November 21, 2024
55

 ಧ್ಯಾನ-17

      ನಸ್ಸು ಅತ್ಯಂತ ನಿಶ್ಚಲವಾಗಿದ್ದಾಗ, ಆಲೋಚನೆಗಳು ಇಲ್ಲದಿರುವಾಗ, ಮನಸ್ಸು ತನ್ನದೇ ಸದ್ದುಗಳಲ್ಲಿ ಮುಳುಗಿಲ್ಲದೆ ಇರುವಾಗ ನಿಮಗೂ ಅರ್ಥದ ಮಿಂಚು ಹೊಳೆದಿರುತ್ತದೆ, ಗಮನಕ್ಕೆ ಬರದಷ್ಟು ಶೀಘ್ರವಾಗದ ಒಳನೋಟ ದೊರೆತಿರುತ್ತದೆ. ನವ್ಯಚಿತ್ರವೋ, ಮಗುವಿನ ನಗೆಯೋ, ಹೆಂಡತಿಯೋ, ನೆರೆಮನೆಯಾತನೋ, ಎಲ್ಲ ವಸ್ತುಗಳಲ್ಲಿರುವ ಸತ್ಯವೋ, ಯಾವುದೇ ಇರಲಿ ಅದರ ಅರ್ಥ ಮನಸ್ಸು ಅತ್ಯಂತ ನಿಶ್ಚಲವಾಗಿದ್ದಾಗ ಮಾತ್ರ ಹೊಳೆದಿರುತ್ತದೆ. ಆದರೆ ಆ ನಿಶ್ಚಲತೆಯನ್ನು ಬೆಳಸಿಕೊಳ್ಳಲು ಸಾಧ್ಯವಿಲ್ಲ. ಬೆಳಸಿಕೊಂಡ ನಿಶ್ಚಲ ಮನಸ್ಸು ಸತ್ತ ಮನಸ್ಸು ಅಷ್ಟೇ.
ನಿಮಗೆ ಯಾವುದರಲ್ಲಾದರೂ ಹೆಚ್ಚು ಆಸಕ್ತಿ ಇದ್ದಾಗ, ಅರ್ಥಮಾಡಿಕೊಳ್ಳವ ಉದ್ದೇಶ ಇದ್ದಾಗ ಮನಸ್ಸು ಹೆಚ್ಚು ಸರಳವಾಗಿ, ಸ್ವಚ್ಛವಾಗಿ ಮುಕ್ತವಾಗಿ ಇರುತ್ತದೆ. ಶಬ್ದೀಕರಣ ನಿಲುಗಡೆಗೆ ಬಂದಿರುತ್ತದೆ‌. ಆಲೋಚನೆ ಪದ ಅಲ್ಲವೇ? ಪದಗಳೇ ಅಡಚಣೆ ಒಡ್ಡುತ್ತವೆ. ಅಂದರೆ ನೆನಪುಗಳು ಅಡ್ಡ ಬೀಳುತ್ತದೆ. ಸವಾಲುಗಳಿಗೆ ಪದಗಳೆ ಪ್ರತಿಕ್ರಿಯೆ ತೋರುತ್ತಿರುವಾಗ ಬೌದ್ಧಿಕತೆ ಇರುತ್ತದೆ. ಆದ್ದರಿಂದ ಬಡಬಡಿಸುತ್ತಿರುವ, ಎಲ್ಲವನ್ನೂ ಶಬ್ದೀಕರಿಸುವ ಮನಸ್ಸು ಅಮೂರ್ತ ಸತ್ಯವನ್ನು ಅಷ್ಟೇ ಅಲ್ಲ ಸಂಬಂಧಗಳ ಸತ್ಯವನ್ನು ಅರ್ಥಮಾಡಿಕೊಳ್ಳಲಾರದು. ಸತ್ಯ ಅಮೂರ್ತವಲ್ಲ, ಅದರೆ ಸೂಕ್ಷ್ಮ ಕತ್ತಲೆಯಂತೆ ಅರಿವೇ ಆಗದೆ ಕವಿಯುವ ಸತ್ಯವನ್ನು ಮನಸ್ಸು ಹಿಡಿದಿಟ್ಟುಕೊಳ್ಳಲಾರದು. ಸತ್ಯವನ್ನು ನೀವು ಸ್ವೀಕರಿಸಲು ಸಿದ್ದರಾಗಿಲ್ಲದಿರುವಾಗ ಅದು ಎದುರಾಗಿಬಿಡುತ್ತದೆ.ಪದಗಳ ಬಲೆಯಲ್ಲಿ ಸಿಕ್ಕಿಬಿದ್ದಿರುವ ಮನಸ್ಸು ಸತ್ಯವನ್ನು ಅರ್ಥಮಾಡಿಕೊಳ್ಳಲಾರದು.
ಪದದ ಸಾತತ್ಯ ಮತ್ತು ಪರಿಷ್ಕರಣೆಗಳನ್ನು ನೀವು ತಟ್ಟನೆ ತತ್ತಕ್ಷಣದಲ್ಲಿಯೇ ಕಂಡುಕೊಳ್ಳಬೇಕು. ಯಾವುದೇ ಸತ್ಯವನ್ನು ನಾವು ತತ್ಕ್ಷಣವೇ ಗ್ರಹಿಸುವತ್ತೆವೆಯೇ ಹೊರತು ನಿಧಾನವಾಗಿ ಕಾಲಕ್ರಮೇಣ ಅಲ್ಲ. ಪ್ರಶ್ನಿಸುತ್ತಿರುವ ಕ್ಷಣದಲ್ಲೇ ಮನಸ್ಸು ಪದದ ನಿರ್ಬಂಧಗಳನ್ನು ಮುರಿದುಕೊಳ್ಳಬಹುದೆ?  ಹಾಗೆ ಮುರಿದುಕೊಂಡ ಪದದ ಮಹತ್ವವನ್ನು ಕಾಲಾತೀತವಾದ ಮಿಂಚಿನಲ್ಲಿ, ಪದವೆಂಬ ಕಾಲಕ್ಕೆ ಬದ್ಧವಾಗದೆ ಮನಗಾಣಬಲ್ಲುದೇ? ನಿಮಗೆ ಇದರ ಅನುಭವ ಆಗಿರಬಹುದು, ಆದರೆ ಅಂಥ ಅನುಭವ ಸತ್ಯವನ್ನು ತೋರಿರುತ್ತದೆ.

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ ಕುಂದಾಪುರ, ಭಂಡಾರಿವಾರ್ತೆ

 

Leave a Reply

Your email address will not be published. Required fields are marked *