿಳೆಯರು. ದುಡಿಮೆಗೆ ತಕ್ಕ ಫಲ ದೊರಕುತ್ತಿದೆಯಾ? ಅನ್ನುವ ಪ್ರಶ್ನೆ ಕೇಳಿದರೆ ಒಂದು ನಿಡುಸುಯ್ಯುವಿಕೆಯೇ ಅವರ ಉತ್ತರವಾಗಬಹುದು.  ಈ ಸಂಧಿಗ್ದತೆಯಲ್ಲಿ ದಿನವೊಂದು ನೆಮ್ಮದಿಯಲ್ಲಿ ಕಳೆದರೆ ಸಾಕೆನ್ನುವ ಧೋರಣೆಯಲ್ಲಿ ಅವಳು ತನ್ನ ಕನಿಷ್ಟ ಸ್ವಾತಂತ್ರ್ಯಕ್ಕೂ, ಆಸೆಗಳಿಗೂ ಕಡಿವಾಣ ಹಾಕಿಕೊಳ್ಳ ಬೇಕಾಗುತ್ತದೆ. ಇದಕ್ಕೆ ಒಂದಷ್ಟು ಅಪವಾದಗಳು ಕೂಡ ಇರಬಹುದು. ಆದರೆ ಬಹುತೇಕ ಹೆಣ್ಮಕ್ಕಳದ್ದು ಒಂದು ರೀತಿಯ ಆತಂಕದಲ್ಲೇ ಕಳೆಯ ಬೇಕಾದ ತೊಳಲಾಟದ ಬದುಕು. ಅತ್ತ ತವರು ಮನೆಯೂ ಇಲ್ಲ, ಇತ್ತ ಗಂಡನ ಮನೆಯೂ ಇಲ್ಲದಂತೆ ಆಗಬಾರದಲ್ಲ ಅನ್ನೋ ದಿಗಿಲಿನಲ್ಲೇ ಮಕ್ಕಳು ಅತಂತ್ರ ಆಗಬಾರದು ಎಂದೂ ತನ್ನ ಇಡೀ ಜೀವಮಾನ ಸವೆಸುವಾಗ ಅವಳಿಗೆ ತವರು ಮನೆ ಮತ್ತು ಗಂಡನ ಮನೆಗಳ ಬೆಸೆಯುವ ತಂತು ಅಂತ ಹಣೆಪಟ್ಟಿ ಕೂಡ ಅಂಟಿಸಿ ಬಿಟ್ಟಿಸಿರುವುದು ದುರಂತ!

ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ ಮೂರು ಮಿಲಿಯನ್ ಹೆಣ್ಣುಮಕ್ಕಳು ತಮ್ಮ 15ನೇ ಹುಟ್ಟುಹಬ್ಬವನ್ನು ಕಾಣುವುದಿಲ್ಲ. ಒಂದು  ಮಿಲಿಯನ್ ಹೆಣ್ಣುಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೆ ಕಾಣೆಯಾಗುತ್ತಾರೆ. ಪ್ರತಿ 6ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ಭಾರತದಲ್ಲಿ ನಿತ್ಯ 10 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ. ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯ ಪ್ರಮಾಣವನ್ನು ಹೊಂದಿರುವ ಅಸ್ಸಾಂ ರಾಜ್ಯದಲ್ಲಿ ಪ್ರತಿ ಲಕ್ಷ ಜನ ಸಂಖ್ಯೆಗೆ 117.8ರಷ್ಟು ಪ್ರಕರಣಗಳು ದಾಖಲಾಗಿವೆ. ಯು ಪಿ ಯಲ್ಲಿ ಅತೀ ಹೆಚ್ಚು ವರದಕ್ಷಿಣೆ ಪ್ರಕರಣಗಳು ದಾಖಲಾಗುತ್ತಿವೆ. ಮಹಿಳೆಯರ ಮೇಲೆ ಯು ಪಿ ಯಲ್ಲಿ ಈವರೆಗೂ 59,853 ವಿವಿಧ ರೀತಿಯ ದೌರ್ಜನ್ಯಗಳು ನಡೆದಿವೆ. 2019ರ ಅಂಕಿ ಅಂಶದ ಪ್ರಕಾರ 150 ಆಸಿಡ್ ದಾಳಿಗಳು ವರದಿಯಾಗಿವೆ.

