November 22, 2024
Hair style championships

ಕುಶಾಲನಗರದ ಲುಕ್ಸ್ ಬ್ಯೂಟಿ ಕೇರ್ ನ ಮಾಲೀಕರಾದ ಶ್ರೀಯುತ ಲೋಕೇಶ್ ಮತ್ತು ಕುಶಾಲನಗರ ಸವಿತಾ ಸಮಾಜದ ಬಂಧುಗಳ ಸಹಯೋಗದೊಂದಿಗೆ ಕುಶಾಲನಗರದ ಅತಿಥಿ ಕಂಫರ್ಟ್ಸ್ ನ ಸಭಾಂಗಣದಲ್ಲಿ  ಫೆಬ್ರವರಿ 12, 2019 ರ ಮಂಗಳವಾರ ಪ್ರಥಮ ವರ್ಷದ ಫೈವ್ ಸ್ಟಾರ್ ಹೇರ್ ಸ್ಟೈಲ್ ಚಾಂಪಿಯನ್ ಷಿಪ್ ಸ್ಪರ್ಧೆ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಯಾದಗಿರಿ ಕೊಂಚೂರು ಸವಿತಾ ಪೀಠದ ಪೂಜ್ಯರಾದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿದರು. ಪ್ರಸ್ತುತ ದುಬೈನಲ್ಲಿ ಪ್ರತಿಷ್ಠಿತ ಕೇಶ ವಿನ್ಯಾಸಕಾರರಾಗಿ ರೂಪುಗೊಂಡಿರುವ  ಕುಶಾಲನಗರ ಶುಂಠಿಕೊಪ್ಪದ ಶ್ರೀಯುತ ಸುನಿಲ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಉದಯೋನ್ಮುಖ ಚಲನಚಿತ್ರ ನಟಿ, ಭರತನಾಟ್ಯ ಕಲಾವಿದೆ, ಮಿಸ್ ಸೌತ್ ಇಂಡಿಯಾ 2018 ಪ್ರಶಸ್ತಿ  ಮುಡಿಗೇರಿಸಿಕೊಡಿರುವ ಪ್ರಸ್ತುತ ಚನ್ನರಾಯಪಟ್ಟಣದಲ್ಲಿ ನೆಲೆಸಿರುವ ಮೂಲತಃ ಕುಶಾಲನಗರದ ಸವಿತಾ ಸಮಾಜದ ಕುಮಾರಿ ಆಶಾ ಭಂಡಾರಿಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿಶೇಷ ಆಹ್ವಾನಿತರಾಗಿ ಸವಿತಾ ಸಮಾಜದ ಮುಖಂಡರುಗಳಾದ ಕಡೂರು ರವಿ, ಕಟ್ ವೆಲ್ ರಂಗನಾಥ್, ದಾಸರಹಳ್ಳಿ ಚಂದ್ರು, ಸ್ಪಿನ್ ನವೀನ್, ಸ್ಪಿನ್ ಸಮೂಹ ಸಂಸ್ಥೆಗಳ ಮಾಲೀಕರಾದ ಸ್ಪಿನ್ ನಾಮದೇವ್ ನಾಗರಾಜ್ ಮುಂತಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ASHA BHANDARY

ಕಾರ್ಯಕ್ರಮವನ್ನು ಉದ್ಘಾಟಿಸಿದ ಸವಿತಾ ಪೀಠದ ಪೂಜ್ಯರು “ಪ್ರತಿಯೊಂದು ಕ್ಷೇತ್ರದಲ್ಲಿಯೂ ಈಗ ಪೈಪೋಟಿ ಇದೆ.ಅದಕ್ಕೆ ಕ್ಷೌರಿಕ ಕ್ಷೇತ್ರವೂ ಕೂಡ ಹೊರತಾಗಿಲ್ಲ. ಆಕರ್ಷಣೀಯ,ಆಧುನಿಕ ಕೇಶವಿನ್ಯಾಸ ಮತ್ತು ಟ್ಯಾಟೂಗಳಿಗೆ ಯುವಜನರು ಮಾರುಹೋಗಿದ್ದಾರೆ. ಆದ್ದರಿಂದ ನವೀನ ಮಾದರಿಯ ಕೇಶ ವಿನ್ಯಾಸವನ್ನು ಕಲಿತು ಸವಿತಾ ಸಮಾಜದ ಯುವಕರು ಆಧುನಿಕ ಜಗತ್ತಿನಲ್ಲಿ ಪೈಪೋಟಿ ನೀಡುವಂತೆ ಕ್ಷೌರಿಕ ವೃತ್ತಿಯನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿ, ಪ್ರಾಮಾಣಿಕವಾಗಿ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು.ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಕೀಳರಿಮೆ ಬಿಟ್ಟು ತಮ್ಮ ವೃತ್ತಿಯನ್ನು ನಿರ್ವಹಿಸಬೇಕು ” ಎಂದು ಸವಿತಾ ಸಮಾಜದ ಯುವಕರಿಗೆ ಹಿತವಚನ ನೀಡಿದರು.

ಮಡಿಕೇರಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಮಾತನಾಡಿ “ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೌರಿಕರು ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.ಕಾರ್ಮಿಕ ಇಲಾಖೆಯಲ್ಲಿ ಕೊಡಮಾಡುವ ಆರೋಗ್ಯ ಕಾರ್ಡ್ ಗಳನ್ನು ಪ್ರತಿಯೊಬ್ಬರೂ ಮಾಡಿಸಿಕೊಂಡು ಎರಡು ಲಕ್ಷದ ವರೆಗಿನ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಸಂಘಟಕರಾದ ಆರ್.ಲೋಕೇಶ್ ಮಾತನಾಡುತ್ತಾ “ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಪ್ರತಿಭಾವಂತ ಯುವ ಜನರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶ ವಿದೇಶದಲ್ಲಿರುವ ನುರಿತ ಕ್ಷೌರಿಕರನ್ನು ಕರೆಸಿ ಅವರಿಂದ ತರಬೇತಿ ಕೊಡಿಸುವ ಕೆಲಸ ಮಾಡಲಾಗುತ್ತದೆ.ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರತಿಭಾವಂತ ಸಮಾಜ ಬಾಂಧವರು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕು, ಪರಸ್ಪರ ಪರಿಚಿತರಾಗಬೇಕು,ಅವರಲ್ಲಿರುವ ಕ್ಷೌರಿಕ ಕಲೆಯ ವಿನಿಮಯ ಆಗಬೇಕು ಎಂಬ ಉದ್ದೇಶದಿಂದ ಈ ರೀತಿಯ ಸ್ಪರ್ಧಾಕೂಟದ ಅವಶ್ಯಕತೆ ಇದೆ” ಎಂದು ನುಡಿದರು.

ಕುಶಾಲನಗರ ಸವಿತಾ ಸಮಾಜದ ಅಧ್ಯಕ್ಷರಾದ ಜಗದೀಶ್ ಭಂಡಾರಿಯವರು, ಮಂಜುನಾಥ್, ಬೆಂಗಳೂರಿನ ಮುರಳಿ, ಗೌರವಾಧ್ಯಕ್ಷರಾದ ವೈ.ಪುಟ್ಟರಾಜು,ಬಾಲರಾಜ್, ಸಮಾಜದ ಹಿರಿಯರಾದ ನಾಗಮ್ಮ ಮುಂತಾದವರು ಉಪಸ್ಥಿತರಿದ್ದರು.

ನಂತರ ಐದು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಮಡಿಕೇರಿ, ಬೆಂಗಳೂರು, ಮಂಗಳೂರು, ಮುಂಬಯಿ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಆಗಮಿಸಿದ್ದ ಸವಿತಾ ಸಮಾಜದ ಯುವ ಬಂಧುಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಕಟ್ ಎಂಡ್ ಕಲರ್, ಲೇಡಿಸ್ ಹೇರ್ ಕಟ್ ಅಂಡ್ ಸ್ಟೈಲ್ಸ್, ಹೇರ್ ಟ್ಯಾಟೂ ಡಿಸೈನ್, ನ್ಯೂ ಮಾಡಲ್ ಹೇರ್ ಸ್ಟೈಲ್ಸ್, ಓನ್ ಕ್ರಿಯೇಟಿವಿಟಿ ಇವೇ ಮುಂತಾದ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.ಅಪಘಾತದಲ್ಲಿ ತಮ್ಮ ಬಲಗೈಯನ್ನು ಕಳೆದುಕೊಂಡರೂ ವಿಚಲಿತರಾಗದೆ ಉಳಿದ ಒಂದೇ ಕೈಯಲ್ಲಿ ಕ್ಷೌರಿಕ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಟಿ.ನರಸೀಪುರದ ಮಹೇಶ್ ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಸ್ಪರ್ಧೆಯ ತೀರ್ಪುಗಾರರಾಗಿ ಬೆಂಗಳೂರಿನ ಯುವ ಚೇತನ ಬಳಗದ ಸ್ನೇಹಿತರಾದ ಮಂಜುನಾಥ್, ಶಶಿ, ಲುಕ್ ಮೀ ರವಿ, ನಾಗರಾಜ್, ರಾಮು,ಹುಬ್ಬಳ್ಳಿಯ ಮಂಜುನಾಥ್ ಚೆಟ್ಟಿಯಾರ್ ರವರ ತಂಡ,ಬೆಂಗಳೂರಿನ ಮೇಕಪ್ ಆರ್ಟಿಸ್ಟ್ ಮುರುಳಿ.ಜಿ. ಮತ್ತು ಸ್ಥಳೀಯ ಲುಕ್ಸ್  ಬ್ಯೂಟಿ ಕೇರ್ ನ ಸದಸ್ಯರು ಕಾರ್ಯನಿರ್ವಹಿಸಿದರು.

ಕುಶಾಲನಗರದ ಮೋಹನ್, ಬೆಂಗಳೂರಿನ ಸೀನು, ಮೈಸೂರಿನ ಸಚಿನ್, ಪಿರಿಯಾಪಟ್ಟಣದ ಅಭಿ ಮುಂತಾದವರು ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದರು. ನಂತರ ವೇದಿಕೆಯ ಮೇಲೆ ಸವಿತಾ ಪೀಠದ ಪೂಜ್ಯರಾದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿಗಳು,  ಅಂತಾರಾಷ್ಟ್ರೀಯ ಕೇಶ ವಿನ್ಯಾಸಗಾರ ಶ್ರೀ ಸುನಿಲ್ ದುಬೈ, ಸವಿತಾ ಸಮಾಜದ ಹಿರಿಯರಾದ ಶ್ರೀ ಮಂಜುನಾಥ ಚೆಟ್ಟಿಯಾರ್, ಸವಿತಾ ಸಮಾಜದ ಅಭಿನೇತ್ರಿ ಕುಮಾರಿ ಆಶಾ ಭಂಡಾರಿ, ಸ್ಪಿನ್ ಸಮೂಹ ಸಂಸ್ಥೆಯ ಮಾಲೀಕರಾದ ಶ್ರೀ ನಾಮದೇವ್ ನಾಗರಾಜ್, ಕುಶಾಲನಗರ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಜಗದೀಶ್ ಭಂಡಾರಿ  ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸವಿತಾ ಸಮಾಜದ ಬಹುತೇಕ ಪ್ರಮುಖರನ್ನು,ಯುವಕರನ್ನು, ಪ್ರಸಿದ್ಧ ಕೇಶ ವಿನ್ಯಾಸಗಾರರನ್ನು,ಸಮಾಜದ ಹಿರಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕೆಂದು ಹೊರಟ ಲುಕ್ಸ್ ಬ್ಯೂಟಿ ಕೇರ್ ನ ಆರ್.ಲೋಕೇಶ್ ಮತ್ತು ಸ್ನೇಹಿತರ ಪ್ರಥಮ ಪ್ರಯತ್ನ ಬಹುತೇಕ ಯಶಸ್ವಿಯಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ ಲೋಕೇಶ್ ರವರು ಕಾರ್ಯಕ್ರಮದ ಕೊನೆಯ ಹಂತದವರೆಗೂ ಅತ್ಯುತ್ಸಾಹದಿಂದ ಕಾರ್ಯನಿರ್ವಹಿಸಿದ ಮಂಡ್ಯ ಜಿಲ್ಲಾ ಸವಿತಾ ಸಮಾಜದ ಬಂಧುಗಳಿಗೆ ವಿಶೇಷ ವಂದನೆ ಸಮರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *