September 20, 2024

ಕಾರ್ಲ ಅಥವಾ ಕಾರ್ಕಳ ಎಂಬ ಹೆಸರು ಹುಟ್ಟುವ ಮೊದಲೇ ಇಲ್ಲಿ “ಆನೆಕಟ್ಟ” ಮತ್ತು “ಆನೆಕೆರೆ” ಎಂಬ ಹೆಸರುಗಳು ಜನಿಸಿದ್ದವು. ಆನೆಕಟ್ಟ ಮತ್ತು ಆನೆಕೆರೆ ಎಂಬ ಹೆಸರುಗಳಿಗೆ 2000 – 2300 ವರ್ಷಗಳ ಇತಿಹಾಸ ಇದೆ. ಹಿನ್ನಲೆ ಸಾಕ್ಷಿಗಳು ಇವೆ.

 

ತುಲುನಾಡಿನ ಬಹುಪಾಲು ಭೂಮಿಯು ಅಂದು ಕೊಳ ವಾಗಿತ್ತು. ಜೈನರ ತುಲುನಾಡಲ್ಲಿ ಹೊಲ ಗದ್ದೆಗಳ ನಿರ್ಮಾಣ ಅದರಲ್ಲೂ “ಕೊಳಕ್ಕೆ ಗದ್ದೆಗಳು” ಯೋಜನೆಯಡಿಯಲ್ಲಿ ಅಂದು ಅವರು ಈಗಿನ ಕಾರ್ಕಳಕ್ಕೆ ಬಂದಿದ್ದಾರೆ. ಪಶ್ಚಿಮ ಘಟ್ಟದಿಂದ ಹರಿದು ಬರುತ್ತಿದ್ದ ಮಳೆ ನೀರು ಈಗಿನ ರಾಮ ಸಮುದ್ರಕ್ಕೆ ಇಳಿದು ಉತ್ತರಾಭಿಮುಖವಾಗಿ ಹರಿದು ಈಗಿನ ಆನೆಕೆರೆಯಿಂದ ಕೆಳಕ್ಕೆ ರಭಸದಿಂದ ದುಮುಕುವ ದೃಶ್ಯ ಕಾಣುತ್ತದೆ. ಇದರ ಕೆಳಗಿನ ಪ್ರದೇಶ ಪೂರ್ತಿ ವಿಶಾಲ ವಾಗಿತ್ತು. ಬಹುದೂರವರೆಗೂ ಹಬ್ಬಿತ್ತು. ವರ್ಷ ಇಡೀ ನೀರಿ ನಿಂದ ಕೊಳ(ಪಟ್ಲ)ವಾಗಿತ್ತು. ಬೇಸಿಗೆಯ ಕಾಲದಲ್ಲಿ ಈ ಕೊಳದ ಕೆಲವೆಡೆಗಳಲ್ಲಿ ನೀರು ಬತ್ತಿ ಹೋಗುತ್ತದೆ. ಜೈನರು ಪ್ರಪ್ರಥಮವಾಗಿ ಇಲ್ಲಿ ಒಂದು ನಿತ್ಯ ಆರಾಧನೆಗಾಗಿ ಮುಲಿ ಹುಲ್ಲಿನ ಬಸದಿ ನಿರ್ಮಿಸುವರು. ಇಲ್ಲಿ ಯಾವುದೇ ಕಲ್ಲುಗಳನ್ನು ಬಳಸದ ಬಸದಿ ಆಗಿತ್ತು. ನಂತರದ ಕಾಲದಲ್ಲಿ ಈ ಬಸದಿಯನ್ನು ಕೆರೆ ಬಸದಿ ಎಂದು ಕರೆಯುತ್ತಾರೆ.

