January 18, 2025
55

ಧ್ಯಾನ-18

ಗಮನವೆಂದರೇನು? ಗಮನವಿರಬೇಕೆಂದು ಮನಸ್ಸನ್ನು ಒತ್ತಾಯಿಸಿದಾಗ ಗಮನವಿರುತ್ತದೆಯೇ? “ನಾನು ಗಮನಕೊಡಬೇಕು ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು,ಎಲ್ಲಾ ಯೋಚನೆಗಳನ್ನು ದೂರ ತಳ್ಳಬೇಕು ಎಂದುಕೊಂಡಾಗ ಗಮನವಿರುತ್ತದೆಯೇ? ನಿಜವಾಗಿಯೂ ಇದ್ಯಾವುದೂ ಗಮನವಲ್ಲ.ಮನಸ್ಸು ಬಲವಂತವಾಗಿ ಗಮನ ನೀಡಿದಾಗ ಏನಾಗುತ್ತದೆ? ತನ್ನ ಬಳಿ ಇತರ ಆಲೋಚನೆಗಳು ಸುಳಿಯದಂತೆ ಪ್ರತಿರೋಧವನ್ನು ಒಡ್ಡತೊಡಗುತ್ತದೆ,ಪ್ರತಿರೋಧದ ಬಗೆಗೇ ಎಚ್ಚರವಾಗಿದ್ದು ಬೇಡದ ಯೋಚನೆಗಳನ್ನೆಲ್ಲ ದೂರ ದಬ್ಬುವುದರಲ್ಲೇ ತೊಡಗಿರುತ್ತದೆ.ಆದ್ದರಿಂದ ಆ ಸ್ಥಿತಿ ಗಮನದ ಸ್ಥಿತಿ ಅಲ್ಲ,ಅಲ್ಲವೆ?

ಏನನ್ನಾದರೂ ಅರ್ಥಮಾಡಿಕೊಳ್ಳಬೇಕಿದ್ದರೆ ಅದಕ್ಕೆ ನಿಮ್ಮ ಪೂರ್ಣಗಮನವನ್ನು ನೀಡಬೇಕು. ಆದರೆ ಹಾಗೆ ಪೂರ್ಣ ಗಮನವನ್ನು ನೀಡುವುದು ಎಷ್ಟು ಕಷ್ಟ ಎಂಬುದು ಕೂಡಲೇ ತಿಳಿಯುತ್ತದೆ. ಏನನ್ನೋ ಪಡೆಯುವ ಆಸೆ ನಿಮ್ಮಲ್ಲಿ ತಲೆ ಎತ್ತುತ್ತದೆ,ಪೂರ್ಣ ಗಮನ ನೀಡಲಾರದವರಾಗುತ್ತೀರಿ.ಆದರೆ ಏನನ್ನಾದರೂ ನೋಡುವಾಗ ಪೂರ್ಣ ಎಚ್ಚರವಿದ್ದರೆ,ಪೂರ್ಣ ಗಮನವಿದ್ದರೆ ಆಗ ಪರಿವರ್ತನೆಯೊಂದು ಆಗುತ್ತಿರುವುದನ್ನು ಕಾಣುತ್ತೀರಿ‌,ಪೂರ್ಣ ಗಮನ ಒಳ್ಳೆಯದೆಂದು ತಿಳಿಯುತ್ತೀರಿ.ಅನ್ಯವಾದದ್ದು ಯಾವುದು ಇಲ್ಲ,ಗಮನವನ್ನು ಅಭ್ಯಾಸದಿಂದ ಸಾಧಿಸುವುದು ಕೂಡ ಸಾಧ್ಯವಿಲ್ಲ.

ಮನಸ್ಸಿನ ಬೆಳವಣಿಗೆಯ ವಿಷಯದಲ್ಲಿ ಪ್ರಾಮುಖ್ಯವಿರಬೇಕಾದದ್ದು ಗಮನಕ್ಕೆ ಹೊರತು ಏಕಾಗ್ರತೆಗಲ್ಲ.ಏಕಾಗ್ರತೆಯಲ್ಲಿ ಮನಸ್ಸನ್ನು ಬಲವಂತದಿಂದ ಯಾವುದೋ ಒಂದು ಬಿಂದುವಿಗೆ ಸಂಕುಚಿತಗೊಳಿಸುವ ಕ್ರಿಯೆ ನಡೆಯುತ್ತದೆ. ಆದರೆ ಗಮನಕ್ಕೆ ಯಾವ ಗಡಿಯೂ ಇಲ್ಲ,ಮಿತಿಯು ಇಲ್ಲ.ಏಕಾಗ್ರತೆಯಲ್ಲಿ ಮನಸ್ಸು ಯಾವಾಗಲೂ ಆಯ್ದವಿಷಯದ ಸೀಮೆಗೆ ಬದ್ಧವಾಗಿರುತ್ತದೆ. ಅದ್ದರಿಂದ ಗಮನಕ್ಕೆ ಮೊದಲ ಪ್ರಾಮುಖ್ಯತೆ. ಏಕಾಗ್ರತೆಯ ಪ್ರಯತ್ನದ ಮೂಲಕ ಗಮನವನ್ನು ಸಾಧಿಸಿಕೊಳ್ಳಲಾಗುವುದಿಲ್ಲ.ಅನುಭವದ ರೂಪವನ್ನು ತಳೆದು ಸಂಗ್ರಹಗೊಳ್ಳುವ ಜ್ಞಾನ-ಕೇಂದ್ರವಿಲ್ಲದ ಸ್ಥಿತಿಯೇ ಪೂರ್ಣ ಗಮನ.

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ ಕುಂದಾಪುರ, ಭಂಡಾರಿವಾರ್ತೆ

Leave a Reply

Your email address will not be published. Required fields are marked *