
ಕಾರ್ಮೋಡ ಕರಗಿ ಧೋ…. ಎಂದು ಒಂದೇ ಸಮನೆ ಮಳೆ ಸುರಿಯುತ್ತಿತ್ತು. ಮಳೆ ಕಡಿಮೆಯಾಗುವ ತನಕ ನಿಂತರೆ ಆಗದು ಎನ್ನುತ್ತಾ ಬಿರುಸಾಗಿ ಹೆಜ್ಜೆ ಇಡುತ್ತಾ ಹೊರಟಳು ಸುಮಾ. ಬಸ್ ಗಾಗಿ ಕಾಯುವ ವ್ಯವಧಾನವೂ ಆಕೆಯಲ್ಲಿರಲಿಲ್ಲ. ಹೇಗಾದರೂ ಮಾಡಿ ಮನೆ ಸೇರಬೇಕೆಂದು ಕಾಲ್ನಡಿಗೆಯಲ್ಲಿ ಹೊರಟೇ ಬಿಟ್ಟಳು. ತಲೆಯಲ್ಲಿ ನೂರಾರು ಯೋಚನೆಗಳು ಒಂದೊಂದಾಗಿ ಆಕೆಯನ್ನು ಕಾಡಿದವು. ಅಷ್ಟಕ್ಕೂ ಆಕೆಯನ್ನು ಕಂಗೆಡಿಸಿದ್ದು ಆ ಪೋನ್ ಕಾಲ್.
ಹೌದು , ತಂದೆ ತೀರಿ ಹೋದ ನಂತರ ಮನೆಯ ಜವಾಬ್ದಾರಿ ಎಲ್ಲಾ ಹಿರಿಮಗಳಾದ ಸುಮಾಳ ಹೆಗಲ ಮೇಲೆ ಬಿತ್ತು. ತಂದೆಯ ಸಾವಿನ ನಂತರ ತಾಯಿ ಅಶಕ್ತರಾಗಿದ್ದರು. ಹೀಗಾಗಿ ಸುಮಾನನ್ನೇ ಅವಲಂಬಿಸಿತ್ತು ಈ ಕುಟುಂಬ. ಅದರ ಜೊತೆಗೆ ತಮ್ಮ ಹಾಗೂ ತಂಗಿಯ ವಿದ್ಯಾಭ್ಯಾಸ ದ ಹೊಣೆ ಕೂಡ ಆಕೆಯ ಮೇಲಿತ್ತು. ಅಪ್ಪನಿರುವಾಗ ಇದ್ಯಾವುದರ ಅರಿವೇ ಆಗಿರಲಿಲ್ಲ ಅವಳಿಗೆ. ಅಪ್ಪ ಅದೇಗೆ ಸಂಸಾರದ ಜವಾಬ್ದಾರಿ ಯನ್ನು ಹೊತ್ತಿದ್ದರು ಎಂಬುದು ಮಾತ್ರ ಪ್ರಶ್ನೆ ಯಾಗಿ ಉಳಿದಿತ್ತು.
ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಸುಮಾ ಬಹುಶಃ ನೆಮ್ಮದಿಯಿಂದ ಇರಬಹುದಿತ್ತೇನು. ಆದರೆ ವಿಧಿ ಬೇರೆನೇ ಬಗೆದಿತ್ತು. ಅಷ್ಟು ಕಷ್ಟ ಪಟ್ಟು ತಮ್ಮ ಮತ್ತು ತಂಗಿಯನ್ನು ಮುದ್ದಿನಿಂದ ಸಾಕಿ ಬೆಳೆಸಿ ವಿದ್ಯಾವಂತರನ್ನಾಗಿ ಮಾಡಲು ಯತ್ನಿಸಿದ ಪರಿಣಾಮವನ್ನು ಆಕೆ ಎದುರಿಸಿದ್ದಳು. ಅಂದೆ ಆಕೆಯ ಕನಸುಗಳೆಲ್ಲಾ ನುಚ್ಚುನೂರಾಗಿತ್ತು. ಹುಚ್ಚಿಯಂತೆ ಓಡೋಗಿ ಬಿಡಬೇಕು ಅನ್ನುವಷ್ಟು ಅಸಹನೆ ಅವಳನ್ನು ಕಾಡಿತು. ತಮ್ಮ ಗಾಂಜಾ ದಂಧೆಯಲ್ಲಿ ತೊಡಗಿದ್ದ. ಇನ್ನು ತಂಗಿ ಫ್ಯಾಷನ್ ಎಂಬ ಲೋಕಕ್ಕೆ ಆಕರ್ಷಿತಳಾಗಿ ಸ್ನೇಹಿತೆಯೊಂದಿಗೆ ಅಡ್ಡ ದಾರಿ ಹಿಡಿದಿದ್ದಳು. ಅದೇಗೊ ಬಹಳ ಶ್ರಮ ಪಟ್ಟು ಕಾಡಿ ಬೇಡಿ ಅವರನ್ನು ಮನೆಗೆ ತರೆ ತಂದಿದ್ದಳು. ಅವರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡುವ ತನಕ ಈಕೆಗೆ ನೆಮ್ಮದಿ ಇರಲಿಲ್ಲ. ಅದಕ್ಕಾಗಿ ಮದುವೆಯನ್ನು ತಿರಸ್ಕರಿಸಿದ್ದಳು.