ಇಲ್ಲಿನ ಕೊಳ ಪ್ರದೇಶದಲ್ಲಿ “ಕೊಳ” ಕ್ಕೆ ಗದ್ದೆಗಳನ್ನು ನಿರ್ಮಾಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಈಗಿನ ಮೂಡಬಿದ್ರೆ|ಪಡುಬಿದ್ರೆ ರಸ್ತೆ ತಿರುವುಗಳ ಸರ್ಕಲಿ ನಿಂದ ಹಿಡಿದು ಆನೆಕೆರೆಯ ಕೊನೆಯಲ್ಲಿ ಇರುವ ಮಸೀದಿಯವರೆಗಿನ ಸಾಧಾರಣ ಅರ್ಧ ಮೈಲಿನ ವಿಸ್ತೀರ್ಣದಲ್ಲಿ ನೀರು ಕೆಳಗಿನ ಪಟ್ಲ ಭೂಮಿಗೆ ರಭಸದಿಂದ ದುಮುಕುತ್ತಿತ್ತು. ಈ ಹೊರ ಹರಿಯುವ ನೀರನ್ನು ನಿಲ್ಲಿಸಿದ ನಂತರವೇ ಕೆಳಗಿನ ಕೊಳ ಪ್ರದೇಶದಲ್ಲಿ “ಕೊಳ“ಕ್ಕೆ ಗದ್ದೆಗಳನ್ನುನಿರ್ಮಾಣಮಾಡಲು ಬರುತ್ತದೆ ಎಂದು ಅರಿತ ಜೈನರು ಬೃಹತ್ ಕಟ್ಟ(ಕಟ್ಟೆ,ದಂಡೆ)ಕಟ್ಟುವ ಯೋಜನೆ ಹಾಕುತ್ತಾರೆ. ಕಟ್ಟವನ್ನು ಕಟ್ಟಿದರೆ ನೀರಿನ ಸಂಗ್ರಹ ಆಗುತ್ತದೆ. ಹೆಚ್ಚುವರಿ ನೀರನ್ನು ಹೊರಬಿಡಲು ಕಾಲುವೆಯ ಅಗತ್ಯ ಇದೆ. ಅಲ್ಲದೆಕೊಳಕ್ಕೆ ಬೆಳೆಗೆ ಕೊನೆಯ ತಿಂಗಳಲ್ಲಿ ನೀರಿನ ಅಗತ್ಯ ಇದೆ. ಈ ಕಾಲುವೆಯ ಮೂಲಕ ಬಹುದೂರದವೆರೆಗೆ ನೀರನ್ನು ಹರಿಸಿ ಒಳ್ಳೆಯ ಮೂರನೆಯ ಬೆಳೆಯನ್ನು ತೆಗೆಯಬಹುದು ಎಂಬ ಯೋಜನೆ ಹಾಕುತ್ತಾರೆ. ರಾಮಸಮುದ್ರದಿಂದ ಹಿಡಿದು ಈ ಕಟ್ಟದವರೆಗೂ ಬಹಳಷ್ಟು ವಿಸ್ತಾರವಾಗಿ ನೀರು ಸಂಗ್ರಹ ಆಗುತ್ತದೆ ಎಂಬ ಭಾವನೆ ಅವರಲ್ಲಿ ಬರುತ್ತದೆ. ದೊಡ್ಡ ಕಟ್ಟ ಕಟ್ಟಿ ದೊಡ್ಡ ಸರೋವರ ನಿರ್ಮಾಣ ಮಾಡುವ ಕಾಮಗಾರಿ ಕೆಲಸ ನಡೆದೇ ಬಿಡುತ್ತದೆ.

 

ಇದು ಸಾಧಾರಣ 2000 – 2300 ವರ್ಷಗಳ ಹಿಂದಿನ ಕತೆ ಇತಿಹಾಸ. ಅಂದು ಇಂದಿನಂತೆ ಕಟ್ಟ(DAM)ಕಟ್ಟುವ ಕಚ್ಛಾ ವಸ್ತುಗಳು,ಯಂತ್ರೋಪಕರಣಗಳು ಇರಲಿಲ್ಲ. ಎಲ್ಲಾ ಕೈಯಿಂದ ಶಾರೀರಿಕವಾಗಿ ನಡೆಯಬೇಕಿತ್ತು. ಪಾದೆ ಕಲ್ಲುಗಳ ಬಳಕೆಯು ನಂತರದ ಕಾಲದಲ್ಲಿ ಬಸದಿಗಳ ನಿರ್ಮಾಣದ ಕಾಲದಲ್ಲಿ ಹುಟ್ಟುತ್ತದೆ. ಇಲ್ಲಿ ಮಣ್ಣು,ಕಾಟು ಕಲ್ಲುಗಳು, ರೂಪ ಇಲ್ಲದ ಮುರಕಲ್ಲುಗಳನ್ನು ಬಳಸಿ ಬೃಹತ್ ಕಟ್ಟದ ಕೆಲಸ ಆರಂಭವಾಗುತ್ತದೆ. ಕಟ್ಟ ಕಟ್ಟುವ ಮೊದಲು ಕಾಲುವೆಯ (ತೋಡು)ಕೆಲಸವನ್ನು ಆರಂಭಿಸುತ್ತಾರೆ. ಮೈಲುಗಟ್ಟಲೆ ಉದ್ದದ ಗಟ್ಟಿಮುಟ್ಟಾದ ಕಾಲುವೆಯ ನಿರ್ಮಾಣ ಆದ ಬಳಿಕ ಹೊರ ಹರಿಯುವ ನೀರನ್ನು ಕಾಲುವೆಯಲ್ಲಿ ಬಿಟ್ಟು ಕಟ್ಟದ ಕೆಲಸ ಆರಂಭಿಸುತ್ತಾರೆ. ಈ ಕಾಲುವೆಯು ಈಗಲೂ ಪೂರ್ವದಲ್ಲಿ ಮಸೀದಿ ಪಕ್ಕ ಹರಿದು ಹೋಗುತ್ತದೆ. ಈ ಜಲಾಶಯದ ನೀರು ಕಿಂಡಿಗಳ ಮೂಲಕ ಕಾಲುವೆ ಸೇರುತ್ತದೆ. ಈ ವ್ಯವಸ್ಥೆ ಅಂದಿನ ಕಾಲದ್ದೇ ಆಗಿದೆ.

