November 22, 2024
Gopal Balkunje1

ರ್ನಿರೆ ಫೌಂಡೇಶನ್ ನವರು ನೀಡುವ ಕೃಷಿಕ ಪ್ರಶಸ್ತಿ ಈ ಬಾರಿ ನಮ್ಮ ಸಮಾಜದ ಬಹುಮುಖ ಪ್ರತಿಭೆಯ, ಸಮಗ್ರ ಕೃಷಿಕ ಶ್ರೀ ಗೋಪಾಲ ಭಂಡಾರಿ ಬಳ್ಕುಂಜೆಯವರಿಗೆ ಲಭಿಸಿದೆ.

ಗೋಪಾಲ ಭಂಡಾರಿಯವರು ಮೂಲತಃ ಮುದ್ರಣ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಕಚ್ಚೂರು ಕೋ.ಆಪರೇಟಿವ್ ಸೊಸೈಟಿಯ ಮೊದಲಿನ ಕಟ್ಟಡದಲ್ಲಿದ್ದ ಜ್ಞಾನಪ್ರಕಾಶನ ಪ್ರೆಸ್ ನ್ನು ಸುಮಾರು ಎಂಟು ವರ್ಷಗಳ ಕಾಲ ನಿರ್ವಹಿಸಿ,ಬೇರೆ ಬೇರೆ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಹೈದರಾಬಾದ್,ಬೈಕಂಪಾಡಿ ಮುಂತಾದೆಡೆಗಳಲ್ಲಿ ಕಾರ್ಯ ನಿರ್ವಹಿಸಿ ಕಳೆದ ಕೆಲವು ವರ್ಷಗಳಿಂದ ಹುಟ್ಟೂರು ಬಳ್ಕುಂಜೆಯಲ್ಲಿ ನೆಲೆಸಿದ್ದು “ಪ್ರತೀಕ್ಷಾ ಪೆಸ್ಟ್ ಮ್ಯಾನೇಜ್ಮೆಂಟ್” ಎಂಬ ಸಂಸ್ಥೆ ಸ್ಥಾಪಿಸಿಕೊಂಡು ಇಡೀ ಮಂಗಳೂರಿಗೆ ವಿದ್ಯುತ್ ಸರಬರಾಜು ಮಾಡುವ ಷಂಬೂರ್ ನ AMR ಪವರ್ ಪ್ಲಾಂಟ್ ಗೆ ಮತ್ತು ಕೋಸ್ಟಲ್ ಗಾರ್ಡ್ ನ ಹಡಗುಗಳಿಗೆ ಪೆಸ್ಟ್ ಕಂಟ್ರೋಲರ್ ಆಗಿ ಸೇವೆ ಸಲ್ಲಿಸುತ್ತಾ, ಕೃಷಿಯನ್ನು ಹವ್ಯಾಸವಾಗಿಸಿಕೊಂಡು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ಎಲ್ಲಾ ಕೃಷಿಕರಂತೆ ಏಕತಾನತೆಯ ಕೃಷಿಗೆ ಒಗ್ಗಿಕೊಳ್ಳದೇ ಸಮಗ್ರ ಕೃಷಿಯನ್ನು ಮೈಗೂಡಿಸಿಕೊಂಡು ಭತ್ತ,ಕಬ್ಬು,ಅಲಸಂದೆ,ಬೆಂಡೆ,ಸೌತೆ,ಕುಂಬಳ ಅಷ್ಟೇ ಅಲ್ಲದೇ ತೆಂಗು,ಮಾವು,ಹಲಸು,ಗೇರು,ಅಡಿಕೆ ಮುಂತಾದ ಮರಗಿಡಗಳನ್ನು ಬೆಳೆಸಿ ಮಾದರಿ ರೈತರಾಗಿದ್ದಾರೆ.ಮೂಲ್ಕಿಯ ವಿಜಯ ರೈತ ಸೇವಾ ಸಹಕಾರಿ ಸಂಘದವರು ಇವರನ್ನು 2008 ರಲ್ಲಿ ಒಮ್ಮೆ ಪ್ರಶಸ್ತಿ ನೀಡಿ ಗೌರವಿಸಿದ್ದರು.ಈಗ ವಿಜಯ ರೈತ ಸೇವಾ ಸಹಕಾರಿ ಸಂಘದ ಸಧಸ್ಯರಾಗಿರುವ ಇವರು ಒಂದೇ ಒಂದು ಗ್ರಾಮಸಭೆಗೂ ಗೈರುಹಾಜರಾದ ಉದಾಹರಣೆಯಿಲ್ಲ.ಮಂಗಳೂರು ಆಕಾಶವಾಣಿಯಲ್ಲಿ ಸಮಗ್ರ ಕೃಷಿ ನಿರ್ವಹಣೆ ಬಗ್ಗೆ ಹಲವು ಬಾರಿ ಉಪನ್ಯಾಸವನ್ನೂ ನೀಡಿದ್ದಾರೆ.

ಇಂತಹ ಅಪರೂಪದ ಕೃಷಿಕರನ್ನು ಗುರುತಿಸುವ ಹುರಿದುಂಬಿಸುವ ಕರ್ನಿರೆ ಶ್ರೀ ವಿಶ್ವನಾಥ ಶೆಟ್ಟರ “ಕರ್ನಿರೆ ಫೌಂಡೇಶನ್” ಶ್ರೀ ಗೋಪಾಲ ಭಂಡಾರಿಯವರ ವಿಶಿಷ್ಟತೆಯನ್ನು ಗುರುತಿಸಿ ಜುಲೈ 23 ರ ಸೋಮವಾರ ಕರ್ನಿರೆಯ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ “ಕೃಷಿಕ ಪ್ರಶಸ್ತಿ” ನೀಡಿ ಗೌರವಿಸಿತು.

ಮುಂಬಯಿಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಕರ್ನಿರೆ ಶ್ರೀ ವಿಶ್ವನಾಥ ಶೆಟ್ಟಿಯವರು ಸ್ಥಾಪಿಸಿರುವ “ಕರ್ನಿರೆ ಫೌಂಡೇಶನ್” ಬಳ್ಕುಂಜೆ,ಕರ್ನಿರೆ,ಕವತಾರು,ಕೊಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮದ ಕೃಷಿಕರಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುತ್ತಾ ಬಂದಿದೆ.ಆರ್ಥಿಕವಾಗಿ ಹಿಂದುಳಿದ ರೈತರನ್ನು ಗುರುತಿಸಿ ಅವರಿಗೆ ತೆಂಗು,ಅಡಿಕೆ,ಮಾವು,ಹಲಸು ಮುಂತಾದ ಸಸಿಗಳನ್ನು ಉಚಿತವಾಗಿ ನೀಡುವುದಲ್ಲದೇ,ಕೃಷಿ ಪರಿಕರಗಳನ್ನೂ,ಬಡ್ಡಿ ರಹಿತವಾಗಿ ಆರ್ಥಿಕ ಸಹಾಯವನ್ನೂ ಮಾಡುತ್ತದೆ.ಕೃಷಿಕರು ತಮ್ಮ ಫಲವತ್ತಾದ ಭೂಮಿಯನ್ನು ವ್ಯರ್ಥವಾಗಿ ಬಿಡದಂತೆ ಪ್ರೇರೇಪಿಸುತ್ತಾ ಮರಗಿಡಗಳ ಮಹತ್ವ ಮತ್ತು ಆಮ್ಲಜನಕದ ಉತ್ಪಾದನೆ,ಪೂರೈಕೆ,ಬಳಕೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಈ ಫೌಂಡೇಶನ್ ನ ಮೂಲ ಉದ್ದೇಶವಾಗಿದೆ.ಇಂತಹ ಒಂದು ಉನ್ನತ ಯೋಚನೆ ಮತ್ತು ಯೋಜನೆಯ ಸಂಸ್ಥೆಯೊಂದು ಶ್ರೀ ಗೋಪಾಲ ಭಂಡಾರಿಯವರನ್ನು ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ.

ಪ್ರಸ್ತುತ “ಕಚ್ಚೂರು ಕೋ ಆಪರೇಟಿವ್ ಸೊಸೈಟಿ” ಯ ನಿರ್ದೇಶಕರಲ್ಲೊಬ್ಬರಾಗಿರುವ ಗೋಪಾಲ ಭಂಡಾರಿಯವರು ಬಿ.ಕಾಂ.ಪದವೀಧರರಾದರೆ ಪತ್ನಿ ಶ್ರೀಮತಿ ಹೇಮಲತಾ ಗೋಪಾಲ ಭಂಡಾರಿಯವರು ಕೂಡಾ ಬಿ.ಎ.ಪದವೀಧರೆ.ಇವರಿಗೆ ಪ್ರತೀಕ್ ಮತ್ತು ಪ್ರತೀಕ್ಷಾ ಎಂಬಿಬ್ಬರು ಅವಳಿ ಮಕ್ಕಳು.ಪ್ರತೀಕ್ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರೆ,ಮಗಳು ಪ್ರತೀಕ್ಷಾ ಮೀಜಾರಿನ MITE ಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ ಇಬ್ಬರೂ ಉದ್ಯೋಗದಲ್ಲಿದ್ದಾರೆ.

ಕೃಷಿಪ್ರಶಸ್ತಿಯನ್ನು ಪಡೆದ ನಮ್ಮ ಭಂಡಾರಿ ಸಮಾಜದ ಬಂಧು ಕೃಷಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ,ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಸಹಾಯಹಸ್ತ ಚಾಚುವ ಕರ್ನಿರೆ ಫೌಂಡೇಶನ್ ನಂತಹ ಸಂಸ್ಥೆಗಳು ನೂರಾರು ಹುಟ್ಟಿಕೊಳ್ಳಲಿ,ಬಳ್ಕುಂಜೆ ಶ್ರೀ ಗೋಪಾಲ ಭಂಡಾರಿ ಮತ್ತು ಕರ್ನಿರೆ ಶ್ರೀ ವಿಶ್ವನಾಥ ಶೆಟ್ಟಿಯವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.

 

 

 

 

 

 

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *