December 3, 2024
kalkuda 4

ಪ್ರಾಚೀನ ಭಾರತದ ಪ್ರಥಮ ಚಕ್ರವರ್ತಿ ಎಂದೆಣಿಸಿದ ಸೂದ್ರ ಜನಾಂಗದ ನಂದ ವಂಶದ ರಾಜರುಆಳುತ್ತಿದ್ದ ಕಾಲವದು. ಸುಮಾರು 2300-2400 ವರ್ಷಗಳ ಹಿಂದಿನ ಚರಿತ್ರೆ ಇದು. ಆ ನಂದ ಸಾಮ್ರಾಜ್ಯದ ಮಂತ್ರಿಮಂಡಲದಲ್ಲಿ ಹೆಚ್ಚಿನ ಮಂತ್ರಿಗಳು ಎಲ್ಲಾ ಜೈನರಾಗಿದ್ದರು. ಅವರೆಲ್ಲಾ ಪ್ರಭಾವಿ ಮಂತ್ರಿಗಳಾಗಿದ್ದರು. ಎಲ್ಲಾ ಇಲಾಖೆಗಳು ಅವರ ಹಿಡಿತದಲ್ಲಿಇತ್ತು. ಅದರಲ್ಲೂ ಕೃಷಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಯನ್ನು ಅವರು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿದ್ದರು. ಆ ಕಾಲದಲ್ಲೇ ಕಳಿಂಗ ರಾಜ್ಯದಿಂದ ರಾಜಧಾನಿ ಪಾಟಲಿಪುತ್ರದವರೆಗೂ ಕಾಲುವೆಗಳನ್ನು ನಿರ್ಮಾಣ ಮಾಡಿದ್ದರು. ಸಾಮ್ರಾಜ್ಯದಲ್ಲಿ ಕೃಷಿಯು ಸಮೃದ್ಧಿಯಾಗಿತ್ತು.

 

 ಈ ಕಾಲದಲ್ಲೇ ಕರ್ನಾಟಕದ ಜೈನರು ತುಲುನಾಡ್ ಕಟ್ಟಲು ಇಲ್ಲಿನ ಬಹುಪಾಲು ಕೊಳ(ಪಟ್ಲ) ಪ್ರದೇಶವನ್ನು ಪರಿವರ್ತಿಸಿ “ಕೊಳ”ಕ್ಕೆ ಗದ್ದೆಗಳನ್ನು ಸೃಷ್ಟಿಮಾಡಲು ಮತ್ತು ಬಯಲು(ಬೈಲ್), ಮಜಲು, ಬೊಟ್ಟು ಎಂಬ ಹೊಲ ಗದ್ದೆಗಳನ್ನು ನಿರ್ಮಾಣ ಮಾಡಲು ನಂದ ಸಾಮ್ರಾಜ್ಯದ ಕೃಷಿ ತಜ್ಞರನ್ನು ಮತ್ತು ಕೃಷಿ ಪರಿಣಿತರನ್ನು ಅಲ್ಲಿನ ಪ್ರಭಾವಿ ಜೈನಮಂತ್ರಿಗಳು ಇಲ್ಲಿನ ಜೈನರ ವಿನಂತಿ ಮೇರೆಗೆ ಕಳುಹಿಸಿ ಕೊಡುವರು. ಕೊಳ ಪ್ರದೇಶದ ಮಧ್ಯೆ ಇಲ್ಲವೇ ಬದಿಗಳಲ್ಲಿ ಕಾಲುವೆಯನ್ನು ತೋಡಿ ಕೊಳ ಭೂಮಿಯ ನೀರನ್ನು ಕಾಲುವೆಗೆ ಇಳಿಬಿಟ್ಟು ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ಯೋಜನೆ.ಕಾಲುವೆ ಇಕ್ಕಡೆಗಳಲ್ಲಿ ಗಟ್ಟಿಮುಟ್ಟಾದ ದಂಡೆ ಕಟ್ಟಪುಣಿಗಳನ್ನು ಗಟ್ಟಿಮುಟ್ಟಾದ ಪಾದೆಕಲ್ಲುಗಳಿಂದ ನಿರ್ಮಿಸುವ ಬೃಹತ್ ಯೋಜನೆ. ನಂತರ ಗದ್ದೆಗಳ ನಿರ್ಮಾಣ ಕಾರ್ಯ ನಿರ್ವಹಿಸುವಯೋಜನೆ. 

 

ತುಲುನಾಡ್ ಸಾಮ್ರಾಜ್ಯದ ಕನಸಿನೊಂದಿಗೆಇಲ್ಲಿ ಜೈನ ಧರ್ಮವನ್ನು ಸ್ಥಾಪನೆ ಮಾಡುವ ಯೋಜನೆಯೂ ಜೈನರಲ್ಲಿತ್ತು. ಜೈನ ಧರ್ಮ ಎಂದ ಮೇಲೆ ಬಸದಿಗಳ ನಿರ್ಮಾಣ ಆಗಲೇಬೇಕು .ನಂತರದಲ್ಲಿ ಗೊಮ್ಮಟ ಬಾಹುಬಲಿ ಮೂರ್ತಿ ಕೆತ್ತನೆ ಇತ್ಯಾದಿ. ಈ ದೀರ್ಘಕಾಲದ ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಾಗಿ ಬೇಕಾಗಿರುವುದು ಕಲ್ಲು ಮತ್ತು ಕಲ್ಲುಕುಟಿಗರು. ಬರೇ ಕಲ್ಲು ಇದ್ದರೆ ಸಾಲದು ಅಥವಾ ಬರೇ ಕಲ್ಲುಕುಟಿಗರು ಇದ್ದರೆ ಸಾಲದು. ಎರಡೂಅವಶ್ಯವಾಗಿ ಬೇಕು.

ಕಲ್ಲುಗಳನ್ನು ಪೃಕೃತಿ ಕೊಟ್ಟರೆ ಸೇವೆಯನ್ನು,ಶಿಲ್ಪ ಕಲೆಯನ್ನು ಕಲ್ಲುಕುಟ್ಟುವವರು ಕೊಡುವರು. ಕಲ್ಲುಕುಟ್ಟುವವರು ಮಾನವರು. ಮಾನವರಾದರೂ ನಾಡಿಗೆ ಅವರ ಸೇವೆ ಅಪಾರವಾದದ್ದು ಎಂದು ಜೈನರು ತಿಳಿಯುತ್ತಾರೆ. ಆಗಲೇ ಕರ್ನಾಟಕದಲ್ಲಿ ಎಲ್ಲೆಡೆ ಬಸದಿ, ದೇವಾಲಯಗಳನ್ನು ಕಲ್ಲುಕುಟ್ಟಿಗಳು ನಿರ್ಮಿಸಿದ್ದರು.ಇವರ ನೆರವು ಸೇವೆ ಸಹಕಾರಜೈನರ ತುಲುನಾಡ್ ಸಾಮ್ರಾಜ್ಯವನ್ನು ಕಟ್ಟಲು ಅತ್ಯಗತ್ಯವಾಗಿತ್ತು. 

  ಜೈನರು ತುಲುನಾಡ್ ಸಾಮ್ರಾಜ್ಯವನ್ನು ಕಟ್ಟುವಾಗೆ ಆಗಲಿರುವ ದುಷ್ಪರಿಣಾಮಗಳನ್ನೂ ಲೆಕ್ಕ ಹಾಕುವರು. ಪೃಕೃತಿಗೆ ಕೊಡುವ ನೋವನ್ನು ಅರಿಯುವರು.

1)ಪೃಕೃತಿ ಮಾತೆ ಕಾಪಾಡಿಕೊಂಡು ಬಂದಿರುವ ಪಾದೆ ಕಲ್ಲುಗಳ ನಾಶ.

2) ಭೂಮಿ ಮಡಿಲಲ್ಲಿ ಅಡಗಿರುವ ಮುರಕಲ್ಲುಗಳನಾಶ.

