January 18, 2025
red light 2

ಅವಳು ಸರಸರನೆ ನಡೆಯುತ್ತಿದ್ದಳು, ರಾತ್ರಿ 9 ಗಂಟೆಯ ಹೊತ್ತು, ನಿರ್ಜನ ಪ್ರದೇಶ; ಸೂಜಿ ಬಿದ್ದರೂ ಕೇಳಿಸದಷ್ಟು ಮೌನ. ಭಯಪಡುತ್ತಲೇ ನಡೆಯುತ್ತಿದ್ದಳವಳು, ದೂರದಲ್ಲಿ ಕೆಂಪು ದೀಪದ ಬೆಳಕನ್ನು ಕಂಡು ನಿರಾಳಾದಳು. ಅದು ಅವಳ ಮನೆಯ ಹೊರಗೆ ಹಾಕಿದ ಬೀದಿ ದೀಪದ ಬೆಳಕು,ಯಾವತ್ತೂ ಅದೇ ದಾರಿಯಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಳು,ಅವಳ ಮನೆಗೆ ಹೋಗುವ ದಾರಿ ಕಾಡು ದಾರಿಯಾದ್ದರಿಂದ ಭಯಪಟ್ಟಿದ್ದಳಷ್ಟೇ..ಆದರೆ ಕೆಂಪುದೀಪ ಕಾಣಿಸಿಕೊಂಡಾಗ ಅವಳಿಗದೇನೋ ನಿರಾಳಭಾವ.

ಕನ್ನಿಕಾ ಸುಂದರ ಗುಳಿ ಕೆನ್ನೆಯ ಹುಡುಗಿ,ಪ್ರಭಾಕರ್ ಮತ್ತು ಸುಶೀಲಾ ದಂಪತಿಗಳ ಮುದ್ದಿನ ಮಗಳು, ಪ್ರಭಾಕರ್ ರೈತರಾಗಿದ್ದುಕೊಂಡು ಮಗಳನ್ನು ಬಿ. ಕಾಂ ಪದವೀಧರಳನ್ನಾಗಿ ಮಾಡಿದ್ದರು, ಕನ್ನಿಕಾ ಮೃದು ಸ್ವಭಾವದ ಹುಡುಗಿ, ಮಾತು ಕಮ್ಮಿ, ಆದರೆ ಕೆಲಸದಲ್ಲಿ ಬಲುಜಾಣೆ. ವಿದ್ಯಾಭ್ಯಾಸ ಮುಗಿದಕೂಡಲೇ ಅವಳದೇ ಊರಿನ ಒಂದು ಶೋರೂಂನಲ್ಲಿ ಲೆಕ್ಕಪರಿಶೋಧಕಿ ಕೆಲಸವನ್ನು ಮಾಡುತ್ತಿದ್ದಳು.ಅವಳ ಜೀವನ ಯಾವುದೇ ಕಿರಿ ಕಿರಿಯಿಲ್ಲದೆ ಸುಂದರವಾಗಿತ್ತು. ಆದರೆ ಆ ಒಂದು ದಿನ ಅವಳ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತ್ತು.ಅವಳು ತಾನಿದ್ದ ಪ್ರಪಂಚದಿಂದ ಒಂದು ಕೋಣೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು.

