September 19, 2024

ತುಲುನಾಡಲ್ಲಿ ಸಾಮಾನ್ಯವಾಗಿ ನಾಲ್ಕು ವಿಧದ ಜೇನು ನೊಣಗಳನ್ನು ಕಾಣಬಹುದಾಗಿದೆ.ಅವುಗಳನ್ನು ತುಲು ಭಾಷೆಯ ಹೆಸರುಗಳಲ್ಲಿ ಕರೆಯಲಾಗಿದೆ. ಅರ್ಥಗರ್ಭಿತ ಆ ಹೆಸರುಗಳಲ್ಲೇ ಆ ನೊಣಗಳ ಸಂಕ್ಷಿಪ್ತ ಮಾಹಿತಿಯನ್ನು ತುಲುವ ಪೂರ್ವಜರು ಕೊಟ್ಟಿದ್ದಾರೆ.

 

ಉಮಿಲ್ ತಿಗ:

ಉಮಿಲ್ ಎಂದರೆ ನುಸಿ ಮತ್ತು ತಿಗ ಎಂದರೆ ಜೇನು ತುಪ್ಪ.ಈ ಹುಳುಗಳು ಅಥವಾ ನೊಣಗಳು ಬಲು ಚಿಕ್ಕ ಗಾತ್ರದಲ್ಲಿ ಇರುತ್ತದೆ.ಇದರ ತಟ್ಟಿ|ತಡಿಕೆ ಅಥವಾ ಗೂಡು ಬಹಳ ಚಿಕ್ಕದಾಗಿ ಇರುತ್ತದೆ.ಬಹಳಷ್ಟು ಹಗುರದ ಜೇನು ನೊಣ ಇದು ಆಗಿರುವುದರಿಂದ ಇದನ್ನು ಉಮಿಲ್ ತಿಗ ಅಥವಾ ನುಸಿ ಜೇನು ಎಂದು ಕರೆದಿದ್ದಾರೆ.ಈ ನೊಣಗಳು ಮನೆ,ಹಟ್ಟಿ,ಕೊಟ್ಟಿಗೆ ಗೋಡೆಯ ಬಿರುಕುಗಳಲ್ಲಿ ಮನೆಯ ಮಾಡುಗಳಲ್ಲಿ ಗೂಡು ಕಟ್ಟುತ್ತವೆ.ಮನೆಯ ಸುತ್ತಲಿನ ಪರಿಸರದಲ್ಲಿನ ಹೂವುಗಳ ಮಕರಂದವನ್ನು ಹೀರಿ ಜೇನು ತುಪ್ಪವನ್ನು ತಯಾರಿಸುತ್ತವೆ.ಮೊಟ್ಟೆ ಇಟ್ಟು ತಮ್ಮ ಸಂಸಾರವನ್ನು ಬೆಳೆಸುವುದು.ಹುಲ್ಲಿನ ಮನೆ,ಹಂಚಿನ ಮನೆಗಳು, ಮಣ್ಣಿನ ಗೋಡೆಗಳು ಇರದೆ ಇರುವುದರಿಂದ ಈ ನುಸಿ ಜೇನು ನೊಣಗಳು ಅಳಿವಿನ ಅಂಚಿನಲ್ಲಿದೆ.

ಕೊಳ್ಚ ಕೋಲ್ಜೇನು:
ಈ ಹೆಸರಿನ ಜೇನುನೊಣಗಳು ಕೊಳಚೆ ಪ್ರದೇಶದ ನೊಣಗಳಂತೆ ಕಾಣುತ್ತದೆ.ಈ ಕೊಳ್ಚ ಜೇನು ನೊಣಗಳು ಪಟ್ಲ ಅಥವಾ ಕೊಳ ಕೊಳಚೆ ಪ್ರದೇಶಗಳಲ್ಲಿ ಅರಳುವ ತಾವರೆ,ನೈದಿಲೆ,ಲಿಲ್ಲಿ ಇನ್ನಿತರೆ ವಿವಿಧ ಹೂವುಗಳ ಮಕರಂದವನ್ನು ಹೀರಿ ಕೊಳ ಪ್ರದೇಶದ ಹತ್ತಿರ ಇರುವ ಹೆಚ್ಚು ಎತ್ತರ ಇಲ್ಲದ ಗಿಡ ಮರಗಳ ದಿಂಡುಗಳಲ್ಲಿ ಗೂಡು ಕಟ್ಟಿ ಜೇನುತುಪ್ಪ ಉತ್ಪಾದನೆ ಮಾಡುವುದು.ಮೊಟ್ಟೆ ಇಡುತ್ತದೆ.ಕೊಳ ಕೊಳಚೆ ಎಂಬ ಹೆಸರಿನಿಂದಲೇ ಈ ಜೇನು ಹುಳುಗಳನ್ನು ಕೊಳ್ಚವೆ,ಕೊಳ್ಚ ಎಂದು ಕರೆದಿದ್ದಾರೆ. ಕೊಳ ಜೇನು ಎಂಬುದನ್ನು ಕೆಲವೆಡೆ ಕೋಲ್ಜೇನು ಎಂದು ಕರೆಯುತ್ತಾರೆ.

ಇದರ ತಟ್ಟಿ ಅಥವಾ ತಡಿಕೆಯು ಮುಷ್ಟಿಯಲ್ಲಿ ಹಿಡಿಯುವಷ್ಟು ಚಿಕ್ಕದಾಗಿ ಇರುವುದರಿಂದ ಇದನ್ನು ಪುಂಡಿ ಕೊಳ್ಚ ಎಂತಲೂ ಕರೆಯುತ್ತಾರೆ.ಇದರ ಜೇನು ತುಪ್ಪವನ್ನು ಹಿಂಡಿದ ಬಳಿಕ ಅದರ ತಟ್ಟಿಯು ಅಂಟಿನಂತೆ ಇರುತ್ತದೆ.ಈ ಅಂಟನ್ನು ಒಡೆದ ಮಣ್ಣಿನ ಪಾತ್ರೆಗಳನ್ನು ಜೋಡಿಸಲು ಬಳಸುತ್ತಾರೆ.ಈ ಕಾರಣಕ್ಕಾಗಿ ಕೊಳ್ಚವನ್ನು ಮೊಜಂಟ್,ಮೊಜಂಟಿ ಎಂತಲೂ ತುಲುನಾಡಲ್ಲಿ ಕರೆಯುತ್ತಾರೆ.ಈ ಜೇನು ನೊಣಗಳು ಕೂಡಾ ಅಳಿವಿನ ಅಂಚಿನಲ್ಲಿದೆ. ಏಕೆಂದರೆ ಈಗ ಪಟ್ಲ,ಮಾರ್,ಕೊಳ ಪ್ರದೇಶಗಳು ,ಕೊಳಕ್ಕೆ ಗದ್ದೆಗಳು,ಬೈಲ್ ಗದ್ದೆಗಳು,ಕಂಬ್ಲ ಕೊಲಂಬೆ,ಉಜೆ,ಕೊಳಚೆ ಪ್ರದೇಶಗಳೇ ಇಲ್ಲ.

ತೊಡ್ಡೆ ಜೇನು:
ಕೊಳಚ್ಚೆ ಪದದಿಂದ ಕೊಲ್ಚೆ ಎಂಬ ಜೇನು ನೊಣವನ್ನುಕರೆದಂತೆ “ತೋಡು”ಪದದಿಂದ “ತೊಡ್ಡೆ ಜೇನು”ಎಂಬ ಹೆಸರು ಬಂದಿದೆ.”ತೊಡ್ಡೆದ ತಿಗತ್ತ ನೆಯಿ”ಎನ್ನುವರು ತುಲುವರು.ಹರಿಯುವ ತೋಡು ಕಾಲುವೆಗಳ ಸುತ್ತ ಮುತ್ತ ಇರುವ ಬೋಂಜ, ಪುಂಜ, ಅಡ್ಕ,ಪಲ್ಕೆ ಇತ್ಯಾದಿ ಪ್ರದೇಶಗಳಲ್ಲಿ ಅರಳುವ ಕೇಪುಲ,ನೆಕ್ಕರೆ,ಕೈರೊಲ್,ನೇರೊಲ್, ತಾರೊಲ್, ಕುಂಟಲ್ ಇತ್ಯಾದಿ ಇತ್ಯಾದಿ ಗಿಡ ಮರಗಳ ಹೂವಿನ ಮಕರಂದವನ್ನು ಸಂಗ್ರಹಿಸಿ ಗೂಡು ಕಟ್ಟುವ ಜೇನು ನೊಣಗಳನ್ನು ತುಲುವರು “ತೊಡ್ಡೆ”ಎಂದು ಕರೆದಿದ್ದಾರೆ.

ಪೆರಿಯಾ ಜೇನು:
ಪೆರಿಯಾದ ನೆಯಿ.ಪೆರಿಯಾ ಎಂದರೆ ದೊಡ್ಡದು ಎಂಬ ಅರ್ಥವಾಗಿರುತ್ತದೆ.ಇದರ ಜೇನು ನೊಣಗಳು ಬೃಹತ್ ಗಾತ್ರವನ್ನು ಹೊಂದಿರುವುದು.ಹೆಜ್ಜೇನುಗಳಿಗೆ ತುಲುವರುಪೆರಿಯಾ ಎನ್ನುತ್ತಾರೆ.ಇದರ ಗೂಡು ಕೂಡಾ ದೊಡ್ಡದು ಆಗಿರುತ್ತದೆ.ಎತ್ತರದ ಕಾಡಿನೊಳಗಿನ ದೊಡ್ಡದೊಡ್ಡ ಮರಗಳ ದಿಂಡು,ಕಾಂಡ,ರೆಂಬೆಗಳಲ್ಲಿ ಕಾಡಿನೊಳಗಿನವಿವಿಧ ಹೂವುಗಳಿಂದ ಮಕರಂದವನ್ನು ಹೀರಿ ಜೇನು ತುಪ್ಪವನ್ನು ಉತ್ಪಾದಿಸುತ್ತದೆ.

 

Leave a Reply

Your email address will not be published. Required fields are marked *