ಧ್ಯಾನ-19
ಯಾವುದರ ವಿರುದ್ಧ ಹೋರಾಡುತ್ತೀರೋ ನೀವು ಅದೇ ಆಗುತ್ತೀರಿ…. ನಾನು ನಿಮ್ಮ ಮೇಲೆ ಕೊಪಮಾಡಿಕೊಂಡಿದ್ದು ನೀವೂ ಕೋಪಗೊಂಡರೆ ಫಲಿತಾಂಶವೇನು? ಮತ್ತಷ್ಟು ಕೋಪ. ನಾನು ಏನಾಗಿದ್ದೆನೋ ನೀವು ಅದೇ ಆದಿರಿ.ನಾನು ಕೆಡುಕನಾಗಿದ್ದು ನೀವೂ ಕೆಟ್ಟ ವಿಧಾನಗಳಿಂದ ನನ್ನ ವಿರುದ್ಧ ಹೋರಾಡಿದರೆ ನಿಮ್ಮನ್ನು ನೀವು ಎಷ್ಟು ಸಮರ್ಥಿಸಿಕೊಂಡರೂ ನೀವೂಬಕೆಡುಕರೇ ಆಗಿರುತ್ತೀರಿ. ನಾನು ಮೃಗೀಯನಾಗಿದ್ದು ನನ್ನನ್ನು ಗೆಲ್ಲಲು ನೀವೂ ಮೃಗೀಯ ವಿಧಾನಗಳನ್ನು ಅನುಸರಿಸಿದರೆ ನನ್ನಂತೆ ನೀವೂ ಮೃಗವೇ ಆಗುತ್ತೀರಿ. ದ್ವೇಷವನ್ನು ದ್ವೇಷದಿಂದಲೇ ಎದುರಿಸುವುದಲ್ಲದೆ ಬೇರೆ ದಾರಿ ಇರಬೇಕಲ್ಲವೇ? ನನ್ನೊಳಗಿನ ಕೋಪವನ್ನು ಗೆಲ್ಲಲು ಕ್ರೂರವಾದ ವಿಧಾನವನ್ನು ಅನುಸರಿಸಿದರೆ ಸರಿಯಾದ ಕಾರಣಕ್ಕೆ ತಪ್ಪು ವಿಧಾನವನ್ನು ಬಳಸುತ್ತಿರುತ್ತೇನೆ. ಆಗ ಸರಿಯಾದದ್ದು ಕೂಡ ಇಲ್ಲವಾಗುತ್ತದೆ. ಹೀಗೆ ಮಾಡಿದಾಗ ಕೋಪವನ್ನು ಅರ್ಥಮಾಡಿಕೊಳ್ಳುವುದಾಗಲಿ, ಕೋಪವನ್ನು ಮೀರುವುದಾಗಲಿ ಇಲ್ಲ, ಕೋಪವನ್ನು ಸಹನೆಯಿಂದ ಅರ್ಥ ಮಾಡಿಕೊಳ್ಳಬೇಕು. ಕ್ರೂರವಾದ ವಿಧಾನಗಳಿಂದ ಕೋಪವನ್ನು ಗೆಲ್ಲಲು ಸಾಧ್ಯವಿಲ್ಲ. ಕೋಪ ಅನೇಕ ಕಾರಣಗಳಿಂದ ಹುಟ್ಟಿರಬಹುದು. ಅವನ್ನೆಲ್ಲ ಅರ್ಥಮಾಡಿಕೊಳ್ಳದೆ ಕೋಪದಿಂದ ಪಾರಾಗುವುದು ಸಾದ್ಯವಿಲ್ಲ.