3) ಗಿಡಮರ ಸಸ್ಯಗಳ ನಾಶ.

4)ಮೃಗ ಪಕ್ಷಿಗಳ ನಾಶ.

5)ನಾಗ ಸರ್ಪ ಮರಿ ಉಚ್ಚುಗಳ,ಇತರ ಸರಿಸೃಪಗಳನಾಶ.

6)ಪಾದೆ ಕಲ್ಲುಗಳಿಗೆ  ಹಾಕುವ ಬೆಂಕಿಯಿಂದ ಸಂಭವಿಸುವ ಅವಘಡದಿಂದ ಗುಡ್ಡ ಬೆಟ್ಟ ಕಾಡುಗಳ ನಾಶ .

7)ಗುಡ್ಡ,ಧರೆ, ಮಣ್ಣು ನಾಶ.

8) ಕಲ್ಲುಗಳಿಗೆ ಬೆಂಕಿ ಹಾಕಿ ಸುತ್ತಿಗೆ ಚೈನುಗಳ ಪೆಟ್ಟು.ಚಂಬೊಡಿ ಏಟು-ಭೂಮಿ ಕಂಪನ.

9) ತೀರ್ಥಂಕರರ, ಗೊಮ್ಮಟ ಬಾಹುಬಲಿ ಮೂರ್ತಿಗೆಶಿಲ್ಪಿಗಳ ಚೈನ್  ಉಳಿ ಪೆಟ್ಟುಗಳನ್ನು ನೆನೆಯುವರು.

10)ಆ ಕಾಲದಲ್ಲಿ ಸುರಿಯುವ ಮಳೆ ಮತ್ತು ಪ್ರವಾಹವನ್ನು ನೆನೆಯುವರು.

11)ಕಲ್ಲುಕುಟಿಗರು ಅನುಭವಿಸುವ ಕಲ್ಲಿನ ಬಿಸಿ ಒಂದೆಡೆ ಮತ್ತು ಸೂರ್ಯನ ಬಿಸಿಲಿನ ಬೇಗೆ(ದೊಂಬುದ ಎರಿ) ಇವುಗಳನ್ನು ಲೆಕ್ಕ ಹಾಕಿದ್ದಾರೆ. 

 

ಪೃಕೃತಿ ಮೇಲೆ ಆಗುವ ಅತ್ಯಾಚಾರಕ್ಕೆ ನೇರವಾಗಿ ಕಲ್ಲುಕುಟಿಗರೇ ಆಗಿದ್ದರೂ ಪರೋಕ್ಷವಾಗಿ ಜೈನರೇ ಆಗಿರುತ್ತಾರೆ. ಅವರ ಪ್ರಚೋದನಕಾರಿ ಆದೇಶಗಳಿಂದ ಕಲ್ಲುಕುಟಿಗರು ಮಾಡಲೇಬೇಕು. ಈ ರೀತಿಯಲ್ಲಿಆದೇಶ ಇಲ್ಲದಿದ್ದರೆ ತುಲುನಾಡ್ ಸಾಮ್ರಾಜ್ಯ ಕಟ್ಟುವುದಾದರೂ ಹೇಗೆ ?

 

ಜೈನರು ತುಲುನಾಡಿಗೆ ಪ್ರವೇಶ ಮಾಡುವ ಅದೆಷ್ಟೋ ವರ್ಷಗಳ ಹಿಂದೆಯೇ ಸೂದ್ರ ಜನಾಂಗದ ಜನರು ತುಲುಕಾಡಲ್ಲಿ ಕುಡರಿ ಎಸೆದು ತುಲುನಾಡು ಸೃಷ್ಟಿ ಮಾಡಿದ್ದರು. ಎತ್ತರದ ಸ್ಥಳಗಳಲ್ಲಿ ಅವರಿಗೆ ಅಗತ್ಯವಿರುವಷ್ಟು ಜಮೀನು ಮಾಡಿಕೊಂಡು ಬದುಕುತ್ತಿದ್ದರು. ನಾಗರಾಧನೆ ಮಾಡುತ್ತಿದ್ದರು. ನಂತರದ ಕಾಲದಲ್ಲಿ ತುಲುನಾಡ್ ಸೃಷ್ಟಿಸಿದ , ನಾಗಾರಾಧನೆ ಸ್ಥಾಪಿಸಿದ, ಹುಲಿಗಳಿಂದ, ಕಾಡುಹಂದಿಗಳಿಂದ ರಕ್ಷಿಸಿದವರನ್ನು ನೆನಪಿಸಿ ಕೊಳ್ಳುವ ಸಲುವಾಗಿ  ಅವರನ್ನು ಕಲ್ಲು ಹಾಕಿ ನಂಬಿದ್ದರು ‌.ಅವರನ್ನು ಬೂತೊಲು (ಭೂಮಿಯ ತಲದಲ್ಲಿ ಇರುವರು) ಎಂದು ಕರೆದಿದ್ದರು.

ತುಲುನಾಡಿಗೆ ಆಗಮಿಸಿದ ಜೈನರು, ಸೂದ್ರರು ಅನುಸರಿಸುತ್ತಿದ್ದ ಪದ್ಧತಿ ಸಂಪ್ರದಾಯವನ್ನು ಪಾಲಿಸಿಕೊಂಡು ಬರುವರು. ಬಂದವರೇ ನಾಗಬನಗಳಲ್ಲಿ ನಾಗಾರಾಧನೆ ಮಾಡುವರು. ಸೂದ್ರರು ನಂಬಿದ್ದ ಲೆಕ್ಕೆಸಿರಿ, ಮೈ ಸೈಂದಾಯ (ಬೃಹತ್ ಶರೀರದವ),ಪಂಜುರ್ಲಿ,ಗುಲಿಗ, ಜುಮಾದಿ, ಪಿಲ್ಚಂಡಿ ಇತರ ಬೂತಗಳನ್ನು ಆರಾಧಿಸುವರು. ಜೈನರು ತುಲುನಾಡಿಗೆ ತಮಿಲ್ ಕಲ್ಲುಕುಟಿಗರನ್ನು(ಕಲ್ಲು ಕುಟ್ಟುವವರು) ಕರೆದುಕೊಂಡು ಬರುವರು. ನಂತರದಲ್ಲಿ ಅವರನ್ನು ತುಲುವರು “ಕಲ್ಕುಟ್ಟಿ” ಎಂದು ಕರೆಯಲಾರಂಭಿಸಿದರು.

 

ಅಂದು ಬಂದವರುತುಲುನಾಡಲ್ಲಿ ಶಾಶ್ವತವಾಗಿ ನೆಲೆ ಆಗಿರುವರು.ಅವರ ಮುಖ್ಯ ವೃತ್ತಿ ಕಲ್ಲು ಕುಟ್ಟುವುದು.ಕಾರ್ಕಳ,ಮೂಡಬಿದ್ರೆ, ಬೆಳ್ತಂಗಡಿ ಇತರ ಸ್ಥಳಗಳಲ್ಲಿ ಅಂದು ಬಂದ ಕಲ್ಕುಟ್ಟಿಗಳನ್ನು ನೋಡ ಬಹುದು. ಇವರ ಪೂರ್ವಜರೇ ತುಲು ನಾಡಿನಾದ್ಯಂತ ಬಸದಿಗಳನ್ನು ನಿರ್ಮಾಣ ಮಾಡಿದ್ದಾರೆ.ಗೊಮ್ಮಟ, ಬಾಹುಬಲಿ ಮೂರ್ತಿಗಳನ್ನು ಕೆತ್ತಿರುವರು. ನಂತರದ ಕಾಲದಲ್ಲಿ ದೇವಾಲಯಗಳನ್ನೂ ನಿರ್ಮಿಸಿರುವರು‌.

