January 18, 2025
jiddu

ಧ್ಯಾನ – 10
ನಿಮ್ಮ ಧರ್ಮ, ದೇವರು ಎಲ್ಲವೂ ಸತ್ಯದಿಂದ ತಪ್ಪಿಸಿಕೊಳ್ಳಲೆಂದೇ ಇರುವ ಮಾರ್ಗಗಳು. ಧರ್ಮವೆಂಬುದು ಇಲ್ಲ. ಕ್ರೌರ್ಯದಿಂದ, ಅಪ್ರಾಮಾಣಿಕತೆಯಿಂದ, ತಂತ್ರಗಾರಿಕೆಯಿಂದ, ಶೋಷಣೆಯಿಂದ ಹಣವನ್ನು ಮಾಡಿಕೊಳ್ಳುವ ಶ್ರೀಮಂತ ದೇವರನ್ನು ನಂಬುತ್ತಾನೆ. ನೀವೂ ದೇವರನ್ನು ನಂಬುತ್ತೀರಿ. ನಿಮ್ಮಲ್ಲೂ ತಂತ್ರಗಾರಿಕೆ, ಕ್ರೌರ್ಯ, ಅಸೂಯೆಗಳಿವೆ. ಅಪ್ರಾಮಾಣಿಕತೆಯಿಂದ,ಮೋಸದಿಂದ, ಮನಸ್ಸಿನ ಕುತಂತ್ರಗಳಿಂದ ದೇವರನ್ನು ಕಾಣಲು ಸಾಧ್ಯವೇ ? ಎಲ್ಲಾ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ,ದೇವರ ಕುರುಹುಗಳನ್ನು ಕೂಡಿಟ್ಟುಕೊಳ್ಳುವುದರಿಂದ ನೀವು ಧಾರ್ಮಿಕ ವ್ಯಕ್ತಿಗಳಾಗುವುದು ಸಾಧ್ಯವೇ?  ಧರ್ಮವೆಂದರೆ ಸತ್ಯದಿಂದ ಮಾಡುವ ಪಲಾಯನವಲ್ಲ. ನಿಮ್ಮ  ದಿನನಿತ್ಯದ ಸಂಬಂಧಗಳಲ್ಲಿ ಹೇಗೆ ವರ್ತಿಸುತ್ತೀರಿ, ಹೇಗೆ ಮಾತನಾಡುತ್ತೀರಿ, ನಿಮ್ಮ ಸೇವಕರನ್ನು ಹೇಗೆ ಕಾಣುತ್ತೀರಿ, ದಿನನಿತ್ಯದ ನಿಮ್ಮ ಬದುಕಿನಲ್ಲಿ ನೀವು ಹೇಗೆ ಇರುತ್ತೀರಿ ಎಂಬ ಸತ್ಯವನ್ನು ಅರಿತುವುದೇ “ಧರ್ಮ”. ನಿಮ್ಮ ನೆರೆಯವರೊಡನೆ, ಹೆಂಡತಿ ಮಕ್ಕಳೊಡನೆ ಹೇಗೆ ಇದ್ದೀರಿ ಎಂದು ನಿಮ್ಮ ಸಂಬಂಧಗಳ ಸ್ವರೂಪವನ್ನು ಅರಿಯದಿದ್ದರೆ ನಿಮ್ಮ ಮನಸ್ಸಿನಲ್ಲಿ ಗೊಂದಲ ಇರುತ್ತದೆ‌. ಗೊಂದಲ ತುಂಬಿದ ಮನಸ್ಸು ತನ್ನ ಎಲ್ಲ ಕೆಲಸಗಳಲ್ಲೂ ಮತ್ತೂ ಅಷ್ಟು ಗೊಂದಲ ,ಸಮಸ್ಯೆ, ಸಂಘರ್ಷಗಳನ್ನಷ್ಟೇ ಹುಟ್ಟಿಸಬಲ್ಲದು. ವಾಸ್ತವದಿಂದ ಪಲಾಯನ ಮಾಡುವ ಮನಸ್ಸು, ಸಂಬಂಧಗಳ ಸತ್ಯವನ್ನು ಕಾಣಲಾರದ ಮನಸ್ಸು, ದೇವರನ್ನು ಎಂದೂ ಕಾಣಲಾರದು‌ . ನಂಬಿಕೆಯ ತಳಮಳಕ್ಕೆ ಸಿಕ್ಕಿ ತೊಳಲುವ ಮನಸ್ಸು ಸತ್ಯವನ್ನು ಕಾಣಲಾರದು . ಆಸ್ತಿ, ಐಡಿಯಾ, ಜನ ಇವೆಲ್ಲವುಗಳೊಡನೆ ಇರುವ ಸಂಬಂಧವನ್ನು ಅರಿಯಬಲ್ಲ ಮನಸ್ಸು ಮಾತ್ರ ಸಂಬಂದಗಳಿಂದ ಹುಟ್ಟುವ ಸಮಸ್ಯೆಗಳಿಂದ ನರಳುವುದಿಲ್ಲ. ಸಮಸ್ಯೆಗಳಿಂದ ಹಿಂಜರಿಯುವುದು ಪರಿಹಾರ ದೊರೆಯುವುದಿಲ್ಲ.