ಹೌದು ಅಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಯ ಹಾದಿಯ ಕತ್ತಲಿನಲ್ಲಿ ನಡೆದು ಬರುತಿದ್ದವಳಿಗೆ ತನ್ನ ಮನೆಯ ಕೆಂಪು ದೀಪವನ್ನು ಕಂಡು ಹಾಯೆನಿಸಿತು. ಹಾಗೆ ಆರಾಮವಾಗಿ ಉಸಿರು ಬಿಡುವಾಗಲೇ ಯಾರೋ ಇಬ್ಬರು ಅವಳ ಮೂಗಿಗೆ ಮತ್ತು ಭರಿಸುವ ಕರವಸ್ತ್ರವನ್ನ ಅದ್ದಿ ಮತಿ ಹೀನಳನ್ನಾಗಿ ಮಾಡಿದ್ದರು, ಹಾಗೆ ಅವಳನ್ನ ಎತ್ತಿಕೊಂಡು ತಾವು ತಂದಿದ್ದ ಓಮ್ನಿ ಕಾರಿನಲ್ಲಿ ಹಾಕಿಕೊಂಡು ಮಹಾನಗರಿಯ ಕಡೆಗೆ ಸಾಗುತಿದ್ದರು. ಕನ್ನಿಕಾಳಿಗೆ ಎಷ್ಟು ಪ್ರಮಾಣದ ಮತ್ತನ್ನು ನೀಡಿದ್ದರೆಂದರೆ ಅವಳಿಗೆ ಪ್ರಜ್ಞೆ ಬರಲು ಒಂದೂವರೆ ದಿನ ಬೇಕಾಯಿತು.. ಎಚ್ಚರಗೊಂಡ ಕನ್ನಿಕಾ ತನ್ನ ಸುತ್ತಲೂ ನೋಡಿಕೊಳ್ಳುವಾಗ ಯಾವುದೊ ಒಂದು ಕೋಣೆಯಲ್ಲಿ ಬಿದ್ದಿದ್ದಳು. ಮುಂಬಯಿ ಮಹಾನಗರಿಯ ಕಾಮಾಟಿ ಪುರದಲ್ಲಿ ಇದ್ದಳು. ತನ್ನನ್ನು ಕರೆದುಕೊಂಡು ಬಂದವರು ಯಾರೆಂದು ನೋಡುವಾಗ ಅವಳಿಗೆ ಆಘಾತವಾಗಿತ್ತು. ಅವಳು ಕೆಲಸ ಮಾಡುತಿದ್ದ ಶೋ ರೂಮ್ ಮಾಲೀಕ ಮತ್ತು ಅವನ ಸಹಚರ ಅವಳ ಮುಂದೆ ಇದ್ದರು. ಕನ್ನಿಕಾಳ ಬಗ್ಗೆ ಪೂರ್ಣವಾಗಿ ತಿಳಿದುಕೊಂಡು, ಅವರದೇ ಕಂಪನಿಯಲ್ಲಿ ಕೆಲಸವನ್ನು ನೀಡಿ ಅವಳ ವಿಶ್ವಾಸ ಗಳಿಸಿದರು, ಆದರೆ ಅವರು ಹೆಣ್ಣುಮಕ್ಕಳನ್ನು ಮುಂಬೈಗೆ ಮಾರುವ ದಂದೆಯನ್ನ ಮಾಡುತ್ತ ಹಣ ಗಳಿಸುತ್ತಿದ್ದರು.ತುಂಬಾ ಹುಡುಗಿಯರನ್ನು ಮಾರಿದ್ದ. ಆತನಿಂದಾಗಿ ಕನ್ನಿಕಾ ಮುಂಬೈಯ ಕೆಂಪು ದೀಪದಲ್ಲಿ ವೇಶ್ಯೆಯಾಗಿ ಬಾಳುವಂತಾಯಿತು. ಹೂವಿನಂತಿದ್ದ ಕನ್ನಿಕಾ ಬಾಳು ಕೆಂಪು ದೀಪದ ಕೂಪದಲ್ಲಿ ಬಾಡಿಹೋಯಿತು.ಇತ್ತ ಅವಳ ತಂದೆ ತಾಯಿಗೆ ಮಗಳು ಎಲ್ಲಿ ಹೋದಳೆಂದು ತಿಳಿಯಲಿಲ್ಲ, ಇದ್ದೊಬ್ಬ ಮಗಳನ್ನು ಕಳೆದುಕೊಂಡು ಅವರಿಬ್ಬರು ಕೊರಗುವಂತಾಯಿತು.

ಯಾವ ಕೆಂಪು ದೀಪ ಕಂಡಾಗ ನಿರಾಳವಾಗಿ ಉಸಿರು ಬಿಡುತ್ತಿದ್ದಳೋ, ಈಗ ಅದೇ ಕೆಂಪುದೀಪ ಕಂಡು ಭಯ ಪಡುತಿದ್ದಾಳೆ. ಇಷ್ಟೆಲ್ಲ ನೋವು ತಿಂದರೂ ಅವಳಿಗೆ ನ್ಯಾಯ ಸಿಗಲೇ ಇಲ್ಲ. ಅಲ್ಲೇ ಮೈ ಮಾರಿ ಬದುಕುವ ದುಸ್ಥಿತಿ ಬಂದೊದಗಿತು. ಆದರೆ ಆ ಪಾಪಿಗಳು ಈಗಲೂ ಹುಡುಗಿಯರನ್ನ ಮಾರಾಟ ಮಾಡುತ್ತಲೇ ಇದ್ದಾರೆ, ಸಮಾಜದಲ್ಲಿ ಶ್ರೀಮಂತರಂತೆ, ಗೌರವಾನ್ವಿತ ವ್ಯಕ್ತಿಗಳಂತೆ ಜೀವನ ಮಾಡುತ್ತಿದ್ದಾರೆ, ಅದೆಷ್ಟೋ ಹುಡುಗಿಯರು ಮನೆಯ ಸುರಕ್ಷತೆಯ ಕೆಂಪು ದೀಪದಿಂದ, ಘೋರ ನರಕದ ಕೆಂಪು ದೀಪದ ಬೆಳಕಿನ ಕೋಪಕೆ ನೂಕಲ್ಪಡುತಿದ್ದಾರೆ.

 

 

 

 

ನಾಗಶ್ರೀ. ಎಸ್. ಭಂಡಾರಿ
ಮೂಡುಬಿದಿರೆ

ಎಂ. ಎ ಅರ್ಥಶಾಸ್ತ್ರ
ಯಕ್ಷಗಾನ ಮತ್ತು ಬರವಣಿಗೆಯಲ್ಲಿ ಆಸಕ್ತಿ
ಈಗ ಗೃಹಿಣಿ.

1 thought on “ಕೆಂಪುದೀಪ – ✍️:- ನಾಗಶ್ರೀ. ಎಸ್. ಭಂಡಾರಿ

Leave a Reply

Your email address will not be published. Required fields are marked *