ಮಹಿಳೆಯರ ಸಂರಕ್ಷಣೆಗೆ ಸರಕಾರ ಹಲವು ಕ್ರಮ, ಕಾಯ್ದೆಗಳನ್ನು ಕೈ ಗೊಂಡಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಸಾಂತ್ವನ, ಸ್ವಾಧಾರ ಗೃಹ, ವರದಕ್ಷಿಣೆ ನಿಷೇಧ ಕಾಯ್ದೆ, ಹೀಗೆ ಹಲವಾರು ಕಾಯ್ದೆ, ವ್ಯವಸ್ಥೆಗಳು ಜಾರಿಯಲ್ಲಿದ್ದರೂ ಮಹಿಳೆಯರು ಶೋಷಣೆಯಿಂದ ಮುಕ್ತರಾಗಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಬಂಧಿತರಾದರೂ ಅವರಿಗೆ ಸರಿಯಾದ ಶಿಕ್ಷೆ ವಿಧಿಸುವಲ್ಲಿ ವಿಫಲವಾಗುತ್ತಿರುವುದು ಬಹಳ ಸ್ಪಷ್ಟವಾಗಿದೆ. ಅಂಕಿ ಅಂಶಗಳ ಪ್ರಕಾರ 1,300ಕ್ಕೂ ಹೆಚ್ಚಿನ ಶಂಕಿತರಲ್ಲಿ ಕೇವಲ ಆರು ಮಂದಿಗೆ ಮಾತ್ರ ಶಿಕ್ಷೆಯಾಗುತ್ತದೆ!

ದೌರ್ಜನ್ಯಗಳ ಸಂದರ್ಭದಲ್ಲಿ ಪೊಲೀಸರಿಗೆ ದೂರು ಕೊಡಲು ಮುಂದೆ ಬರುವ ಮಹಿಳೆಯರನ್ನೇ ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು, ಪೊಲೀಸರು ಪ್ರಶ್ನಿಸುವ, ಸಂತ್ರಸ್ತೆ ಹೇಳಿದ್ದನ್ನು ನಂಬದೇ ಅವರ ನಡತೆಯನ್ನೇ ಪ್ರಶ್ನಿಸುವ ಧೋರಣೆ ಮಹಿಳೆಯರನ್ನು ಪೊಲೀಸ್ ಠಾಣೆಗಳಿಂದ ದೂರವಿಡುತ್ತದೆ.

ಅದು ರಾಜಕೀಯ ರಂಗ ಇರಲಿ, ಸಾಮಾಜಿಕ ಮಾಧ್ಯಮ ರಂಗವಿರಲಿ, ಹೆಣ್ಣು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು, ತನ್ನ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಬಹುವಾಗಿ ಗಂಡು ಲೋಕ ಇಷ್ಟಪಡುವುದಿಲ್ಲ. ಆಕೆಯನ್ನು ಏನಾದರೊಂದು ಕುಟಿಲ ಮಾರ್ಗದ ಮೂಲಕ ಮೌನಗೊಳಿಸಲು ಅಥವಾ ಮನೆಯ ನಾಲ್ಕು ಗೋಡೆಯೊಳಗೆ ಸೇರಿಕೊಳ್ಳುವಂತೆ ಮಾಡಲು ಯತ್ನಿಸುತ್ತಲೇ ಇರುತ್ತದೆ.

ಮುಂದೆ ಮಹಿಳಾ ಶೋಷಣೆ, ಕೌಟುಂಬಿಕ ದೌರ್ಜನ್ಯ ಇಲ್ಲದ ಅತ್ಯಾಚಾರ ಮುಕ್ತ ಸಮ ಸಮಾಜದ ಕನಸು ನನಸು ಆಗಲಿ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲ ಆಗಿರಲಿ ಎಲ್ಲಾ ರಂಗಗಳಲ್ಲೂ ಹೆಣ್ಣಿಗೂ ಅವಕಾಶ ಇದ್ದು ಪ್ರಶ್ನಿಸುವ ಕಾಯಿದೆಗಳನ್ನು ಅನುಷ್ಠಾನಕ್ಕೆ ತರುವ ಮುಂಚೂಣಿಯಲ್ಲಿ ಮಹಿಳೆ ಇರಲಿ. ನಾವೆಲ್ಲರೂ ಒಗ್ಗಟ್ಟಾಗಿ ಎಲ್ಲವನ್ನೂ ಎದುರಿಸಿ ನಿಲ್ಲೋಣ ಎಂದು ಹೇಳುತ್ತ ನನ್ನ ಎಲ್ಲ ಗೆಳತಿಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು .

ಲೇಖಕರು: ವನಿತಾ ಅರುಣ್ ಭಂಡಾರಿ ಬಜಪೆ

Leave a Reply

Your email address will not be published. Required fields are marked *