
ಭಾರತ ದೇಶ ಕೃಷಿ ಪ್ರಧಾನ ದೇಶ, ಕೃಷಿಯೇ ನಮ್ಮ ಬೆನ್ನೆಲುಬು, ರೈತ ಶ್ರಮ ಪಟ್ಟು ದುಡಿದರೆ ಮಾತ್ರ ನಾವು ಬದುಕಲು ಸಾಧ್ಯ. ರೈತನು ತನ್ನ ಬದುಕಿನಲ್ಲಿ ಕದಿರು ಕಟ್ಟುವ ಹಬ್ಬವನ್ನು ಯುಗ ಯುಗಗಳಿಂದ ಅಚರಿಸಿ ಕೊಂಡು ಬಂದ ಸಂಪ್ರದಾಯ ಅದುವೇ ಕೃಷಿಕನ ವಾರ್ಷಿಕ ಹಬ್ಬ ಕದಿರು ಕಟ್ಟುವುದು. ನಮ್ಮ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕದಿರು ಕಟ್ಟುವ ಹಬ್ಬವನ್ನು ಆಚರಿಸುತ್ತಾರೆ ರೈತ ಮುಂಗಾರು ಮಳೆ ಆರಂಭವಾದಗ ಭತ್ತದ ಬೀಜವನ್ನು ಕೃಷಿ ಗದ್ದೆಗೆ ಬಿತ್ತಿ ಕೆಲವೇ ದಿನಗಳಲ್ಲಿ ನಾಟಿ ಮಾಡಿ ಪೂರೈಸುತ್ತಾನೆ. ನಾಟಿ ಮಾಡಿದ ಬಳಿಕ ಫಸಲಿಗಾಗಿ ನಾಲ್ಕು ತಿಂಗಳು ಕಾಯಲೇಬೇಕು ಭತ್ತದ ಬೀಜವನ್ನು ಬಿತ್ತಿದ ಸಮಯದಿಂದ ಕಟಾವು ಮಾಡಿದ ಭತ್ತದ ಕೃಷಿಯ ರಕ್ಷಣೆ ಗೋಸ್ಕರ ನಾಲ್ಕು ತಿಂಗಳವರೆಗೆ ಗಾಳಿ ಮಳೆ ಗುಡುಗು ಸಿಡಿಲು ಆರ್ಭಟದ ಮಧ್ಯೆ ಹಾಗೂ ಇನ್ನೊಂದೆಡೆ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಉಪಟಳದಿಂದ ಗದ್ದೆಯಲ್ಲಿ ಪುಟ್ಟ ಬಿಡಾರ ಮಾಡಿ ಜಾಗರಣೆ ಯೊಂದಿಗೆ ಕಾಲ ಕಳೆದು ತಾನು ಬೆಳೆದ ಭತ್ತದ ಕೃಷಿಯನ್ನು ರಕ್ಷಿಸಿ ಕೊಳ್ಳುತ್ತಾನೆ. ಹೀಗೆ ಸುಮಾರು ಮೂರು ನಾಲ್ಕು ತಿಂಗಳು ಕಳೆದಾಗ ತಾನು ಹೊತ್ತು ಬಿತ್ತಿದ ಭತ್ತದ ಫಸಲು ಕಟಾವಿಗೆ ತಯಾರಾಗುತ್ತದೆ. ಕದಿರು ಕಟ್ಟುವುದರ ಮೂಲಕ ಮತ್ತೆ ಗದ್ದೆಗೆ ಇಳಿಯಬೇಕು, ಎಂಬ ಸೂಚನೆಯನ್ನು ತನಗೆ ತಾನೇ ನೀಡಲಾಗುತ್ತದೆ. ಅಲ್ಲಿಂದ ಭತ್ತದ ಕಟಾವು ಆರಂಭಿಸಲು ದಿನ ನಿಗದಿ ಮಾಡಲಾಗುತ್ತದೆ. ಕದಿರು ಕಟ್ಟುವ ಹಬ್ಬದ ಆಚರಣೆಯನ್ನು ಕನ್ಯಾ ಮಾಸದಲ್ಲಿ ಆಚರಿಸುತ್ತಾರೆ. ರೈತಾಪಿ ಕುಟುಂಬಗಳು ಈ ಹಬ್ಬವನ್ನು ಆಚರಿಸುತ್ತಾರೆ. ತಾನು ಬೆಳೆದ ಪೈರಿನ ತೆನೆಯನ್ನು ಕದಿರು ಕಟ್ಟುವ ಮೂಹರ್ತಕ್ಕೆ ಮುಂಚೆ ಉಪಯೋಗಿಸುವ೦ತಿಲ್ಲ.