ಈ ಕಟ್ಟದ ಕೆಲಸ ಪೂರ್ತಿ ಆಗಲು 5-6 ವರ್ಷಗಳೇ ಬೇಕಾಗಿರಬಹುದು. ಇದರ ಉದ್ದ ಸಾಧಾರಣ ಅರ್ಧ ಮೈಲಿ ಆಗಬಹುದು. ಕಟ್ಟದ ಮೇಲೆ ಕಾಣುವಂತೆ ಇದರ ಅಗಲ ಕೆಳಗಿನ ಉತ್ತರ ದಿಕ್ಕಿನ ಭೂಮಿಯ ಮಟ್ಟದಿಂದ 100 ಫೀಟುಗಳಷ್ಟು ಆಗಬಹುದು. ಪಂಚಾಗ ಎಷ್ಟು ಆಳವಾಗಿತ್ತು ಎಂದು ಹೇಳಲು ಆಗುವುದಿಲ್ಲ. ಕಟ್ಟವು ಎರಡು ಹಂತದಲ್ಲಿ ಮೇಲೆ ಬಂದಿದೆ. ಆರಂಭದಲ್ಲಿ ಸಾಧಾರಣ 100 ಫೀಟ್ ಅಗಲ ಇದ್ದರೆ ಎರಡನೇ ಸ್ಟೇಜ್ ಹಂತದಲ್ಲಿ ಅದರ ಅಗಲವು ಕಡಿಮೆ ಆಗಿದೆ. ಈಗ ಈ ಕಡಿತವಾದ ಜಾಗದಲ್ಲಿ ಮನೆಗಳು ಇವೆ. ಲೆಕ್ಕಾಚಾರವು ಕಟ್ಟದ ಉದ್ದಕ್ಕೂ ಒಂದೇ ರೀತಿ ಇರುವುದಿಲ್ಲ. ಏಕೆಂದರೆ ನಂತರದಲ್ಲಿ ಭೂಮಿಯ ಬೆಳವಣಿಗೆಯಿಂದ ವ್ಯತ್ಯಾಸ ಇದೆ. ಈ ಕಟ್ಟದ ಎತ್ತರ,ಮಧ್ಯದಲ್ಲಿ ತಳಭಾಗದಿಂದ ಮೇಲ್ಮೈಯ ವರೆಗೆ ಸಾಧಾರಣವಾಗಿ 50-60 ಫೀಟುಗಳಷ್ಟು ಇದೆ. ಇದು ಪಂಚಾಂಗದ ಆಳವನ್ನು ಹೊರತುಪಡಿಸಿ ಆಗಿದೆ. ಇಲ್ಲಿ ಕೊಟ್ಟಿರುವ ಲೆಕ್ಕಗಳು ತಪ್ಪಾಗಿರಬಹುದು. ಕೆಳಗೆ ಇಳಿಯುವುದೇ ಒಂದು ಸಾಹಸ ಎನಿಸುತ್ತದೆ. ಕಟ್ಟದ ಉತ್ತರ ದಿಕ್ಕಿನ ಕೊಳಕ್ಕೆ ಗದ್ದೆಗಳು ಪಡೀಲ್ ಬಿದ್ದಿದೆ. ಪೊದೆಗಳು ಪೂರ್ತಿ ಕಟ್ಟದ ಸ್ವರೂಪವನ್ನೇ ಮರೆಮಾಡಿದೆ. ಮನುಷ್ಯನನ್ನು ಹೂತು ಬಿಡುವಂತೆ ಕೆಸರು ತುಂಬಿದೆ. ಆದರೂ ಒಂದೆಡೆ ನುಸುಳಿ ಅಂದು ಬಳಸಿದ ಕಲ್ಲುಗಳ ಒಂದೆರಡು ಫೋಟೊ ತೆಗೆದೆ.

