ಭಂಡಾರಿ ಬಂಧುಗಳ ಹಣಕಾಸು ವಹಿವಾಟಿನ ಪ್ರತಿಷ್ಠಿತ ಮತ್ತು ಅತ್ಯಂತ ನಂಬಿಕಸ್ಥ ಸಂಸ್ಥೆ ಎಂದೇ ಹೆಸರಾಗಿರುವ “ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ” ಯ 23 ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 16 ರ ಭಾನುವಾರ ಮಂಗಳೂರು ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ಎದುರಿನ “ಸುಮ ಸದನ” ದಲ್ಲಿ ಜರುಗಿತು.
ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2017-18 ನೇ ಸಾಲಿನ ವಾರ್ಷಿಕ ಮಹಾಸಭೆ ಬೆಳಿಗ್ಗೆ 11 ಗಂಟೆಗೆ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.ಸಭೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಷೇರುದಾರರು ಮತ್ತು ಭಂಡಾರಿ ಬಂಧುಗಳಾಧಿಯಾಗಿ ಸುಮಾರು ಇನ್ನೂರಾ ನಾಲ್ಕು ಜನ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಪಿ.ಬಾಲಕೃಷ್ಣ ಭಂಡಾರಿಯವರು ಸ್ವಾಗತಿಸಿದರು.ಈ ಸಾಲಿನ ಮಹಾಸಭೆಯ ನೋಟಿಸನ್ನು ಓದಿ ದಾಖಲಿಸಲಾಯಿತು.ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾಗಿರುವ ಶ್ರೀ ರಾಮ ಭಂಡಾರಿಯವರು 22 ನೇ ವಾರ್ಷಿಕ ಮಹಾಸಭೆಯ ನಡಾವಳಿಯನ್ನು ಸಭೆಗೆ ಓದಿ ಹೇಳಿದರು,ಸಭೆಯ ಒಪ್ಪಿಗೆಯ ಮೂಲಕ ದಾಖಲಿಸಿಕೊಳ್ಳಲಾಯಿತು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಂ.ಪದ್ಮನಾಭ ಭಂಡಾರಿಯವರು 2017-18 ನೇ ಸಾಲಿನ ವಾರ್ಷಿಕ ವರದಿ,ವಾರ್ಷಿಕ ಲೆಕ್ಕ ತಖ್ತೆ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ಮಂಡಿಸಿದರು.ಮತ್ತು ಮುಂದಿನ 2018-19 ರ ಸಾಲಿನ ಬಜೆಟ್ ಮಂಡಿಸಿ ಅಂಗೀಕಾರ ಪಡೆಯಲಾಯಿತು.
ನಂತರ ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಭಂಡಾರಿಯವರು ಸಂಸ್ಥೆಯ ಲಾಭ ಗಳಿಕೆ, ಡಿವಿಡೆಂಟ್ ಹಂಚಿಕೆ ಮತ್ತು ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಸಬೇಕಾಗಿರುವ ನೂತನ ಪದಾಧಿಕಾರಿಗಳ ಚುನಾವಣೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು….. “ಸಂಸ್ಥೆಯು ಸದಸ್ಯರ ವಹಿವಾಟುದಾರರ ಸಹಕಾರದಿಂದ ಕಳೆದ ಸಾಲಿನಲ್ಲಿ ಹದಿನಾರು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗಳ ಲಾಭ ಗಳಿಸಿದ್ದು, ಈ ಬಾರಿ ಷೇರುದಾರರಿಗೆ ದಾಖಲೆಯ 17% ಡಿವಿಡೆಂಟ್ ಹಂಚಿಕೆ ಮಾಡಲಾಗಿದೆ. ಸಾರ್ವಜನಿಕ ಪರೋಪಕಾರ, ಪ್ರಕೃತಿ ವಿಕೋಪದ ಸಮಯದಲ್ಲಿ ಬಳಕೆ ಮಾಡಲು ಧರ್ಮಾರ್ಥ ದತ್ತಿ ನಿಧಿ ಸ್ಥಾಪಿಸಿದ್ದು ಅದಕ್ಕಾಗಿ ಈ ವರ್ಷ 42,589/- ರೂಪಾಯಿಗಳನ್ನು ಮೀಸಲಿಡಲಾಗಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ಐವರು ವಿದ್ಯಾರ್ಥಿಗಳಿಗೆ 13,000/- ರೂಪಾಯಿಗಳನ್ನು ವಿತರಿಸಲಾಯಿತು.” ಎಂದು ಸಂಸ್ಥೆಯ ಲಾಭ ಗಳಿಕೆಯ ಮತ್ತು ವಿನಿಯೋಜನೆಯ ಮಾಹಿತಿ ನೀಡಿದರು.
ಮುಂದುವರಿದು…“ಮುಂದಿನ ವರ್ಷದ ಫೆಬ್ರವರಿ/ಮಾರ್ಚ್ ಗೆ ಹದಿನೆಂಟು ನಿರ್ದೇಶಕರು, ಇಬ್ಬರು ನಾಮನಿರ್ದೇಶಕರನ್ನೊಳಗೊಂಡ ಒಟ್ಟು ಇಪ್ಪತ್ತು ಜನ ನಿರ್ದೇಶಕರ ಆಡಳಿತ ಮಂಡಳಿಯ ಅವದಿ ಮುಕ್ತಾಯಗೊಳ್ಳಲಿದ್ದು, 2019 ರ ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಸಹಕಾರ ಚುನಾವಣಾ ಆಯೋಗದ ನೇತೃತ್ವದಲ್ಲಿ ಚುನಾವಣೆ ನಡೆಯಲಿದ್ದು ಈ ಬಾರಿ ಮತದಾನದ ಪ್ರಕ್ರಿಯೆಯು ಕೆಲವು ನಿಬಂಧನೆಗಳ ಅಡಿಯಲ್ಲಿ ನಡೆಯಲಿದೆ. ಮತದಾನ ಮಾಡಲಿಚ್ಚಿಸುವ ಸಂಸ್ಥೆಯ ಷೇರುದಾರರು ಸಂಸ್ಥೆಯಲ್ಲಿ ಕನಿಷ್ಠ ವ್ಯವಹಾರ ಮಾಡುವವರಾಗಿರಬೇಕು. ಕನಿಷ್ಠ ಒಂದು ಸಾವಿರ ರೂಪಾಯಿಗಳ ಠೇವಣಿ ಹೂಡಿಕೆ ಅಥವಾ ಸಂಸ್ಥೆಯ ಯಾವುದೇ ಸಾಲ ಸೌಲಭ್ಯದ ಅಡಿ ವ್ಯವಹಾರ ಮಾಡಿದವರಿಗೆ ಮಾತ್ರ ಮತದಾನ ಮಾಡುವ ಅವಕಾಶ ಇರುತ್ತದೆ ಮತ್ತು ಸದಸ್ಯರು ಐದು ವಾರ್ಷಿಕ ಮಹಾಸಭೆಗಳಲ್ಲಿ ಕನಿಷ್ಠ ಮೂರು ವಾರ್ಷಿಕ ಮಹಾಸಭೆಗಳಿಗೆ ಹಾಜರಾಗಿರಬೇಕು.ಇಲ್ಲವಾದಲ್ಲಿ ಮತದಾನ ಮಾಡುವ ಸದಸ್ಯತ್ವದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ “ ಎಂದು 2012 ರಲ್ಲಿ ತಿದ್ದುಪಡಿಗೊಂಡ ಸಹಕಾರ ಚುನಾವಣಾ ಅಧಿನಿಯಮದ ಮಾಹಿತಿ ನೀಡಿದರು.
ನಂತರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ಐವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ್ ಕುಳಾಯಿ, ನಿರ್ದೇಶಕರುಗಳಾದ ಬಿ.ಎಸ್.ಸತೀಶ್ ಭಂಡಾರಿ, ಗೋಪಾಲ ಭಂಡಾರಿ, ಭಾಸ್ಕರ್ ಭಂಡಾರಿ ಸುರತ್ಕಲ್, ಭಾಸ್ಕರ್.ಕೆ ರಘುವೀರ್ ಭಂಡಾರಿ, ರಾಜಾ ಬಂಟ್ವಾಳ, ರವೀಂದ್ರನಾಥ ಉಳ್ಳಾಲ, ಸತೀಶ್ ಭಂಡಾರಿ, ಕೃಷ್ಣಾನಂದ, ಶೇಖರ ಭಂಡಾರಿ ಕಾರ್ಕಳ, ಶೇಖರ್ ಎಚ್, ಚಂದ್ರ ಮೋಹನ್.ಎಂ.ಕೆ, ಶೇಖರ ಭಂಡಾರಿ ಉಡುಪಿ, ಹರೀಶ್ ಭಂಡಾರಿ, ಸುಂದರ ಭಂಡಾರಿ ರಾಯಿ,ಶ್ರೀಮತಿ ಅಮಿತಾ.ಕೆ. ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಕುಳಾಯಿಯವರ ವಂದನಾರ್ಪಣೆಯೊಂದಿಗೆ ಸಭೆಗೆ ಮಂಗಳ ಹಾಡಲಾಯಿತು.
ಮಾಹಿತಿ : ಬಿ.ಎಸ್. ಸತೀಶ್ ಭಂಡಾರಿ ಪುತ್ತೂರು.
ನಿರ್ದೇಶಕರು.
ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ.(ಲಿ.)
ಮಂಗಳೂರು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.