 

ತುಲುನಾಡ್ ಸಾಮ್ರಾಜ್ಯ ಕಟ್ಟುವ ಮೊದಲೇ ಜೈನರು ತಮ್ಮ ಯೋಜನೆಯು ಕಾರ್ಯರೂಪಕ್ಕೆ ಬರಲು ಮತ್ತು ಯಾವುದೇ ಅಡೆತಡೆ ಇಲ್ಲದೆ ವೇಗವಾಗಿ ಎಲ್ಲಾ ರೀತಿಯಲ್ಲಿ ಸುಗಮವಾಗಿ ಸಾಗಲು ಮೂರು ದೈವಗಳನ್ನು ಜೈನರು ಪ್ರಥಮವಾಗಿ ನಂಬುವರು.ಅವರೇ 1) ಕಲ್ಕುಟ್ಟ (ಕಲ್ಕುಡ) 2) ಕಲ್ಕುಟ್ಟಿ 3) ತೂತ್ತೆರಿ(ತೂಕತ್ತೆರಿ) ಕಲ್ಕುಟ್ಟ‌:ಇದು ಹೆಸರಲ್ಲ.ಕಲ್ಲು ಕುಟ್ಟುವ ವೃತ್ತಿ ಮಾಡುವಎಲ್ಲಾ ಪುರುಷ ಕಲ್ಲುಕುಟಿಗರಿಗೆ ಅನ್ವಯಿಸುತ್ತದೆ.ತುಲು ಭಾಷೆಯಲ್ಲಿ “ಗುಮ್ಮಟ” ನನ್ನು “ಗುಮಡ”ಎಂದರು.”ಕಲ್ಕುಟ”ನನ್ನು “ಕಲ್ಕುಡ”ಎಂದರು.ಕಲ್ಕುಟ್ಟಿ:ಇದು ಹೆಸರಲ್ಲ.ಕಲ್ಲು ಕುಟ್ಟುವ ವೃತ್ತಿ ಮಾಡುವಎಲ್ಲಾ ಮಹಿಳಾ ಕಲ್ಲುಕುಟಿಗರಿಗೆ ಅನ್ವಯಿಸುತ್ತದೆ.ತೂತ್ತೆರಿ:ತೂತ್ತ ಎರಿ ಎಂದರೆ ಬೆಂಕಿಯ ಜ್ವಾಲೆ.”ತೂತ್ತ ಎರಿ”ಪದವನ್ನು “ತೂತ್ತೆರಿ”, “ತೂಕತ್ತೆರಿ” ಎಂದು ಕರೆದರು.ಬೆಂಕಿಯನ್ನು ಹೆಣ್ಣು ಬೂತವನ್ನಾಗಿ  ನಂಬಿ ಆರಾಧನೆಮಾಡುವುದು.ದೊಂಬುದ ಎರಿ(ಬಿಸಿಲಿನ ಜ್ವಾಲೆ)ಯನ್ನೂ ಕೂಡಾ ಬೆಂಕಿ ಎಂದೇ ನಂಬುವರು. 

 

 ” ಕಲ್ಕುಡ-ಕಲ್ಕುಟ್ಟಿ” ಎಂದರೆ ಅಣ್ಣ-ತಂಗಿ ಅಲ್ಲ.ಇದು ಹೆಸರುಗಳು ಕೂಡಾ ಅಲ್ಲ.”ಪುರುಷ-ಮಹಿಳ” ಕಲ್ಲುಕುಟಿಗರು ಎಂದಷ್ಟೆ .ಈ ಹೆಸರುಗಳಲ್ಲಿ ಕಲ್ಲು,ವೃತ್ತಿ,ಕಲ್ಲುಕುಟಿಗರ ಸೇವೆ, ಶಿಲ್ಪಕಲೆ, ಪೃಕೃತಿ, ಇವುಗಳನ್ನು ಆರಾಧಿಸುವ ಮತ್ತು ಗೌರವಿಸುವ ಉದ್ದೇಶದಿಂದ ಈ ದೈವಗಳನ್ನು ಒಂದು ವೃತ್ತಿಯ ಹೆಸರಲ್ಲಿ ನಂಬಿ ಆರಾಧಿಸಿ ಕೊಂಡು ಹೋಗಲು ಸ್ಥಾಪನೆ ಮಾಡುವರು ಜೈನರು.ಕಲ್ಕುಟ್ಟ-ಕಲ್ಕುಟ್ಟಿ ಯರನ್ನು ತಮ್ಮ ಸಹೋದರ-ಸಹೋದರಿಯರಂತೆ ಆರಾಧಿಸುವ ಉದ್ದೇಶ.


ತುಲುನಾಡ್ ಸಾಮ್ರಾಜ್ಯ ವಿಸ್ತಾರವಾಗಿ ಕಟ್ಟಲುಬೆಂಕಿಯ ಅವಶ್ಯಕತೆ ಇರುತ್ತದೆ. ಆ ಕಾಲದಲ್ಲಿ ಪಾದೆಕಲ್ಲುಗಳನ್ನು ಒಡೆಯಲು ಈಗಿನಂತಹ ಕೆಮಿಕಲ್ ಮದ್ದು ಇರಲಿಲ್ಲ. ಬೆಂಕಿಯಿಂದ ಕಾಯಿಸಿ ಒಡೆಯುವ ಕೆಲಸಗಳು ಕೈಯಿಂದಲೇ ನಡೆಯಬೇಕಿತ್ತು. ಎಲ್ಲಾ ಕೈಯಾರೆ ನಡೆಯುವ ಕೆಲಸಗಳು .ಹೊಲ ಗದ್ದೆಗಳ ನಿರ್ಮಾಣ ಕೆಲಸಗಳು ನಡೆಯುವಾಗ ಬೇಡವಾದ,ಹಾಳಾದ, ಉಪಯೋಗಕ್ಕೆ ಬಾರದ , ಒಣಗಿದ ಮರಗಿಡ ಇತ್ಯಾದಿ ವಸ್ತುಗಳನ್ನು ಸುಟ್ಟು ಬೂದಿ ಮಾಡಿಬೇಕಾಗುತ್ತದೆ. ನೂರಾರು ವರ್ಷ ನಡೆಯುವ ಬಹುದೊಡ್ಡ ಯೋಜನೆ ಇದಾಗಿತ್ತು.ಬೆಂಕಿಯ‌ ಜ್ವಾಲೆಯು ಎಲ್ಲೆಡೆ ಹರಡಬಾರದು. ಪ್ರಾಣಿ ಪಕ್ಷಿಗಳ ಮಾರಣ ಹೋಮ ಆಗಬಾರದು.ಅಹಿಂಸೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಅಗ್ನಿಅವಘಡಗಳು ಸಂಭವಿಸಬಾರದು. ತೂತ್ತ ಎರಿ(ಬೆಂಕಿ ಜ್ವಾಲೆ, ಬೆಂಕಿ ನಾಲಿಗೆ)ಹರಡಬಾರದು. ಬೆಂಕಿತಗಲಿ ಉರಿದರೆ ಕಾಡು,ಬೆಟ್ಟ, ಗುಡ್ಡಗಳು ಸುಟ್ಟುಭಸ್ಮವಾಗುವುದು.ಮೃಗಪಕ್ಷಿಗಳು,ಸರಿಸೃಪಗಳು ನಾಶವಾಗುತ್ತದೆ.ಇದನ್ನು ತಡೆಯುವ ಸಲುವಾಗಿಅಗ್ನಿಯನ್ನು “ತೂತ್ತೆರಿ”(ತೂತ್ತ ಎರಿ) ಹೆಸರಲ್ಲಿಬೂತವನ್ನಾಗಿ ನಂಬುವರು.ಕ್ರಮೇಣವಾಗಿ “ತೂತ್ತೆರಿ” ಪದವನ್ನು “ತೂಕತ್ತೆರಿ” ಎಂದು ಕರೆದರು. ಇಲ್ಲಿ ಸೂರ್ಯನ ಎರಿ(ಸೂರ್ಯನ ಜ್ವಾಲೆ) ಯನ್ನೂಅಂದರೆ ಸೂರ್ಯನನ್ನೂ ಆರಾಧಿಸಲಾಗುತ್ತದೆ. ಅವನ ಎರಿಯನ್ನು ಬೆಂಕಿಗೆ ಹೋಲಿಸುವರು.