 

 

 

 

ಈ ಕಟ್ಟವನ್ನು ಪೂರ್ವ ಪಶ್ಚಿಮಾಭಿಮುಖವಾಗಿ ಉದ್ದಕ್ಕೆ ನಿರ್ಮಾಣ ಮಾಡಲಾಗಿದೆ. ನೀರಿನ ಹರಿವು ದಕ್ಷಿಣ ದಿಕ್ಕಿನಿಂದ ಉತ್ತರಕ್ಕೆ ಇದೆ. ನೀರು ಹೇಗೆ ಹರಿಯುತ್ತಿತ್ತು ಎಂಬುದನ್ನು ನಾವೇ ಕನ್ನಂಬಾಡಿ ಕಟ್ಟ(ಕಟ್ಟೆ,ದಂಡೆ)ವನ್ನು ನಮ್ಮಕಣ್ಣೆದುರು ತರಬೇಕು. ಬೃಹತ್ ಕಾಲುವೆ ಮೂಲಕ ಹರಿಯುತ್ತಿತ್ತು. ಕಾಲುವೆಯ ರೂಪವನ್ನು ಕಾಲ ಕಾಲಕ್ಕೆ ಬದಲಾಯಿಸುತ್ತಾ ಬಂದಿದೆ. ಒಂದು ಕಾಲದಲ್ಲಿ ಈ ಕಟ್ಟದ ಹೊರಮೈ ಈಗಿನ ಅಣೆಕಟ್ಟಿನಂತೆ ಇತ್ತು.

ಜೈನರು ತಮ್ಮ ಯೋಜನೆಯನ್ನು ಕಾರ್ಕಳ ಮೂಡಬಿದ್ರೆ ಊರುಗಳಿಂದ ಆರಂಭಿಸಿದ್ದಾರೆ. ಇವರು ಕನ್ನಡಿಗರು. ಈ ಬೃಹತ್ ಕಟ್ಟವನ್ನು(ಕಟ್ಟೆ,ದಂಡೆ)ತುಲುನಾಡಿನ ಮೊದಲ ಕಟ್ಟ ಎಂದಿದ್ದಾರೆ. ಇದೊಂದು ಗಟ್ಟಿಯಾದ ಬಲಿಷ್ಠವಾದ ನೀರು ಸಂಗ್ರಹದ ಕಟ್ಟೆ ಎಂದಿದ್ದಾರೆ. ತಮ್ಮ ಕಟ್ಟವನ್ನು ಆನೆಗೆ ಹೋಲಿಸಿ “ಆನೆ ಕಟ್ಟ” ಎಂದಿದ್ದಾರೆ. ಕ್ರಮೇಣವಾಗಿ ತುಲುವರು “ಆನೆಕಟ್ಟ” ಪದವನ್ನು “ಕಟ್ಟ ಆನೆ“ಎಂದು ಉಚ್ಛಾರದಲ್ಲಿ ವ್ಯತ್ಯಾಸ ಮಾಡುತ್ತಾರೆ. ಕ್ರಮೇಣವಾಗಿ “ಕಟ್ಟ ಆನೆಗೆ” ಎನ್ನುವರು. (ಕಟ್ಟ+ಆನೆ+ಗೆ) ಇಲ್ಲಿ “ಗೆ” ಎಂದರೆ “ಅಂತೆ” ಎಂದರ್ಥ. ಈ ಕಟ್ಟ ಆನೆಯಂತೆ ಬಲು ಗಟ್ಟಿ ಅಂತೆ . ಬಹಳ ದೊಡ್ಡ ಕಟ್ಟ ಅಂತೆ ಎನ್ನುತ್ತಾರೆ.

