ಮಾದಪ್ಪ ಮನೆಯೊಳಗೇ ಹೊಸ್ತಿಲ ಹೊರಗೆ ಮುಖ ಹಾಕದೇ ಕುಳಿತಿದ್ದಾನೆ. ಬೆಳಿಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಮನೆಯೊಳಗೆ ಬಂದು ಕುಳಿತನೆಂದರೆ ಮತ್ತೆ ಹೊರಗೆ ತಲೆ ಹಾಕಲಾರ. ಮಧ್ಯೆ ಮಧ್ಯೆ ನಿಸರ್ಗದ ಕರೆಗೆ ಆಗಾಗ ಕಳ್ಳರಂತೆ ಹೊರಗೆ ಹೋಗಿ ತಟಕ್ಕನೆ ಕೆಲಸ ಮುಗಿಸಿ ಒಳಬಂದು ಸೇರುವ ಮತ್ತೆ ಏನಿದ್ದರೂ ತುಸು ಕತ್ತಲೆ ಕವಿದ ಮೇಲೆ ಸ್ನಾನಕ್ಕೆಂದು ಹೊರಗೆ ಹೋಗಿ ಬರುವ.
ನಿತ್ಯ ಅನೇಕರ ಕರೆಗಳು, ಯಾವೊಂದಕ್ಕೂ ಆತನ ಕೈಬೆರಳುಗಳು ರಿಸೀವ್ ಬಟನ್ ಒತ್ತಲಾರವು. ಅದಾಗ್ಯೂ ಅನೇಕರು ಮನೆ ಬಾಗಿಲ ಬಳಿ ಬಂದು ಕೇಳುವವರು, “ಮಾದಪ್ಪ ಎಲ್ಲಿದ್ದಾನೆ ? ಕರೆಯಿರಿ” ಎಂದು. ಮಾದಪ್ಪ ಮನೆಯ ರೂಮಿನೊಳಗೆ ಹೊಕ್ಕು ಹೆಂಡತಿಯ ಬಳಿಯಾಗಲಿ, ಮಕ್ಕಳ ಬಳಿಯಾಗಲೀ “ಅವರು ಮನೆಯಲ್ಲಿ ಇಲ್ಲವೆಂದು ಹೇಳು” ಎಂದು ಕಳುಹಿಸಿಕೊಟ್ಟು ಬಂದವರನ್ನು ವಾಪಾಸ್ಸು ಕಳುಹಿಸುತಿದ್ದ. ಬಂದವರು ವಾಪಾಸ್ಸು ಹೋದ ತಕ್ಷಣವೇ ಹೆಂಡತಿ “ಇನ್ನು ಎಷ್ಟು ದಿನ ಈ ಕಳ್ಳರಂತೆ ಬದುಕು ಬಾಳಬೇಕೊ ! ಮನೆಯ ದಿನಸಿಯಲ್ಲಾ ಖಾಲಿಯಾಗುತ್ತಾ ಬಂತು, ಡಬ್ಬದಲ್ಲಿರುವ ಹಣವೂ ಖಾಲಿ” ಎಂದು ಅಡುಗೆ ಮನೆಯ ಪಾತ್ರೆಗಳನ್ನು ಕುಟ್ಟುತ್ತಾ, ತಾನು ಶೇಖರಿಸಿ ಇಡುತ್ತಿದ್ದ ಹಣದ ಡಬ್ಬಿಯ ಮುಚ್ಚಳವನನ್ನು ಹಾಕಿ ತೆಗೆದು – ಹಾಕಿ ತೆಗೆದು ಗೊಣಗಲಾರಂಭಿಸುತ್ತಿದ್ದಳು.