ತುಲುನಾಡ್ ಸಾಮ್ರಾಜ್ಯ ಕಟ್ಟಲು ಎಲ್ಲಿಂದ ಆರಂಭಿಸುವುದು ಎಂಬ ಪ್ರಶ್ನೆ ಬಂದಾಗ ಅವರಿಗೆ ಕಂಡಿದ್ದುಕಾರ್ಲ(ಕಾರ್ಕಳ) ಮತ್ತು ಬೆದ್ರ (ಮೂಡಬಿದ್ರೆ).ಅದಕ್ಕೂ ಕಾರಣ ಇತ್ತು.ಕಾರ್ಲದಲ್ಲಿ ಎಲ್ಲಿ ನೋಡಿದರೂ ಪಾದೆಕಲ್ಲುಗಳು.ಅವುಗಳು ಜೈನರನ್ನುಆಕರ್ಷಿಸಿ ಕರೆಯುತ್ತಿದ್ದವು.ಅಲ್ಲದೆ ಬೃಹತ್ ಸರೋವರ(ಈಗ ರಾಮಸಮುದ್ರ)ದಲ್ಲಿ ನೀರು ತುಂಬಿ ಹರಿಯುತ್ತಿತ್ತು. ಅಲ್ಲದೆ ಆಗಲೇ ಕಾರ್ಲದಲ್ಲಿ ತುಂಬಾ ಮಂದಿ ಸೂದ್ರರು ನೆಲೆಯಾಗಿದ್ದರು.ಅಲ್ಲದೆ ದಲಿತರು ಗುಂಪು ಗುಂಪಾಗಿ ಇಲ್ಲಿಗೆ ಬರುತ್ತಿದ್ದರು. ಬಂದು ಇಲ್ಲಿನ ಕಾಡು ಉತ್ಪತ್ತಿಗಳನ್ನು ಮಲಯಾಲ,ತಮಿಲ್, ತೆಲುಗು ರಾಜ್ಯಗಳಿಗೆ ಒಯ್ಯುತ್ತಿದ್ದರು. ಅಲ್ಲದೆ ತಿಂಗಳುಗಟ್ಟಲೆ ತುಲುನಾಡಲ್ಲಿದ್ದು ಸೂದ್ರಜನರಿಗೆ ಕೆಲಸದಲ್ಲಿ ನಿರತರಾಗುತಿದ್ದರು. ಕೊರಗರುಪಶ್ಚಿಮ ಗಟ್ಟದ ತಪ್ಪಲಲ್ಲಿ ಬದುಕುತ್ತಿದ್ದರು.ದಲಿತರನ್ನು ತುಲುನಾಡಲ್ಲೇ ಶಾಶ್ವತವಾಗಿ ನೆಲೆಸುವಂತೆ ಮಾಡುವ ಉಪಾಯವನ್ನು ಹೂಡುವರು. ಬೆದ್ರದಲ್ಲಿ ಮುರಕಲ್ಲುಗಳ ನಿಕ್ಷೇಪವನ್ನು ನೋಡುವರು.ಪಾದೆಕಲ್ಲುಗಳಂತೆ ಮುರಕಲ್ಲುಗಳು ಕೂಡಾ ಮುಂದಿನ ದಿನಗಳಲ್ಲಿ ಅಗತ್ಯವಿದೆ ಎಂದು ಅರಿಯುವರು.ಕಾರ್ಲದಂತೆ ಬೆದ್ರದಲ್ಲೂ ಸೂದ್ರರು ಸಾಕಷ್ಟು ಜನರು ನೆಲೆಯಾಗಿದ್ದರು.ದಲಿತರೂ ಇದ್ದರು.ತುಲುನಾಡ ಸಾಮ್ರಾಜ್ಯ ಕಟ್ಟುವ ಕಾಮಗಾರಿ ಕೆಲಸಕ್ಕೆ ಆಳುಗಳು ಕೂಡಾ ಈ ಎರಡು ಊರುಗಳಲ್ಲಿ ಸಿಗುವುದು ಜೈನರಿಗೆ ಪ್ಲಸ್ ಪೊಯಿಂಟ್ ಆಗುವುದು. 

 