ಶತ್ರುವನ್ನು, ಕಳ್ಳನನ್ನು ನಾವೇ ಸೃಷ್ಟಿಸಿದ್ದೇವೆ.ನಾವೇ ಅವನಂತಾಗುವುದರಿಂದ ಶತ್ರುತ್ವ ಕೊನೆಗಾಣುವುದಿಲ್ಲ.ಶತ್ರುತ್ವದ ಕಾರಣವನ್ನು ಅರ್ಥಮಾಡಿಕೊಂಡು ನಮ್ಮ ಆಲೋಚನೆ, ಭಾವನೆ ಮತ್ತು ಕ್ರಿಯೆಗಳ ಮೂಲಕ ಶತ್ರುತ್ವವನ್ನು ಪೋಷಿಸುವುದನ್ನು ಬಿಡಬೇಕು.ಇದು ಕಠಿಣವಾದ ಕೆಲಸ.ಸತತವಾದ ಸ್ವ-ಎಚ್ಚರ,ವಿವೇಕ ಬೇಕು.ಏಕೆಂದರೆ ನಾವು ಏನೋ ನಮ್ಮ ಸಮಾಜವು,ರಾಜ್ಯವೂ ಅದೇ.ಶತ್ರು ಅಥವಾ ಮಿತ್ರ ಎಂಬುದು ನಮ್ಮ ಆಲೋಚನೆ ಮತ್ತು ಕ್ರಿಯೆಗಳ ಫಲಿತಾಂಶ. ಶತ್ರುತ್ವ ಸೃಷ್ಟಿಯಾಗಲು ನಾವೇ ಜವಾಬ್ದಾರರು. ಶತ್ರು ಅಥಾವ ಮಿತ್ರನ ಬಗ್ಗೆ ಎಚ್ಚರದಿಂದಿರುವುದಕ್ಕಿಂತ ನಮ್ಮ ಆಲೋಚನೆ ಮತ್ತು ಕ್ರಿಯೆಗಳ ಬಗ್ಗೆ ಎಚ್ಚರದಿಂದಿರುವುದು ಮುಖ್ಯ. ಸರಿಯಾದ ಆಲೋಚನೆ ಈ ಭೇದಕ್ಕೆ ಕೊನೆಯನ್ನು ತರುತ್ತದೆ. ಪ್ರೀತಿಯು ಶತ್ರು ಮತ್ತು ಮಿತ್ರ ಇಬ್ಬರನ್ನೂ ಮೀರುತ್ತದೆ.
ಅಂದರೆ, ಜಗತ್ತು ಎಂಬುದು ನಮ್ಮ ವಿಸ್ತರಣೆ. ದ್ವೇಷವನ್ನು ನಾಶಮಾಡಲು ವ್ಯಕ್ತಿಯಾಗಿ ನಾನು ಬಯಸುವುದಾದರೆ ನಾನು ದ್ವೇಷಿಸುವುದನ್ನು ನಿಲ್ಲಿಸಬೇಕು. ಎಲ್ಲ ಬಗೆಯ ಸ್ಥೂಲ,ಸೂಕ್ಷ್ಮರೂಪಿ ದ್ವೇಷದಿಂದ ದೂರವಿರಬೇಕು.ದ್ವೇಷದಲ್ಲಿ ಸಿಲುಕಿಕೊಂಡರೆ ಅಜ್ಞಾನ ಮತ್ತು ಭಯ ತುಂಬಿದ ಜಗತ್ತಿನ ಭಾಗವಾಗಿಯೇ ಇರುತ್ತೀರಿ.ಜಗತ್ತು ನಿಮ್ಮ ವಿಸ್ತೃತ ರೂಪ,ವಿಸ್ತರಣೆ ಅಷ್ಟೇ. ನಮ್ಮನ್ನೇ ನಾವು ದ್ವಿಗುಣ, ಬಹುಗುಣಗೊಳಿಸಿಕೊಂಡೇ ಈ ಜಗತ್ತು ಆಗಿರುವುದು.ವ್ಯಕ್ತಿಯಿಂದ ಪ್ರತ್ಯೇಕವಾದ ಜಗತ್ತಿಲ್ಲ.ಜಗತ್ತು ಒಂದು ಐಡಿಯಾ ಆಗಿ,ರಾಜ್ಯವಾಗಿ, ಸಾಮಾಜಿಕ ಸಂಘಟನೆಯಾಗಿ ಇರಬಹುದು. ಆದರೆ ಆ ಐಡಿಯಾವನ್ನು ಕಾರ್ಯಗತಗೊಳಿಸಲು ಧಾರ್ಮಿಕ ಅಥವಾ ಸಾಮಾಜಿಕ ವ್ಯಕ್ತಿ ಇರಲೇಬೇಕು. ವ್ಯಕ್ತಿಯ ಅಜ್ಞಾನ, ಭಯ,ದುರಾಸೆಗಳು ಜಗತ್ತಿನ ಅಜ್ಞಾನ ,ದುರಾಸೆ,ಭಯ, ದ್ವೇಷಗಳ ರಚನೆಯನ್ನು ಉಳಿಸಿ ಪೋಷಿಸುತ್ತವೆ.ನೀವು ಪ್ರಾಮಾಣಿಕ, ಆಲೋಚನಾಪರ,ಎಚ್ಚರವಂತರಾದರೆ ಆಗ ನೋವು ಮತ್ತು ದುಃಖಗಳನ್ನು ಉಂಟು ಮಾಡುವ ವಿಕೃತ ಕಾರಣಗಳಿಂದ ನೀವು ದೂರವಾಗುವುದಷ್ಟೇ ಅಲ್ಲ,ನಿಮ್ಮ ಅರಿವಿನಲ್ಲಿ ಪೂರ್ಣತೆ ಮತ್ತು ಸ್ವಾಸ್ಥ್ಯ ಇರುತ್ತದೆ.
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ಭಂಡಾರಿವಾರ್ತೆ: ವೆಂಕಟೇಶ ಭಂಡಾರಿ, ಕುಂದಾಪುರ.