January 18, 2025
zï

ಜ್ಯೋತಿಷ್ಯ ಶಾಸ್ತ್ರಕ್ಕೂ ವಾಸ್ತು ಶಾಸ್ತ್ರಕ್ಕೂ ಇರುವ ಸಂಬಂಧವಾದರೂ ಏನು..?


                   ಜನನದಿಂದ ಮರಣದ ಮಧ್ಯ ಇರುವ ಕಾಲವೇ ಜೀವನ. “ಪೂರ್ವಜನ್ಮ ಕೃತ ಪಾಪಂ ವ್ಯಾಧಿ ರೂಪೇಣ ಪೀಡತೆ” ಇದರರ್ಥ ಹಿಂದಿನ ಜನ್ಮದ ಪಾಪ ಪುಣ್ಯಗಳನ್ನು ಅನುಸರಿಸಿ ಈ ಜನ್ಮದಲ್ಲಿ ಶುಭ ಅಶುಭ ಫಲಗಳನ್ನು ಪಡೆಯುತ್ತೇವೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಂಬಿದರೂ ಸರಿಯೇ ನಂಬದಿದ್ದರೂ ಸರಿ ಕಾಲಕ್ಕೆ ತಕ್ಕಂತೆ/ಕರ್ಮಕ್ಕೆ ತಕ್ಕಂತೆ ಮಾನವನಿಗೆ ಇಹಭೋಗದ ಸುಖ ದುಃಖಗಳು ಪ್ರಾಪ್ತಿಯಾಗುತ್ತದೆ. ಈ ಜೀವನದಲ್ಲಿ ಸಿಗುವ ಪ್ರಾಪ್ತಿಯನ್ನು ತಿಳಿಸುವ ಸಾರವೇ ಜ್ಯೋತಿಷ್ಯ.

ಜಾತಕದಲ್ಲಿನ ಗ್ರಹಗಳ ಸ್ಥಿತಿಗತಿಗೆ ಅನುಸಾರವಾಗಿ ಮಾನವನ ಗುಣ, ಸ್ವಭಾವ, ನಡತೆ ಹೇಗೆ ಹಂಚಿ ಹೋಗಿದೆಯೋ ಹಾಗೆ ವಾಸ್ತುವಿನಲ್ಲಿಯೂ ಸಹ ದಿಕ್ಕುಗಳು ಇದರ ಅಧಿಪತ್ಯವನ್ನು ನಡೆಸುವ ಗ್ರಹಗಳು ಜಾತಕದಲ್ಲಿ ಬೀರುವ ಪ್ರಭಾವವನ್ನೇ ಪ್ರತಿಬಿಂಬಿಸುತ್ತದೆ. ಜಾತಕದಲ್ಲಿ ಕೇಂದ್ರ ಸ್ಥಾನದಲ್ಲಿ ನೀಡುವ ಪ್ರಾಮುಖ್ಯತೆಯನ್ನು ವಾಸ್ತುವಿನಲ್ಲೂ ಸಹ ನೀಡಬೇಕಾಗುತ್ತದೆ.

ಜಗತ್ತಿನ ಸಮಸ್ತ ಚರಾಚರ ವಸ್ತುಗಳೂ ಗ್ರಹಾಧೀನವೂ, ಗ್ರಹಗಳ ಮೂಲಕ ಕಾಲಜ್ಞಾನವೂ, ಗ್ರಹಗಳಿಂದಲೇ ಜೀವರಾಶಿಗಳ ಕರ್ಮಫಲವೂ, ಗ್ರಹಾನುಸಾರವಾಗಿಯೇ ಜಗತ್ತಿನ ಸಮಸ್ತ ಚರಾಚರ ವಸ್ತುಗಳ ಸೃಷ್ಟಿ ಸ್ಥಿತಿ ಲಯಗಳೂ ಪೂರ್ವ ಜನ್ಮದಲ್ಲಿನ ಶುಭಾಶುಭ ಫಲಗಳು ಸೂಚನೆಯೂ ಗ್ರಹಗಳಿಂದಲೇ ಉಂಟಾಗುವುದರಿಂದ ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಾದಿ ನವಗ್ರಹಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ.

ಭೂಚಕ್ರದ 360 ಡಿಗ್ರಿಯನ್ನು 30 ಡಿಗ್ರಿಗೆ 1 ರಾಶಿಯನ್ನು ಮಾಡಿ ವಿಂಗಡನೆ ಮಾಡಿ 12 ರಾಶಿಗಳನ್ನು ಮಾಡಿದ್ದಾರೆ. ಪ್ರತಿ ರಾಶಿಗೂ 3 ಗುಣಗಳಾದ ಸತ್ವ, ರಜ, ತಮ ಗುಣಗಳು ಇವೆ. ಇದರಲ್ಲಿ ಈಶ್ವರಿ ಗುಣಧರ್ಮ ಅಸಾಮಾನ್ಯವಾದದ್ದು. ಪ್ರಪಂಚ ರಾಕ್ಷಸಮಯ. ಇದು ನಮ್ಮ ಕೈಗೆ ಸಿಗುವುದಿಲ್ಲ. ಲೋಕದಲ್ಲಿ ಈಶ್ವರೀಯ ಗುಣಧರ್ಮವನ್ನು ಬಿಟ್ಟು, ಅಸುರೀ, ದೈವಿ, ಮಾನವೀ ಮತ್ತು ಪೈಶಾಚಿಕ ಸ್ವಭಾವದ ಗುಣಧರ್ಮವರನ್ನು ಯಥಾ ಕ್ರಮವಾಗಿ ಬಹಳಷ್ಟು ಕಾಣಬಹುದು. ಆದರೆ ಈಶ್ವರಿ ಗುಣಧರ್ಮ ಯಾವುದೆಂಬುದನ್ನು ಗೀತೆಯಲ್ಲಿ ಇದೆ.

ಜ್ಯೋತಿಷ್ಯ ಶಾಸ್ತ್ರ ಪಡೆದರೆ ಗ್ರಹಗಳ ಪ್ರಭಾವವನ್ನು, ಈ ಸೃಷ್ಟಿಯ ರಹಸ್ಯವನ್ನು ತಿಳಿಯಬಹುದು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದರೆ ತಪ್ಪಾಗಲಾರದು. ಕಾರಣ ಭೂಚಕ್ರದ 360 ಡಿಗ್ರಿಯನ್ನು ಹೇಗೆ 30 ಡಿಗ್ರಿಗಳಿಗೆ 1 ರಾಶಿಯಂತೆ 12 ರಾಶಿಗಳಾಗಿ ಮಾಡಿದ್ದಾರೆಯೊ, ಹಾಗೆಯೇ 45 ಡಿಗ್ರಿಗಳಿಗೆ ಒಂದು ದಿಕ್ಕು ಎಂದು ವಿಂಗಡನೆ ಮಾಡಿದ್ದಾರೆ. ಅದರಂತೆ ಅವಲೋಕನ ಮಾಡಿದಾಗ 45 × 8 ದಿಕ್ಕು 360 ಡಿಗ್ರಿ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾಲ ಪುರುಷನ ಅಂಗ ರಾಶಿಗಳು 12 × 30 =360. ಆದರೆ ವಾಸ್ತುವಿನಲ್ಲಿ ಅಥವಾ ದಿಕ್ಕುಗಳಲ್ಲಿ ವಾಸ್ತು ಪುರುಷನಿಗೆ 8 ದಿಕ್ಕುಗಳನ್ನು ಹೋಲಿಸಬಹುದು. ಈ ಅಷ್ಟ ದಿಕ್ಕುಗಳೇ 8×45=360 . ಅಷ್ಟ ದಿಕ್ಕುಗಳನ್ನು ಪಾಲಿಸುವವರೇ ಅಷ್ಟದಿಕ್ಪಾಲಕರು. ಇವರ ಅನುಗ್ರಹ ಪಡೆಯುವುದೇ ವಾಸ್ತು ಸಿದ್ಧಾಂತ.

ಮಾನವನ ಬದುಕಿನ ಕನ್ನಡಿ ಎಂದರೆ ಅದು ಜ್ಯೋತಿಷ್ಯ ಅಥವಾ ವಾಸ್ತು ಶಾಸ್ತ್ರ. ಹಾಗಾಗಿ ವಾಸ್ತು ಶಾಸ್ತ್ರಕ್ಕೂ ಜ್ಯೋತಿಷ್ಯ ಶಾಸ್ತ್ರಕ್ಕೂ ಒಂದಕ್ಕೊಂದು ಸಂಬಂಧವಿದೆ. ಈ ಸಂಬಂಧವನ್ನು ವಿವರವಾಗಿ ತಿಳಿದುಕೊಂಡಾಗ ಮಾತ್ರ ಇದರ ಮೌಲ್ಯ ತಿಳಿಯುವುದು..

ಎಲ್ಲರಿಗೂ ಶುಭವಾಗಲಿ…

✍🏻 ಎಸ್ ಕೆ ಬಂಗಾಡಿ.

 

 

Leave a Reply

Your email address will not be published. Required fields are marked *