ಕಾಮಗಾರಿ ಕೆಲಸದ ಉದ್ಘಾಟನೆಯಲ್ಲಿ ಮೇಲಿನ ಬೂತಗಳನ್ನು ನಂಬುವುದು ಎಲ್ಲಿ ನಂಬುವುದು ಎಂಬ ಪ್ರಶ್ನೆ.ಕಾರ್ಲ ಬೆದ್ರ ಸುತ್ತಾಡಿ ಬಂದರು ಜೈನರು.ಈ ಕಾಲದಲ್ಲಿ ಸೂದ್ರರು ಬೂತಗಳನ್ನು ತಮ್ಮ ಮನೆಗಳಲ್ಲಿ ನಂಬಿ ಆರಾಧಿಸುತ್ತಿರಲಿಲ್ಲ.ಬದಲಾಗಿ ಊರಕರೆ (ಕ್ಷೇತ್ರೀಯ) ಗಳಲ್ಲಿ ಎಲ್ಲಾ ಬೂತಗಳನ್ನು ಒಂದೇ ಕಲ್ಲಿನಲ್ಲಿ ನಂಬಿ ಆರಾಧಿಸುತ್ತಿದ್ದರು. ಆ ಕಲ್ಲನ್ನು ಬೂತೊಲೆ ಪಡೆ(ಸಮೂಹ-group)ಕಲ್ಲು ಎಂದು ಕರೆಯುತ್ತಿದ್ದರು.ತಮ್ಮ ತಮ್ಮ ಕರೆಗಳಲ್ಲಿ ಕರೆ ಸೇರಿ “ದೊಂಪದ ಬಲಿ” ನಡೆಸುತ್ತಿದ್ದರು (ಚಪ್ಪರ ಹಾಕಿ ಬೂತಗಳಿಗೆ ಕೋಳಿ ಬಲಿ ಕೊಡುತ್ತಿದ್ದರು) ಜೈನರು ಅಹಿಂಸಾ ಪ್ರೀಯರು.ಸೂದ್ರರು ಆರಾಧಿಸುವ ಬೂತಾರಾದನೆಯ ರೀತಿ ವಿಧಾನ  ಸರಿ ಬರಲಿಲ್ಲ.ತಮ್ಮ ಪ್ರಪ್ರಥಮ ಕಲ್ಕುಡ-ಕಲ್ಲುಟ್ಟಿ , ತೂತ್ತೆರಿ ದೈವಗಳನ್ನು ನಂಬುವ ಸ್ಥಳವನ್ನು ಹುಡುಕಾಡಿದರು.ಕೊನೆಗೆ “ಪರ್ಪರೆ ಗುಡ್ಡೆ”(ಈಗ ಪರ್ಪಲೆ ಗುಡ್ಡೆ)ಜೈನರನ್ನುಕರೆಯಿತು. ನಿಮ್ಮ ಬೂತಗಳನ್ನು ನನ್ನಹೃದಯ ಭಾಗದಲ್ಲಿ ನಂಬಲು ಹೇಳಿತು.ಜೈನರು ಗುಡ್ಡ ಹತ್ತಿ ವೀಕ್ಷಿಸಿದರು.ಎತ್ತರದ ಗುಡ್ಡೆ ಪೂರ ಮುಲಿ ಹುಲ್ಲು ಬೆಳೆದಿರುತ್ತದೆ.”ಉಂದೇ ಮುಲಿ ಪರ್ಪರೆ ಗುಡ್ಡೆ “(ಇದೇ ಮುಲಿ ಕೀಳುವ ಗುಡ್ಡೆ)ಎಂದು ತಿಳಿಸುವರು ನಾಗರಾದನೆ,ಬೂತಾರಾದನೆಯನ್ನು ಸ್ಥಾಪಿಸಿದ ದ್ರಾವಿಡ ಸೂದ್ರರು.ಈ ಕಾಲದಲ್ಲೆ ಇವರನ್ನು ಜೈನರು “ಪುಜಾರಿ” ಗಳೆಂದು ಕರೆದರು. ಪುಜಾರಿಗಳ ಉಪಸ್ಥಿತಿಯಲ್ಲಿ ಅವರ ವಿಧಿ ವಿಧಾನಗಳ ಪ್ರಕಾರ,ಅವರ ಮಾರ್ಗದರ್ಶನದಲ್ಲಿ, ಅವರ ನಿರ್ದೇಶನದಲ್ಲಿ ಜೈನರ ಪ್ರಪ್ರಥಮ ಮೂರು ದೈವಗಳನ್ನು ಪರ್ಪಲೆ ಗುಡ್ಡೆಯಲ್ಲಿ ಜೈನರು ಕಲ್ಲುಹಾಕಿ ನಂಬುವರು.ಇಲ್ಲಿ ಕಲ್ಲು ಹಾಕಿ ಬೂತಗಳನ್ನುನಂಬುವ ಮುಂಚಿತವಾಗಿ ಜೈನರು ಪುಜಾರಿಗಳ ಉಪಸ್ಥಿತಿಯಲ್ಲಿ ನಾಗಬನಕ್ಕೆ ಹೋಗಿ ನಾಗರಾದನೆಮಾಡಲು ಮರೆತಿರಲಿಲ್ಲ.  ತುಲು ನಾಡಿನಾದ್ಯಂತ ಜೈನರ “ಕೊಳ”ಕ್ಕೆ ಗದ್ದೆಗಳ ನಿರ್ಮಾಣ ಯೋಜನೆ ಆರಂಭವಾಗುವುದು.ನಂತರ ಮಜಲು, ಬೊಟ್ಟು ಜಮೀನುಗಳ ನಿರ್ಮಾಣ ಕಾರ್ಯ ಆರಂಭ ಆಗುವುದು.ಹೊಲ ಗದ್ದೆಗಳ ನಿರ್ಮಾಣದ ಹೊತ್ತಿಗೆ ಇಂತಿಷ್ಟೇ ದೂರಕ್ಕೊಂದು ಇಂತಿಷ್ಟೇ ವಿಸ್ತೀರ್ಣದ ಪ್ರದೇಶದಲ್ಲಿ ಒಂದೊಂದು ನಾಗಬನದ ರಚನೆ ಮಾಡುವರು.ಈ ನಿರ್ಮಾಣದಸಮಯದಲ್ಲಿ ತಸ್ಮೋಸದಿಂದ ನಾಗಹತ್ಯೆ ಆದರೆ ಅದನ್ನು ಅದೇ ಜಮೀನಿನ ನಾಗಬನದಲ್ಲಿ ದಫನಮಾಡುವರು.ದೋಷ ಪರಿಹಾರ ಮತ್ತು ಆರಾಧಿಸಿಕೊಂಡು ಬರಲು ಮುಂದೆ ಮುರ ಕಲ್ಲುಗಳಿಂದ /ಸಣ್ಣ ದೊಡ್ಡ ಗೋರಿಗಳನ್ನು, ಗುಂಡಗಳನ್ನು ನಿರ್ಮಿಸುವರು.ನೂರಾರು ವರ್ಷಗಳವರೆಗೆ ದಿನಾ ನಾಗಾರಾದನೆ ಬೂತಾರಾದನೆ ಮಾಡುತ್ತಾ ಪರ್ಪಲೆ ಗುಡ್ಡ ಹತ್ತಿ ತಮ್ಮ ತ್ರಿಮೂರ್ತಿ ಬೂತೊಗಳಿಗೆ ವಂದಿಸುತ್ತಾ ತಮ್ಮತುಲುನಾಡ್ ಸಾಮ್ರಾಜ್ಯ ಕಟ್ಟುವ ಯೋಜನೆ ಸಾಗುತ್ತದೆ.

 

ತುಲುನಾಡಲ್ಲಿ ಜೈನರು ಭೂಮಾಲಿಕರಾಗುವರು. ರಾಜರಾಗುವರು,ಮಹಾರಾಜರಾಗುವರು.ತುಲುನಾಡಿನಾದ್ಯಂತ ಬಸದಿಗಳ ನಿರ್ಮಾಣ ಆಗುವುದು.ಗುಮ್ಮಟ, ಬಾಹುಬಲಿ ಮೂರ್ತಿಗಳ ಕೆತ್ತನೆ ಕೆಲಸಗಳು ಸಾಗುವುದು.ಜೈನರು ಗೇಣಿದಾರರಿಂದ ಗೇಣಿಪಡೆದು ಮೆರೆಯುವರು.  ಜೈನರು ಅರಸರು,ತುಂಡರಸರು, ರಾಜರು,ಮಹಾರಾಜರು ಎಂಬ ಹೆಸರುಗಳಿಂದ ಮೆರೆದಿದ್ದಾರೆ.ಅವರ ಮರಣದ ಬಳಿಕ ಅವರನ್ನು ಮತ್ತು ನಂತರದ ಅವರ ಪೀಳಿಗೆಯ ರಾಜ ಮಹಾರಾಜರನ್ನು ನೆನಪಿಸಿ ಆರಾಧಿಸಿ ಕೊಂಡು ಹೋಗಲು ಅವರನ್ನು ಬೂತೊಗಳನ್ನಾಗಿ ನಂಬುವ ಮನಸ್ಸಾಯಿತು ಜೈನರಿಗೆ.ಸೂದ್ರರು ಅವರು ನಂಬಿದ್ದ ಬೂತಗಳನ್ನು ಪಡೆಕಲ್ಲಿನಲ್ಲಿ ನಂಬಿದ್ದರು.ಜೈನರು ಕೂಡಾ ಅವರ ಬೂತಗಳನ್ನುಅದೇ ಪಡೆಕಲ್ಲಿಗೆ ಸೇರಿಸಿ ನಂಬಲು ತಯಾರಾಗಿದ್ದರು.ಆದರೆ ಸೂದ್ರರ ಕೋಳಿ ಬಲಿ ಆಚರಣೆ ಅವರು ತತ್ವಗಳಿಗೆ ವಿರೋಧವಾಗುವುದು.ಇಲ್ಲಿ ಜೈನರುಸೂದ್ರರಲ್ಲಿ ಒಂದು ಬೇಡಿಕೆ ಇಡುವರು.ಅದೇನೆಂದರೆ ಪಡೆಕಲ್ಲಿನಲ್ಲಿ ನಂಬಲ್ಪಟ್ಟ ಬೂತೊಗಳಲ್ಲಿ ಅವರವರಿಗೆ ಬೇಕಾದ ಬೂತೊಗಳನ್ನು ಆರಿಸಿ ಅವರವರ ಕುಟುಂಬದಲ್ಲಿ ನಂಬುವುದು ಮತ್ತು ಅವುಗಳಿಗೆಕುಟುಂಬ ಸೇರಿ ಕೋಳಿ ಬಲಿ ಕೊಡುವುದು. ಪಡೆಕಲ್ಲುಗಳಲ್ಲಿ ಜೈನರ ಬೂತೊಗಳನ್ನೂ ಸೂದ್ರರ ಬೂತೊಗಳೊಡನೆ ಸೇರಿಸುವುದು.ಒಟ್ಟಾಗಿ ಸೂದ್ರರ ಮತ್ತು ಜೈನರ ಬೂತೊಗಳಿಗೆ ದೊಂಪದ ಕೋಳಿಬಲಿಯ ಬದಲು ಉತ್ಸವ ಬಲಿ ಕೊಡುವ‌ ಆಚರಣೆ.ಇದನ್ನು ಒಪ್ಪುವರು ದ್ರಾವಿಡ ಸೂದ್ರರು.ಅದರಂತೆ ತುಲು ನಾಡಿನಾದ್ಯಂತ ಪ್ರತಿ ಊರಿನಲ್ಲೂ ಕ್ಷೇತ್ರೀಯವಾಗಿ ಆರಾಧಿಸುತ್ತಿದ್ದ ಬೂತಗಳಪಡೆ ಕಲ್ಲಿನಿಂದ ಅವರವರಿಗೆ ಬೇಕಾದ ಬೂತಗಳನ್ನು ತಮ್ಮ ತಮ್ಮಕುಟುಂಬದ ನಾಗನ ಆದಿಯಲ್ಲಿ ನಂಬುವರು.ಜೈನರು ತಮ್ಮ ರಾಜರಾಗಿ ಮೆರೆದವರನ್ನು ಬೂತಗಳನ್ನಾಗಿ ಬೂತಗಳಪಡೆ ಕಲ್ಲಿಗೆ ಪುಜಾರಿಗಳ ಮಾರ್ಗ ದರ್ಶನದಲ್ಲಿ ನಂಬುವರು(ನಂತರದ ಕಾಲದಲ್ಲಿಜೈನರ ಬೂತಗಳನ್ನು ರಾಜನ್ ದೈವ (ರಾಜೆನೇ ದೈವ) ಎಂದು ಕರೆಯಲಾಗುವುದು).ಅವುಗಳಲ್ಲಿಕೊಡಮಂದಾಯ, ಕುಕ್ಕಿನಂದಾಯ,ಉಲ್ಲಯ ಇತ್ಯಾದಿ.


