January 19, 2025
Karkala Bhoja Bhandary

ಕಾರ್ಕಳ ಪುರಸಭೆಯ ಮಾಜಿ ಸದಸ್ಯ ಶ್ರೀ ಕೆ. ಬೋಜ ಭಂಡಾರಿ ( 71 ವರ್ಷ ) ಫೆಬ್ರವರಿ 20 ನೇ ಶನಿವಾರ ಬೆಳಿಗ್ಗೆ ಮೂಡಿಗೆರೆ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು. ಕಾರ್ಕಳ ಪುರಸಭೆಗೆ 4 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗಿ ಹಾಗೂ 1 ಬಾರಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಅಭಿವೃದ್ಧಿ ಕೆಲಸಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಇವರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮ ವಹಿಸಿದ್ದರಿಂದಲೇ
ಅಭಿವೃದ್ಧಿಯ ಪೊಯಿಂಟ್ ಭೋಜಣ್ಣ
ಎಂದು ಕಾರ್ಕಳ ಆಸುಪಾಸಿನಲ್ಲಿ ಹೆಸರುವಾಸಿಯಾಗಿದ್ದರು.

ಕಾರ್ಕಳ ಭಂಡಾರಿ ಸಮಾಜ ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಕಳೆದ ಹದಿನೈದು ವರ್ಷಗಳ ಹಿಂದೆ ತನ್ನ ವಾಸ್ತವ್ಯವನ್ನು ಮೂಡಿಗೆರೆ ಗೆ ವರ್ಗಾಯಿಸಿ ಅಲ್ಲಿ ಕೂಡ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಶ್ರೀಮತಿ ಹರಿಣಾಕ್ಷಿ ಬೋಜ ಭಂಡಾರಿ ಪುತ್ರರಾದ ಸಂತೋಷ್ ಭಂಡಾರಿ ಮತ್ತು ಸಂಜಯ ಭಂಡಾರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ . ಬೋಜ ಭಂಡಾರಿ ಅವರ ನಿಧನಕ್ಕೆ ಮೂಡಿಗೆರೆ ಭಂಡಾರಿ ಸಮಾಜ ಸಂಘ ಮತ್ತು ಮೂಡಿಗೆರೆ ಸವಿತಾ ಸಮಾಜ ತೀವ್ರ ಸಂತಾಪ ಸೂಚಿಸಿದೆ.

ಮೃತರ ಅಂತ್ಯಕ್ರಿಯೆಯು ಫೆಬ್ರವರಿ 20 ನೇ ಶನಿವಾರ ಮದ್ಯಾಹ್ನ 2.30 ಗಂಟೆಗೆ ಮೂಡಿಗೆರೆಯ ಮುಕ್ತಿಧಾಮದಲ್ಲಿ ಅಪಾರ ಬಂಧು ಬಳಗದ ಸಮ್ಮುಖದಲ್ಲಿ ನಡೆಯಿತು.


ಇವರ ಸಂಸಾರಕ್ಕೆ ಅಗಲುವಿಕೆಯ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *