ಹಿಂದೂ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ವಿಶೇಷ ಮಹತ್ವವಿದೆ. ತಮ್ಮ ಎಷ್ಟೇ ಕಾರ್ಯದೊತ್ತಡ ಇದ್ದರೂ, ದೇವರ ಕಾರ್ಯಕ್ರಮಗಳು ಇದೆ ಎಂದರೆ ಅವೆಲ್ಲವನ್ನು ಬದಿಗೊತ್ತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುವುದು ತುಳುನಾಡಿನ ವಾಡಿಕೆಯಾಗಿದೆ.
ಇಂತಹ ಹತ್ತುಹಲವು ಆಚರಣೆಗಳಲ್ಲಿ ಶ್ರೀ ಗಣೇಶೋತ್ಸವವು ಪ್ರಮುಖ ಆಚರಣೆ ಎನಿಸಿಕೊಂಡಿದೆ. ಇಲ್ಲಿ ಪ್ರಮುಖವಾಗಿ ಗಣೇಶೋತ್ಸವವು ಆರಂಭದಲ್ಲಿ ಒಂದು ಧಾರ್ಮಿಕ ಆಚರಣೆಯಾಗಿರಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತೀಯರನ್ನು ಒಟ್ಟು ಸೇರಿಸುವ ನೆಪದಲ್ಲಿ ಬಾಲಗಂಗಾಧರ ತಿಲಕರಿಂದ ಆರಂಭಗೊಂಡ ಈ ಉತ್ಸವು ಇಂದು ದೇಶದ ಮೂಲೆ ಮೂಲೆಯಲ್ಲಿ ಅದ್ದೂರಿಯ ಅಚರಣೆಯಾಗಿ ವೈಭವ ಸಾಗುತ್ತಿದೆ.
ಅಂದು ಸಂಘಟನೆಯ ಉದ್ದೇಶದಿಂದ ಆರಂಭದಿಂದ ಆಚರಣೆ ಇಂದು ಧಾರ್ಮಿಕತೆಯ ರೂಪ ಪಡೆದುಕೊಂಡಿದೆ. ಅದರಲ್ಲೂ ಊರಿನ ಹತ್ತು ಸಮಸ್ತರು ಸೇರಿಕೊಂಡು ಶ್ರದ್ಧಾಭಕ್ತಿಯಿಂದ ಸಾರ್ವಜನಿಕವಾಗಿ ಗಣೇಶನ ಹಬ್ಬವನ್ನು ಆಚರಿಸುವುದು ವಿಶೇಷವಾಗಿದೆ. ಇಂತಹ ಹಬ್ಬಗಳು ಕೇವಲ ಒಂದೇ ದಿನಕ್ಕೆ ಸೀಮಿತಗೊಳ್ಳದೆ ಹಲವು ದಿನಗಳ ಕಾಲ ನಡೆಯುವುದು ಹಬ್ಬದ ಮತ್ತೊಂದು ವಿಶೇಷವಾಗಿದೆ.
ಇಲ್ಲಿ ಒಂದೆಡೆ ಹೋಮ ಹವನಾದಿಗಳು ನಡೆದರೆ, ಮತ್ತೊಂದೆಡೆ ಧಾರ್ಮಿಕ ಸಭೆಯಲ್ಲಿ ಜನರಿಗೆ ಒಂದಷ್ಟು ಧರ್ಮದ ವಿಚಾರವನ್ನು ತಿಳಿಸುವ ಕಾರ್ಯ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ಭಕ್ತಾಭಿಮಾನಿಗಳಿಗೆ ರಸದೌತಣ ನೀಡುವುದು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಜತೆಗೆ ಕೆಲವೊಂದೆಡೆ ಕುಟುಂಬದ ಸದಸ್ಯರು ಸೇರಿ ಮನೆಯಲ್ಲೂ ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ. ಇವುಗಳಲ್ಲಿ ಬಹುತೇಕ ಮನೆಗಳಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸುವ ಸಂಪ್ರದಾಯವೂ ಬೆಳೆದು ಬಂದಿದೆ. ಇನ್ನು ಕೆಲವೆಡೆ ಚೌತಿ ಬಡಿಸುವುದು ಎಂಬ ಆಚರಣೆಯಾಗಿಯೂ ಆಚರಿಸುತ್ತಾರೆ. ಈ ರೀತಿಯಲ್ಲಿ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಕಂಡುಬರುತ್ತದೆ.
ಗಣೇಶನಿಗೆ ಧಾರ್ಮಿಕ ವಿಧಿ ವಿಧಾನಗಳು ನಡೆದ ಬಳಿಕ ಶೋಭಾಯಾತ್ರೆಯ ಮೆರವಣಿಗೆಯಲ್ಲೇ ಚೌತಿಯ ವೈಶಿಷ್ಟ್ಯತೆ ಅಡಗಿರುತ್ತದೆ. ತಮ್ಮ ಊರಿನ ಬೀದಿಯುದ್ದಕ್ಕೂ ಸಾಗುವ ಈ ಮೆರವಣಿಗೆಯು ಭಕ್ತಾಧಿಗಳ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಹಾಡು, ಕುಣಿತ, ಬ್ಯಾಂಡ್ ವಾದ್ಯದ ಸದ್ದು ಗದ್ದಲ, ಒಂದಷ್ಟು ಸ್ತಬ್ದಚಿತ್ರಗಳು ಭಕ್ತರ ಭಕ್ತಿಯ ಪ್ರತೀಕವಾಗಿ ಮೂಡಿಬರುತ್ತದೆ. ಇಂತಹ ಗಣೇಶೋತ್ಸವ ಮತ್ತೆ ಬಂದಿದೆ. ಎಲ್ಲರೂ ಸಂಭ್ರಮದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳೋಣ. ಎಲ್ಲರಿಗೂ ಹಬ್ಬದ ಶುಭಾಶಯಗಳು…
✍ ಕಿರಣ್ ಸರಪಾಡಿ, ಭಂಡಾರಿ ವಾರ್ತೆ
ಅಬಾಲವೃದ್ದರಾಗಿ ಎಲ್ಲರಿಗೂ ಇಷ್ಟ ದೈವ ಗಣಪತಿ.
ಗಣಪತಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸೋಣ.ಸರ್ವರಿಗೂ ಹಬ್ಬದ ಹಾರ್ಧಿಕ ಶುಭಾಶಯಗಳು.