ಕದಿರು ತರುವುದು ಹೀಗೆ : ನಿಗದಿಪಡಿಸಿದ ದಿನದಂದು ಮನೆಯ ಯಜಮಾನ ಮುಂಜಾನೆ ತಲೆಗೆ ಸ್ನಾನ ಮಾಡಿ ಗದ್ದೆಗೆ ಬಾಳೆ ಎಲೆ, ಮಾವಿನ ಎಲೆ, ಹಲಸಿನ ಎಲೆ, ಬಿದಿರಿನ ಸೊಪ್ಪು, ಪೊಲಿ ಸೊಪ್ಪು, ಪೇರಳೆ ಸೊಪ್ಪು, ಗೌರಿ ಹೂವಿನೊಂದಿಗೆ ಹೋಗಿ, ತೆನೆಯನ್ನು ತಂದು ತುಳಸಿ ಕಟ್ಟೆಯ ಮುಂದೆ ದೀಪ ಉರಿಸಿ, ಮನೆಯಲ್ಲಿ ಬೆಳೆಸಿದ ತರಕಾರಿ ಗಳನ್ನು ಹರಿವೆ ಗಿಡ, ಕೆಸುವಿನ ಗಿಡ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಕಲಸೆ, ಸೇರು ಪಾವು, ಹಲಸಿನ ಎಲೆಯಲ್ಲಿ ಗಂಧ ಇತ್ಯಾದಿಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಪೂಜೆ ಮಾಡುವಾಗ ಪೊಲಿ ಪೊಲಿ ಎಂದು ಹೇಳುತ್ತಾರೆ “ಪೊಲಿ” ಎಂದರೆ ಒಂದೂವರೆ ಪಟ್ಟು ಎಂದು ಅರ್ಥ. ಬಳಿಕ ಮನೆಯ ಮುಖ್ಯಸ್ಥನ ನೇತೃತ್ವದಲ್ಲಿ ಒಬ್ಬೊಬ್ಬರು ಒಂದೊಂದನ್ನು ಹಿಡಿದುಕೊಂಡು ಮನೆಯ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಬಳಿಕ ಎಲ್ಲವನ್ನೂ ಒಂದೊಂದರಾಗೆ ಜೋಡಿಸಿ ಹಲವು ಕಟ್ಟುಗಳನ್ನು ಕಟ್ಟುತಾರೆ. ಕಟ್ಟಿದ ಮೇಲೆ ತುಳಸಿ ಕಟ್ಟೆ, ದೇವರ ಕೋಣೆ, ಮನೆಯ ಹೆಬ್ಬಾಗಿಲು, ದೈವದ ಮನೆ, ದನದ ಕೊಟ್ಟಿಗೆ, ನೇಗಿಲು, ನೊಗ, ತೆಂಗಿನ ಮರ, ಹಲಸಿನ ಮರ ಹೀಗೆ ನಾನಾ ಕಡೆ ಕಟ್ಟಲಾಗುತ್ತದೆ ಇದಕ್ಕೆ ತುಳುನಾಡಿನಲ್ಲಿ ಮನೆ ತುಂಬಿಸುವುದು ಎನ್ನುತ್ತಾರೆ ಹಾಗೂ ಉಳಿದವುಗಳನ್ನು ಮನೆಯ ಅಟ್ಟದಲ್ಲಿ ಇಡುತ್ತಾರೆ. ಇದಕ್ಕೆ ಅಟ್ಟ ತುಂಬಿ ಸುವುದು ಎಂದು ಹೇಳುತ್ತಾರೆ. ದಶಕಗಳ ಹಿಂದೆ ಕದಿರು ಕಟ್ಟಿದ ದಿನ ಮನೆಯ ಒಳಗಡೆಯಿಂದ ಹಣವನ್ನು ಹೊರಗೆ ಕೊಡುವುದು ಅಂದಿನ ದಿನದ ಮಟ್ಟಿಗೆ ನಿಷೇಧ.
ಬಂಧು ಮಿತ್ರರ ಆಗಮನ : ಕೃಷಿ ಕುಟುಂಬದ ಸದಸ್ಯರು ದೂರದ ಪ್ರದೇಶದಲ್ಲಿ ಉದ್ಯೋಗದಲ್ಲಿ ಇದ್ದರೆ, ಕದಿರು ಕಟ್ಟುವ ಹಬ್ಬದ ದಿನದಂದು ಬಂದೇ ಬರುತ್ತಾರೆ. ಕೆಲವು ಮನೆಗಳಲ್ಲಿ ಆ ದಿನವೇ ಹೊಸ ಅಕ್ಕಿ ಊಟ ಮಾಡುತ್ತಾರೆ. ಇದಕ್ಕೆ ತುಳುವಿನಲ್ಲಿ “ಪುದ್ದರ್” ಎಂದು ಹೇಳುತ್ತಾರೆ ಊಟ ಮಾಡುವ ಮುನ್ನ ಹಿರಿಯರ ಪಾದಕ್ಕೆ ನಮಸ್ಕರಿಸಿ ನಂತರ ಊಟ ಮಾಡುವುದು ರೈತ ಕುಟುಂಬದ ಸಂಪ್ರದಾಯ. ರೈತ ಕುಟುಂಬವು ಕದಿರು ಕಟ್ಟುವ ಹಬ್ಬದ ಆಚರಣೆ ಕಾರ್ಯಕ್ರಮಕ್ಕೆ ಬಂಧುಗಳು ಸ್ನೇಹಿತರಿಗೆ ಕದಿರು ಹಬ್ಬದ ಭೋಜನಕ್ಕೆ ಆಹ್ವಾನ ನೀಡುತ್ತಾರೆ.
ಗ್ರಾಮೀಣ ಭಾಗಗಳಲ್ಲಂತೂ ಕದಿರು ಕಟ್ಟುವ ಹಬ್ಬ ಬಹಳ ವಿಶೇಷವಾಗಿರುತ್ತದೆ. ಊಟಕ್ಕೆ ಹತ್ತಾರು ಬಗೆಯ ಪದಾರ್ಥಗಳನ್ನು ಮಾಡಿ ಬಂಧು ಮಿತ್ರರೊಂದಿಗೆ ಕುಟುಂಬದ ಸದಸ್ಯರು ಭೋಜನ ಸವಿಯುತ್ತಾರೆ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಕೂಡ, ದೇವಸ್ಥಾನಗಳಲ್ಲಿ ಕದಿರುಗಳನ್ನು ಹ೦ಚಿ ಕದಿರು ಕಟ್ಟುವ ಹಬ್ಬವನ್ನು ಆಚರಿಸುತ್ತಾರೆ. ವಾಹನಗಳಿಗೂ ಕದಿರು ಗಳನ್ನು ಕಟ್ಟುತ್ತಾರೆ.
✍: ಭಂಡಾರಿ ವಾರ್ತೆ