January 18, 2025
saadita

ಪ್ರಾಸ ಪ್ರವೀಣ – ಕಾರ್ಕಳ ಶೇಖರ್ ಭಂಡಾರಿ

ಭಂಡಾರಿ ಸಮಾಜದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ.ನೃತ್ಯ,ನಾಟಕ,ಸಂಗೀತ,ಸಿನಿಮಾ,ರಂಗಭೂಮಿ,ಕಿರುತೆರೆ,ಸಾಹಿತ್ಯ,ಪತ್ರಿಕೋದ್ಯಮ ಹೀಗೆ ಎಲ್ಲಾ ರಂಗಗಳಲ್ಲಿಯೂ ನಮ್ಮ ಭಂಡಾರಿ ಬಂಧುಗಳು ಸಾಧನೆ ಮಾಡಿ,ತಾವೂ ಹೆಸರು ಗಳಿಸಿ,ಭಂಡಾರಿ ಸಮಾಜಕ್ಕೂ ಗೌರವ ತಂದುಕೊಟ್ಟಿದ್ದಾರೆ. ಈ ಸಂಚಿಕೆಯಲ್ಲಿ ನಾವು ಆಯ್ದುಕೊಂಡ ಸಾದಿತ ಭಂಡಾರಿ ಅದೊಂದು ದೈತ್ಯ ಪ್ರತಿಭೆ.ಬಾಲ್ಯದಲ್ಲಿ ಬಡತನದ ಬವಣೆಗೆ ಸಿಲುಕಿ,ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಜೀವನದಲ್ಲಿ ನೆಲೆ ನಿಂತು,ಬ್ಯಾಂಕ್ ಉದ್ಯೋಗಿಯಾಗಿ,ನಾಟಕಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗ ಪ್ರವೇಶಿಸಿ,ಪೋಲಿಸ್ ಇನ್ಸ್‌ಪೆಕ್ಟರ್,ಜಮೀನ್ದಾರ,ಖಳನಾಯಕ ಹೀಗೆ ಪಾತ್ರಗಳನ್ನು ಮಾಡುತ್ತಾ,ಚುಟುಕು ಸಾಹಿತ್ಯ ಕೃಷಿಗಿಳಿದು ಅಲ್ಲಿಯೂ ತಮ್ಮ ಛಾಪು ಒತ್ತಿ ಚುಟುಕು ಸಾಹಿತಿ, ಪ್ರಾಸ ಪ್ರವೀಣ ನೆಂದು ಹೆಸರು ಗಳಿಸಿ,ಸಮಾಜ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಪ್ಪತ್ತರ ಹರೆಯದಲ್ಲೂ ಲವಲವಿಕೆಯಿಂದ ಇರುವ ಕಾರ್ಕಳ ಶ್ರೀ ಶೇಖರ್ ಭಂಡಾರಿ ಯವರೇ ನಮ್ಮ ಈ ಸಂಚಿಕೆಯ ನಾಯಕ.


ಭಂಡಾರಿವಾರ್ತೆ ಅವರನ್ನು ಮಾತಿಗೆಳೆದಾಗ “ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಗೆ ಒಂದು ವರ್ಷ ತುಂಬುತ್ತಿರುವ ಈ ಶುಭ ಸಂದರ್ಭದಲ್ಲಿ ನಿಮಗೆಲ್ಲಾ ಹಾರ್ದಿಕ ಶುಭಾಶಯಗಳು,ಭಂಡಾರಿವಾರ್ತೆ ಭಂಡಾರಿ ಬಂಧುಗಳ ಕಣ್ಮಣಿಯಾಗಲಿ…“ಎಂದು ದೊಡ್ಡದಾಗಿ ನಗುತ್ತಾ ಮಾತಿಗಳಿದರು.
# ಶೇಖರಣ್ಣ ನಿಮ್ಮ ಬಾಲ್ಯದ ಬಗ್ಗೆ ಹೇಳಿ…?
ಶೇಖರ್ : ಕಾರ್ಕಳದ ಬೆಟ್ಟದಮನೆ ಶ್ರೀ ಬಾಬು ಭಂಡಾರಿ ಮತ್ತು ಶ್ರೀಮತಿ ಅಭಯ ಭಂಡಾರಿ ನನ್ನ ಹೆತ್ತವರು.ಬಾಲ್ಯ ಅಷ್ಟೇನೂ ಸುಖಮಯವಾಗಿರಲಿಲ್ಲ.ಚಿಕ್ಕ ವಯಸ್ಸಿನಲ್ಲಿಯೇ ತಂದೆಯವರ ಅಗಲಿಕೆಯಿಂದಾಗಿ ಜೀವನ, ವಿದ್ಯಾಭ್ಯಾಸ ಮಾಡುವುದು ಕಷ್ಟಕರವಾಗಿತ್ತು.

# ನಿಮ್ಮ ಕುಟುಂಬದ ಬಗ್ಗೆ ಹೇಳಿ…?
ಶೇಖರ್ : ನನ್ನ ಪತ್ನಿ ಶ್ರೀಮತಿ ವಾರಿಜಾ ಶೇಖರ್ ಭಂಡಾರಿ.ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಉದ್ಯೋಗದಲ್ಲಿದ್ದಾರೆ.ಇಬ್ಬರು ಹೆಣ್ಣು ಮಕ್ಕಳು ಶ್ರೀಮತಿ ಪ್ರೀತಿ ಪದ್ಮನಾಭ್ ಮತ್ತು ಶ್ರೀಮತಿ ಸ್ವಾತಿ ಶರತ್. ಇಬ್ಬರೂ ಮದುವೆಯಾಗಿ ಸುಖವಾಗಿದ್ದಾರೆ.

# ನಿಮ್ಮ ವೃತ್ತಿ ಜೀವನ ಹೇಗಿತ್ತು?
ಶೇಖರ್ : ನಿಜವಾಗಿಯೂ ನಾನು ಈ ಸಂದರ್ಭದಲ್ಲಿ ಕಾರ್ಕಳದ ದಿವಂಗತ ಶ್ರೀ ಮೋಹನ್ ದಾಸ್ ಅಡ್ಯಂತಾಯ ಅವರನ್ನು, ಅವರ ಕುಟುಂಬದವರನ್ನು ನೆನಪಿಸಿಕೊಳ್ಳಬೇಕು.ಸಂಕಷ್ಟದಲ್ಲಿದ್ದ ನನಗೆ ವಿಜಯ ಬ್ಯಾಂಕ್ ನಲ್ಲಿ ಉದ್ಯೋಗ ದೊರಕಿಸಿಕೊಟ್ಟು ನನ್ನ ಬದುಕಿಗೆ ತಿರುವು ನೀಡಿದ ಮಹಾತ್ಮ ಅವರು.ಮನುಷ್ಯ ಹಳೆಯದನ್ನು ಮರೆಯಬಾರದು, ಹೇಗೆ ಇದ್ದೆ ಹೇಗೆ ಆದೆ ಎನ್ನುವುದು,ಅದಕ್ಕೆ ಕಾರಣರಾದವರನ್ನು ಸದಾ ನೆನೆಯಬೇಕು.

# ನಿಮ್ಮ ಅಭಿನಯದ ಗೀಳಿನ ಆರಂಭ ಹೇಗೆ?
ಶೇಖರ್ : ಶಾಲಾ ಕಾಲೇಜು ದಿನಗಳಲ್ಲಿ ನಾಟಕಗಳನ್ನು ರಚಿಸಿ,ಅಭಿನಯಿಸಿ,ನಿರ್ದೇಶಿಸತೊಡಗಿದೆ.ಹವ್ಯಾಸಿ ಕಲಾವಿದರೊಂದಿಗೆ ಸೇರಿ ನಾಟಕ ಮಾಡುವುದು ಅಭಿನಯದ ಹಲವು ಮಟ್ಟುಗಳನ್ನು ಕಲಿಸಿತು.ಜೊತೆಗೆ ಶ್ರೀ ಸುಧಾಕರ ಬನ್ನಂಜೆಯವರಂತಹ ಹಲವರ ಪರಿಚಯವಾಯಿತು.

