ಪ್ರಜಾತಂತ್ರವೆಂಬ ದಟ್ಟ ಕಾನನದಲ್ಲಿ ಸಂಭ್ರಮದ ಬುಗ್ಗೆ. ಹಾಗೆ ಒಂದಿಷ್ಟು ಆತಂಕ, ಕುತೂಹಲಗಳ ಗೂಡು ಅಲ್ಲಿರುವ ಎಲ್ಲಾ ಪಶು, ಪಕ್ಷಿ, ಕ್ರಿಮಿ, ಕೀಟಗಳ ತಲೆಯಲ್ಲಿ ಬೇರೂರಿಬಿಟ್ಟಿತ್ತು. ಕಾರಣ ಕೆಲವೇ ದಿನಗಳಲ್ಲಿ ಪ್ರಜಾತಂತ್ರ ಕಾಡಿನ ರಾಜನ ಆಯ್ಕೆ ಮಾಡುವ ಜವಾಬ್ದಾರಿ ಅವರುಗಳ ಮೇಲಿತ್ತು. ಗದ್ದುಗೆಯ ಆಸೆ ಹೊತ್ತು ನಿಂತ ಸಿಂಹ ಮತ್ತು ಹುಲಿಯ ಮಧ್ಯೆ ಬಹುದೊಡ್ಡ ಜಟಾಪಟಿಯೇ ನಡೆಯುತಿತ್ತು. ಅವರವರ ಬೆಂಬಲಿಗ ಕಾಡು ಜೀವಿಗಳ ವಾಗ್ವಾದ, ಗುದ್ದಾಟ ಎಲ್ಲೆ ಮೀರಿತ್ತು.
ಏನೇ ಆಗಲಿ ಕಾಡಿನ ರಾಜ ಸಿಂಹವೇ ಆಗಬೇಕೆಂಬ ಆಸೆ ಬಹುತೇಕ ಜೀವಿಗಳಲ್ಲಿ ಆವರಿಸಿಬಿಟ್ಟಿತ್ತು. ಸಿಂಹ ಮತ್ತು ಹುಲಿಯನ್ನು ಪ್ರತಿನಿಧಿಸಿ ಬೆಂಬಲಿಸಿ ಅಂಗಕಾಡುಗಳಲ್ಲಿ ಮತಯಾಚನೆಗೆ ನರಿ, ಚಿರತೆ, ತೋಳ, ಕರಡಿ, ಜಿಂಕೆ, ಮಂಗ,ರಣಹದ್ದು, ಕಾಗೆ, ಗೂಬೆ, ಗಿಳಿ, ನವಿಲು, ಹಾವು, ಮೊಸಳೆ, ಮೀನು, ತಿಗಣೆ, ಸೊಳ್ಳೆ, ಬ್ಯಾಕ್ಟೀರಿಯಾ ಇತ್ಯಾದಿ ಇತ್ಯಾದಿ ಜೀವಿಗಳು ನಿಂತಿದ್ದವು. ಸಿಂಹ ಮತ್ತು ಹುಲಿಯ ಬೆಂಬಲಿಗರಾಗಿ ಉತ್ತಮ ಮತ್ತು ದುಷ್ಟ ಜೀವಿಗಳೆರಡೂ ಮಿಶ್ರಿತವಾಗಿದ್ದವು. ಏನೇ ಆಗಲಿ ಕಾಡಿನ ಜೀವಿಗಳ ಆಸೆ ಸಿಂಹವೇ ಆಗಿದ್ದರಿಂದ ಯಾವುದನ್ನೂ ಯೋಚನೆ ಮಾಡದೇ ಬಹುತೇಕ ಜೀವಿಗಳು ತಮ್ಮ ಪ್ರದೇಶಗಳಲ್ಲಿ ಸಿಂಹವನ್ನೇ ಬೆಂಬಲಿಸಿದ ಜೀವಿಗಳನ್ನು ಗೆಲ್ಲಿಸಿ, ಹರ್ಷಿಸಿ, ಸಿಂಹವನ್ನು ಕಾಡಿನ ರಾಜನನ್ನಾಗಿ ನೇಮಕ ಮಾಡಿ ಬಹುಖುಷಿಯಿಂದ ಬೀಗಿದವು.
ಜೀವಿಗಳ ಆಶಯದಂತೆ ಸಿಂಹವು ಬಹುತೇಕ ಉತ್ತಮ ಆಡಳಿತವನ್ನು ನೀಡುತ್ತಾ ಕಾಡುಜೀವಿಗಳ ಮೊಗದಲ್ಲಿ ನಗುವನ್ನು ತಂದು ನಿಲ್ಲಿಸುತಿತ್ತು. ಆದರೆ ಸಿಂಹವನ್ನು ಬೆಂಬಲಿಸಿ ನಿಂತು ಗೆದ್ದ ಕೆಲವು ದುಷ್ಟ ಮತ್ತು ಆಲಸಿ ಜೀವಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ನಡಸದೇ ಕೇವಲ ತನ್ನ ಅಭಿವೃದ್ಧಿಯನ್ನು ಮಾತ್ರ ನಡೆಸಿಕೊಂಡು, ಆಯಾ ಕ್ಷೇತ್ರದ ಜೀವಿಗಳಿಗೆ ಸಿಂಹದ ಕಾರ್ಯವೈಖರಿಯನ್ನು ಹೇಳಿಕೊಂಡು ಹೊಗಳಿಕೊಂಡು ಜೀವನ ನೆಡೆಸಲು ಆರಂಭಿಸಿ, ಕೆಲವು ಕ್ಷೇತ್ರದ ಜೀವಿಗಳು ಸಿಗಬೇಕಾದ ಸೌಲಭ್ಯಗಳು ಸಿಗದೇ ವಂಚಿತವಾಗಿ ದುಃಖತಪ್ತವಾದವು. ಆದರೂ ಸಿಂಹದ ಕಾರ್ಯದ ಹೊಗಳಿಕೆಯು ಅವರಿಗೆ ಸಿಗದ ಸೌಲಭ್ಯಗಳ ನೋವನ್ನು ಮರೆಮಾಚಿಬಿಟ್ಟಿತ್ತು.