ಖಾಲಿಯಾಗುತ್ತಿರುವ ದಿನಸಿ, ಖಾಲಿಯಾದ ಹಣದ ಡಬ್ಬ, ಮಕ್ಕಳು ತಿನಿಸು ಬೇಕೆಂದು ಹಠ ಹಿಡಿದು ಪೀಡಿಸುತ್ತಿರುವುದು, ವೃದ್ದಾಪ್ಯ ಹಿಡಿದಿರುವ ತಂದೆ-ತಾಯಿಯ ಅನಾರೋಗ್ಯ, ಅವರಿಗಾಗಿ ಬೇಕಾದ ಔಷಧಗಳ ಕೊರತೆ ಇದನ್ನೆಲ್ಲಾ ನೋಡಿ ಮಾದಪ್ಪನ ಮನಸ್ಸು ಮತ್ತಷ್ಟು ಹಿಂಸೆ ಪಡಲಾರಂಭಿಸಿತು. ಕೆಲಸ ಮಾಡುವ ಉತ್ಸಾಹವಿದ್ದರೂ ಮಾಡಲಾಗದ ಅಸಹಾಯಕ ಸ್ಥಿತಿ, ಕೆಲಸಕ್ಕಾಗಿ ಮನೆಯ ಬಾಗಿಲವರೆಗೆ ಹುಡುಕಿಕೊಂಡು ಬಂದರೂ ಕಳ್ಳನಂತೆ ಅವಿತುಕೊಂಡು ಬಂದವರನ್ನು ವಾಪಾಸ್ಸು ಕಳುಹಿಸುವ ಅನಿವಾರ್ಯತೆ. ತನ್ನ ಜೀವಮಾನದಲ್ಲೇ ಇಂತಹ ಒಂದು ಕಷ್ಟಕರವಾದ ಪರಿಸ್ಥಿತಿ ಆತನಿಗೆ ನಿರ್ಮಾಣವಾಗಿರಲಿಲ್ಲ. ಯಾವಾಗ ಇಂತಹದೊಂದು ದಿಗ್ಬಂಧನ ಕಳೆದು ಹೋಗುವುದೋ ಎಂದು ನಿತ್ಯವೂ ದೇವರ ಬಳಿ ಬೇಡುತ್ತಿದ್ದ.
ಮಾದಪ್ಪ ಇದುವರೆಗೂ ಯಾರ ಬಳಿಯೂ ಬೇಡಿದವನಲ್ಲ, ಇಲ್ಲದವರಿಗೆ ತನ್ನಲ್ಲಿರುವ ನಾಲ್ಕಾಣೆ ಕೊಟ್ಟು ಅಭ್ಯಾಸವೇ ಹೊರತು, ತನ್ನಲ್ಲಿ ಇಲ್ಲವಾದರೂ ಇಲ್ಲವೆಂದು ಇದುವರೆಗೆ ಕೈಯ್ಯೊಡ್ಡಿದವನಲ್ಲ. ಸ್ವಾಭಿಮಾನದ ಬದುಕನ್ನು ಬದುಕುತ್ತಾ ತನ್ನ ನಿತ್ಯದ ಕಾಯಕವನ್ನೇ ಜೀವನಾಧಾರವಾಗಿ ನಂಬಿಕೊಡು, ದುಡಿಯುವ ಅಲ್ಪ ಹಣದಲ್ಲಿಯೇ ಸಂತೋಷವಾಗಿ ಬಡತನದಿಂದ ಬಾಳುತ್ತಿದ್ದನು.
ಇದ್ದಕ್ಕಿದ್ದಂತೆ ಅಪ್ಪಳಿಸಿದ್ದ ಸಾಂಕ್ರಾಮಿಕ ರೋಗವೊಂದು ಆತನ ಬದುಕಿನ ಬುಡವನ್ನೇ ಅಲ್ಲಾಡಿಸಲಾರಂಭಿಸಿತ್ತು. ತಾನು ನಿರ್ವಹಿಸುತ್ತಿದ್ದ ಕ್ಷೌರಿಕ ವೃತ್ತಿಯೇ ಆತನ ಬದುಕಿಗೆ ಮುಳುವಾಗಿತ್ತು. ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತ್ತು. ಮನೆಯಿಂದ ಯಾರೂ ಹೊರ ಹೋಗದಿರಿ ಎಂಬ ಆಜ್ಞೆಯನ್ನು ಹೊರಡಿಸಿತ್ತು. ಅದಾಗಿಯೂ ಕಣ್ಣು ತಪ್ಪಿಸಿ ಅನೇಕ ಮಂದಿ ಮಾದಪ್ಪನ ಬಳಿ ಸೇವೆಗೆಂದು ಮನೆಯ ಬಳಿ ಬರಲಾರಂಭಿಸಿದ್ದರು. ಇನ್ನೂ ಹಲವರು ಸೇವೆಯ ಖಚಿತತೆಗಾಗಿ ಕರೆಯನ್ನು ಮಾಡುತ್ತಿದ್ದರು.
ಸಾಂಕ್ರಾಮಿಕ ರೋಗಗಳ ಬಗ್ಗೆ ಅಷ್ಟೇನೂ ಅರಿವಿರದ ಮಾದಪ್ಪ ಮಾಧ್ಯಮಗಳು ನೀಡುತ್ತಿದ್ದ ಮಾಹಿತಿಗಳನ್ನು ನೋಡಿ ಕೊಂಚ ಅರಿವು ಮೂಡಿಸಿಕೊಳ್ಳುತ್ತಿದ್ದ. ಸೇವೆ ಮಾಡುವ ಮನೋಭಾವ ಇದ್ದರೂ ಮನೆಗೆಂದು ಬಂದ ಒಬ್ಬರಿಗೆ ಸೇವೆ ನೀಡಿದರೂ ಉಳಿದವರಿಗೆ ಇಲ್ಲ ಎನ್ನಲಾಗುವುದಿಲ್ಲ, ಆದ್ದರಿಂದ ಮನೆಯೊಳಗೇ ಅಡಗಿಕೊಂಡು, ಸೇವೆಗಾಗಿ ಬಂದವರಿಗೆಲ್ಲಾ ಮನೆಯವರಿಂದ “ಇಲ್ಲ” ಎಂದು ಹೇಳಿಸಿ ವಾಪಾಸ್ಸು ಕಳುಹಿಸುತ್ತಿದ್ದ. ರೋಗದ ಭಯಾನಕತೆ ಮಾಧ್ಯಮದ ಮೂಲಕ ಅರಿತುಕೊಂಡಿದ್ದ ಆತನಿಗೆ ಸಮಾಜ ಮತ್ತು ಅದಕ್ಕಿಂತ ಹೆಚ್ಚಾಗಿ ತನ್ನ ಕುಟುಂಬದ ಆರೋಗ್ಯವೂ ಮುಖ್ಯವಾಗಿತ್ತು.
ದಿನದ ಆದಾಯ ನಂಬಿಕೊಂಡಿದ್ದ ಆತನಿಗೆ ಸಾಂಕ್ರಾಮಿಕ ರೋಗದ ಭೀಕರತೆಯ ಮುಂದುವರಿಕೆ ಬಡತನದ ಮೇಲೆ ಇನ್ನಷ್ಟು ಕಾದ ಕಬ್ಬಿಣದ ಬರೆ ಎಳೆದಂತಾಯಿತು. ಈ ವಿಷಯ ತಿಳಿದ ಅದಾವುದೋ ಹುಡುಗರ ಗುಂಪೊಂದು ಬಂದು ಒಂದಷ್ಟು ದಿನಸಿಯನ್ನು ನೀಡಿ ಹೋಯಿತು. ಆದರೆ ದಿನಕ್ಕಾಗುವಷ್ಟು ನೀಡಿದ ದಿನಸಿಯನ್ನು ಇವರು ಪಡೆದ ಫೋಟೊ ಊರತುಂಬಾ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು. ಮೊದಲಿನಿಂದಲೂ ಸ್ವಾಭಿಮಾನದಿಂದ ಬದುಕಿದ ಮಾದಪ್ಪನಿಗೆ ಇದೆಲ್ಲವೂ ಕಿರಿಕಿರಿಯನ್ನುಂಟು ಮಾಡಿತು. ಸರ್ಕಾರದಿಂದ ಅಕ್ಕಿ ಬೇಳೆಗಳು ದೊರೆತರೂ ಇತರ ವಿಷಯಗಳಲ್ಲಿ ಹಣವು ಆತನ ಕೈ ಕಟ್ಟಿಸಿಬಿಟ್ಟಿತ್ತು. ಇನ್ನೊಂದೆಡೆ ಅತಿರೇಕಕ್ಕೆ ಏರಿದ ಸಾಮಾನುಗಳ ಬೆಲೆ, ಸಾಲಕ್ಕಾಗಿ ಪಡೆದರೂ ನಂತರದ ಅಂಗಡಿಯವನ ನೆಡೆ ಆತನಿಗೆ ಇನ್ನಷ್ಟು ರೋಸಿಹೋಗುವಂತೆ ಮಾಡಿತು.
