
ಧ್ಯಾನ-14
ಸುಂದರವಾದ ಸೂರ್ಯಾಸ್ತವನ್ನು ನೋಡುತ್ತೀರಿ. ಚೆಲುವಾದ ಮರವನ್ನು ಕಾಣುತ್ತೀರಿ. ವಿಶಾಲವಾಗಿ ಹರಿಯುತ್ತಾ, ನಿಧಾನವಾಗಿ ಹೊರಳಿ ಸಾಗುವ ನದಿಯ ಪಾತ್ರವನ್ನು ನೋಡುತ್ತೀರಿ. ಅಥವಾ, ಸುಂದರವಾದ ಮುಖವೊಂದು ಎದುರಾಗುತ್ತದೆ. ಇವನ್ನೆಲ್ಲ ನೋಡುವುದು ಸುಖ ಕೊಡುತ್ತದೆ. ಸಂತೋಷ ತರುತ್ತದೆ. ಇದರಲ್ಲಿ ತಪ್ಪು ಏನಿದೆ? ಸುಂದರ ಮುಖ, ಸುಂದರ ಸೂರ್ಯಾಸ್ತ, ಚೆಲುವಾದ ಮರ, ನದಿಯ ಸೌಂದರ್ಯ, ತೇಲುವ ಮೋಡ, ಅಗಾಧ ಪ್ರವರ್ತಶ್ರೇಣಿ ಇವೆಲ್ಲ ನೆನಪುಗಳಾಗಿ ಉಳಿದಾಗ, ಆ ನೆನಪುಗಳು ನಮಗೆ ಆದ ಸಂತೋಷ ಸುಖಗಳ ಮುಂದುವರಿಕೆಗೆ ಒತ್ತಾಯಿಸತೊಡಗಿದಾಗ, ನಮಗೆ ಒಮ್ಮೆ ದೊರೆತ ಸುಖ ಮತ್ತೆ ಮತ್ತೆ ದೊರೆಯಲಿ ಎಂಬ ಆಸೆ ಹುಟ್ಟಿದಾಗ ಗೊಂದಲ, ನರಳಾಟಗಳು ಹುಟ್ಟಿಕೊಳ್ಳುತ್ತವೆ. ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ನನಗೆ ಯಾವುದೋ ಸಂಗತಿಯಲ್ಲಿ ಸುಖ ತರುತ್ತದೆ. ನಾವು ಒಮ್ಮೆ ಪಟ್ಟ ಸುಖ ಮತ್ತೆ ಮತ್ತೆ ದೊರೆಯಲಿ ಎಂದು ಬಯಸತೊಡಗುತ್ತೇವೆ. ಅದು ಸೆಕ್ಸನ ಸುಖ, ಕಲೆಯ ಸುಖ, ಬುದ್ದಿವಂತಿಕೆಯ ಸುಖ, ಏನೂ ಆಗಿರಬಹುದು. ಆ ಸುಖ ಮರುಕಳಿಸಲಿ ಎಂದು ಬಯಸತೊಡುಗುತ್ತೇವೆ. ಹೀಗಾದಾಗ ಸುಖವು ಮನಸ್ಸನ್ನು ಮಂಕುಗೊಳಿಸಿ ಸುಳ್ಳಾದ ಮೌಲ್ಯಗಳು ಹುಟ್ಟಿಕೊಳ್ಳತೊಡಗುತ್ತವೆ.
ಸುಖವನ್ನು ದೂರಮಾಡಲು ಬಯಸುವುದು ಮೌಢ್ಯ, ದಡ್ಡತನ. ಮುಖ್ಯವಾದ ಮಾತೆಂದರೆ ಸುಖವನ್ನು ಅರ್ಥಮಾಡಿಕೊಳ್ಳಬೇಕು. ಸುಖವನ್ನು ಇಲ್ಲದಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ. ನಮಗೆ ಸುಖ ಬೇಕಾಗಿದ್ದರೆ, ಸುಖದ ಸ್ವರೂಪವನ್ನು ಮತ್ತು ಆಕಾರವನ್ನು ತಿಳಿಯುವುದು ಮುಖ್ಯವಾಗುತ್ತದೆ. ಯಾವಾಗ ನಾವು ನಮ್ಮ ಸುಖದ ಮಜಲುಗಳನ್ನು ವಿಶ್ಲೇಷಣೆ ಮಾಡಿ ಅರಿತುಕೊಳ್ಳಲು ಪ್ರಯತ್ನ ಮಾಡುತ್ತೇವೆಯೋ, ಆಗ ದುಃಖ, ಗೊಂದಲ, ಭ್ರಮೆ, ನಾವು ಕಲ್ಪಿಸಿಕೊಳ್ಳುವ ಸುಳ್ಳು ಮೌಲ್ಯಗಳು,ಎಲ್ಲಾ ಹೋಗಿಬಿಡುತ್ತವೆ. ನಮ್ಮ ಸುಖದ ಸ್ಪಷ್ಟತೆ ದೊರೆಯುತ್ತದೆ. ಸುಖದ ಸ್ಪಷ್ಟತೆ ಇರುವಾಗ ಜೀವನ ಸರಳವಾಗಿ ಸುಂದವಾಗಿ ಇರುತ್ತದೆ.
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ ಕುಂದಾಪುರ, ಭಂಡಾರಿವಾರ್ತೆ