ಕಾಲಗಳು ಉರುಳಿದಂತೆ ತುಲು ಭಾಷೆಯ ಶಬ್ಧಗಳು ಉಚ್ಛಾರದಲ್ಲಿ ಚಿಕ್ಕದಾಗಿ ಹೋಗುತ್ತದೆ. ಅದರಂತೆ “ಕಟ್ಟ ಆನೆಗೆ” ಪದವು “ಕಟ್ಟನೆಗೆ” ಎಂದಾಗುತ್ತದೆ. ನಂತರದಲ್ಲಿ”ಕಟನ್ಗೆ“ಎನ್ನುವರು. ಈಗಲೂ ಕಟನ್ಗೆ ಎಂದೇ ಕರೆಯುತ್ತಾರೆ. “ಕಟನ್ಗೆ“ಪದದಲ್ಲಿ ಕಟ್ಟ+ಆನೆ+ಗೆ ಎಂಬ ಪದಗಳು ಅಡಗಿದೆ. ಇದು ಆ ಕಾಲದ ಪ್ರತಿಷ್ಠೆಯ ಬೃಹತ್ ಕಟ್ಟವಾಗಿತ್ತು. ಈಗಿನ ಆನೆ ಕೆರೆಯ ದಂಡೆಯೇ ಆ ಕಟನ್ಗೆ. ಈಗಲೂ ಜೀವಂತವಾಗಿದೆ. ಈ ಕಟನ್ಗೆಯಲ್ಲಿ ಈಗಲೂ 3-4 ಮನೆಗಳು ಇದೆ. ಅವರ ಮನೆಯ ವಿಳಾಸವೂ ಕಟನ್ಗೆ ಎಂದಾಗಿದೆ. ಈ ಕಟ್ಟದ ಮೇಲೆ ದಿನಾ ಸಾವಿರಾರು ವಾಹನಗಳು ಓಡಾಡುತ್ತದೆ.

ಅಂದು ಆನೆಕಟ್ಟದ ನಿರ್ಮಾಣ ಆದ ಬಳಿಕ ಆ ಕಟ್ಟದ ಸೌಂದರ್ಯವನ್ನು ತುಲುನಾಡಿನ ಜನ ಕೊಂಡಾಡುವರು. ರಾಮಸಮುದ್ರದಿಂದ ಈ ಆನೆ ಕಟ್ಟೆಯವರೆಗಿನ ಪ್ರದೇಶವು ನೀರಿನಿಂದ ತುಂಬಿ ಜನರನ್ನು ಆಕರ್ಷಿಸುತ್ತದೆ. ಹೆಚ್ಚುವರಿ ನೀರು ಕಾಲುವೆ ಮುಖಾಂತರ ಹೊರಬಿಡಲಾಗುತ್ತದೆ. ಜಲಾಶಯದಂತೆ ಸಾಗರದಂತೆ ಕಾಣುವ ಕೆರೆಯನ್ನು “ಆನೆಕೆರೆ“ಎಂಬ ಹೆಸರಲ್ಲಿ ಕರೆದರು. ಬೃಹತ್ ಕಟ್ಟ ಮತ್ತು ಬೃಹತ್ ಕೆರೆಗೆ ಆನೆಯನ್ನು ಸೇರಿಸಿ “ಆನೆಕಟ್ಟ” (ಈಗ ಕಟನ್ಗೆ) “ಆನೆಕೆರೆ”ಹೆಸರುಗಳು ಶಾಶ್ವತವಾಗಿ ಉಳಿದವು.

ಕಾಲಗಳು ಉರುಳುತ್ತದೆ. ಹೊಲ ಗದ್ದೆಗಳ ನಿರ್ಮಾಣ ಆಗುತ್ತದೆ. ಜನಸಂಖ್ಯೆ ಹೆಚ್ಚಾಗಿ ನಾಡು ಬೆಳೆಯುತ್ತದೆ. ರಾಮಸಮುದ್ರದಿಂದ ಹರಿಯುವ ನೀರನ್ನು ಬೇರೆ ಊರಿಗೆ ಕಾಲುವೆ(ಈಗ ತೋಡು),ಹೊಳೆಯ ಮುಖಾಂತರ ತಿರುಗಿ ಸಲಾಗುತ್ತದೆ. ಮನೆಗಳು ಏಳುತ್ತವೆ. ಬಸದಿಗಳ ನಿರ್ಮಾಣ ಆಗುತ್ತದೆ. ನಂತರದ ಕಾಲಗಳಲ್ಲಿ ಎಲ್ಲಾ ಧರ್ಮಗಳು ಇಲ್ಲಿ ಬೆಳೆಯುತ್ತದೆ.

