November 10, 2024
image

Phoneನ ರಿಂಗ್ ನನ್ನ ನಿದ್ರೆಗೆ ಭಂಗ ತಂದದ್ದನ್ನು ಗಮನಿಸಿ ಫೋನೆತ್ತಿ ನೋಡಿದೆ…, ಅದು ಆಸ್ಪತ್ರೆಯಿಂದ!

ಫೋನ್ attend ಮಾಡಿ “ಹಲೋ..” ಎಂದೆ. 
ಹಲೋ ಸರ್….
“ಹುಂ!”
Casualtyಯಿಂದ ಸರ್.., 83 ವಯಸ್ಸಿನ ಒಬ್ಬರು….“, ನರ್ಸ್ ಪೂರ್ತಿಗೊಳಿಸುವ ಮೊದಲೇ..,  “ಈಗ ಬಂದೆ” ಎಂದು ಧಾವಿಸಿದೆ.

ಎಲ್ಲಾ ದಿನಗಳಲ್ಲೂ ವಯೋಸಹಜವಾದ ಸಮಸ್ಯೆಗಳಿಂದ ಬಳಲುತ್ತಿರುವವರು ಯಾರಾದರೊಬ್ಬರು ಬರುತ್ತಾರೆ. ಅದು ಕಂಡು, ಕಂಡು ಸಹಜವಾಗಿ ಹೋಗಿತ್ತು….
ಹೋಗಿ ನೋಡಿದೆ, ಪ್ರಜ್ನಾಹೀನ ಅವಸ್ಥೆಯಲ್ಲಿರುವ ಓರ್ವ ವೃದ್ಧೆ. ಶರೀರ ಪೂರ್ತಿ ಹುಣ್ಣು, ಅದರಲ್ಲಿ ಕೆಲವಂತು ಹುಳುವಿನಿಂದ ತುಂಬಿತ್ತು. ಜತೆಯಲ್ಲಿದ್ದ ಸ್ತ್ರೀಯನ್ನು ಕಂಡು ಹೋಂ ನರ್ಸ್ ಆಗಿರಬಹುದೆಂದು ಅಂದಾಜಿಸಿದೆ. ಮುಖದಲ್ಲಿ ಯಾವುದೇ ಭಾವವಿರಲಿಲ್ಲ..
ಹುಳುಗಳನ್ನು ತೆಗೆದು ಹುಣ್ಣು ಶುಚಿಗೊಳಿಸಲು ಆದೇಶಿಸಿ, ಅಡ್ಮಿಷನ್ ಫೈಲ್ ತೆಗೆದು ಬರೆಯುವುದಕ್ಕೋಸ್ಕರ ಹೆಸರಿನೆಡೆಗೆ ನೋಡಿದೆ…
ಡಾ. ಇಂದುಮತಿ!!!
ಮನಸ್ಸಿಗೆ ಸಿಡಿಲು ಬಡಿದಂತಾಯಿತು!

ಸ್ಟಾಫ್ ಅನ್ನು ಕರೆದು ಕೇಳಿದೆ, “ಯಾರು ಇದೂ…?”
ಇವರು ಹಿಂದೆ ಒಬ್ಬರು ಪ್ರಮುಖ pediatrician ಆಗಿದ್ದರು, ಸರ್..!
ತಲೆ ತಿರುಗಿ ಭೂಮಿ ಕುಸಿಯುವಂತೆ ಭಾಸವಾಯಿತು..

ನಲ್ವತ್ತು ವರುಷಗಳ ಹಿಂದೆ ಗುಣಪಡಿಸಲಾಗದ ಕೆಮ್ಮಿನಿಂದ ನನ್ನನ್ನು ಪಾರು ಮಾಡಿದ ಶಿಶುರೋಗ ತಜ್ಞೆಯೇ ಇಲ್ಲಿ ಹುಳು ತುಂಬಿ ಮಲಗಿರೋದು.!!! ಅಂದಿನ ಕೆಲವೇ ಕೆಲವು ಪ್ರಮುಖ ವೈದ್ಯರಲ್ಲಿ ಇವರೂ ಒಬ್ಬರು., ಶ್ರೀಮಂತ ಕುಟುಂಬ.!!!

ರೋಗಿಯನ್ನು ಕರೆತಂದ, ಜತೆಯಲ್ಲಿದ್ದ ಸ್ತ್ರೀಯನ್ನು ಕರೆದು ಕೇಳಿದೆ, “ಏನಾದದ್ದು…?”
ಸರ್, ಎರಡು ವರುಷದಿಂದ ಮಲಗಿದಲ್ಲೇ ಇದ್ದಾರೆ…, ನಾನು ಬಂದು ಒಂದು ವಾರವಾಯಿತಷ್ಟೆ.”
“ಮಕ್ಕಳು?”
ಇವರಿಗೆ ಒಬ್ಬನೇ ಮಗ. ಅವರು ಇರೋದು ಅಮೇರಿಕದಲ್ಲಿ
“ಹುಂ”
ಅಲ್ಲಿಂದ ಇನ್ನು ಮೂರು, ನಾಲ್ಕು ಗಂಟೆಯೊಳಗೆ ಕರೆ ನಿರೀಕ್ಷಿಸಬಹುದು, ಸರ್!
ಆದರೆ ಕರೆಯೇನು ಬರಲಿಲ್ಲ..??!

ಮೂರು ದಿನಗಳ ನಂತರ ಬೆಳಗ್ಗೆ ICU ವಿನ ಮುಂಭಾಗದಲ್ಲಿ ಓರ್ವ ಸ್ತ್ರೀ ಮುಂದೆ ಬಂದರು..,
ಡಾಕ್ಟರ್, ನಾನು ಡಾ|| ಇಂದುಮತಿ ಯವರ ಸೊಸೆ
“ಮಗ….?”
ನಮ್ಮ ಮಗಳಿಗೆ ಪರೀಕ್ಷಾ ಸಮಯ, ಅವಳಿಗೆ ಕಲಿಸಬೇಕು, ಶಾಲೆಗೆ ಕಳುಹಿಸಬೇಕು, ಅವರು ಬಂದರೆ ಅವಳ ವಿದ್ಯಾಭ್ಯಾಸ ಸರಿ ಹೋಗದು, ಅದಕ್ಕೋಸ್ಕರ ನಾನು ಬಂದೆ….”
“ಹುಂ….”
ಒಳಗೆ ಹೋಗಿ ಇಂದುಮತಿಯನ್ನು ಪರೀಕ್ಷಿಸಿದೆ, ಮರಣ ಸನ್ನಿಹಿತವಾಗಿತ್ತು., ಹೊರ ಬಂದೆ..
ಡಾಕ್ಟರ್.., ಶನಿವಾರಕ್ಕೆ ಮುನ್ನ ಸರಿಯಾದೀತಾ…?
“ಸರಿಯಾದೀತಾ ಎಂದರೇನು..?”
ಅಲ್ಲಾ.. ಅತ್ತೆ ಸಾಯ್ಬಹುದೋ.. ಎಂದು..
“ಅದೇನು…?”
ಶನಿವಾರಕ್ಕೆ ನಾನು flight ಬುಕ್ ಮಾಡಿದ್ದೇನೆ, cancel ಮಾಡಲು ಕಷ್ಟವಾದಿತು..”
“ಹುಂ…”
ಗುರುವಾರ ಸಂಜೆ ಹೊತ್ತಿಗೆ ಡಾಕ್ಟರ್ ಇಂದುಮತಿ ಇಹಲೋಕ ತ್ಯಜಿಸಿದರು.
ಸೊಸೆಯ ಮುಖದಲ್ಲಿ ಧನ್ಯತೆಯ ಭಾವ.!
“ಮಗ ಬರಲಿಲ್ವೇ…?”
ಇಲ್ಲ ಬಂದಿಲ್ಲ, ನಾನು ಹೇಳಿದ್ದೇನಲ್ಲ.
“ಹಾಗಾದರೆ ಮುಂದಿನ ಕಾರ್ಯಗಳು…?”
ಅದಕ್ಕೆಲ್ಲಾ ಜನರನ್ನು ಏರ್ಪಾಡು ಮಾಡಿದ್ದೇವೆ

ಕೋಮ ಸ್ಥಿತಿಯೂ ಕೂಡಾ ಒಳ್ಳೆಯದೇ ಕೆಲವೊಮ್ಮೆ….!

ಹೇಳಿಕೊಳ್ಳಲು ‘ವಿದೇಶ’ ದಲ್ಲಿರುವ ದೊಡ್ಡಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಮಗ..,
ಸೊಸೆ… ಮೊಮ್ಮಕ್ಕಳು… ಎಲ್ಲರೂ ವಿದೇಶದಲ್ಲೇ ವಾಸ…
ಇಂದಿನ so-called ತಂದೆ – ತಾಯಿಯರಿಗೆ ಬೇಕಾಗಿರೋದು..!!!
ಓಹ್, ಹೆತ್ತವರೆನಿಸಿಕೊಂಡವರಿಗೆ ಭೂಮಿಯ ಮೇಲೆ ಕಾಲೇ ನಿಲ್ಲಲ್ಲ…
ದರಿದ್ರ ಜೀವನ…!

ಮರುದಿನ ಬೆಳಗ್ಗೆ ದಿನಪತ್ರಿಕೆ ತೆರೆದು ನೋಡಿದೆ. ಮೊದಲ ಪುಟದಲ್ಲೇ ದೊಡ್ಡ ಕಲರ್ ಫೋಟೋ….
ಡಾಕ್ಟರ್ ಇಂದುಮತಿ (83) ಭಾವಪೂರ್ಣ ಶ್ರದ್ಧಾಂಜಲಿ…
ದುಃಖತಪ್ತರಾದ,
ಮಗ:- ಜಯಪ್ರಕಾಶ್, B.Tech, IIT (Mumbai), MS, MIT (Intel Corp, California,USA)
ಸೊಸೆ:- ಸಂಧ್ಯಾ, BE (USA)
ಮೊಮ್ಮಗಳು:- ಕೀರ್ತಿ, (USA)

ಪತ್ರಿಕೆಯಲ್ಲಿ ಪ್ರಕಟಣೆ ಓದಿದವರೆಲ್ಲ ಡಾಕ್ಟರ್ ರ ಸೌಭಾಗ್ಯದ ಕುರಿತೇ ಮಾತು…!

ಈ ಊರಿನ ವೈದ್ಯೆಗೆ, ವಿದೇಶದಲ್ಲಿ ದೊಡ್ಡ ಉದ್ಯೋಗದಲ್ಲಿರುವ ಮಗ.!

–  ಇದು ಮಲಯಾಳಂ ಕಥೆಯ ಭಾಷಾಂತರ

Leave a Reply

Your email address will not be published. Required fields are marked *