# ಚಿತ್ರರಂಗದ ಪ್ರವೇಶ ಹೇಗೆ?
ಶೇಖರ್ : ನಾಟಕದ ಅಭಿನಯ ಸಿನಿಮಾರಂಗ ಪ್ರವೇಶಕ್ಕೆ ಸ್ಪೂರ್ತಿ ನೀಡಿತು.ಮೊದಲು ಬಿ.ಅರಸ್ ಕುಮಾರ್ ನಿರ್ದೇಶನದ “ಬೀಸಿದ ಬಲೆ”, ವಿಶುಕುಮಾರ್ ನಿರ್ದೇಶನದ “ಕೋಟಿ ಚನ್ನಯ್ಯ” ಸಿನಿಮಾಗಳು ಚಿತ್ರರಂಗದ ಪ್ರವೇಶಕ್ಕೆ ದಾರಿ ತೋರಿಸಿದವು.
ನಂತರ ಆನಂದ್.ಪಿ.ರಾಜು ನಿರ್ದೇಶನದ “ಕೋಟಿ ಚನ್ನಯ್ಯ” ಹಾಗೂ ಸುಧಾಕರ ಬನ್ನಂಜೆಯವರ “ದೇವೇರ್” ತುಳು ಚಿತ್ರ, “ಧರ್ಮ ಯೋಧರು, ನಾನು ಹೇಮಂತ್ ಅವಳು ಸೇವಂತಿ” ಚಿತ್ರಗಳು ಚಿತ್ರರಂಗದಲ್ಲಿ ನೆಲೆಯೂರಲು ಅವಕಾಶ ಮಾಡಿಕೊಟ್ಟವು. ನಂತರ “ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ,ನನ್ನ ತಂಗಿ, ತಮಾಷೆಗಾಗಿ,ಐದೊಂದ್ಲ ಐದು,ಇಂದ್ರ ಧನುಷ್, ಓ ನನ್ನ ನಲ್ಲೆ,ಏಕಾಂಗಿ,ಅಂಬರ್ ಕ್ಯಾಟರರ್ಸ್” ಚಿತ್ರಗಳು ಹೆಸರು ತಂದು ಕೊಟ್ಟವು.
ಸುಧಾಕರ ಬನ್ನಂಜೆಯವರ ಬಿಡುಗಡೆಗೆ ಸಿದ್ಧಗೊಂಡಿರುವ “ಗಂಟ್ ಕಲ್ವೆರ್” ತುಳು ಚಿತ್ರ, “ರಣರಣಕ” ಕನ್ನಡ ಚಿತ್ರ ಯಶಸ್ವಿ ಚಿತ್ರಗಳಾಗುವ ಭರವಸೆ ಇದೆ.

# ಚಿತ್ರರಂಗದಲ್ಲಿ ಮುಂದಿನ ಯೋಜನೆಗಳು ಯಾವುವು?
ಶೇಖರ್ : ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ “ಪಮ್ಮಣ್ಣ ದ ಗ್ರೇಟ್”, ಮಯೂರ್ ರವರ “ಮೈ ನೇಮ್ ಈಸ್ ಅಣ್ಣಪ್ಪ” ,”ಕೋರಿ ರೊಟ್ಟಿ ” “ಜುಗಾರಿ” ಮುಂತಾದ ತುಳು ಚಿತ್ರಗಳು ಚಿತ್ರೀಕರಣದ ವಿವಿಧ ಹಂತಗಳಲ್ಲಿದ್ದಾವೆ.

# ನಿಮ್ಮ ಕಿರುತೆರೆ ಪಯಣ ಹೇಗಿತ್ತು?
ಶೇಖರ್ : ಶ್ರೀ ಗುರು ರಾಘವೇಂದ್ರ ವೈಭವದ “ಸಾಮಂತರಾಜ” , ರಂಗೋಲಿಯ “ಕಾಳೇಗೌಡ” ಜನಪ್ರಿಯ ಪಾತ್ರಗಳು,ಜೋಕಾಲಿ,ಜೋಗುಳ ಧಾರಾವಾಹಿಯ ಪಾತ್ರಗಳು ಗಮನ ಸೆಳೆದರೆ,ಕಸ್ತೂರಿ ಚಾನಲ್ ನಲ್ಲಿ ಪ್ರಸಾರಗೊಂಡ, ಸುಧಾಕರ ಬನ್ನಂಜೆಯವರ ನಿರ್ದೇಶನದ “ಕಂಜೂಸ್ ಕಮಂಗಿರಾಯ” ಧಾರಾವಾಹಿ ಮುನ್ನೂರು ಸಂಚಿಕೆಯನ್ನು ಪೂರೈಸಿ ದಾಖಲೆ ಬರೆಯಿತು.