 

ಕರಿಕಲ್ಲುಗಳು ಇಲ್ಲಿ ಇರುವುದರಿಂದಲೇ ಕರಿ+ಕಲ್ಲ್=ಕಾರ್ಕಲ(ಈಗ ಕಾರ್ಕಳ)ಆಗಿದೆ ಎನ್ನುವರು ಹಲವರು. ಇಲ್ಲಿ ಇರುವ ಪಾದೆಕಲ್ಲುಗಳು ಕರಿಕಲ್ಲುಗಳು ಅಲ್ಲ. ಇದು ನಿರಂತರ ಮಳೆ ಸುರಿದು ಸುರಿದು ದಟ್ಟವಾಗಿ ಪಾಚಿ ಹಿಡಿದು ನಂತರ ಸುಡು ಬಿಸಿಲಲ್ಲಿ ಸುಟ್ಟು ಸುಟ್ಟು ಕಪ್ಪಾಗಿದೆ. ಕರ್+ಕಲ=ಕಾರ್ಕಲ ಆಗಿದೆ. ತುಲುಭಾಷೆಯಲ್ಲಿ “ಲ” ಕಾರಕ್ಕೆ “ರ”ಕಾರ ಮತ್ತು “ರ”ಕಾರಕ್ಕೆ “ಲ”ಕಾರ ಬರುವುದು ಸಾಮಾನ್ಯ (ಬರಿ-ಬಲಿ ,ಕಾಲ್-ಕಾರ್). ಅದರಂತೆ “ಕಲ್”ಪದವು “ಕರ್”ಆಗಿದೆ. ಇಲ್ಲಿ ಕಲ್ಲುಗಳ ಸ್ಥಳವೇ(ಕಲ)ವೇ ಕಾರ್ಲ|ಕಾರ್ಕಳ ಆಗಿದೆ.

 

ಕಾರ್ಕಳದಲ್ಲಿ ಪ್ರಪ್ರಥಮವಾಗಿ ಹುಟ್ಟಿದ್ದು ಆನೆಕಟ್ಟ (ಕಟ್ಟನ್ಗೆ) ಮತ್ತು ಆನೆಕೆರೆ ಆಗಿರುತ್ತದೆ. ಕಾರ್ಲ,ಕಾರ್ಕಳ,ಪೆರಿಯಂಗಡಿ,ಗೊಮ್ಮಟ,ಗೊಮ್ಮಟ ಬೆಟ್ಟ ಇತ್ಯಾದಿಗಳು ನಂತರದ ಕಾಲದಲ್ಲಿ ಒಂದರ ಹಿಂದೆ ಒಂದು ಹುಟ್ಟಿದೆ. ಆನೆಕಟ್ಟದ ನಿರ್ಮಾಣದ ಪರಿಣಾಮವಾಗಿ ಕೊಳಕ್ಕೆ ಕೆರೆಯ ರೂಪ ಬಂದು ಆನೆಕೆರೆ ಎಂಬ ಹೆಸರು ಶಾಶ್ವತ ವಾಗುತ್ತದೆ.

ಕಟ್ಟನ್ಗೆ ಮತ್ತು ಆನೆಕೆರೆಗಳು ಕಾರ್ಕಳಕ್ಕೆ ಪವಿತ್ರದಲ್ಲಿ ಪವಿತ್ರ. ಅದೆಷ್ಟೋ ಭೂಮಿ ಇದರ ನೀರಿನಿಂದ ಒದ್ದೆಯಾಗಿ ನೀರು ಕುಡಿದಿದೆ. ಭತ್ತದಂತಹ ಬೆಳೆಗಳನ್ನು ಬೆಳೆಸಿ ಮಾನವನ ಹಸಿವನ್ನು ನೀಗಿಸಿದೆ. ಅರ್ಧ ಕಾರ್ಕಳವು ಈಗಲೂ ಇದರ ನೀರು ಕುಡಿದು ಬದುಕುತ್ತಿದ್ದಾರೆ. ಹೆಚ್ಚಿನ ಮನೆಗಳ ಬಾವಿಯಲ್ಲಿ ಆನೆಕೆರೆಯ ನೀರು ಸಮೃದ್ಧವಾಗಿದೆ. ಯಾವುದೇ ಕಾರಣಕ್ಕೂ ಈ ಕೆರೆಯನ್ನು ನಾಶ ಮಾಡಲು ಯತ್ನಿಸಬಾರದು. ಏಕೆಂದರೆ ಇದರ ಋಣವನ್ನು ಯಾರಿಂದ ಲೂ ತೀರಿಸಲು ಸಾಧ್ಯವಿಲ್ಲ.