ಇಷ್ಟು ಹೊತ್ತಿಗೆ ಅವಳ ಜೀವನದಲ್ಲಿ ಬಂದವನೇ ಪವನ್. ಪವನ್ ಮತ್ತು ಸುಮಾ ಒಂದೇ ಕಛೇರಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳು ಅದಕ್ಕಿಂತಲೂ ಮಿಗಿಲಾಗಿ ಆತ ಆಕೆಯನ್ನು ಪ್ರೀತಿಸುತ್ತಿದ್ದ. ಈ ವಿಷಯ ತಿಳಿಯದಷ್ಟು ದಡ್ಡಿಯಲ್ಲ ಸುಮಾ. ಆದರೆ ಸಂಸಾರದ ಬಂಡಿಯಲ್ಲಿ ಆಕೆ ಹೈರಾಣಾಗಿ ಹೋಗಿದ್ದಳು. ಪ್ರೀತಿಗೆ ಒಪ್ಪಿಗೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಪವನ್ ತನ್ನ ಮನೆಯ ಜೊತೆಗೆ ಸುಮಾಳ ಮನೆಯವರನ್ನು ನೋಡಿಕೊಳ್ಳುವಷ್ಟು ಅನುಕೂಲವಂತನು ಅಲ್ಲ. ಹಾಗಾಗಿ ಆತನಿಗೆ ಒಪ್ಪಿಗೆ ನೀಡಲೋ ಬೇಡವೋ ಎಂದು ಯೋಚಿಸುತ್ತಲೇ ಮನೆ ತಲುಪಿದ್ದಳು. ಅವಳ ಆ ವೇಗದ ನಡಿಗೆಗೆ ಕಾರಣ ತಾಯಿ ಕಾಲು ಜಾರಿ ಬಿದ್ದು ಏಟಾಗಿದೆ ಅಂತ ತಮ್ಮ ಕಾಲ್ ಮಾಡಿ ಅಕ್ಕನನ್ನು ಕರೆಸಿಕೊಂಡಿದ್ದ.
ಅದೇ ಸಮಯಕ್ಕೆ ಮದುವೆ ಬ್ರೋಕರ್ ಒಂದು ಸಂಬಂಧ ತಂದಿದ್ದರು. ಹುಡುಗ ತುಂಬಾ ಶ್ರೀಮಂತ ಎರಡನೇ ಸಂಬಂಧ ವರದಕ್ಷಿಣೆ ಏನು ಬೇಡ ನಿಮ್ಮ ಹುಡುಗಿ ಹಾಗೂ ನಿಮ್ಮ ಸಂಸಾರದ ಜವಾಬ್ದಾರಿ ಅವನು ಹೊರುವ ಆಶ್ವಾಸನೆ ನೀಡಿದ್ದರು. ತನ್ನ ಸಂತೋಷಕ್ಕಿಂತಲೂ ಮನೆಯವರ ಖುಷಿಯನ್ನು ಬಯಸಿದ್ದ ಸುಮಾ , ಮದುವೆಗೆ ಒಪ್ಪಿಗೆ ನೀಡಿದಳು. ಅವಳ ಹಾಗೂ ಅವನ ವಯಸ್ಸಿನ ನಡುವೆ ಸುಮಾರು 20-25 ವರುಷಗಳ ಅಂತರವಿದ್ದರೂ ತನ್ನ ಮನೆಯವರನ್ನು ನೋಡಿಕೊಳ್ಳುತ್ತಾನಲ್ಲ ಎಂಬ ಹೆಮ್ಮೆ ಸುಮಾಳಿಗೆ ಇತ್ತು. ಆದರೆ ಮದುವೆಯ ಬಳಿಕ ಆತ ತನ್ನ ಜವಾಬ್ದಾರಿ ಮರೆತಿದ್ದ. ಜವಾಬ್ದಾರಿಗಿಂತಲೂ ಸುಮಾಳನ್ನು ಗಿಣಿಯನ್ನು ಪಂಜರದೊಳಿಡುವಂತೆ ಮನೆಯಲ್ಲಿ ಬಂಧಿಯಾಗಿಸಿದ್ದ. ಆಕೆ ಅದೆಷ್ಟು ವರುಷಗಳಿಂದ ಪಟ್ಟ ಕಷ್ಟಗಳನ್ನು ದೂರ ಮಾಡುವ ಸಂಗಾತಿ ಸಿಕ್ಕನೆಂದು ನಿಟ್ಟುಸಿರು ಬಿಡುವಷ್ಟರಲ್ಲಿ, ಸುಮಾಳ ಆಸೆ -ಕನಸುಗಳ ಆಶಾ ಗೋಪುರವನ್ನು ಮದುವೆ ಎಂಬ ಬಂಧನದಿ ನುಚ್ಚು ನೂರು ಮಾಡಿದ್ದ ಆ ಶ್ರೀಮಂತ.
✍️:-ಸುಪ್ರೀತ ಭಂಡಾರಿ, ಸೂರಿಂಜೆ