ಕೇವಲ ಪ್ರೀತಿ ಮತ್ತು ಅರಿವಿನಿಂದ ಮಾತ್ರ ಪರಿಹಾರ ದೊರೆಯುತ್ತದೆ ಎಂದು ಅಂಥ ಮನಸ್ಸಿಗೆ ಗೊತ್ತಿರುತ್ತದೆ. ಅಂಥ ಮನಸ್ಸು ಮಾತ್ರ ಸತ್ಯವನ್ನು ಕಾಣಬಲ್ಲದು‌.
ಬದುಕು ವಿಚಾರವಾಗಿದೆ, ನೋವಿನಿಂದ ತುಂಬಿದೆ,ದುಃಖಮಯವಾಗಿದೆ ಎಂದು ನಮಗೆ ಗೊತ್ತು . ಇದೆಲ್ಲ ಏಕೆ ಹೀಗೆ ಎಂದು ವಿವರಿಸಿಕೊಳ್ಳುವುದಕ್ಕೆ ಒಂದು ಸಿದ್ದಾಂತ ,ಊಹೆ,ತತ್ವ ಏನಾದರೂ ಒಂದು ಸಿಕ್ಕರೆ ನಮಗೆ ಸಮಾಧಾನ ಎನ್ನಿಸುತ್ತದೆ. ಹಾಗಾಗಿ ನಾವು ವಿವರಣೆಯ ಪದಗಳಲ್ಲಿ ,ಊಹೆ,ಸಿದ್ದಾಂತ, ತತ್ವಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಕ್ರಮೇಣ ನಂಬಿಕೆಗಳು ಆಳವಾಗಿ ಬೇರು ಬಿಟ್ಟುಕೊಳ್ಳುತ್ತವೆ. ಏಕೆಂದರೆ ನಂಬಿಕೆಗಳ ಹಿಂದೆ, ತತ್ವ,ಸಿದ್ದಾಂತಗಳ ಹಿಂದೆ, ಅಪರಿಚಿತವಾದದ್ದರ ಬಗೆಗಿನ ಭಯವಿದೆ.ನಾವು ಆ ಭಯವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದೆ ಮುಖ ತಿರುಗಿಸಿಕೊಳ್ಳತ್ತೇವೆ.ನಂಬಿಕೆಗಳು ಗಟ್ಟಿಯಾದಷ್ಟೂ ಸಿದ್ದಾಂತಗಳೂ ಗಟ್ಟಿಯಾಗುತ್ತವೆ. ಕ್ರಿಶ್ಚಿಯನ್, ಹಿಂದೂ,ಬೌದ್ಧ, ನಂಬಿಕೆಗಳನ್ನು ಪರಿಶೀಲಿಸಿದಾಗ ಅವು ಜನರನ್ನು ಬೇರೆ ಬೇರೆ ಮಾಡುತ್ತವೆ ಎಂದು ತಿಳಿಯುತ್ತದೆ.ಒಂದೊಂದು ಸಿದ್ಧಾಂತದ ಹಿಂದೆಯೂ,ಒಂದೊಂದು ನಂಬಿಕೆಯ ಹಿಂದೆಯೂ ಆಚರಣೆಗಳ ಒಂದು ಸರಣಿಯೇ ಇರುತ್ತದೆ. ಮನುಷ್ಯರನ್ನು ಒಗ್ಗೂಡಿಸುವ ಮತ್ತು ಬೇರ್ಪಡಿಸುವ ಒತ್ತಾಯಗಳಿರುತ್ತವೆ. ಸತ್ಯವಾದದ್ದು ಏನು ಎಂದು ಹುಡುಕಲು ಹೊರಟು, ನೋವು,ನರಳಾಟ, ಹೋರಾಟಗಳು ಅರ್ಥವೇನು ಎಂದು ತಿಳಿಯಲು ಹೊರಟು ನಂಬಿಕೆ, ಆಚರಣೆ, ಸಿದ್ಧಾಂತಗಳಲ್ಲಿ ಸಿಕ್ಕಿಬೀಳುತ್ತೇವೆ.
ನಂಬಿಕೆ ಭ್ರಷ್ಟವಾದದ್ದು. ಏಕೆಂದರೆ ನಂಬಿಕೆ ಮತ್ತು ನೀತಿಯ ಹಿನ್ನೆಲೆಯಲ್ಲಿ ನಾನು ಎಂಬುದು ಸದಾ ಬೆಳೆಯುತ್ತಲೇ ಇರುವ,ಪ್ರಬಲವಾಗುತ್ತಿರುವ ನಾನು ಇರುತ್ತದೆ‌ ‌. ದೇವರನ್ನು ನಂಬುವುದು,ಮತ್ತೇನನ್ನೋ ನಂಬುವುದು ಎಂದರೆ ಧರ್ಮ ಎಂದು ಪರಿಗಣಿಸುತ್ತೇವೆ.ನಂಬಿಕೆ ಇಲ್ಲದವರನ್ನು ನಾಸ್ತಿಕರೆಂದು ಕರೆದು ಸಮಾಜ ತಿರಸ್ಕಾರ ತೋರುತ್ತದೆ.ಒಂದು ಸಮಾಜ ದೇವರನ್ನು ನಂಬುವವರನ್ನು ತಿರಸ್ಕರಿಸಿದರೆ,ಇನ್ನೊಂದು ಸಮಾಜ ದೇವರನ್ನು ನಂಬದೆ ಇರುವವರನ್ನು ತಿರಸ್ಕರಿಸುತ್ತದೆ. ನಿಜವಾಗಿ ಎರಡೂ ಸಮಾಜಗಳು ಒಂದೇ. ಧರ್ಮ ನಂಬಿಕೆಯ ವಿಚಾರವಾಗುತ್ತದೆ.ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಯ ಪ್ರಭಾವಕ್ಕೆ ಸಿಕ್ಕ ಮನಸ್ಸು ಸ್ವತಂತ್ರವಾಗಿರಲು ಸಾಧ್ಯವಿಲ್ಲ. ನಂಬಿಕೆಯ ಮೂಲಕವಾಗಿ ಅಲ್ಲ, ಸ್ವಾತಂತ್ರ್ಯವಿದ್ದಾಗ ಮಾತ್ರ ಸತ್ಯವೆಂದರೇನು,ದೇವರು ಯಾರು ಎಂದು ಕಾಣಲು ಸಾಧ್ಯ. ಏಕೆಂದರೆ ನೀವು ಏನನ್ನೂ ನಂಬಿದ್ದೀರೋ ಅದನ್ನೇ, ಏನನ್ನೂ ಆಲೋಚಿಸುತ್ತೀರೋ ಅದನ್ನೇ ದೇವರೆಂದು, ಸತ್ಯವೆಂದು ಬಿಂಬಿಸುತ್ತಿರುತ್ತದೆ. ಅದನ್ನೇ ನೀವು ಸತ್ಯವೆಂದಕೊಳ್ಳುತ್ತೀರಿ. ಸತ್ಯ ನಂಬಿಕೆಗಳಾಚೆಗೆ…..

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ವೆಂಕಟೇಶ ಭಂಡಾರಿ ಕುಂದಾಪುರ

Leave a Reply

Your email address will not be published. Required fields are marked *