

ಹೀಗೆ ನೆನಪಾಯಿತು…
ಕಳೆದ ವರ್ಷ ಹೀಗೆ ಒಂದು ದಿನ ಇತ್ತೀಚಿಗೆ ಮೊಬೈಲ್ ನಲ್ಲಿ ತುಂಬಾ ಸಮಯ ಕಳೆಯುತ್ತಿದ್ದೇನೆ ಅನ್ನಿಸಿತು,ಕೆಲವು ತಿಂಗಳುಗಳ ಕಾಲ ಅದರೂ ಈ ವಾಟ್ಸಪ್, ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಿಂದ ದೂರವಿರುವ ನಿರ್ಧಾರ ಮಾಡಿದೆ.ಆ ಬಿಡುವಿನ ಸಮಯದಲ್ಲಿ ಓದಲೆಂದು ನನ್ನ ನೆಚ್ಚಿನ ಲೇಖಕರ ಐದಾರು ಪುಸ್ತಕಗಳನ್ನು ಕೊಂಡು ತಂದು ಮೂರು ತಿಂಗಳುಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದೆ.ಎಲ್ಲಿ ಕಳೆದು ಹೋಗಿದ್ದಿರಿ? ಎಂಬ ಪರಿಚಿತರ ಕೆರೆಯಿಂದ ಮತ್ತೆ ಹಳೆಯ ಚಾಳಿಯೆಂಬಂತೆ ಸಾಮಾಜಿಕ ಜಾಲತಾಣಗಳನ್ನು ತೆರೆದು ಸಮಾಜದ ಆಗುಹೋಗುಗಳನ್ನು ಗಮನಿಸಿದಾಗ ಅರಿವಿಗೆ ಬಂದದ್ದು.ಪ್ರಕಾಶ್ ಕಟ್ಲಾ ಸರ್ ಇ-ಪೇಪರ್ ಒಂದನ್ನು ತೆರೆಯುವ ಹುಮ್ಮಸ್ಸಿನಲ್ಲಿ ಓಡಾಡುತ್ತಿರುವುದು ತಿಳಿಯಿತು. ಸದಾ ನಮ್ಮೊಂದಿಗೆ ತಮ್ಮ ಚಿಂತನೆಯನ್ನು ಸಾಮಾಜಿಕ ಕಳಕಳಿಯನ್ನು ತೆರೆದ ಮನಸ್ಸಿನಿಂದ ಹಂಚಿಕೊಳ್ಳುತ್ತಾ,ಯುವಕರೊಂದಿಗೆ ಯುವಕರಂತೆ ವರ್ತಿಸುತ್ತ ತಮ್ಮ ಕನಸುಗಳನ್ನು ಬಿತ್ತರಿಸುತ್ತಾ,ಸಾಮಾಜಿಕ ಜಾಲತಾಣಗಳನ್ನೆ ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡು ಓಡಾಡುತ್ತಿದ್ದ ಕಟ್ಲಾ ಸರ್ ಇತ್ತೀಚಿನ ವರ್ಷದಲ್ಲಿ ಇವನ ಗಮನ ಸೆಳೆದದ್ದು ಸುಳ್ಳಲ್ಲ.ಹಾಗೆಂದು ಇವನು ಅವರ ಅಂಧ ಅಭಿಮಾನಿಯಂತೆ ಅವರ ಎಲ್ಲಾ ಅಭಿಪ್ರಾಯಗಳನ್ನು ಮೆಚ್ಚಿಕೊಂಡು ನಡೆದವನೂ ಅಲ್ಲ,ಸಾಕಷ್ಟು ಬಾರಿ ಅವರ ಹಲವು ಚಿಂತನೆಗಳ ವಿರುದ್ಧ ಮಾತನಾಡಿದ್ದೂ ಇದೆ,ಬಹುಶಃ ಹೆಚ್ಚೇ ಇರಬಹುದು.ಇದು ಅವರೇ ತೆರೆದ ವಾಟ್ಸಪ್ ಗ್ರೂಪ್ ನಲ್ಲಿ ಇರುವವರಿಗೆ ಚೆನ್ನಾಗಿಯೇ ತಿಳಿದಿದೆ.ಇದೇ ಕಾರಣಕ್ಕೆ ಅವರು ಇವನೊಂದಿಗೆ ಕೆಲವೊಮ್ಮೆ ಮಾತನಾಡಲು ಉದಾಸೀನಗೊಂಡದ್ದು ಇವನ ಗಮನಕ್ಕೆ ಬಾರದ ವಿಷಯವೇನಲ್ಲ,ಅದಾಗ್ಯೂ ಮತ್ತೆ ಮತ್ತೆ ವೆಂಕಿ ಎಂದು ಮನೆಯ ಹಿರಿಯರಂತೆ ಮಾತಾನಾಡಿಸಿಕೊಂಡು ಕೋಪವನ್ನು ನುಂಗಿಕೊಂಡು ಆತ್ಮೀಯತೆ ತೋರುತ್ತಿದ್ದ ಅವರಿಂದ ದೂರ ನಿಲ್ಲಲು ಇವನಿಗೂ ಸಾಧ್ಯವಾಗಿಲ್ಲ.ಬಹುಶಃ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಒಂದು ಸಮಾಜದ ಗ್ರೂಪ್ ಮಾಡಿಕೊಂಡು ಯುವಕರನ್ನೆಲ್ಲ ಒಗ್ಗೂಡಿಸಿ ಸಮಾಜದ ಒಳಿತಿಗಾಗಿ ಕೆಲಸ ಮಾಡಲು ಒಬ್ಬ ಹಿರಿಯರಾಗಿ ಮುಂದೆಬಂದವರಲ್ಲಿ ಭಂಡಾರಿ ಸಮಾಜಕ್ಕೆ ಸಂಬಂಧಿಸಿದಂತೆ ಇವರೇ ಮೊದಲಿಗರು ಅನ್ನಿಸುತ್ತದೆ.ಅಂದು ಸಾಮಾಜಿಕ ಜಾಲತಾಣವನ್ನು ಸಮಾಜದ ಕಾರ್ಯಗಳ ಬಗ್ಗೆ ಖಂಡನಮಂಡನ ಮಾಡುವುದನ್ನು ಖಂಡಿಸಿ ಮಾತನಾಡಿದವರೇ ಇಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದೇ ಕೆಲಸ ಮಾಡುತ್ತಿದ್ದಾರೆ ಅದು ಬೇರೆ ವಿಷಯ.

ಸಮಾಜ ಸಂಘಟನೆ, ಸಾಮಾಜಿಕ ಕಾರ್ಯ ಇಂತಹವುಗಳ ಬಗ್ಗೆ ಇವನ ಅಭಿಪ್ರಾಯಕ್ಕೆ ಹತ್ತಿರವಿದ್ದ ಪ್ರಕಾಶ್ ಭಂಡಾರಿ ಕಟ್ಲಾ ಇವರೊಂದಿಗೆ ಸಮಾಜದ ಬಗ್ಗೆ ಮಾತನಾಡಲು ಯಾವಾಗಲೂ ಹಿತವೆನ್ನಿಸುತ್ತಿತ್ತು.ಹಾಗಾಗಿ ಅವರು ಹೊಸದಾಗಿ ಆರಂಬಿಸಲು ಹೊರಟಿದ್ದ ಇ-ಪೇಪರ್ ಬಗ್ಗೆ ತಿಳಿದು “ಏನ್ ಸರ್ ನಮ್ಮನ್ನೆಲ್ಲ ಬಿಟ್ಟು ಏನೇನೋ ಮಾಡ್ತಿದ್ದೀರಂತೇ?” ಎಂದು ಹುಸಿಕೋಪದಿಂದ ನಟಿಸಿ ಕರೆ ಮಾಡಿದಾಗ ಸಹಜವೆಂಬಂತೆ ಅವರಾಡಿದ “ನಿಮ್ಮನ್ನೆಲ್ಲಾ ಹೇಗೆ ಬಿಡುವುದು ವೆಂಕಿ” ಅನ್ನುವ ಮಾತು ನನ್ನನ್ನು ಭಂಡಾರಿವಾರ್ತೆಯ ಒಬ್ಬ ಸಧ್ಯಸನಾಗುವಂತೆ ಮಾಡಿತು.

ಭಂಡಾರಿ ಸಮಾಜದ ಆಗುಹೋಗುಗಳ ಬಗ್ಗೆ ವರದಿ ಮಾಡುತ್ತಾ,ಸಮಾಜದ ನಿಜ ಸ್ಥಿತಿಯನ್ನು ವಿಶ್ವದ ಭಂಡಾರಿಗಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಾ ಮುಂದುವರಿದು ಮುಂದಿನ ದಿನಗಳಲ್ಲಿ ವಿದ್ಯೆ, ಆರೋಗ್ಯ, ಕ್ಷೇಮದ ಬಗ್ಗೆ ನಮ್ಮ ಭಂಡಾರಿ ಸಮಾಜಕ್ಕೆ ನೆರವಾಗುವ ದೃಷ್ಟಿಯಿಂದ ಆರಂಭವಾದ ಭಂಡಾರಿವಾರ್ತೆಯ ಬಗ್ಗೆ ನನಗೂ ಅಭಿಮಾನ ಮೂಡಿತ್ತು.ಹಾಗಾಗಿ ಬಿಡುವಿನ ಸಮಯದಲ್ಲಿ ಸಣ್ಣಪುಟ್ಟ ವರದಿಗಳನ್ನು ಬರೆಯಲಾರಂಭಿಸಿ ಸಮಾಜಕ್ಕೆ ನನಗೆ ತಿಳಿದ ಏನಾದರೂ ಒಂದು ವಿಷಯದ ಬಗ್ಗೆ ಬರೆದು ಹಂಚಿಕೊಳ್ಳುವ ಹಂಬಲದಿಂದ ಸಂಘಟನೆ, ಒಕ್ಕೂಟ, ಸಿದ್ದಾಂತ, ಪಕ್ಷಗಳ ಬಗ್ಗೆ,ಸಂಪ್ರದಾಯ, ಧಾರ್ಮಿಕ ನಂಬಿಕೆಗಳ ಬಗ್ಗೆ ಆಲಸ್ಯ ಹೊಂದಿರುವ ಇವನು ತನಗೆ ಹಿಡಿಸದೇ ಇರುವುದನ್ನು ಹಂಚುವುದಾದರು ಯಾಕೆ? ಎಂಬ ಗೊಂದಲಕ್ಕೆ ಬಿದ್ದೆ.ಆ ಸಮಯಕ್ಕೆ ನೆನಪಾದವರು ಇವನನ್ನು ಪ್ರಭಾವಿಸಿದ ಜಿಡ್ಡು ಕೃಷ್ಣಮೂರ್ತಿ ,ಅವರ ಪ್ರವಚನಗಳು ಸಮಾಜಕ್ಕೆ ಯಾವ ರೀತಿಯಿಂದಲೂ ಹೊರೆಯಾಗದು ಎಂಬ ಭಾವದಿಂದ ಜಿಡ್ಡು ಪ್ರವಚನ ಎಂಬ ಅಂಕಣ ಬರೆದೆ.ಅವರನ್ನು ಸಮಾಜ ಬಂಧುಗಳಿಗೆ ಅರ್ಥಹಿಸಲು ಸೋಲುತ್ತಿದ್ದೇನೆ ಎಂಬ ಭಾವ ಮೂಡಿದಾಗ ಅದನ್ನೂ ನಿಲ್ಲಿಸಿದೆ.ಇದೆಲ್ಲದರ ನಡುವೆ ನಾವು ಗೌರವಿಸಿಕೊಂಡು ಬಂದಿದ್ದಂತಹ ಪತ್ರಿಕೆಯಲ್ಲಿ ಭಂಡಾರಿವಾರ್ತೆಯ ಸದಸ್ಯರು ಮುಗ್ದರು ಅವರನ್ನು ಸಮಾಜ ದ್ರೋಹಿ ಒಬ್ಬರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬಂತೆ ಪ್ರಕಟಿಸಿದಾಗ ಕೋಪ ನೆತ್ತಿಗೇರಿದ್ದು ಸುಳ್ಳಲ್ಲ,ಇವನನ್ನು ತಿಳಿದವರೇ ಪತ್ರಿಕೆ ನಡೆಸುತ್ತಿದ್ದಾರಾದರೂ ನಮ್ಮನ್ನು ಸಮಾಜ ಘಾತುಕರು ಎಂದು ಸಂಭೋದಿಸಿದ್ದು ಸರಿ ಕಾಣಲಿಲ್ಲ.ಭಂಡಾರಿವಾರ್ತೆಯು ಎಂದಿಗೂ ಸಮಾಜಕ್ಕೆ ಮಾರಕವಾಗುವಂತಹ ಕೆಲಸ ಮಾಡದು ಎನ್ನುವ ಅಚಲವಾದ ವಿಶ್ವಾಸ ಇವನದ್ದು.ಅದಕ್ಕೆ ಧಕ್ಕೆ ಆದಾಗ ಇವನು ಅಲ್ಲಿ ಕ್ಷಣಮಾತ್ರವೂ ಇರುವುದಿಲ್ಲ ಎನ್ನುವುದು ಇವನ “ನಡೆ.”
ನೀರ ಮೇಲಣ ಚಂದ್ರನಲ್ಲಿ
ಮತ್ತೆ ಮತ್ತೆ ಬಿರುಕು
ಈಗಲೂ ಇದ್ದೇ ಇದೆ…..
ಚೋಷು (ಜೆನ್ ಆತ್ಮಜ್ಞಾನಿಯ ಹಾಯ್ಕು)
ಪ್ರತೀ ಸಲ ಗಾಳಿ ಬೀಸಿದಾಗಲೂ ಸರೋವರದಲ್ಲಿ ಅಲೆಗಳೇಳುತ್ತವೆ.ಚಂದ್ರನಲ್ಲಿ ಮತ್ತೆ ಮತ್ತೆ ಸಾವಿರ ಬಿರುಕುಗಳು ಕಾಣಿಸುತ್ತವೆ. ಆದರೆ ಇದೊಂದು ಪ್ರತಿಫಲನವಾದ ಕಾರಣ ಚಂದ್ರನಿಗೆ ಬಾಧೆಯಿಲ್ಲ.
ಅಂತೆಯೇ ಹಲವಾರು ಅಡೆತಡೆಗಳು ಬಂದರೂ ಸಾಮಾಜಿಕವಾಗಿ ಸದಾಕಾಲವೂ ಎಲ್ಲಾ ವಿಷಯಗಳಿಗೂ ಬರುವ ವಿರೋಧಿಭಾವ ಸಮುದ್ರದ ಅಲೆಗಳಂತೆ ಬಂದು ಹೋಗುತ್ತಿರುತ್ತವೆ ಎಂದು ತಿಳಿದು, ಈ ಭಂಡಾರಿವಾರ್ತೆಯೆಂಬ ಆತ್ಮಬಂಧು ಚಂದ್ರನಂತೆ ಯಾವುದೇ ವಿಕಲ್ಪಗಳಿಗೂ ಒಳಗಾಗದೆ ಸದಾ ಶಾಂತವಾಗಿ ಪ್ರಶಾಂತವಾಗಿ ಭಂಡಾರಿ ಸಮಾಜವನ್ನು ಬೆಳಗುವಂತಾಗಲಿ ಎಂದು ಹಾರೈಸುತ್ತೇನೆ.

✍ ವೆಂಕಟೇಶ ಭಂಡಾರಿ. ಕುಂದಾಪುರ.

ಭಂಡಾರಿ ವಾರ್ತೆ ಸೆಲ್ಫಿ ಸ್ಪರ್ಧೆ 2018 ಅರ್ಜಿ ಅಪ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
ಅಭಿಮಾನದ ವಂದನೆಗಳು ವೆಂಕಿ ಯವರೆ, ಮನಸ್ಸಿನಲ್ಲಿರುವುದನ್ನು ಹಾಗೇ ಹೊರಹಾಕಿದ್ದಕ್ಕೆ.
ಭಂಡಾರಿವಾರ್ತೆಯ ಒಬ್ಬ ಓದುಗನಾಗಿ,ಭಂಡಾರಿವಾರ್ತೆಯ ಒಬ್ಬ ಸದಸ್ಯನಾಗಿ ನೀವಾಡಿದ ಮಾತುಗಳು ತುಂಬಾ ತೂಕದಿಂದ ಕೂಡಿದೆ ವೆಂಕಿಯವರೆ….ಅಭಿಪ್ರಾಯ ಅನಿಸಿಕೆಗಾಗಿ ನಿಮಗೆ ಧನ್ಯವಾದಗಳು.