# ರೇಡಿಯೋ ಕಾರ್ಯಕ್ರಮಗಳು….?
ಶೇಖರ್ : ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಂಡ “ರೈನ್ ಭೋ” ಕಾರ್ಯಕ್ರಮ ಪರಿಸರ ಜಾಗೃತಿಯ, ನೈರ್ಮಲ್ಯ ಕಾಳಜಿಯಿಂದಾಗಿ ಜನಮನ್ನಣೆ ಗಳಿಸಿತು. ಮಂಗಳೂರು ಆಕಾಶವಾಣಿಯಲ್ಲಿ “ಕರಾವಳಿಯ ಕರೆಗಾಳಿಗಳು” ಸಹಾ ಜನಪ್ರಿಯ ಕಾರ್ಯಕ್ರಮಗಳಲ್ಲೊಂದು. ಮತ್ತೆ ಕರಾವಳಿಯ ಪ್ರಸಿದ್ಧ “ಆಟಿಡೊಂಜಿ ದಿನ” “ಕೆಸರ್ ಗೊಬ್ಬು ಕ್ರೀಡಾಕೂಟ” ಗಳಲ್ಲಿ ಅತಿಥಿಯಾಗಿ ಭಾಗವಹಿಸಿ,ಪ್ರಾಸ ಸಾಹಿತ್ಯದ ಮೂಲಕ ರಂಜಿಸಿದ ನೂರಾರು ಉದಾಹರಣೆಗಳಿವೆ.

# ನಿಮ್ಮ ಪ್ರಾಸ ಸಾಹಿತ್ಯದ ಬಗ್ಗೆ….?
ಶೇಖರ್ : ತಾಯಿ ಶಾರದಾಂಬೆ ನೀಡಿದ ವರ ಅದು.ನಾನು ಮಾತನಾಡಿದರೆ ಅಲ್ಲಿ ಪ್ರಾಸ ಇರುತ್ತದೆ.ನೂರಾರು ಪ್ರಾಸ ಕವಿತೆಗಳನ್ನು ಬರೆದಿದ್ದೇನೆ.”ಮಸ್ತಕದಿಂದ ಪುಸ್ತಕಕ್ಕೆ” ಎಂಬ ಪ್ರಾಸ ಭಂಡಾರ ಪುಸ್ತಕದ ಸರಣಿಯಲ್ಲಿ ಮೂರು ಪುಸ್ತಕಗಳು ಪ್ರಕಟಗೊಂಡಿವೆ.ಮೂರನೇ ಪುಸ್ತಕ ಕೆಲವು ಹೊಸ ಹೊಸ ಚುಟುಕುಗಳೊಂದಿಗೆ ನಾಲ್ಕನೇ ಪುಸ್ತಕವಾಗಿ ಮರುಮುದ್ರಣಗೊಳ್ಳುತ್ತಿದೆ. ಒಂದು ಪುಸ್ತಕಕ್ಕೆ ಖ್ಯಾತ ಚಿತ್ರ ಸಾಹಿತಿ ವಿ.ಮನೋಹರ್ “ವಿಭಿನ್ನವತ್ತಳೆ” ಬರೆದು…
“ಮನಸಲಿ ಇವರು ಮಗು
ಅದಕ್ಕೇ ಸದಾ ನಗು.
ಯಾರದಾದ್ರೂ ಮುಖವಿದ್ರೆ ಬಿಗು
ಅದನ್ನು ಲಘುವಾಗಿಸುವ ಭೃಗು.
ಭೃಗು ಮುನಿ ಕೋಪಿಷ್ಠ ,ಶಾಪಿಷ್ಠ.
ಆದರೆ ಭಂಡಾರಿಗೆ ಲಾಫ್ ಇಷ್ಠ.
ಹಾಗಾಗಿ ಇವರು ಎಲ್ಲರಿಗೂ ಇಷ್ಠ….ಎಂದು ಬರೆದು ಶುಭ ಹಾರೈಸಿದ್ದಾರೆ.
ಡಾ|| ರಾಜ್ ಕುಮಾರ್ ಬಗ್ಗೆ ಬರೆಯುತ್ತಾ…..
ನಮ್ಮ ನಿಮ್ಮೆಲ್ಲರ ಪ್ರೀತಿಯ ಅಣ್ಣ.
ಬೇಡರ ಕಣ್ಣಪ್ಪದಿಂದ ಹಾಕಿದ್ದರು ಮೊದಲನೆಯ ಬಣ್ಣ.
ಅಂದು ಅಭಿನಯದಲ್ಲಿ ನೀಡಿದ್ದರು ಶಿವನಿಗೇ ಕಣ್ಣ.
ನಿಜ ಬದುಕಿನಲ್ಲಿ ಅಣ್ಣ.
ಕಣ್ಣ ಮಾಡಲಿಲ್ಲ ಮಣ್ಣ.
ಅಂದರಿಬ್ಬರಿಗೆ ನೀಡಿ ಕಣ್ಣ.
ಸಾರ್ಥಕರಾದರು ನಮ್ಮ ರಾಜಣ್ಣ…..ಬರೆದ ಚುಟುಕ  ಪ್ರಶಸ್ತಿಯನ್ನು ತಂದುಕೊಟ್ಟಿತು.

# ನಿಮ್ಮ ಸಾಮಾಜಿಕ ಜೀವನ ಹೇಗಿತ್ತು?
ಶೇಖರ್ : ಸಾಮಾಜಿಕ ಸೇವೆಯೆಂಬುದು ಭಂಡಾರಿ ಬಂಧುಗಳ ರಕ್ತಗತವಲ್ಲವೇ? ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಂಸ್ಥಾಪಕ ಟ್ರಸ್ಟಿಗಳಲ್ಲಿ ನಾನೂ ಒಬ್ಬ ಎಂಬ ಹೆಮ್ಮೆಯಿದೆ.ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಉದ್ಯೋಗನಿಮಿತ್ತ ಬೆಂಗಳೂರಿನಲ್ಲಿದ್ದಾಗ ಯಶವಂತಪುರದ ” ಯಶವಂತ ವ್ಯಾಯಾಮ ಶಾಲೆ” ಯ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ,ಬೆಂಗಳೂರು ಭಂಡಾರಿ ಸಮಾಜ ಸಂಘವನ್ನು ವೈ.ಶಂಭು ಭಂಡಾರಿ, ಶರಶ್ಚಂದ್ರ ಭಂಡಾರಿ, ಕೆಇಬಿ ಜಯ ಭಂಡಾರಿಯವರ ಜೊತೆ ಸೇರಿ ಹುಟ್ಟು ಹಾಕಿ,ಕಾರ್ಯದರ್ಶಿಯಾಗಿ,ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.ಬೆಂಗಳೂರು ವಲಯದ ಎಲ್ಲಾ ಪದಾಧಿಕಾರಿಗಳ,ಸದಸ್ಯರ ವಿಳಾಸವನ್ನೊಳಗೊಂಡ ಕೈಪಿಡಿಯನ್ನು ಹೊರತಂದದ್ದು ನಮ್ಮ ಅಧಿಕಾರಾವಧಿಯಲ್ಲಿ.ಬೆಂಗಳೂರು ಸಂಚಾರಿ ಪೋಲಿಸ್ ನವರು ನನ್ನ ಹಲವು ಚುಟುಕಗಳನ್ನು ಬಳಸಿಕೊಂಡಿದ್ದಾರೆ.ಉತ್ತಮ ಸಮಾಜ ಸೇವಕನೆಂದೂ,ಪರಿಸರ ಪ್ರೇಮಿಯೆಂದೂ ಹಲವಾರು ಸಂಘ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದ್ದೇನೆ.

“ಹೆಲ್ಮೆಟ್ ಧರಿಸಿ 
ನಿಮ್ಮ ತಲೆಯ ಉಳಿಸಿ.”
“ಚಾಲನೆಯಲ್ಲಿ ತೋರಿಸಬೇಡಿ ನಿಮ್ಮ ತಾಕತ್ತು.
ವೇಗ ಮಿತಿಮೀರಿದರೆ ನಿಮ್ಮ ಜೀವಕ್ಕೆ ಆಪತ್ತು.”
“ಸಾರಿಗೆ ನಿಯಮ ಪಾಲಿಸಿದರೆ ಆರಾಮ.
ಇಲ್ಲದಿದ್ದರೆ ಕೊಂಡು ಹೋಗ್ತಾನೆ ಯಮ.”…. ಇವು ಕೆಲವು ನನ್ನ ರಸ್ತೆ ಸುರಕ್ಷತೆಯ ಮೇಲಿನ ಚುಟುಕಗಳು.

# ಪ್ರಶಸ್ತಿ ಪುರಸ್ಕಾರಗಳು….?
ಶೇಖರ್ : ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ,ಉದ್ಯೋಗದಾತ ವಿಜಯ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಪ್ರಕಾಶ್.ಪಿ.ಮಲ್ಯರಿಂದ “ವಿಜಯಶ್ರೀ ಪ್ರಶಸ್ತಿ” ಪಡೆದದ್ದು ಜೀವನ ಸಾರ್ಥಕವೆನಿಸಿದ ಕ್ಷಣ.ನಂತರ ಬಂದ “ಕರ್ನಾಟಕ ತಿಲಕ ರಾಜ್ಯ ಪ್ರಶಸ್ತಿ,ಡಾ|| ರಾಜ್ ಕುಮಾರ್ ಸದ್ಭಾವನ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಡಾ|| ಶಿವರಾಮ ಕಾರಂತ ಸದ್ಭಾವನ ಪ್ರಶಸ್ತಿ…. ಹೀಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದ್ದೇನೆ ಎನ್ನುವುದಕ್ಕಿಂತ ಶ್ರೀ ದೇವರ ಅನುಗ್ರಹದಿಂದ ದೊರೆತಿದೆ ಎನ್ನಬಹುದು.

# ಕೊನೆಯದಾಗಿ ಭಂಡಾರಿ ಸಮಾಜಕ್ಕೆ, ಯುವಕರಿಗೆ ನಿಮ್ಮ ಹಿತವಚನ ಏನು?
ಶೇಖರ್ : ನಮ್ಮ ಭಂಡಾರಿ ಸಮಾಜದ ಯುವಕರು ಶಿಕ್ಷಣಕ್ಕೆ  ಆದ್ಯತೆ ನೀಡಬೇಕು. ಗುರು ಹಿರಿಯರನ್ನು ಗೌರವಿಸಬೇಕು.ತಂದೆ ತಾಯಿಯರಿಗೆ ವಿದೇಯರಾಗಿರಬೇಕು.
ಇನ್ನು ಸಂಘ ಸಂಸ್ಥೆಗಳಿಗೆ ನನ್ನ ಚುಟುಕೇ ಉತ್ತರ….
ಸಂಘ ಸಂಸ್ಥೆಗಳಿರುವುದು ಸಂಘರ್ಷಕ್ಕಲ್ಲ, ಸಂಘಟನೆಗೆ.
ಸಂಘದ ಅಧ್ಯಕ್ಷರು ಮಾಡಿದರೆ ಸಿಟ್ಟು.
ಸದಸ್ಯರು ಹೋಗುತ್ತಾರೆ ಬಿಟ್ಟು.
ಎಲ್ಲರನ್ನೂ ಮಾಡಬೇಕು ಒಟ್ಟು.
ಅದು ಧಕ್ಷ ಅಧ್ಯಕ್ಷನ ಗುಟ್ಟು.
ಹಾಗಾಗಿ ನಾವು ಎಂದೆಂದೂ ಇರಬೇಕು ಒಟ್ಟು…. ಒಟ್ಟು.

# ನಮ್ಮೊಂದಿಗೆ ಮನಬಿಚ್ಚಿ ಮಾತನಾಡಿದ್ದಕ್ಕಾಗಿ ಧನ್ಯವಾದಗಳು ಶ್ರೀ ಶೇಖರ್ ಭಂಡಾರಿ ಕಾರ್ಕಳರವರಿಗೆ…
ಶೇಖರ್ : ನೋ Hurry…ನೋ Worry….
ನಗುವುದ ಅರಿ…
ದುಃಖವ ಮರಿ…
ಹೇಳ್ತಾನೇ ಕಾರ್ಕಳ ಶೇಖರ ಭಂಡಾರಿ….. ಹ್ಹ ಹ್ಹಹ್ಹಹ್ಹ….

ನೋಡಿದ್ರಲ್ಲಾ ಬಂಧುಗಳೇ….ನಮ್ಮ ಸಮಾಜದ ಹಿರಿಯ ಬಂಧುವೊಬ್ಬರ ಮನದಾಳದ ಮಾತುಗಳನ್ನು.ಅವರ ಜೀವನ ಕೆಲವರಿಗಾದರೂ ಮಾದರಿಯಾದರೆ,ಸ್ಪೂರ್ತಿಯಾದರೆ ನಮ್ಮ ಈ  ಸಾದಿತ ಭಂಡಾರಿ  ಅಂಕಣದ ಉದ್ದೇಶ ಸಾರ್ಥಕಗೊಂಡಂತೆ.
ಶ್ರೀ ಶೇಖರ್ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *