September 20, 2024

ಕನ್ನಡದ ಕಂಪು
ಕೇಳಲು ಅದೇನೋ ಇಂಪು
ಕನ್ನಡ ಭಾಷೆಯ ಕಂಪು
ಸ್ವಚ್ಛ ಸುಂದರ ಭಾಷಾ ಲಹರಿ
ತನ್ನೊಳಗಿಹಳು ಪವಿತ್ರ ಕಾವೇರಿ

ಸಿರಿವಂತಿಕೆಯ ಸಿರಿತನದ ನಾಡು
ಸಕಲ ಕಲೆಗಳ ಬೀಡು
ಸಂಸ್ಕೃತಿ,ಸಂಪ್ರದಾಯಗಳ ಸಾಗರ
ಸಾಹಿತ್ಯ,ಸಂಗೀತಗಳ ಆಗರ

ಅಷ್ಟಜ್ಞಾನಪೀಠಗಳು ನಿನ್ನ ಮುಕುಟದಿ
ಭವ್ಯತೆಯಿಂದ ಮೆರೆಯುತಿಪುದು
ರನ್ನ ಪೊನ್ನ ಜನ್ನರರಳಿಸಿದ ಕನ್ನಡವಿದು
ಸಂತ ಶರಣರ ತಪೋವನವಿದು

ಕಂಪನು ಸೂಸುವ ಗಂಧದಗುಡಿ
ವಿಶಾಲ ಹೃದಯದ ತಾಯ್ನುಡಿ
ಕೇಳುತಿದೆ ಸಪ್ತಸ್ವರಗಳ ಮಾರ್ನುಡಿ
ಇನ್ನೂ ಕಂಗೊಳಿಸಲಿ ತಾಯೇ ನಿನ್ನ ಮುಡಿ

ಕದಂಬ ಚಾಲುಕ್ಯ ಹೊಯ್ಸಳರು ಮೆರೆದ ನಾಡಿದು
ಎಲ್ಲರನ್ನೊಂದಾಗಿಸಿದ ಮಮತೆಯ ಮಡಿಲಿದು
ತೆಂಗು ಕಂಗು ಬಾಳೆಯಿಂದ ಕಂಗೊಳಿಪ ಬೀಡಿದು
ಹಚ್ಚ ಹಸುರಿನ ಪಚ್ಚೆ ಗಿರಿಗಳ ಸಹ್ಯಾದ್ರಿಯಿದು

ಮೈಸೂರ ವೈಭವ ಮೆರೆದ ಬೀಡಲಿ
ಬೇಲೂರ ಶಿಲಾಬಾಲಿಕೆಯ ವಯ್ಯಾರದಲಿ
ಯಾರು ಸಮವಿ ತಾಯೇ ನಿನ್ನ ಸೌಂದರ್ಯದಲಿ
ಪಸರಿಸಲಿ ಕನ್ನಡವು ಮನಮನಗಳಲಿ ಮನೆಮನೆಗಳಲಿ

ವೈಶಾಲಿ ಭಂಡಾರಿ ಬೆಳ್ಳಿಪ್ಪಾಡಿ

Leave a Reply

Your email address will not be published. Required fields are marked *