ಸಮಾಜಮುಖಿ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ಬೆಂಗಳೂರು ಮಹಾನಗರ ಪಾಲಿಕೆಯವರು ನೀಡುವ ಪ್ರಶಸ್ತಿಯೊಂದು ನಮ್ಮ ಭಂಡಾರಿ ಕುಟುಂಬದ ಡಾ|| ಸುಮತಿ ಲಕ್ಷ್ಮಣ ಕರಾವಳಿಯವರಿಗೆ ಲಭಿಸಿದೆ.ಬೆಂಗಳೂರು ಮಹಾನಗರ ಪಾಲಿಕೆಯ ಮಹದೇವಪುರ ಕ್ಷೇತ್ರದ ವಾರ್ಡ್ ನಂ 85 ದೊಡ್ಡನೆಕ್ಕುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮತಿ ಲಕ್ಷ್ಮಣ್ ಕರಾವಳಿಯವರಿಗೆ ಜನವರಿ 6 ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಮಹದೇವಪುರ ಕ್ಷೇತ್ರದ ಶಾಸಕರಾದ ಶ್ರೀ ಅರವಿಂದ ಲಿಂಬಾವಳಿಯವರು(ಮಾಜಿ ಉನ್ನತ ಶಿಕ್ಷಣ ಸಚಿವರು ಹಾಗೂ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ), ಶ್ರೀ ಪಿ. ಸಿ ಮೋಹನ್ , ಲೋಕ ಸಭಾ ಸದಸ್ಯರು ಬೆಂಗಳೂರು ಕೇಂದ್ರ ಹಾಗೂ ಶ್ರೀಮತಿ ಶ್ವೇತಾ ವಿಜಯ ಕುಮಾರ್ , ಬಿ.ಬಿ. ಎಂ. ಪಿ ಸದಸ್ಯರು ,ದೊಡ್ಡನೆಕ್ಕುಂದಿ ವಾರ್ಡ್ -85 “ಕರುನಾಡ ಅಮೂಲ್ಯ ರತ್ನ” ಬಿರುದಾಂಕಿತ ಪ್ರಶಸ್ತಿಪತ್ರ ನೀಡಿ ಗೌರವಿಸಿ,ಸನ್ಮಾನಿಸಿದರು.
ಶ್ರೀಮತಿ ಸುಮತಿಯವರು ನಮ್ಮ ಭಂಡಾರಿ ಸಮಾಜದ ಹಿರಿಯರೂ,ಮಾರ್ಗದರ್ಶಕರೂ, ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜಿ ಅಧ್ಯಕ್ಷರೂ ಆಗಿದ್ದ ಶ್ರೀ ಲಕ್ಷ್ಮಣ ಕರಾವಳಿಯವರ ಧರ್ಮಪತ್ನಿ.
ಹಲವು ವರ್ಷಗಳಿಂದ ದೊಡ್ಡನೆಕ್ಕುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮತಿ ಲಕ್ಷ್ಮಣ ಕರಾವಳಿಯವರು ತಮ್ಮ ಆರೋಗ್ಯ ಕೇಂದ್ರವನ್ನು ಯಾವುದೇ ಖಾಸಗಿ ಆರೋಗ್ಯ ಕೇಂದ್ರಗಳಿಗೆ ಕಮ್ಮಿಯಿಲ್ಲದಂತೆ ನಿರ್ವಹಿಸಿಕೊಂಡು ಬಂದಿದ್ದಾರೆ. ಕೇಂದ್ರ ಸರ್ಕಾರದ “ಸ್ವಚ್ಛ್ ಭಾರತ್ ಅಭಿಯಾನ” ದ ವತಿಯಿಂದ ಅತ್ಯುತ್ತಮ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ನೀಡುವ ಪ್ರಶಸ್ತಿಯಾದ “ಕಾಯಕಲ್ಪ ಪ್ರಶಸ್ತಿ” ಕಳೆದ ಸಾಲಿನಲ್ಲಿ ದೊಡ್ಡನೆಕ್ಕುಂದಿಯ ಆರೋಗ್ಯ ಕೇಂದ್ರಕ್ಕೆ ಲಭಿಸಿದೆ.ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಶಸ್ತಿ ಪಡೆದ ಕೇವಲ ಏಳು ಆರೋಗ್ಯ ಕೇಂದ್ರಗಳಲ್ಲಿ ಇದೂ ಒಂದು.ಪಲ್ಸ್ ಪೋಲಿಯೊ ನಿರ್ಮೂಲನೆಗಾಗಿ ವಾರ್ಡಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ ವಾರ್ಡಿನಲ್ಲಿಯೇ ಗುರಿಮೀರಿದ ಸಾಧನೆ ಮಾಡಲಾಗಿದೆ.ಈ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ಎಲ್ಲಾ ಆರೋಗ್ಯ ಯೋಜನೆಗಳು ಸಮಾಜದ ಎಲ್ಲಾ ವರ್ಗದ ಜನರಿಗೂ ಉತ್ತಮ ರೀತಿಯಲ್ಲಿ ತಲುಪುತ್ತಿದ್ದು ,ಈ ಆರೋಗ್ಯ ಕೇಂದ್ರಕ್ಕೆ ಕೇಂದ್ರ ಸರ್ಕಾರದ NRHM ಯೋಜನೆಯಡಿ 2011-12 ಸಾಲಿನಲ್ಲಿ “ಉತ್ತಮ ಸೇವಾ ಪ್ರಶಸ್ತಿ” ಲಭಿಸಿದೆ.
ಒಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಷ್ಟೆಲ್ಲಾ ಮೈಲುಗಲ್ಲು ಸ್ಥಾಪಿಸಲು ಕಾರಣೀಭೂತರಾದ ವೈದ್ಯಾಧಿಕಾರಿ ಶ್ರೀಮತಿ ಸುಮತಿ ಲಕ್ಷ್ಮಣ ಕರಾವಳಿಯವರಿಗೆ “ಕರುನಾಡ ಅಮೂಲ್ಯ ರತ್ನ” ಪ್ರಶಸ್ತಿ ಒಲಿದು ಬಂದಿರುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.
ತಮ್ಮ ಸಮಾಜದ ಬಗ್ಗೆಯೂ ಅಪಾರ ಅಭಿಮಾನ ಹೊಂದಿರುವ ಲಕ್ಷ್ಮಣ್ ಕರಾವಳಿ ಮತ್ತು ಶ್ರೀಮತಿ ಸುಮತಿ ದಂಪತಿಗಳು ಭಂಡಾರಿ ಸಮಾಜ ಮತ್ತು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ದ ಅಭಿವೃದ್ಧಿಗೂ ಅಪಾರ ಕೊಡುಗೆಯನ್ನು ನೀಡಿರುತ್ತಾರೆ.
ಶ್ರೀಮತಿ ಸುಮತಿ ಲಕ್ಷ್ಮಣ ಕರಾವಳಿಯವರಿಗೆ ನಿಸ್ವಾರ್ಥ ಆರೋಗ್ಯ ಸೇವೆ ನೀಡಲು ಭಗವಂತನು ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಿ.ಅವರಿಗೆ ಆಯುರಾರೋಗ್ಯವನ್ನಿತ್ತು ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.