January 18, 2025
3250660473_844bae17ac

ತ್ತೀಚಿನ ಸ್ವಾಮಿಗಳ ಹಲವು ನೋಡಲಾಗದ ಕಥೆಗಳನ್ನು ನೋಡಿದ ನಂತರ, ಸ್ವಾಮಿ ಎಂದರೆ ಯಾರು?.. ಕಾವಿ ತೊಟ್ಟವರೆಲ್ಲಾ ಸ್ವಾಮೀಜಿಗಳಾಗಿ ಗೌರವಾದರಗಳಿಗೆ ಅರ್ಹರೋ?.. ಎಂಬುದೊಂದು ಪ್ರಶ್ನೆ ಕಾಡದಿರದು. ಸ್ವಾಮೀಜಿಗಳೆಂದರೆ ಹೀಗೆಯೇ ಬದುಕಬೇಕೆಂಬ ನಿಯಮವಿದೆ, ಸರ್ವಸಂಗ ಪರಿತ್ಯಾಗಿಗಳಾಗಿ ಸನ್ಯಾಸ ಜೀವನ ಅನುಸರಿಸಬೇಕೆಂಬುದು ಪ್ರತಿಯೊಬ್ಬ ಸ್ವಾಮಿ ಭಕ್ತನೂ ತಿಳಿದಿರುವ ಸಂಗತಿಯಾಗಿದೆ. ಬಹುಶಃ ಇದೇ ಕಾರಣಕ್ಕಾಗಿ ದೇವರಲ್ಲದ ಅವರನ್ನು ದೇವರಂತೆ ಭಕ್ತರು ಪೂಜಿಸಿಸುವ ಪರಿಪಾಠ ಬೆಳೆದುಬಂದಿರಬಹುದು. ಯಾಕೆಂದರೆ ಭವಬಂಧನಗಳನ್ನು ಕಳಚಿ, ಲೌಕಿಕ ಆಸಕ್ತಿಯನ್ನೂ ತ್ಯಜಿಸಿ ಅಲೌಕಿಕತೆಯತ್ತ ಮುಖ ಮಾಡುವುದು ಸುಲಭಸಾಧ್ಯವಾದ ಮಾತಲ್ಲ, ಅದಕ್ಕೆಂದೇ ಕಠಿಣ ಪರಿಶ್ರಮ ಬೇಕು. ಮನುಷ್ಯನ ಅರಿಷಡ್ವರ್ಗಗಳೆಂದು ಕರೆಯುವ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರಗಳನ್ನು ಮನುಷ್ಯ ಮೀರಿ ನಿಲ್ಲಬೇಕೆಂದರೆ ಆತನಲ್ಲಿ ದೈವಿಕ ಗುಣಗಳು ಅಡಕವಾಗಿರಲೇ ಬೇಕು ಹೀಗಿದ್ದಾಗ ಮಾತ್ರ ಆತನೊಬ್ಬ ಪರಿಪೂರ್ಣ ಸನ್ಯಾಸಿಯಾಗಿ ದೇವರಲ್ಲದೆ ಹೋದರೂ ದೇವರಂತೆ ಪೂಜಿಸಲ್ಪಡುವುದು.

ಆದರೆ ಇಂದಿನ ಸನ್ಯಾಸ ಸ್ವೀಕರಿಸಿದ ಸ್ವಾಮೀಜಿ, ಸ್ವಯಂಘೋಷಿತ ದೇವಮಾನವರೆಂದು ಕರೆಯಲ್ಪಡುವವರ ಲೀಲೆಗಳನ್ನು ಮಾಧ್ಯಮಗಳಲ್ಲಿ ನೋಡುವಾಗ ಭಕ್ತಿಭಾವ ಮೂಡುವ ಬದಲಿಗೆ ರಕ್ತ ಕುದಿಯತೊಡಗುತ್ತದೆ. ಅರಿಷಡ್ವರ್ಗಗಳು ಉಳಿದ ವ್ಯಕ್ತಿಗಳಿಗಿಂತ ಹೆಚ್ಚಾಗಿ ಇವರಲ್ಲಿಯೇ ವ್ಯಕ್ತವಾಗುತ್ತಿರುವಾಗ ಇಂತಹವರನ್ನು ದೈವೀಕ ಪುರುಷರೆಂದು ಪೂಜಿಸುವ ಪ್ರತೀ ಮನಸ್ಸು ಮರಗುವಂತಾಗಿ ಮಲೀನತೆಯ ಭಾವ ಹೊಂದಿಬಿಡುತ್ತದೆ. ಕಾವಿಯೊಳಗಿನ ಕಾಮಿಯೊಬ್ಬ ಬಾಲೆಯರನ್ನೂ ಬಿಡದೇ ಇರುವಾಗ ಇಡೀ ಕಾವಿಕುಲವನ್ನೇ ಅನುಮಾನದ ದೃಷ್ಟಿಯಿಂದ ನೋಡಬೇಕಾಗಿದೆ. ಆಶೀರ್ವದಿಸುವ ಕೈಗಳು ಬಳಿ ಬಂದಾಗ ಮುಜುಗರದಿಂದಲೇ ಆಶೀರ್ವಾದ ಪಡೆಯುವ ಸ್ಥಿತಿ ಎದುರಾಗಿದೆ. ಕಾಮವನ್ನು ಮೆಟ್ಟಿ ನಿಲ್ಲಲಾರದ ಕಾವಿ ಆಸೆ ತೀರಿಸಿಕೊಳ್ಳಲು ಬಳಸಿಕೊಂಡಾಗ ಮುಂದೊಂದು ದಿನ ಆಕೆಯ ಸಂಪತ್ತಿನ ವ್ಯಾಮೋಹಕ್ಕೆ ಕಾವಿ ಬಲಿಯಾಗಲೇಬೇಕಾಗುತ್ತದೆ. ಇದಕ್ಕೆ ಈಗಾಗಲೇ ಹಲವು ಸ್ವಯಂಘೋಷಿತ ದೇವಮಾನವರು, ಕಾವಿ ತೊಟ್ಟವರ ನಿದರ್ಶನಗಳಿವೆ. ಕಾಮ ಬಿಡದ ಅವನ ಕಾವಿ ತೊಡಲು ಬಿಟ್ಟಿರುವುದು ಜನಗಳ ತಪ್ಪೇ ವಿನಃ ಕಾವಿತೊಟ್ಟವನ ತಪ್ಪಲ್ಲ. ತಪ್ಪಿತಸ್ಥ ಎಂದು ತಿಳಿದ ಮೇಲೂ ಅವರನ್ನು ಹಾಗೆಯೇ ಕಾವಿತೊಟ್ಟು ಪೀಠವೇರಲು ಸಮಾಜ ಬಿಡುತ್ತದೆ ಎಂಥಾದರೆ
ಇಂತಹವರು ಹೆಚ್ಚಾಗದೇ ಇರಲು ಸಾಧ್ಯವೇ ??.

ಎಲ್ಲವನ್ನು ಬಿಟ್ಟ ಮಠ, ಮಂದಿರ, ದೈವಿಕ ಪುರುಷರೆಂದು ಕರೆಯಲ್ಪಡುವವರಿಗೆ ಅನ್ನದಾಸೋಹ, ಅಕ್ಷರ ದಾಸೋಹದ ಸಲುವಾಗಿ ಭಕ್ತರಿಂದ ದೇಣಿಗೆಗಳು, ಕಾಣಿಕೆಗಳು ಹರಿದು ಬರಲಾರಂಭಿಸಿತು. ಅತಿಯಾದರೆ ಅಮೃತವೂ ವಿಷವೆಂಬಂತೆ ಇದು ಕ್ರಮೇಣವಾಗಿ ಕಾವಿತೊಟ್ಟವರಲ್ಲಿ ಬಿಟ್ಟ ಲೋಭ, ಮೋಹಗಳು ಚಿಗುರೊಡೆಯಲು ಕಾರಣವಾಯಿತು. ಮರದ ಮಣೆಯಮೇಲೆ ಕುಳ್ಳುವ, ಬರಿಯ ಚಾಪೆಯ ಮೇಲೆ ಪವಡಿಸುವ ಕಾವಿಗೆ ಮೆತ್ತನೆಯ ಆಸನದ, ಹಾಸಿಗೆಯ ಆಸೆಯಾಯಿತು. ದೂರ ದೂರಕೆ ಪ್ರವಚನಕ್ಕೆಂದು ನೆಡೆದು ಸಾಗುತ್ತಿದ್ದ ಕಾವಿಗೆ ಸಮಯ ಹಿಡಿಸಲು ಕಾರುಗಳ ಅವಶ್ಯಕತೆ ಉಂಟಾಯಿತು ಕ್ರಮೇಣ ಪ್ರತಿಷ್ಠೆ ಎಂಬುದು ಅಡ್ಡಬಂದಂತೆ ದುಬಾರಿ ಕಾರುಗಳ ದುಂಬಾಲು ಬೀಳುವಂತಾಯಿತು. ಕುಠಿರದಲ್ಲಿದ್ದವನಿಗೆ ಅರಮನೆಯಲ್ಲಿ ಕುಳ್ಳಿರಿಸಲಾಯಿತು ಕೆಲ ಮಂದಿ ಕೇಳಿದ್ದಕ್ಕೆ ಭಕ್ತರ ಅಪೇಕ್ಷೆ ಎಂದಾಯಿತು. ಹೆಸರು ಹೆಚ್ಚಾದಂತೆ ತಾನೆಂಬ ಮದವು ಹೆಚ್ಚಾಗತೊಡಗಿತು, ಶಾಂತ ಚಿತ್ತರಿಗೆ ಮದವೇರಿದಂತೆ ಕ್ರೋಧವೂ ಆವರಿಸತೊಡಗಿತು ಹಸುವೇಷದ ಹುಲಿಯಂತೆ. ಇಲ್ಲದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಾಗ ಮತ್ಸರ ಉಂಟಾಗದೇ ಇರಲು ಸಾಧ್ಯವೇ ? ಎಲ್ಲವೂ ಉಂಟಾದಾಗ ಕಾಮವು ಚಿಗುರೊಡೆದು ತೀರಿಸಿಕೊಳ್ಳಲು ಹಲವು ದಾರಿಗಳು ಹುಟ್ಟುಕೊಂಡವು. ಉಳಿದೈದು ವೈರಿಗಳಿಂದ ಕಳಚಲಾಗದ ಕಾವಿಯ ಮುಖವಾಡವನ್ನು ಕೇವಲ ಕಾಮವೆಂಬುದು ಇಂದಿಗೆ ಅಂತಹ ಮುಖವಾಡವನ್ನು ಹೊರಗೆಳೆಯಲು ಬಹುದೊಡ್ಡ ಸಾಧನವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಕೆಲ ಕಾವಿಗಳು ಆಡಳಿತ ವರ್ಗಕ್ಕೆ ತಮ್ಮ ಜುಟ್ಟು ನೀಡಿ ಒದ್ದಾಡುವುದು ಕಾಣಬಹುದಾಗಿದೆ. ಇಲ್ಲದ ರಾಜಕೀಯ ವ್ಯವಸ್ಥೆಯೊಳಗೆ ಮೂಗು ತೂರಿಸಿ ಮೂಗು ಹರಿದುಕೊಂಡವರೂ ಇದ್ದಾರೆ. ಇಂತಹ ಕಾವಿಗಳಿಂದ ಪೂರ್ಣ ಪ್ರಮಾಣದ ಸಮಾಜಮುಖಿ ಕಾರ್ಯವನ್ನು ನಿರೀಕ್ಷಿಸಲು ಸಾಧ್ಯವೇ ? ವಿರೋಧಿಸಿದರೆ ಅದಕ್ಕೊಂದಿಷ್ಟು ಭಕ್ತಗಣಗಳು ಎದ್ದುಬಿಡುತ್ತಾರೆ ಆದರೆ ಅವರಿಗೆ ಅರಿವೇ ಇರುವುದಿಲ್ಲ ವಿರೋಧಿಸುತ್ತಿರುವುದು ಕೇವಲ ಕಾವಿಯೊಳಗೆ  ತೂರಿಕೊಂಡಿರುವ ನರಿಯನ್ನಷ್ಟೇ ಹೊರತು ಕಾವಿಪರಂಪರೆಯನ್ನಲ್ಲ, ಹಿಂದೂ ಸಂಸ್ಕೃತಿಯ ಸೊಗಡನ್ನಲ್ಲವೆಂಬುದನ್ನು. ಅಪವಾದ ಬಂದಾಗ ಬೆನ್ನಿಗೆ ನಿಲ್ಲುವ ಭಕ್ತಗಣಗಳ ಗುಂಪಿಗೆ ಶಹಬ್ಬಾಸ್ ಹೇಳಲೇಬೇಕು ಜೊತೆಗೆ ನಾವಿದ್ದೇವೆ ಎನ್ನುವ ಧೈರ್ಯ ನೀಡಲೇಬೇಕು ಆದರೆ ಅಪರಾಧಿಯೆಂದು ಸಾಬೀತಾದಮೇಲೂ ವಹಿಸಿಕೊಂಡು ಬರುವ ಭಕ್ತಗಣಕ್ಕೆ ಏನು ಹೇಳಬೇಕೊ ?

ಹಿಂದೂ ಸಮಾಜದಲ್ಲಿ ಬದಲಾವಣೆಯೆಂಬುದು ನಿರಂತರವಾಗಿ ನೆಡೆಯುತ್ತಾ ಬಂದಿರುವುದೇ ಆಗಿದೆ. ಒಂದು ವ್ಯವಸ್ಥೆಯೆಂಬುದು ಹಾದಿಯನ್ನು ತಪ್ಪಿ ಬೇರೆಡೆಗೆ ಸಾಗುತ್ತಿರುವಾಗ ವಿರೋಧದ ಅಲೆ ತೀವ್ರವಾಗಿ ಎದ್ದು ವ್ಯವಸ್ಥೆಯನ್ನು ಅಳಿಸಿಹಾಕಿ ಹೊಸದೊಂದು ವ್ಯವಸ್ಥೆ ತರಲೋ ಅಥವಾ ಅದರಲ್ಲೇ ಮಾರ್ಪಾಟು ಮಾಡಲೋ ಸದಾ ತೆರೆದುಕೊಂಡ ಸಂಸ್ಕೃತಿಯಾಗಿದೆ. ಬಹುಶಃ ಕಾವಿಯೊಳಗೆ ಅಡಗಿ ಕುಳಿತಿರುವ ಸಮಾಜದ ಸ್ವಾಸ್ಥ್ಯ ಕೆಡಿಸುವ ಹಲವು ಗುಟ್ಟುಗಳು ರಟ್ಟಾಗಬೇಕಾಗಿದೆ. ದೊಡ್ಡದೊಂದು ವಿರೋಧಿ ಅಲೆಯೆದ್ದು ಕಳ್ಳಕಾವಿಗಳು ಕಾಲ್ಕೀಳುವಂತೆ ಮಾಡಬೇಕಾಗಿರುವ ಬಹುದೊಡ್ಡ ಹೊಣೆಗಾರಿಕೆ ಸಮಾಜದ ಮೇಲಿದೆ. ಅಂಧ ಭಕ್ತರು ಕಣ್ಣು ತೆರೆದು ವಿಚಾರವಂತರಾಗಬೇಕಾಗಿದೆ. ಕಾವಿ ಭವ್ಯ ಪರಂಪರೆಯ ಮೇಲೆ ಭಾರತ ಇಟ್ಟಿರುವ ನಂಬಿಕೆಗಳು ಬುಡಮೇಲಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ ಹೊಸದೊಂದು ಭಾಷ್ಯ ಬರೆಯುವ ಕಾಲ ಸಮೀಪಿಸುತ್ತಿದೆ. ಕಾವಿಯೊಳಗಿನ ಕಳ್ಳಬೆಕ್ಕುಗಳನ್ನು ಓಡಿಸಬೇಕಾಗಿದೆ.

 

 

 

 

 

 

 

ವಿಜಯ್ ಭಂಡಾರಿ ನಿಟ್ಟೂರು ಹೊಸನಗರ

1 thought on “ಕಾವಿಯೊಳಗಿನ ಗುಟ್ಟು….. ✍️ ವಿಜಯ್ ನಿಟ್ಟೂರು

  1. ಎಲೆಯ ವಯಸ್ಸಿನಲ್ಲೇ ಪ್ರೌಡ ಲೇಖನ ಚೆನ್ನಾಗಿದೆ

Leave a Reply

Your email address will not be published. Required fields are marked *