ಖಾಲಿಯಾದ ಜೇಬು, ದಿನೇ ದಿನೇ ಖಾಲಿಯಾದ ದಿನಸಿ, ತಂದೆ-ತಾಯಿಯರ ಕೈ ಕೊಡುತ್ತಿರುವ ಆರೋಗ್ಯ, ಇನ್ನೇನು ಸ್ವಲ್ಪ ದಿನದಲ್ಲಿಯೇ ಮುಗಿದು ಹೋಗುವ ಔಷಧ, ಮಕ್ಕಳ ಬೇಡಿಕೆಯ ಆಕ್ರಂದನ, ಹೆಂಡತಿಯ ಮುಂದಿನ ದಿನಗಳ ಚಿಂತೆಯ ದುಗುಡ, ಬಡತನವನ್ನು ಹೇಳಿಕೊಳ್ಳೋಣವೆಂದರೆ ಸಹಾಯದ ನೆಪದಲ್ಲಿ ಪ್ರಚಾರ ಬಯಸುವ ವ್ಯೆಕ್ತಿತ್ವಗಳು. ಇವೆಲ್ಲವೂ ಮಾದಪ್ಪನನ್ನು ಇನ್ನಷ್ಟು ಖಿನ್ನತೆಗೆ ತಳ್ಳಿದವು. ಇದಕ್ಕಿಂತ ಸಾವೇ ಮಿಗಿಲೆಂದು ಮನದಲ್ಲಿಯೇ ಅಂದುಕೊಂಡು ನಿತ್ಯ ಸಂಕಟಪಡತೊಡಗಿದನು.
ಮಾಮೂಲಿನಂತೆ ಬೆಳ್ಳಂಬೆಳಿಗ್ಗೆ ಕ್ಷೌರಕ್ಕಾಗಿ ವ್ಯೆಕ್ತಿಯೊಬ್ಬರು ಹುಡುಕಿಕೊಂಡು ಬಂದರು, ಹೆಂಡತಿ ಮಾಮೂಲಿಯಂತೆ “ಅವರು ಊರಿನಿಂದ ಬಂದಿಲ್ಲ” ಎಂದು ಸಾಗುಹಾಕುವ ಮಾತನ್ನು ಹೇಳುತ್ತಿದ್ದಂತೆಯೇ ಮಾದಪ್ಪ ಹೆಂಡತಿಯ ಹಿಂದಿನಿಂದ ಸೇವೆಗೆಂದು ಬಂದ ವ್ಯೆಕ್ತಿಯ ಎದುರಿಗೆ ನಿಂತ. ಕೆಲಸ ಸಾಂಗವಾಗಿ ನೆರವೇರತೊಡಗಿತು. ಊರಮಂದಿಗೆಲ್ಲಾ ಮನೆಯಲ್ಲಿ ಕ್ಷೌರ ಮಾಡುವ ವಿಚಾರ ತಿಳಿಯಿತು. ಬಂದವರೆಲ್ಲಾ ಏನೂ ಆಗುವುದಿಲ್ಲವೆಂಬಂತೆ ಧೈರ್ಯ ತುಂಬಿದರು, ಯಾರಿಗೂ ಇಲ್ಲ ಎನ್ನಲಾಗಲಿಲ್ಲ. ಕೈಯಲ್ಲಿ ಹಣ ಓಡಾಡತೊಡಗಿತು ಮಾದಪ್ಪನ ಮುಖ ನಿಧಾನವಾಗಿ ಅರಳಿತು.
ಹೀಗೆ ಕೆಲಸ ಸಾಗುತ್ತಾ ಕೆಲದಿನಗಳಲ್ಲಿಯೇ ಮಾದಪ್ಪ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ. ಆತನಿಗೆ ಬಂದರೆಗಿದ್ದು ಅದೇ ಮಹಾಮಾರಿ ಸಾಂಕ್ರಾಮಿಕ ಖಾಯಿಲೆ. ಮಾದಪ್ಪನ ವಿಷಯ ತಿಳಿದದ್ದೇ ತಡ, ಬಂದಿದ್ದ ಊರ ಮಂದಿಯಲ್ಲ ಶಪಿಸತೊಡಗಿದರು, ಕ್ಷೌರ ಮಾಡಿಸಿಕೊಂಡವರೆಲ್ಲಾ ಆಸ್ಪತ್ರೆಯೆಡೆಗೆ ಪರೀಕ್ಷೆ ಮಾಡಿಸಿಕೊಳ್ಳಲು ದಾಪುಗಾಲು ಹಾಕಿದರು, ಮಾಧ್ಯಮದವರು ಮಾದಪ್ಪನನ್ನು ಭಯೋತ್ಪಾದಕನಂತೆ ಬಿಂಬಿಸತೊಡಗಿದರು. ಮಾದಪ್ಪನನ್ನೇ ನಂಬಿಕೊಂಡು ಬದುಕಿದ್ದ ಎರಡು ಎಳಸು ಮುದ್ದು ಮಕ್ಕಳು, ಹೆಂಡತಿ, ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ತಾಯಿಗಳು ದಿಕ್ಕು ತೋಚದಂತಾದರು. ಮೊದಲೇ ಬಡತನ, ನೋವು, ಹಿಂಸೆ ಅನುಭವಿಸಿದ್ದ ಕುಟುಂಬ, ಮಾದಪ್ಪನನ್ನೇ ಆಧಾರವಾಗಿ ನಂಬಿಕೊಂಡಿದ್ದ ಜೀವಗಳು ಕ್ಷಣದ ತಪ್ಪಿನಿಂದ ವಿಷದನ್ನಕ್ಕೆ ಮುತ್ತಿಕ್ಕಿ ಬಿಟ್ಟಿದ್ದರು. ಅವರಂದುಕೊಂಡಂತೆ ಬಡತನದ ಹಂಗಿನಿಂದ ಸಾವಿನ ಸುಖದ ಸುಪ್ಪತ್ತಿಗೆಯ ಮೇಲೆ ಮೌನವಾಗಿ ಮಲಗಿದ್ದರು.
ಮಾದಪ್ಪ ಚಿಕಿತ್ಸೆಯ ಫಲವಾಗಿ ಬದುಕುಳಿದು ಬಂದ, ಖಾಲಿಯಾಗಿ ಮೌನತುಂಬಿ ತುಳುಕಾಡುತ್ತಿರುವ ಮನೆ ಕಂಡು ಮಾದಪ್ಪನ ತಲೆಗೆ ಸಿಡಿಲೆರಗಿದಂತಾಗಿತ್ತು. ವಿಕಾರವಾಗಿ ನಗುತ್ತಾ, ಕಿರುಚಾಡುತ್ತಾ ಮನೆಯ ವಸ್ತುಗಳನ್ನೆಲ್ಲಾ ಬೇಕಾಬಿಟ್ಟಿಯಾಗಿ ಎಸೆದ. ಏನೇನೋ ಅರ್ಥವಾಗದಂತೆ ತಡವರಿಸುತ್ತಾ ಜೋರಾಗಿ ಕಿರುಚಿಕೊಂಡು ರಸ್ತೆಯ ಮೇಲೆ ಓಡಲಾರಂಭಿಸಿದ. ಜನಗಳು ಹತ್ತಿರ ಬಂದರೆ ಜೋರಾಗಿ ಓಡಿಹೋಗಿ “ಇವತ್ತಿಲ್ಲ ಹೋಗಿ ಹೋಗಿ” ಎಂದು ಗಾಬರಿಯಿಂದ ಹೇಳುತ್ತಿದ್ದಾನೆ. ಕೊನೆಗೂ ಅವನ ಬಳಿ ಉಳಿದದ್ದು ಆ ಮೂರೇ ಅಕ್ಷರಗಳು “ಇವತ್ತಿಲ್ಲ ಹೋಗಿ ಹೋಗಿ.