September 20, 2024

(ಧ್ಯಾನ_12)

‌‌‌‌       ನಾವೆಲ್ಲರೂ ಭಯಂಕರ ಒಂಟಿತನವನ್ನು ಅನುಭವಿಸಿದ್ದೇವೆ. ಪುಸ್ತಕ, ಧರ್ಮ ಏನೆಲ್ಲವನ್ನು ಒಳಗೆ ತುಂಬಿಕೊಂಡರೂ ನಮ್ಮ ಅಂತರಂಗ ಒಂಟಿಯಾದದ್ದು, ಖಾಲಿಯಾದದ್ದು. ನಮ್ಮಲ್ಲಿ ಆನೇಕರು ಈ ಒಂಟಿತನವನ್ನು ಎದುರಿಸಲಾರೆವು, ನಮ್ಮೊಳಗಿನ ಖಾಲಿತನದಿಂದ ಪಲಾಯನ ಮಾಡಲು ಬಯಸುತ್ತೇವೆ‌. ನಮಗೆ ಒಂಟಿಯಾಗಿರಲು ಸಾಧ್ಯವಿಲ್ಲ ಅದ್ದರಿಂದ ಯಾವುದಾದರೂ ಅವಲಂಬನೆ ಬೇಕೆಂದು ಬಯಸುತ್ತೇವೆ. ಕೇಳಲು ರೇಡಿಯೋ, ಅಥವಾ ಓದಲು ಪುಸ್ತಕ, ಮಾತು, ಆ ವಿಷಯಗಳ ಬಗ್ಗೆ ಸತತವಾದ ಹರಟೆ, ಕಲೆ ಸಂಸ್ಕೃತಿಗಳ ಚರ್ಚೆ ಹೀಗೆ ಏನೆನೋ ಅವಲಂಬನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಹೀಗೆ ನಮ್ಮಲ್ಲಿ ವಿಶಿಷ್ಠವಾದ ಆತ್ಮ ಪ್ರತೇಕತೆಯ ಭಾವ ಹುಟ್ಟಿವ ಸ್ಥಿತಿಗೆ ಹೋಗಿ ತಲುಪುತ್ತೇವೆ. ನಮಗೆ ಒಳ್ಳೆಯ ಕೆಲಸ ಇರಬಹುದು, ನಾವು ಮೈಮುರಿದು ದುಡಿಯಬಹುದು, ಪುಸ್ತಕಗಳನ್ನು ಬರೆಯಬಹುದು, ಆದರೂ ನಮ್ಮೊಳಗೆ ಖಾಲಿತನ ಒಂಟಿತನ ಇದ್ದೇ ಇರುತ್ತದೆ. ಈ ಖಾಲಿತನವನ್ನು ತುಂಬಿಕೊಳ್ಳುಲು ಬಯಸುತ್ತೇವೆ. ಅದಕ್ಕೆ ಅವಲಂಬನೆಯು ಒಂದು ದಾರಿ.ಅದಕ್ಕೇಂದೆ ಬೇರೆಯವರನ್ನು ಅವಲಂಬಿಸುತ್ತೇವೆ, ಬೇರೆಯವರನ್ನು ಬಳಸಿಕೊಳ್ಳುತ್ತೇವೆ. ಮನರಂಜನೆ, ಧರ್ಮ, ಕುಡಿತ, ಹೆಂಗಸರು, ಇಂಥ ಹಲವು ಸಂಗತಿಗಳನ್ನು ನಮ್ಮೊಳಗೆ ತುಂಬಿಕೊಂಡು ಒಳಗಿನ ಒಂಟಿತನಕ್ಕೆ ತೆರೆ ಎಳೆಯುತ್ತೇವೆ‌. ಈ ಏಕಾಂಗಿತನವನ್ನು ಬಚ್ಚಿಡುವ ಪ್ರಯತ್ನ ಎಷ್ಟು ವ್ಯರ್ಥವಾದದ್ದು, ಸಂಪೂರ್ಣ ವ್ಯರ್ಥವಾದದ್ದು ಎಂದು ತಿಳಿಯಬೇಕು. ಒಂಟಿತನವನ್ನು ಬಚ್ಚಿಡುವ ಪ್ರಯತ್ನ ಎಷ್ಟು ಅಸಂಗತ ಎಂದು ತಿಳಿದಾಗ ವಾಸ್ತವ ನಮಗೆ ಎದುರಾಗುತ್ತದೆ. ಏಕಾಂತವನ್ನು ಅನುಭವಿಸುವ ಪ್ರಯತ್ನ ಹೊಸ ಕ್ರಾಂತಿಯನ್ನುಂಟು ಮಾಡುತ್ತದೆ.

        ಏಕಾಂಗಿಯಾಗಿರುವುದು ಎಂದರೆ ಇಡೀ ಸಮಾಜ ವ್ಯವಸ್ಥೆಯ ವಿರುದ್ಧ ಬಂಡೇಳುವುದು ಎಂದರ್ಥ. ಇಲ್ಲಿ ಸಮಾಜವೆಂದರೆ ವ್ಯವಸ್ಥಿತ ಕ್ರೌರ್ಯ, ವ್ಯವಸ್ಥಿತ ಅಧಿಕಾರ ಇರುವ ಎಲ್ಲಾ ಬಗೆಯ ಸಮಾಜ ಎಂಬುದನ್ನು ಸೂಚಿಸುತ್ತದೆ. ಅದು ಕಮ್ಯುನಿಸ್ಟ್‌, ಫ್ಯಾಸಿಸ್ಟ್, ಬಂಡವಾಳಶಾಹಿ ಯಾವ ಸಮಾಜವಾದರೂ ಸರಿ. ಏಕಾಂಗಿಯಾಗಿರ ಬೇಕಾದರೆ ಅಧಿಕಾರದ ಸ್ವರೂಪವನ್ನು ಕುರಿತು ಅಸಾಧಾರಣವಾದ ಗ್ರಹಿಕೆ, ತಿಳುವಳಿಕೆ ಇರಬೇಕಾಗುತ್ತದೆ ‌ಅಲ್ಲಿ ಕವಾಯತು ಮಾಡುತ್ತಿರುವ ಸೈನಿಕರನ್ನು ಗಮನಿಸಿದ್ದೀರಾ? ಅವರು ಮನುಷ್ಯರೇ ಅಲ್ಲ, ಯಂತ್ರಗಳು. ನಿಂತಿರುವ ಅವರು ನಿಮ್ಮ ಮಕ್ಕಳು, ನಮ್ಮ ಮಕ್ಕಳು, ಇದು ಇಲ್ಲಿ, ಅಮೇರಿಕದಲ್ಲಿ, ಅಲ್ಲಿ ರಶಿಯಾದಲ್ಲಿ, ಎಲ್ಲೆಡೆಯೂ ನಡೆಯುತ್ತದೆ‌. ಸರ್ಕಾರ ಮತ್ತು ಸೈನ್ಯದ ಹಂತದಲ್ಲಿ ಮಾತ್ರವಲ್ಲ, ಮಠ ಮಾನ್ಯಗಳಲ್ಲೂ ನಡೆಯುತ್ತದೆ. ಈ ಮಠ, ಆ ಮಠ, ಎಲ್ಲಾ ವ್ಯವಸ್ಥಿತ ಗುಂಪುಗಳು ಅಪಾರ ಅಧಿಕಾರವನ್ನು ಚಲಾಯಿಸುತ್ತವೆ. ಯಾವ ಗುಂಪಿಗೂ ಸೇರದ ಮನಸ್ಸು ಮಾತ್ರ ಏಕಾಂಗಿಯಾಗಿರುತ್ತದೆ. ಈ ಏಕಾಂತವನ್ನು, ಏಕಾಂಗಿಯಾಗಿತನವನ್ನು ಅಭ್ಯಾಸದಿಂದ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನೀವು ಏಕಾಂಗಿಯಾಗಿದ್ದಾಗ ಯಾವ ಅಧ್ಯಕ್ಷನೂ, ಗವರ್ನರನೂ ನಿಮ್ಮನ್ನು ಭೋಜನಕ್ಕೆ ಕರೆಯುವುದಿಲ್ಲವಲ್ಲ. ಏಕಾಂಗಿತನದಿಂದ, ಏಕಾಂತದಿಂದ ವಿನಯ ಬರುತ್ತದೆ. ” ಏಕಾಂತಕ್ಕೆ ಪ್ರೀತಿ ಮಾತ್ರ ಗೊತ್ತು ” ಅಧಿಕಾರವಲ್ಲ. ಧಾರ್ಮಿಕ ಅಥವಾ ಲೌಕಿಕ ಆಸೆಗಳಿರುವ ಮನುಷ್ಯನಿಗೆ ಪ್ರೀತಿ ತಿಳಿದಿಲ್ಲ. ಇದನ್ನು ನಿಜವಾಗಿ ನೋಡಿ ತಿಳಿದಾಗ ಬದುಕಿಗೆ ಪೂರ್ಣತೆ ದೊರೆಯುತ್ತದೆ.

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
: ವೆಂಕಟೇಶ ಭಂಡಾರಿ, ಕುಂದಾಪುರ

Leave a Reply

Your email address will not be published. Required fields are marked *