‌ಕಾರ್ಲದ ಕಲ್ಕುಡ ಕಲ್ಕುಟ್ಟಿ ತೂಕತ್ತೆರಿ ಬೂತಗಳಿಗೆ ಪರ್ಪಲೆ ಗುಡ್ಡೆಯಲ್ಲಿ ಜೈನರಿಂದ ಆರಾಧನೆ ನಡೆಯುತ್ತಾ ಇರುತ್ತದೆ.ಇತ್ತ ಹೊಸ ಬೆಳವಣಿಗೆಯಲ್ಲಿ ಜೈನರು ಅವರ ಬೂತಗಳನ್ನು ಪಡೆಕಲ್ಲುಗಳಲ್ಲಿ ನಂಬುವರು.ಅದರಂತೆ ಅವರ ಪ್ರಪ್ರಥಮವಾಗಿನಂಬಿದ್ದ ಪರ್ಪಲೆಯ ತ್ರಿಮೂರ್ತಿಗಳನ್ನು ಕೂಡಾ ಪಡೆಕಲ್ಲುಗಳಲ್ಲಿ ನಂಬುವರು.ಜೈನರು ಬೂತಗಳನ್ನು”ದೈವೊಲು”ಎಂತಲೂ ಕರೆಯಲಾರಂಭಿಸುವರು. 

 

‌ತುಲುನಾಡಲ್ಲಿ ದೇವರಾಧನೆ ಆರಂಭವಾದ ನಂತರದಲ್ಲಿ ನಂಬಿದ ಬೂತಗಳನ್ನು ಕೂಡಾ ಅವರವರ ಕುಟುಂಬದಲ್ಲಿ ಮತ್ತು ಎಲ್ಲೆಡೆ ಎಲ್ಲಾ ಪಡೆಕಲ್ಲಿನಲ್ಲೂ ನಂಬುವರು.ಅವುಗಳಲ್ಲಿ ಪ್ರಮುಖದೈವಗಳು ಎಂದರೆ “ಬೈದೆರ್ಲು”(ಕೋಟಿ-ಚೆನ್ನಯ).ಅವರವರ ಊರಲ್ಲಿ ಆವರವರ ಕರೆ(ಕ್ಷೇತ್ರ)ಯಲ್ಲಿದೈವಗಳಿಗೆ ಆಯನ, ಕೋಲ,ನೇಮ,ಬಲಿ ಉತ್ಸವ ನಡೆಯುತ್ತದೆ.ಕಾರ್ಲದ ತ್ರಿಮೂರ್ತಿಗಳಿಗೆ ಪರ್ಪಲೆ ಗುಡ್ಡೆಯಲ್ಲೂ ಮತ್ತು ಎಲ್ಲಾ ಪಡೆಕಲ್ಲು ಕ್ಷೇತ್ರದಲ್ಲೂ ಈ ಆಯನ ನೇಮ,ಕೋಲ ಇತ್ಯಾದಿ ನಡೆಯುತ್ತಾ ಇರುತ್ತದೆ. 

 

‌‌ಜೈನರು ದೈವಾರಾಧನೆಗೆ ಇನ್ನೊಂದು ಸುಧಾರಣೆ ತರುವರು.ಅದೇನೆಂದರೆ ಒಂದು ಊರಲ್ಲಿ ಹಲವು ಕಡೆಗಳಲ್ಲಿ ಕ್ಷೇತ್ರಿಯವಾಗಿ ಪಡೆಕಲ್ಲುಗಳಲ್ಲಿ ನಡೆಯುವ ಆರಾಧನೆಯನ್ನು ಊರ ಮಧ್ಯದಲ್ಲಿಒಂದೆಡೆ ತಂದು ಒಂದೇ ಕಡೆ ಆರಾಧಿಸುವುದು.ದೈವ ಪುಜಾರಿಗಳು ಇದನ್ನು ಒಪ್ಪುವರು.ಅದರಂತೆ ಊರ ಮಧ್ಯದಲ್ಲಿ ಎತ್ತರದ ಗುಡ್ಡದಲ್ಲಿ ಇಲ್ಲವೇಎತ್ತರದ ಪ್ರದೇಶದಲ್ಲಿ (ಕಾರ್ಲದ ಕಲ್ಕುಡ,ಕಲ್ಲುಟ್ಟಿ,ತೂಕತ್ತೆರಿ ದೈವಗಳನ್ನು ನಂಬಿದ ರೀತಿಯಲ್ಲಿ)ಪಡೆಕಲ್ಲಿನಲ್ಲಿ ನಂಬಿದ್ದ ಎಲ್ಲಾ ಬೂತಗಳನ್ನು ಬೇರೆಬೇರೆ ಕಲ್ಲುಗಳಲ್ಲಿ ನಂಬುವುದು.ವರ್ಷಕ್ಕೊಮ್ಮೆಈ ಸ್ಥಳದಲ್ಲಿ ಬೂತೊಗಳ ಆಯನ ನೇಮ ಜರಗುತ್ತದೆ.ವಾರ್ಷಿಕ ನೇಮದ ಮೊದಲು ಊರ ಯಾವುದಾದರು ಒಂದು ಬೂತೊಲೆ ಪಡೆಕಲ್ಲಿನಲ್ಲಿ ಕಿರು ನೇಮ ನಡೆಸಿ (ದೊಂಪದ ಬಲಿ ಉತ್ಸವ)ನಂತರ ಊರನೇಮ ನಡೆಯುತ್ತದೆ. 

 

ಕಾಲಗಳು ಉರುಳಿದಂತೆ ಊರ ಮಧ್ಯೆ ಬರೇ ಕಲ್ಲಿನಲ್ಲಿ ನಂಬಿದ್ದ ದೈವಗಳಿಗೆ ಬೇರೆ ಬೇರೆ ಸಾನ, ಗರಡಿ,ಗುಡಿ,ಗುಂಡಗಳನ್ನು ನಿರ್ಮಿಸಿ ದೈವಗಳನ್ನು ಆರಾಧಿಸಿದರು.ತುಲುನಾಡಿನಾದ್ಯಂತ ಈ ಸಾನ ಗರಡಿಗಳುಮೇಲೆದ್ದವು.ಕಾರ್ಲದ ತ್ರಿಮೂರ್ತಿಗಳನ್ನು ಇಲ್ಲಿ ಕಲ್ಲಿನ ಗುಂಡಗಳಲ್ಲಿ ಎಲ್ಲೆಡೆ ನಂಬಿದರು.      ತುಲುನಾಡಿನಾದ್ಯಂತ ಬಸದಿಗಳ ನಿರ್ಮಾಣದಕೆಲಸ ಆರಂಭ ಆಗುವ ಮೊದಲು ನಾಗಬನದಲ್ಲಿನಾಗರಾಧನೆ ಮಾಡುವುದು.ಬಸದಿ ನಿರ್ಮಾಣದಸ್ಥಳದಲ್ಲೇ ಕಲ್ಕುಡ ದೈವವನ್ನು ನಂಬುವುದು.ಕೆಲವರು ತ್ರಿಮೂರ್ತಿಗಳನ್ನು ನಂಬುತ್ತಾರೆ.ವರ್ಷಗಳು ಉರುಳಿದಂತೆ ಜೈನರು ತಮ್ಮಮನೆಗಳಲ್ಲೂ ಈ ಮೂರು ದೈವಗಳನ್ನು ಕಲ್ಲು ಹಾಕಿ ನಂಬುವರು.ರಾಜರುಗಳು ತಮ್ಮ ಅರಮನೆಯ ಆವರಣದಲ್ಲಿಈ ಮೂರು ದೈವಗಳನ್ನು ನಂಬಿಕೊಂಡು ಆರಾಧಿಸುವರು.ನಂತರದ ಕಾಲಕ್ಕೆ ಉಳಿದ ಜಾತಿಯವರು ಕೂಡಾ ತಮ್ಮ ಆದಿ ಮೂಲದ ಮನೆಗಳಲ್ಲಿ ಈದೈವಗಳನ್ನು ನಂಬುವರು.ಕೆಲವು ಕುಟುಂಬದವರುಈ ಕಾರ್ಲದ ಮೂರು ದೈವಗಳನ್ನೂ ನಂಬಿದರೆಕೆಲವರು ಬರೆ ಕಲ್ಕುಟ್ಟಿಯನ್ನು ಮಾತ್ರ ನಂಬುತ್ತಾರೆ. 

 

 ಆದಿ ಆರಂಭದಲ್ಲಿ ‌ಜೈನರು ಕಾರ್ಲದ ಪರ್ಪಲೆಗುಡ್ಡೆಯಲ್ಲಿ ಪ್ರಪ್ರಥಮವಾಗಿ ನಂಬಿದ್ದ ದೈವಗಳಾದಕಲ್ಕುಡ,ಕಲ್ಕುಟ್ಟಿ,ತೂಕತ್ತೆರಿ ಇವರನ್ನು ಇಲ್ಲೇ ಆರಾಧಿಸುತ್ತಾ ಬರುವರು.ತುಲುನಾಡಿನಾದ್ಯಂತ ಜೈನರುಇಲ್ಲಿ ಬಂದು ದೈವ ಪುಜಾರಿಗಳ ಕ್ರಮದಲ್ಲಿ ಆರಾಧನೆನಡೆಸುವರು.

 

ಕಾಲ ಕ್ರಮೇಣವಾಗಿ ಈ ದೈವಗಳ ಆರಾಧನೆ ಪ್ರತೀ ಊರುಗಳಲ್ಲಿ, ಬಸದಿಗಳಲ್ಲಿ,ಮನೆ ಕುಟುಂಬಗಳಲ್ಲಿ ,ಗೊಮ್ಮಟ ಬಾಹುಬಲಿ ಕ್ಷೇತ್ರಗಳಲ್ಲಿ,ಅರಮನೆಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಆರಾಧಿಸಲ್ಪಡುವುದು.ತುಲುನಾಡಿನಲ್ಲಿ ನಾಗರಿಕತೆ ಬೆಳೆದಂತೆಜನರ ಶ್ರೀಮಂತಿಕೆ ಹೆಚ್ಚಾಗಲು ಪರ್ಪಲೆ ಗುಡ್ಡೆಯಲ್ಲಿಕಲ್ಲು ಹಾಕಿ ನಂಬಿದ್ದ ತ್ರಿಮೂರ್ತಿಗಳನ್ನು ಮರೆಯಲು ಆರಂಭಿಸಿದರು ಜೈನರು.ದೊಡ್ಡ ಎತ್ತರದ ಗುಡ್ಡೆಯನ್ನು ಹತ್ತಿಕೊಂಡು ಏರುವುದು ಕಿರಿ ಕಿರಿ ಎಣಿಸಿತು.

 

ಅಲ್ಲೇ ಪರ್ಪಲೆ ಗುಡ್ಡೆಯನ್ನು ಮರೆತು ಬಿಟ್ಟರು ಜೈನರು. ಆದರೆ ಕಲ್ಕುಡ (ಶಿಲ್ಪಿ) ಮಾತ್ರ ಪರ್ಪಲೆ ಗುಡ್ಡೆಯ ತುದಿಯಲ್ಲೇ ನಿಂತು ತನ್ನ ವಂಶದ ಕಲ್ಲುಕುಟಿಗರು ನಿರ್ಮಿಸಿದ ಬಸದಿಗಳನ್ನು ಕಂಡು ಖುಷಿ ಪಡುವನು.ಶಿಲ್ಪಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುವನು.ಶಿಲ್ಪಿಗಳಿಗೆ, ಶಿಲ್ಪಕಲೆಗೆ ಗೌರವಕೊಡುವ ಜೈನರನ್ನು ಕೊಂಡಾಡುವನು.ತುಲುನಾಡಿನಾದ್ಯಂತ ತನ್ನನ್ನು ನಂಬಿ ಆರಾಧಿಸುವುದರ ಫಲವಾಗಿ ಕಲ್ಕುಡ ಕಲ್ಲುಟ್ಟಿ ಇನ್ನಷ್ಟುಪರ್ಪಲೆ ಗುಡ್ಡೆಯಲ್ಲಿ ಬಲಗೊಳ್ಳುವರು.ನಂತರದ ಕಾಲದಲ್ಲಿ ಕಾರ್ಕಳ,ವೇಣೂರಲ್ಲಿ ಕಲ್ಲುಕುಟಿಗರಶಿಲ್ಪಿಗಳು ಕೆತ್ತಿದ ಗೊಮ್ಮಟ ಬಾಹುಬಲಿ ಮೂರ್ತಿಗಳನ್ನು ,ಬೆದ್ರದ ಸಾರ ಕಂಭದ ಬಸದಿ ಇತ್ಯಾದಿಗಳನ್ನುಕಾರ್ಲದ ಪರ್ಪಲೆ ಗುಡ್ಡೆಯ ಶಿರದಲ್ಲೇ ನಿಂತು ನೋಡುತ್ತಾನೆ ಕಲ್ಕುಡ.