ಕಾರ್ಕಳದಲ್ಲಿ ಜೈನ ಬಸದಿಗಳ ನಿರ್ಮಾಣ, ಬಾಹುಬಲಿ ಸ್ವಾಮಿಯ ಕೆತ್ತನೆಯ ಕಾಲದಲ್ಲಿ ನೂರಾರು ಆನೆಗಳು ಈ ಆನೆಕೆರೆಯಲ್ಲಿ ಜಳಕ ಮಾಡಿದ್ದಾವೆ. ಆನೆಕಟ್ಟದಲ್ಲಿ ಓಡಾಡಿದ್ದಾವೆ. ಆದರೆ ಇದರಿಂದ ಆನೆಕೆರೆ ,ಆನೆಕಟ್ಟ ಎಂಬ ಹೆಸರು ಬಂದಿರುವುದು ಅಲ್ಲ. ಬದಲಾಗಿ ಬೃಹತ್ ಗಾತ್ರದ ಬಲಿಷ್ಠವಾದ ಕಟ್ಟ ಮತ್ತು ಕೆರೆ ಇಲ್ಲಿ ನಿರ್ಮಾಣವಾಗಿದೆ. ಅವುಗಳನ್ನು ಆನೆಗೆ ಹೋಲಿಸಿ ಆನೆಕಟ್ಟ,ಆನೆಕೆರೆ ಎಂದು ಕರೆದಿದ್ದಾರೆ. ಇದು ಸಾವಿರಾರು ವರ್ಷಗಳ ಹಿಂದಿನ ಕಾಲದ ಇತಿಹಾಸ.

ಆನೆಕಟ್ಟ“ಪದದಿಂದಲೇ “ಅಣೆಕಟ್ಟು” ಎಂಬ ಪದ ಹುಟ್ಟಿದ್ದು ಮಾತ್ರ ಸತ್ಯ. ಇಲ್ಲಿ “ಅಣೆಕಟ್ಟು” ಎಂಬ ಪದಕ್ಕೆ ಯಾವುದೇ ಸರಿಯಾದ ಅರ್ಥ ಇಲ್ಲ. ಅಣೆಕಟ್ಟು ಎಂದರೆ ಒಂದು ರಕ್ಷಣಾತ್ಮಕ ನಿರ್ಮಾಣ ಮತ್ತು ಇದು ನೀರನ್ನು ರಕ್ಷಿಸುತ್ತದೆ ಎಂದು ಹೇಳಿದೆ. “ಅಣೆ”,”ಕಟ್ಟು” ಪದಗಳಿಗೆ ಅರ್ಥವೇ ಸಿಗುವುದಿಲ್ಲ. “ಆನೆಕಟ್ಟ”(ಕಟ್ಟೆ,ದಂಡೆ)ಪದವು ಕನ್ನಡವೇ ಆಗಿರುತ್ತದೆ. ಈ ಪದವನ್ನು ತಪ್ಪಾಗಿ “ಅಣೆಕಟ್ಟು” ಎಂಬ ಉಚ್ಛಾರದಲ್ಲಿ ಪ್ರಯೋಗಿಸಿದ್ದಾರೆ. ಇಲ್ಲಿ”ಆನೆ” ಪದವೇ “ಅಣೆ”ಆಗಿದೆ ಮತ್ತು “ಕಟ್ಟ”ಎಂಬುದು “ಕಟ್ಟು” ಎಂದಾಗಿದೆ.