ಕಾಲ ಕ್ರಮಿಸಿತ್ತು ಸಿಂಹದ ಆಡಳಿತ ಅವಧಿ ಮುಗಿಯುತ್ತಾ ಬಂದಿತ್ತು. ಮತ್ತೆ ಕಾಡಿನ ರಾಜನ ಆಯ್ಕೆಯ ಹೊಣೆ ಪ್ರಜಾತಂತ್ರದ ಕಾಡಿನ ಜೀವಿಗಳ ಮೇಲೆ ಬಿದ್ದಿತ್ತು. ಮತ್ತೆ ಹುಲಿ ಮತ್ತು ಸಿಂಹಗಳ ನಡುವಿನ ಪೈಪೋಟಿ ಎಲ್ಲೆ ಮೀರಿತ್ತು. ಪ್ರಜಾತಂತ್ರ ಜೀವಿಗಳ ಒಲವು ಮತ್ತೆ ಸಿಂಹದ ಮೇಲೆ ಇತ್ತು. ಆದರೆ ಹಿಂದೆ ಸಿಂಹವನ್ನು ಬೆಂಬಲಿಸಿ ಗೆದ್ದು ಕಾರ್ಯವನ್ನೇ ಮಾಡದ ದುಷ್ಟ ಮತ್ತು ಆಲಸಿ ಜೀವಿಗಳ ಮೇಲಿನ ದ್ವೇಷ ಅಳಿಸಿ ಹೋಗಿರಲಿಲ್ಲ. ಅಪಾಯವಿಲ್ಲದೇ ಅಂತಹ ಜೀವಿಗಳೇ ಮತ್ತೆ ಬೆಂಬಲಿಸಿ ಮತಯಾಚನೆಗೆ ನಿಂತಾಗ ಸಿಂಹಪ್ರಿಯ ಕೆಲ ಜೀವಿಗಳು ಪ್ರತಿಭಟಿಸಿ ನಿಂತವು. ಪ್ರಯೋಜನವಾಗದೇ ಇದ್ದಾಗ ಮತ್ತೆ ಉಪಾಯವಿಲ್ಲದೇ ಸಿಂಹದ ಮೇಲಿನ ಪ್ರೀತಿ ಅಂತಹ ಜೀವಿಗಳನ್ನು ಗೆಲ್ಲಿಸುವ ಅನಿವಾರ್ಯತೆಗೆ ಗಂಟುಬಿದ್ದವು. ಮತ್ತೆ ಅದೇ ಅಭಿವೃದ್ಧಿಯಾಗದ ತಮ್ಮ ಅಂಗಕಾಡುಗಳನ್ನು ಕಣ್ತುಂಬಿಕೊಳ್ಳಲು. ಮತ್ತೆ ಕೆಲ ಜೀವಿಗಳು ಹಠ ಬಿಡಲಿಲ್ಲ ಸೋಲಿನ ರುಚಿ ತೋರಿಸಲು ಸಿಂಹದ ಮೇಲಿನ ಪ್ರೀತಿಯ ಹೊರತಾಗಿಯೂ. ದುಷ್ಟ ಮತ್ತು ಆಲಸಿ ಸಿಂಹಪರ ಅಭ್ಯರ್ಥಿ ಜೀವಿಗಳು ಸೋಲಿನ ರುಚಿಯನ್ನು ಕಂಡಿದ್ದವು. ಮುಂದಿನ ರಾಜನ ಆಯ್ಕೆಯ ಸಂದರ್ಭದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬಂದಿದ್ದವು. ಸಿಂಹದ ಪರವಾಗಿ ಮತಯಾಚಿಸಿ ನಿಲ್ಲುವ ಅಭ್ಯರ್ಥಿ ಜೀವಿಗಳಲ್ಲಿ ದುಷ್ಟ ಹಾಗು ಆಲಸಿ ಜೀವಿಗಳು ಇಲ್ಲವಾಗಿದ್ದವು. ಆಯ್ಕೆಯ ಅಂಗಳದಲ್ಲಿ ಸಿಂಹ ಮತ್ತು ಹುಲಿಗಳ ಪೈಪೋಟಿ ನಿರಂತರ ಆದರೆ ಆವುಗಳನ್ನು ಬೆಂಬಲಿಸಿ ನಿಲ್ಲುವ ದುಷ್ಟ, ಆಲಸಿ ಮತ್ತು ಉತ್ತಮ ಜೀವಿಗಳನ್ನು ಆಯ್ಕೆ ಮಾಡುವುದೂ ಅಷ್ಟೇ ಮುಖ್ಯವಾಗಿರುತ್ತದೆ.
“ಬೆರಳುಗಳ ಆಟದಲ್ಲಿ ಬೆವರಿಳಿಸಿದರೆ ಹಕ್ಕಿಗೊಂದು ಅರ್ಥ.
ಉತ್ತಮ ತಂತ್ರಕ್ಕಾಗಿ ಉತ್ತಮ ಆಯ್ಕೆ.”