 

ಒಂದು ಕಾಲದಲ್ಲಿ ಪರ್ಪಲೆ ಗುಡ್ಡೆಯ ಮೇಲೆ ನಿಂತು ಸುತ್ತಲೂ ವೀಕ್ಷಿಸಲು ಹತ್ತೂರು ಕಾಣುತ್ತಿತ್ತು.ಕಾರ್ಕಳದ ಗೊಮ್ಮಟೇಶ್ವರನ ವಿಗ್ರಹ,ಕೆರೆಬಸದಿ,ಚತುರ್ಮುಖ ಬಸದಿ,ಪೆರಿಯಂಗಡಿ ಬಸದಿಗಳ ಸಾಲು ಸಾಲು, ಅನಂತಪದ್ಮನಾಭ ದೇವಸ್ಥಾನ,ಹೊಲ ಗದ್ದೆಗಳು ಕಾಣುತ್ತಿತ್ತು.ಕಲ್ಕುಡನು ತನ್ನಹಿರಿಯ ಕಲ್ಲುಕುಟಿಗರ ಶಿಲ್ಪ ಕಲೆಯನ್ನು ಕಾಣುತ್ತಿದ್ದ.ಈಗ ಇದಾವ ದೃಶ್ಯ‌ ಪರ್ಪಲೆ ಗುಡ್ಡೆಗೆ ಕಾಣುವುದುಇಲ್ಲ.ಏಕೆಂದರೆ ಗುಡ್ಡೆ ಸುತ್ತ ಕಾಡು ಬೆಳೆದಿದೆ.ಅಲ್ಲಿಂದ ಈಗ ಮುಲಿ ಕಟ್ಟಿಗೆ ಒಯ್ಯುತ್ತಿಲ್ಲ.ಅಲ್ಲದೆ ಊರೆಲ್ಲಾ ಹೊಲಗದ್ದೆಗಳಲ್ಲಿ ಕಂಗಿನ ತೋಟಗಳಿಗೆ.ಆಕಾಶಎತ್ತರದ ಮನೆ ಕಟ್ಟಡಗಳು ಎದ್ದಿವೆ.ಗೊಮ್ಮಟ ಬೆಟ್ಟದ ಬಾಹುಬಲಿ ಮೂರ್ತಿ ಪರ್ಪಲೆ ಗುಡ್ಡೆಯಲ್ಲಿ ಕಂಡರೆ ದೈವಗಳು ಇನ್ನಷ್ಟು ಇನ್ನಷ್ಟು ಕಾರಣಿಕ ಶಕ್ತಿಯಾಗಿ ಮೆರೆಯುವವು.

 

ತುಲುನಾಡಲ್ಲಿ ಕಲ್ಕುಟ್ಟ-ಕಲ್ಕುಟ್ಟಿ ದೈವಗಳನ್ನುತಗೆ-ತಂಗಡಿ(ಅಣ್ಣ-ತಂಗಿ)ಯಾಗಿ ಆರಾಧಿಸುತ್ತಾರೆ.ಇದರಿಂದ ಯಾವುದೇ ತೊಂದರೆ ಇಲ್ಲ.ಇದು ಒಳ್ಳೆಯ ಸಂಪ್ರದಾಯ.ಕಲ್ಕುಟ್ಟಿಗಳು ಮಾಂಸಾಹಾರಿಗಳು.ಆದ್ದರಿಂದ ಕಲ್ಲುಟ್ಟಿಗೆ ಕೋಳಿ ಬಲಿ ಕೊಟ್ಟುಆರಾಧಿಸುವರು.ಆದರೆ ಕಲ್ಕುಡನಿಗೆ ಕೋಳಿ ಬಲಿ ಎಲ್ಲೂ ಇಲ್ಲ.ಅವನು ಜೈನರಂತೆ ಸಸ್ಯಾಹಾರಿ ಎಂಬ ನಂಬಿಕೆ.      ಅಂದು ತುಲುನಾಡಲ್ಲಿ ಜೈನ ಧರ್ಮ ಸ್ಥಾಪನೆಯ ಕಾಲದಲ್ಲಿ ಜೈನರ ಬಸದಿ ನಿರ್ಮಾಣ, ಬಾಹುಬಲಿ,ತೀರ್ಥಂಕರರ ಕೆತ್ತನೆ ಕೆಲಸದಲ್ಲಿ ಮಹಿಳಾ ಕಲ್ಲುಕುಟಿಗರು ಭಾಗವಹಿಸಲು ಇರಲಿಲ್ಲ.ಪುರುಷರು ಮಾತ್ರ ಕಲ್ಲು ಕುಟಿಗರಾಗಿ ಶಿಲ್ಪಿಗಳಾಗಿ ಕೆಲಸ ಮಾಡುವವರು.ಇವರೆಲ್ಲಾ ಜೈನರಂತೆ ಸಸ್ಯಾಹಾರಿಗಳಾಗಿದ್ದರು.ಜೈನರ ಅಹಿಂಸಾ ತತ್ವ ಮಾರ್ಗವನ್ನು ಪಾಲಿಸಿಕೊಂಡು ಇದ್ದರು.ಮಹಿಳಾ ಕಲ್ಲು ಕುಟಿಗರು ಮನೆ ಮನೆಗೆ ಹೋಗಿ ಜನರಿಗೆ ಅರೆಯುವ,ರುಬ್ಬುವ ಕಲ್ಲು,ಬೀಸುವ ಕಲ್ಲುಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದರು.ಅಲ್ಲದೆ ಪ್ರತಿ ಮನೆಗಳಿಗೆ ಹೋಗಿ ಕಲ್ಲುಗಳಿಗೆ ಚೈನ್ಮಾಡುವ ಸೇವೆಯನ್ನು ಮಾಡುತ್ತಾ ಇದ್ದವರು.ಆ ಕಾರಣಕ್ಕೆ ಕಲ್ಲುಟ್ಟಿ ದೈವವು ಮಹಿಳೆಯರಿಗೆ ಅತಿಹತ್ತಿರದ ದೈವವಾಗಿದೆ. 

 

ಈಗ ಈ ತ್ರಿಮೂರ್ತಿಗಳೇ  ಪ್ರಪ್ರಥಮವಾಗಿನೆಲೆಯಾದ ತಮ್ಮ ಮೂಲ ಆದಿ ಸ್ಥಳವನ್ನು ತುಲುನಾಡಿನ ಸಮಸ್ತ ಜನತೆಗೆ ನೆನಪಿಸಿ ತೋರಿಸಿ ಕೊಡುತ್ತಿದ್ದಾರೆ.ಯಾವುದೇ ಬಂಡೆಕಲ್ಲನ್ನು ಪುಡಿ ಮಾಡಿ ಗಾಳಿಗೆ ತೂರಿ ಬಿಡುವ ಶಕ್ತಿ ಕಲ್ಕುಡನಿಗೆ ಇದೆ.ಅದೇರೀತಿ ಯಾವುದೇ ‌ಬಂಡೆಕಲ್ಲನ್ನು ನಯವಾಗಿ ಮೃದುವಾಗಿ ತಾಳ್ಮೆ ಸಹನೆಯಿಂದ ಅಹಿಂಸಾ ತತ್ವದಡಿ ಕೆತ್ತಿಶಿಲ್ಪಕಲೆಯನ್ನು ಜೀವಕಳೆಯನ್ನು ಪ್ರತಿಮೆಗಳಿಗೆ ಕೊಟ್ಟು ಜನರಿಂದ ಕೈಮುಗಿಸಿ ಕೊಳ್ಳುವಂತಹ ಶಕ್ತಿಕಲ್ಕುಡನಿಗೆ ಇದೆ.ತೂತ್ತೆರಿ(ತೂತ್ತ ಎರಿ-ಬೆಂಕಿಯ ಕೆನ್ನಾಲಿಗೆ) ದೈವಕ್ಕೆ ಬೆಂಕಿಯನ್ನು ಆರಿಸಲು ಗೊತ್ತು ಮತ್ತು ಉರಿಸಲೂ ಗೊತ್ತು.ಇವಳನ್ನು ತೂಕತ್ತೆರಿ,ಸೂಕತ್ತೆರಿ,ಹೂಕತ್ತೆರಿ ಎಂದೂ ಕರೆಯುವುದುಂಟು.”ತೂತ್ತ ಎರಿ”, “ತೂಕ್ಕು ಎರಿ”ಕ್ರಮೇಣವಾಗಿ”ತೂಕತ್ತೆರಿ”ಎಂದಾಗಿದೆ.

 

ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ (ರಿಟೈರ್ಡ್ ಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *