ಊರಿಗೊಬ್ಬ ಕ್ಷೌರಿಕ ಬೇಕು ಇದು ಬಹಳ ದಿನಗಳಿಂದ ಕೇಳಿಬರುತ್ತಿದ್ದ ಮಾತು ಪರಪುರದಲ್ಲಿ. ಪೇಟೆಯ ರುಚಿ ಹತ್ತಿದ ಕ್ಷೌರಿಕರು ಈ ಹಳ್ಳಿಯ ಮೂಲೆಗೆ ಬರಲು ಒಪ್ಪಲಾರರು ಬಂದರು ಇಲ್ಲಿನ ಕ್ಷೌರದ ಬೆಲೆಗೆ ನಾಲ್ಕೇ ದಿನದಲ್ಲಿ ಮೂಟೆಕಟ್ಟುವರು. ವಿಧಿಯಿಲ್ಲದೇ ಬೆಲೆಗೆ ಹೊಂದಿಕೊಂಡು ಕುಳಿತರೂ ಕೆಲವರ ಶಾಸ್ತ್ರಗಳು ಶಾಪವಾಗಿ ಪರಿಣಮಿಸುತ್ತದೆ ಆ ಊರಿನಲ್ಲಿ ಒತ್ತೊಟ್ಟಿಗೆ ಇದ್ದು ಇಲ್ಲಿ ಪರಕೀಯನ ಹಾಗೆ ಬದುಕಬೇಕೆಂದರೆ ಒಪ್ಪದ ಮನಸ್ಸು ತನ್ನಿಂತಾನೇ ಕಾಲ್ಕಿತ್ತು ಪರಕೀಯತೆಗಿಂತ ಪರಊರೇ ಮಿಗಿಲೆಂದು ಹೊರಟು ಹೋಗುತ್ತಿತ್ತು.
ಅಂತೂ ಇಂತೂ ಪರಪುರಕ್ಕೊಬ್ಬ ಕ್ಷೌರಿಕನ ಆಗಮನವಾಯಿತು. ಹಳ್ಳಿ ಒಂದೇ ಅಂಗಡಿ ಬೆಲೆಕಡಿಮೆ ಸಂಪ್ರದಾಯಸ್ಥರಂತೆ ಹೊಂದಿಕೊಂಡು ಹೋಗಬೇಕೆಂದು ಯಾರೋ ಹೇಳಿದ ಮಾತಿಗೆ, ಕಲಿತ ಹೊಸ ಉಮೇದು ಸ್ವಂತ ಅಂಗಡಿಯ ಬಯಕೆ ಕರೆದುಕೊಂಡುಬಂದುಬಿಟ್ಟಿತು. ಊರಿನಲ್ಲಿ ವಿಚಾರಿಸಿದ್ದೇ ತಡ ಜನರು ಊರಿಗೆ ದೇವರ ಆಗಮನವಾದಂತೆ ಉಬ್ಬಿಸಿ ಮಾತನಾಡಿಸಿಯೇಬಿಟ್ಟರು. ಹೊಸ ಹುರುಪಿನೊಂದಿಗೆ ಬಂದವನಿಗೆ ಸ್ವರ್ಗಕ್ಕೆ ಮೂರೇ ಗೇಣೆಂಬಂತಾಯಿತು. ಊರ ಗೌಡನ ಮನೆಗೆ ಕರೆದು ಉಳಿಯುವ ವ್ಯೆವಸ್ಥೆ ಮಾಡಿಕೊಡುವುದಾಗಿ ತಿಳಿಸಿ ಮನೆಯ ಕೊಟ್ಟಿಗೆಯ ಪಕ್ಕದ ತಗಡು ಹಾಸಿದ ಗುಡಿಸಲು ದೊರೆಯಿತು ಮನೆಯ ಪಕ್ಕದಲ್ಲೇ ಉತ್ತಮ ಕಟ್ಟಡ ಹಾಗೇ ಉಳಿದಿದ್ದರೂ. ಊರ ಆಲದ ಮರದ ಕೆಳಗೆ ಮೊದಲೇ ಇದ್ದ ಹುಲ್ಲುಹಾಸಿನ ಚಿಕ್ಕ ಅಂಗಡಿ ಚೊಕ್ಕದಾಗಿ ನವೀನವಾಯಿತು. ಊರಮಂದಿ ಅಲ್ಲಿಯೇ ಬಂದು ಕ್ಷೌರಮಾಡಿಸಿದರೆ ಊರ ದೊಡ್ಡಮನೆಯ ಮಂದಿಗೆ ಮನೆಬಾಗಿಲ ಬಳಿ ಸಾಗಿ ಕ್ಷೌರ ಮಾಡುವ ಪರಿಸ್ಥಿತಿ ಬದಲಾಗಲಿಲ್ಲ.
ಬ್ರಾಹ್ಮಣರ, ಗೌಡರ, ಪಟೇಲರ ಮನೆಯ ಬಳಿ ಬೆಳಿಗ್ಗೆ ಬೇಗನೆದ್ದು ಹೋದಾಗ ಬೇಡವೆಂದರೂ ಒತ್ತಾಯಿಸಿ ಕೊಡುವ ಚಹಾ ಅಂಗಳದ ಬಳಿಬರುವಾಗ ಕೈಗೆ ದೊರಕಬೇಕಾದ ಲೋಟ ನೆಲದಮೇಲಿಟ್ಟಾಗ ಕೊಡುತ್ತೇನೆನ್ನುವ ತಿಂಡಿ ಬೇಡವೆನಿಸಿಹೋಗುತಿತ್ತು. ಲೋಟವನ್ನೆತ್ತಿ ಬಾಯಿಗಿಡುವ ಮುನ್ನವೇ ತೊಳೆದಿಡೆಂಬ ಮಾತು ಕೇಳುವಾಗ ಇಳಿಸಿದ ಒಂದೇ ಗುಟುಕು ಸಾಕಾಗಿಹೋಗುತ್ತಿತ್ತು. ಅಂಗಳದ ಬಳಿ ಕುಳಿತಾಗ ಮನೆಯ ಮಗುವೊಂದು ಮುಗ್ಧವಾಗಿ ಅವನನ್ನು ಮಾತನಾಡಿಸಲು ಬಂದಾಗ ಮನೆಯ ಹಿರಿಯಜ್ಜಿ ಮಡಿಮಡಿಯೆಂದು ಮಡಮಡಿಸುವಾಗ, ಇನ್ನೂ ಮೂರಡಿಬೆಳೆಯದ ಮಕ್ಕಳು ಏಕವಚನದಲ್ಲೇ ಕನಿಷ್ಠ ಗೌರವವನ್ನು ನೀಡದೇ ಮಾತನಾಡಿಸುವಾಗ, ಕ್ಷೌರದ ನಂತರ ಬಿದ್ದಂತಹ ತ್ಯಾಜ್ಯಗಳನ್ನು ಗುಡಿಸಿಕೊಟ್ಟದ್ದಷ್ಟೇ ಸಾಲದೇ ಸಗಣಿಯ ನೀರಿನಿಂದ ಶುಚಿಗೊಳಿಸಿಕೊಡುವಾಗ ಮಧ್ಯಾಹ್ನದ ಹೊತ್ತಿಗೆ ಮಾತು ಮಾತಿಗೂ ಮಡಿಯೆನ್ನುವವರು ಊಟದ ಮಾತು ಕೇಳುವಾಗ ಹೊಟ್ಟೆ ಚುರ್ರೆನ್ನುತ್ತಿದ್ದರೂ ಹಸಿವು ತಣಿದಿರುತ್ತಿತ್ತು. ಬಂದಾಗ ದೇವರೆಂದು ಕರೆದ ಜನ ಅಸ್ಪೃಶ್ಯನಂತೆ ಕಂಡಾಗ ಮನದ ಮೂಲೆಯಲ್ಲಿ ಬೇಕಾಗಿದೆಯೇ ಜೀವನ ಎನ್ನುವಂತಹ ಪ್ರಶ್ನೇ ಮೂಡಿದ್ದೂ ಇದೆ. ಸ್ವರ್ಗಕ್ಕೆ ಮೂರೇ ಗೇಣೆನ್ನುವಂತಿದ್ದ ಗೇಣಿನ ಹಿಂದಿನ ಹಾದಿಯ ನರಕಭಾವ ತಿಂಗಳು ಕಳೆಯುವಷ್ಟರಲ್ಲಿ ತಿಳಿದು ಹೋಗಿತ್ತು.
ಬಂದದಾರಿಗೆ ಸುಂಕವಿಲ್ಲವೆಂದು ಹಿಂದಿರುಗೋಣವೆಂದು ಮನಸ್ಸು ತಟ್ಟಿ ತಟ್ಟಿ ಹೇಳಲಾರಂಭಿಸಿತು. ಪೇಟೆಯಬದಿಗೊಂದು ಅಂಗಡಿ ಗೊತ್ತುಮಾಡಲು ಇದ್ದೊಂದು ರಜೆಯ ದಿನ ಮೀಸಲಿಟ್ಟು ಹಲವು ವಾರ ಕಳೆದದ್ದು ಆಯಿತು. ಇದರ ವಿರುದ್ದವಾಗಿ ತಿರುಗಿಬೀಳೋಣವೆಂದರೆ ಹೊಸ ಊರನ್ನು ಎದುರು ಹಾಕಿಕೊಳ್ಳುವ ಎದೆಗಾರಿಕೆ ಸಾಕಾಗಲಿಲ್ಲ.
ಸಾಕಾಗಿದೆ, ಇಂದು ಹೊಟ್ಟೆತುಂಬಾ ಕುಡಿದು ಎಲ್ಲವನ್ನು ಮರೆಯೋಣ ಊರು ಸರಿಯಲ್ಲ ಎಂದು ಊರ ಹೊರಗಿನ ಮದ್ಯದಂಗಡಿಯನ್ನು ಹುಡುಕಿಹೊರಟ. ದೊಡ್ಡದೊಂದು ಮದ್ಯ ಮತ್ತು ಉಪಹಾರಗೃಹವನ್ನು ಹೊಕ್ಕವನು ಕುರ್ಚಿಯಲ್ಲಿ ಕುಳಿತು ಅಲ್ಲಿಯ ಪರಿಚಾರಕನಿಗೆ ಕಾಯುತ್ತಾ ಕುಳಿತವನಿಗೆ ಏನೋತೋಚಿದಂತಾಗಿ ಜೇಬಿನಲ್ಲಿದ್ದ ಜಂಗಮವಾಣಿಯನ್ನು ಹೊರತೆಗೆದು ಏನೋ ಸಿಕ್ಕವನಂತೆ ಹೊರನೆಡೆದುಬಿಟ್ಟ.
ಕಳೆದು ಒಂದೆರಡು ವಾರಗಳಾದವು ಭಟ್ಟರು ಕ್ಷೌರಕ್ಕೆ ಹೇಳಿ ಕಳಿಹಿಸಿದರು ಭಟ್ಟರ ಮನೆಗೆ ಕ್ಷೌರಕ್ಕೆ ತೆರಳಲಿಲ್ಲ. ಕೋಪಗೊಂಡ ಭಟ್ಟರು ಸಿಡಿಮಿಡಿಗೊಂಡು ಅಂಗಡಿಯ ಬಾಗಿಲಬಳಿಗೆ ಬಂದರು ತೆಗಳುತ್ತಾ. ಭಟ್ಟರ ಮಾತುಗಳನ್ನು ಕೇಳಿದ ಕ್ಷೌರಿಕ ಬರಬಹುದಿತ್ತು ಭಟ್ರೇ ಆದರೆ ಮಡಿ ಇದೆಯಲ್ಲವೇ ಹೇಗೆ ಬರಲಿ ಎಂದು ಕೇಳಿದಾಗ ಮಡಿಯಿದ್ದರೆ ಕ್ಷೌರದ ನಂತರ ಸ್ನಾನ ಮಾಡುತ್ತೆನೆ ಹೋದ ಮಡಿ ಮರಳಿ ಬರುತ್ತದೆ ಅಧಿಕಪ್ರಸಂಗಿ ಎಂದು ರೇಗಾಡಿದರು. ಶಾಂತವಾಗಿಯೇ ಉತ್ತರಿಸಿದ ಕ್ಷೌರಿಕ ಮಡಿ ನಿಮಗಲ್ಲ ಭಟ್ರೇ ನನಗೇ…. ನಿಮಗೇನು ನನಗೆ ದೇವರ ಅಪ್ಪಣೆಯಾಗಿದೆ ಮಡಿ ಮಡಿಯೆಂದು ಮಡಿಗೆ ಅಪಚಾರವೆಸಗುವವರ ಕ್ಷೌರ ಮಾಡಿದರೆ ಪಾಪ ನನಗೆ ತಟ್ಟುವುದಂತೆ ನೀವೋ ಹಗಲು ಸಸ್ಯಹಾರಿ ಸಂಜೆಯೆಂದರೆ ಮದ್ಯಮಾಂಸ ಸೇವಿಸಿ ದೇವರ ಪೂಜೆ ಮಾಡುತ್ತೀರಿ ಈ ಪಾಪ ಕರ್ಮ ನನ್ನ ಹೆಗಲೇರಿದರೆ ನನಗೂ ಪಾಪದ ಭಯವಿದೆ ಭಟ್ರೇ ಎಂದಾಗ ಭಟ್ರು ಎಗರಾಡಿ ಥಳಿಸಲು ಮುಂದಾದರು. ಶಾಂತರೀತಿಯಲ್ಲೇ ನಿಂತಿದ್ದ ಕ್ಷೌರಿಕ ಅಂದು ಮದ್ಯದಂಗಡಿಯಲ್ಲಿ ಭಟ್ರ ಅಪರಾವತಾರನ್ನು ತೆಗೆದ ದೃಶ್ಯ ಜನಗಳ ಮುಂದಿಟ್ಟ. ಭಟ್ಟರಿಂದ ಮಾತುಗಳೇ ಹೊರಳದಾದವು. ಮುಂದುವರಿದ ಕ್ಷೌರಿಕ ಕೆಲವರಿಗೆ ಹೇಳಿಕೊಳ್ಳಲು ಮೇಲ್ಜಾತಿ ಆದರೆ ತೆವಲು ತೀರಿಸಿಕೊಳ್ಳಲು ಕೀಳ್ಜಾತಿಯಾದರೂ ಅಡ್ಡಿಯಿಲ್ಲ ಎಂದಾಗ ಭಟ್ಟರ ಜೊತೆಗೆ ಬಂದಿದ್ದ ಗೌಡರ ಕಣ್ಣು ನೆಲ ನೋಡತೊಡಗಿತು. ನಿಮಗೆ ಜಾತಿಯ ಅಹಂ ಇದ್ದರೆ ನಿಮ್ಮ ಮನೆಯ ಒಳಗೆ ಇಟ್ಟುಕೊಳ್ಳಿ ಮನೆಯ ಅಂಗಳ ಊರ ಮೈದಾನದವರೆಗೆ ತರಬೇಡಿ. ನಾವೂ ಕೂಡ ಮನುಷ್ಯರೇ ಪಶುಗಳಿಗಿಂತ ಕೀಳಾಗಿ ನೋಡಿರೆಂದು ಯಾವ ದೇವರೂ ಹೇಳಿಲ್ಲ.
ಇಂದಿನ ದಿನದ ವೈಚಾರಿಕತೆಯ ಅರಿವಿದ್ದೂ ಇಂದಿಗೆ ಅಗತ್ಯವಿಲ್ಲದ ನಿಮ್ಮ ಕೊಳೆತ ಸಂಪ್ರದಾಯವನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸಬೇಡಿ. ನೀವು ಕೀಳುಕೀಳೆಂದು ನೋಡುವ ಕೀಳುಜಾತಿಯವನಿಲ್ಲದಿದ್ದರೆ ನೀರು, ಅನ್ನ, ಬಟ್ಟೆ, ಚಪ್ಪಲಿ ಹೀಗೆ ಪ್ರತಿಯೊಂದರಲ್ಲೂ ನಿಮ್ಮ ಬದುಕೇ ಇರುತ್ತಿರಲಿಲ್ಲ. ಕಾಡು ಪ್ರಾಣಿಯಂತೆ ಬದುಕಬೇಕಾಗುತಿತ್ತು ಜಾತಿಯ ಅಮಲು ನಿಮ್ಮ ತಲೆಗೇರಿಸಿಕೊಂಡು ಎಂದು ಹೇಳಿ ನಿಲ್ಲಿಸಿಬಿಟ್ಟ. ಗೌರವಸ್ಥರ ಮುಖ ಸಣ್ಣದಾಯಿತು ಊರಮಂದಿ ಉಘೇ ಎಂದರು. ಭಟ್ಟರು ಸಣ್ಣ ಧ್ವನಿಯಲ್ಲಿ ಕೇಳಿದರು ನಿನಗೆ ಅಪ್ಪಣೆಯಿತ್ತ ದೇವರು ಯಾರೆಂದು ನಮ್ಮ ದೇವರಾರು ಕತ್ರಿಕೂಪೇಶ್ವರನೆಂದನು ಕ್ಷೌರಿಕ. ದಿನ ಬದಲಾಯಿತು ಬಾಗಿಲಿಗೆ ಕರೆಸಿಕೊಳ್ಳುತ್ತಿದ್ದ ಕ್ಷೌರಿಕನ ಅಂಗಡಿ ಬಾಗಿಲಿಗೆ ತೆರಳಲಾರಂಭಿಸಿದರು. ಮಡಿ ಮೈಲಿಗೆಗಳು ನಿಧಾನವಾಗಿ ಮೂಲೆ ಸರಿಯಲಾರಂಭಿಸಿದವು.
ತುಂಬಾ ಅದ್ಬುತವಾದ ಲೇಖನ….!!!
ಕ್ಷೌರಿಕರ ಅನುಭವವನ್ನು ಅನುಭವಿಸಿ ಉಲ್ಲೇಖಿಸಲಾಗಿದೆಯೆಂದು ಭಾವಿಸುವೆ…. ುಇದರ ಜೊತೆ ಜೊತೆಗೆ ಜಾತಿ ನಿಂದನೆ ಪದ ಬಳಸಿದವರಿಗೆ ಕಾನೂನು ಚೌಕಟ್ಟು ರಚನೆಗೆ ಆಗ್ರಹವಾಗಬೇಕಿದೆ…. ಮುಂದಿನ ಲೇಖನವನ್ನು ಎದುರು ನೋಡುತಿದ್ದೇನೆ…. ಧನ್ಯವಾದಗಳು…!
ಧನ್ಯವಾದಗಳು