ಇದನ್ನೆಲ್ಲಾ ಕಲಪುವಾಗ ಬೆರೆಸಿದಾಗ ನಾವು ಒಂದು ಮಾತನ್ನು ದೃಢೀಕರಣ ಮಾಡಬಹುದು. ಅದೇನೆಂದರೆ “ಅಣೆಕಟ್ಟು”ಪದವು ಪ್ರಪ್ರಥಮವಾಗಿ ಕಾರ್ಕಳದಲ್ಲೇ ಹುಟ್ಟಿರುತ್ತದೆ. ಕಾರ್ಕಳದ “ಕಟ್ಟನೆಗೆ”(ಆನೆಕಟ್ಟ)ನೇ ಕರ್ನಾಟಕದ ಮೊಟ್ಟಮೊದಲ ಅಣೆಕಟ್ಟು. ಅದಕ್ಕಾಗಿಯೇ ಕಾರ್ಕಳದ “ಆನೆಕೆರೆ“ಎಂದರೆ ಬಹಳ ಫೇಮಸ್. ಇದು ಕಾರ್ಕಳದ ಹೃದಯ ಭಾಗದಲ್ಲಿದ್ದು ಎಲ್ಲರಿಗೂ ನೀರನ್ನು ಕುಡಿಸುತ್ತದೆ. ಪುರಾತನ ಕಾಲದ ಈ ಆನೆಕಟ್ಟ ಅಂದಿನ ಕಾಲಕ್ಕೆ ದೊಡ್ಡದಾಗಿಯೇ ಆಗಿತ್ತು.

ಸ್ಥಳೀಯ ಸರಕಾರವು ಈ ಆನೆಕಟ್ಟೆಯ ಒಂದು ಕಲ್ಲು ಜಾರಿದರೂ ಅದನ್ನು ಜರೂರಾಗಿ ರಿಪೇರಿ ಮಾಡಬೇಕು. ಏಕೆಂದರೆ ಇದಕ್ಕೆ ಇತಿಹಾಸ ಇದೆ. ಅದೇ ರೀತಿ ಆನೆಕೆರೆಯ ಹೆಸರನ್ನು ಬದಲಾಯಿಸುವ ಸಾಹಸಕ್ಕೆ ಕೈ ಹಾಕಬಾರದು. ಇದಕ್ಕೂ ಇತಿಹಾಸ ಇದೆ. ಅಲ್ಲದೆ “ಆನೆ”ಎಂಬುದು ಎಲ್ಲಾ ಗಣಗಳಿಗೆ ಅಧಿಪತಿ ಆಗಿರುವನು. ಆನೆಕೆರೆಯ ಕ್ಷೇತ್ರದಲ್ಲಿ ಯಾವುದೇ ಹೆಸರಿನಲ್ಲಿ ಹೊಸ ಕಾಮಗಾರಿ ನಡೆದರೆ ಅದಕ್ಕೆ “ಆನೆಕೆರೆ”ಎಂಬ ನಾಮಫಲಕ ಇರಬೇಕು. ಆ ಫಲಕವು ಗಣಪತಿಗೆ ಸಲ್ಲುತ್ತದೆ. ಅದು ವಾಕಿಂಗ್ ಟ್ರಾಕ್ ಇರಬಹುದು,ರಿಕ್ಷಾ ಸ್ಟೇಂಡ್ ಇರಬಹುದು, ಬಸ್ ತಂಗುದಾಣ ಇರ ಬಹುದು, ತಿರುವುಗಳು ಇರಬಹುದು, ವೃತ್ತಗಳು ಇರಬಹುದು, ಬೀದಿಗಳ ಹೆಸರುಗಳು ಇರಬಹುದು, ವೃತ್ತಗಳು ಇರಬಹುದು, ಸಾರ್ವಜನಿಕ ಪಾರ್ಕ್ ಇರಬಹುದು. ಏಕೆಂದರೆ ಈ ಆನೆಕೆರೆಗೆ ಸಾವಿರಾರು ವರ್ಷಗಳ ಇತಿಹಾಸ ಹಿನ್ನೆಲೆ ಇದೆ. ಯಾವುದೇ ರಾಜಕೀಯ ಈ ಆನೆಕಟ್ಟ ಮತ್ತು ಆನೆಕೆರೆಯಲ್ಲಿ ಸಲ್ಲದು.

ಐ.ಕೆ.ಗೋವಿಂದ ಭಂಡಾರಿ
(ನಿವೃತ್ತ ಬ್ಯಾಂಕ್ ಮ್ಯಾನೇಜರ್)

1 thought on “ಕಾರ್ಕಳದ ಆನೆಕಟ್ಟ ಮತ್ತು ಆನೆಕೆರೆ

Leave a Reply

Your email address will not be published. Required fields are marked *