ಧ್ಯಾನ – 13
ಕಾಮನೆಯನ್ನು ಪರಿಶೀಲಿಸೋಣ. ಕಾಮನೆಯ ವೈರುಧ್ಯಗಳು, ನಮ್ಮನ್ನು ಏಕ ಕಾಲದಲ್ಲಿ ಬೇರೆ ಬೇರೆ ದಿಕ್ಕುಗಳಿಗೆ ಎಳೆಯುವ ಕಾಮನೆಗಳು, ಕಾಮನೆಯಿಂದ ಹುಟ್ಟುವ ನೋವು, ತಳಮಳ, ಆತಂಕ, ಕಾಮನೆಯನ್ನು ಶಿಸ್ತಿಗೆ ಒಳಪಡಿಸುವ ಆಸೆ. ಕಾಮನೆಯ ನಿಯಂತ್ರಣ ಇವೆಲ್ಲ ನಮಗೆ ಗೊತ್ತಿವೆ, ಅಲ್ಲವೆ.? ಕಾಮನೆಗಳ ವಿರುದ್ಧವಾಗಿ ನಾವು ಕೊನೆಯಿಲ್ಲದ ಯುದ್ದವನ್ನು ಹೂಡಿದ್ದೇವೆ. ಕಾಮನೆಗಳನ್ನು ತಿರುಚಿ, ಆಕಾರಗೆಡಿಸಿ, ಗುರುತು ಸಿಗದಂತೆ ಮಾಡಿಹಾಕಿದ್ದೇವೆ. ಆದರೆ ಕಾಮನೆ ಎಂಬುದು ಹೊಂಚು ಹಾಕುತ್ತಾ, ಅವಕಾಶಕ್ಕೆ ಕಾಯುತ್ತಾ, ನಮ್ಮನ್ನು ದಬ್ಬಿಯಾಡುತ್ತಾ ಇದ್ದೇ ಇದೆ. ನೀವು ಬೇಕಾದದ್ದು ಮಾಡಿ. ಕಾಮನೆಗಳನ್ನು ಉದಾತ್ತಗೋಳಿಸಿ ಕಾಮನೆಗಳಿಂದ ಪಲಾಯನ ಮಾಡಿ, ಕಾಮನೆಗಳನ್ನು ತಿರಸ್ಕರಿಸಿ ಅಥವಾ ಒಪ್ಪಿಕೊಳ್ಳಿ, ಇಲ್ಲವೆ ಕಾಮನೆಗಳು ಲಗಾಮಿಲದೆ ಓಡಲು ಬಿಡಿ. ಏನಾದರೂ ಮಾಡಿ.ಕಾಮನೆ ಇದೇ ಇರುತ್ತದೆ. ಧಾರ್ಮಿಕ ಗುರುಗಳು ಮತ್ತು ಇತರರು ಹೇಳುವುದನ್ನು ನಾವು ಕೇಳಿದ್ದೇವೆ. ನಾವು ನಿಷ್ಕಾಮಿಗಳಾಗಬೇಕು, ಆಶಾರಹಿತರಾಗಬೇಕು, ನಿರ್ಲಿಪ್ತಿಯನ್ನು ಬೆಳೆಸಿಕೊಳ್ಳಬೇಕು, ಆಸೆಗಳಿಂದ ಮುಕ್ತರಾಗಬೇಕು ಎನ್ಬುತ್ತಾರೆ ಅವರೆಲ್ಲ. ಕಾಮನೆಗಳನ್ನು ನಾಶ ಮಾಡಿದರೆ ಬಹುಶಃ ನೀವು ಬದುಕನ್ನೇ ನಾಶಮಾಡುತ್ತೀರಿ.
ಕಾಮನೆಯನ್ನು ಅರ್ಥಮಾಡಿಕೊಳ್ಳಬೇಕು. ಇಷ್ಟೊಂದು ಮುಖ್ಯವಾದ, ಇಷ್ಟೊಂದು ಒತ್ತಾಯಿಸುವ, ಇಷ್ಟೊಂದು ತುರ್ತಾದ ಸಂಗತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಕಾಮನೆಗಳ ತೃಪ್ತಿಯಲ್ಲಿಯೇ ತೀವ್ರ ಭಾವ(ಪ್ಯಾಶನ್) ಹುಟ್ಟುತ್ತದೆ, ನೋವು ನಲಿವುಗಳು ಹುಟ್ಟುತ್ತವೆ. ಕಾಮನೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಯಾವುದೇ ಆಯ್ಕೆಯು ಇರಕೂಡದು. ಕಾಮನೆಯನ್ನು ಒಳ್ಳೆಯ ಕಾಮನೆ, ಕೆಟ್ಟ ಕಾಮನೆ ಎಂದೋ ಉದಾತ್ತ ಕಾಮನೆ, ಕ್ಷುದ್ರ ಕಾಮನೆ ಎಂದೋ ತೀರ್ಮಾನಿಸಕೂಡದು. ಈ ಕಾಮನೆಯನ್ನು ಉಳಿಸಿಕೊಳ್ಳುತ್ತೇನೆ, ಆ ಕಾಮನೆ ಬಿಡುತ್ತೇನೆ, ಎಂದು ತೀರ್ಮಾನಿಸಕೂಡದು. ಅದರ ಸತ್ಯವನ್ನು ತಿಳಿಯಬೇಕಾದರೆ ಎಲ್ಕಾ ಆಯ್ಕೆಗಳನ್ನೂ, ತಿರ್ಮಾನಗಳನ್ನೂ ಬದಿಗೆ ಸರಿಸಿಬಿಡಬೇಕು.
ಕಾಮನೆಯನ್ನು ಹೀಗೆಯೇ ನೋಡುವುದಕ್ಕೆ ಸಾಧ್ಯವಾದರೆ, ಕಾಮನೆಯನ್ನು ತಿರಸ್ಕರಿಸದೆ, ಅಥವಾ ಈ ಕಾಮನೆಯನ್ನು ಏನು ಮಾಡಲಿ ಇದು ಕೊಳಕಾಗಿದೆಯಲ್ಲ, ಇಷ್ಟು ವಿಕಾರವಾಗಿದೆಯಲ್ಲ, ಇಷ್ಟು ತೀವ್ರವಾಗಿದೆಯಲ್ಲ? ಎಂದು ಅಂದುಕೊಳ್ಳದೆ, ಅದಕ್ಕೆ ಒಂದು ಹೆಸರಿಡದೆ, ಸಂಕೇತವನ್ನು ಆರೋಪಿಸದೆ, ಪದವಿಟ್ಟು ವಿವರಿಸದೆ ಸುಮ್ಮನೆ ನೋಡಲು ಸಾಧ್ಯವಾದರೆ, ಆಗ ಕಾಮನೆ ತಳಮಳವನ್ನು ಹುಟ್ಟಿಸುತ್ತದೇನು? ಆಗ ಕಾಮನೆಯು ದೂರವಿರಿಸಬೇಕಾದ್ದೋ, ನಾಶಮಾಡಬೇಕಾದ್ದೋ ಆಗಿರುತ್ತದೇನು? ಒಂದು ಕಾಮನೆ ಮತ್ತೊಂದು ಕಾಮನೆಯನ್ನು ಕಿತ್ತು ತಿನ್ನುವುದರಿಂದ, ನಮ್ಮೊಳಗೆ ಸಂಘರ್ಷವನ್ನು ಹುಟ್ಟಿಸುವುದರಿಂದ ನಾವು ಕಾಮನೆಯನ್ನು ನಾಶಮಾಡಲು ಬಯಸುತ್ತೇವೆ. ಅದಕ್ಕೆಂದೇ ಹೇಳುತ್ತಿರುವುದು, ನಾವು ಕಾಮನೆಯನ್ನು ಪೂರ್ಣವಾಗಿ ಅರಿಯಲು ಸಾಧ್ಯಮಾಡಿಕೊಳ್ಳಬೇಕು, ಆಗ ಕಾಮನೆಯ ಸೌಂದರ್ಯ ಅರಿಯಲು ಸಾಧ್ಯ.
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ಭಂಡಾರಿವಾರ್ತೆ ವೆಂಕಟೇಶ ಭಂಡಾರಿ, ಕುಂದಾಪುರ.