September 20, 2024

ಕುಲಯಾವುದಯ್ಯ ..?

(ವಿಪರ್ಯಾಸ ನೋಡಿ)

                     ಜಾತಿಪದ್ಧತಿ ಎಂಬುದು ಪ್ರಾಚೀನ ವೇದ ಕಾಲದಿಂದಲೂ ಪ್ರಚಲಿತದಲ್ಲಿ ಇದೆ ಎಂಬುದೇ ನಮ್ಮೆಲ್ಲರ ನಂಬಿಕೆ. ಆದರೆ ಯಾವ ವೇದಗಳಲ್ಲಿಯೂ ಜಾತಿ ಪದ್ಧತಿಯನ್ನು ಅನುಮೋದಿಸುವ ಒಂದೇ ಒಂದು ಅಂಶ ಕಾಣ ಸಿಗುವುದಿಲ್ಲ. ಹುಟ್ಟಿನಿಂದಲೇ ಓರ್ವ ವ್ಯಕ್ತಿ ಇಂತಹುದೇ ಜಾತಿ ಎಂದು ಪ್ರಮಾಣೀಕರಿಸುವ ಪ್ರಸ್ತಾವನೆ ಕಂಡುಬರುವುದಿಲ್ಲ. ಬದಲಾಗಿ ಜನ್ಮತಃ ಯಾರೂ ಶ್ರೇಷ್ಠರಲ್ಲ, ಮಧ್ಯಮರಲ್ಲ, ಕನಿಷ್ಠರೂ ಅಲ್ಲ ಎಂದೇ ಭೋಧಿಸುತ್ತವೆ.

                     ಯಾವುದೇ ವ್ಯಕ್ತಿಯ ಜಾತಿಯನ್ನು ಆತ ಯಾವ ಹಂತದ ಪ್ರಜ್ಞಾಮಟ್ಟದಿಂದ ಜೀವನ ನಡೆಸುತ್ತಿರುವನೋ ಅದರಿಂದ ಮಾತ್ರವೇ ಗುರುತಿಸಲ್ಪಡುತ್ತಾನೆಯೇ ಹೊರತು ಹುಟ್ಟಿನಿಂದಲ್ಲ. ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದವರೆಲ್ಲಾ ಬ್ರಾಹ್ಮಣರಲ್ಲ. ವೇದ ಮಂತ್ರಗಳನ್ನು ಪಠಿಸುವುದನ್ನು ಕಲಿತಾಕ್ಷಣ ಯಾರೂ ಬ್ರಾಹ್ಮಣರಾಗೋದಿಲ್ಲ. ಹಾಗೆಯೇ ಬೇರೊಬ್ಬನು ಶರೀರ ಶ್ರಮದಿಂದ ದುಡಿಮೆ ಮಾಡಿಕೊಂಡು ಹೋಗುತ್ತಿದ್ದಾನೆಂಬ ಕಾರಣಕ್ಕೆ ಶೂದ್ರನಾಗಿದ್ದಾನೆಂದೂ ಅರ್ಥವಲ್ಲ. ಒಂದೇ ತಂದೆ ತಾಯಿಗೆ ಬ್ರಾಹ್ಮಣನೂ ಹುಟ್ಟ ಬಹುದು, ಶೂದ್ರ, ವೈಶ್ಯ, ಕ್ಷತ್ರಿಯರೂ ಜನಿಸಬಹುದು. ಹಾಗೆಯೇ ಒಂದೇ ಕುಟುಂಬದಲ್ಲಿ ನಾನಾ ಜಾತಿಯ ಜನ ಜೀವಿಸುತ್ತಿರಬಹುದು.

                      ವಿಪರ್ಯಾಸ ನೋಡಿ, ಚರಂಡಿ ಗುಡಿಸುವವನನ್ನು ಅಥವಾ ಶೌಚಾಲಯಗಳನ್ನು ಶುಚಿಗೊಳಿಸುವವನನ್ನು ನಾವು ನಿಕೃಷ್ಠವಾಗಿ ಕಾಣುತ್ತೇವೆ. ನಮ್ಮ ಸಮಾಜ ಅವರಿಗೆ ಅಸ್ಪೃಶ್ಯರೆಂಬ ಹಣೆಪಟ್ಟಿ ಕಟ್ಟಿದ್ದೇವೆ. ಇಂಥವರಿಗೆ ಅತ್ತ ವೃತ್ತಿ ಗೌರವವೂ ಇಲ್ಲ, ಇತ್ತ ವ್ಯಕ್ತಿ ಗೌರವವೂ ಇಲ್ಲ. ಆದರೆ ನಿಜ ವಾಸ್ತವ ಎಂದರೆ ಇವರೇ ನಿಜವಾದ ಶ್ರೇಷ್ಠರು. ಯಾರೂ ನಿರ್ವಹಿಸದ ಆದರೆ ಎಲ್ಲರಿಗೂ ಅವಶ್ಯವಾದ ಕೆಲಸವನ್ನು ಇವರು ಮಾಡುತ್ತಾರೆ. ನಾವು ಆರೋಗ್ಯದಿಂದಿರಲು ಇವರು ಪರೋಕ್ಷವಾಗಿ ಕಾರಣಿಭೂತರಾಗಿರುತ್ತಾರೆ.

                      ಸ್ವಲ್ಪ ಯೋಚಿಸಿ ನೋಡಿ, ಈ ಸಮಾಜದಲ್ಲಿ ಕ್ಷೌರಿಕನಿಲ್ಲದೆ ಇರುತ್ತಿದ್ದರೆ ನಿಮ್ಮ ತಲೆಗೆ ಹುಳು ಬಿದ್ದು ಗಬ್ಬೆದ್ದು ಹೋಗುತ್ತದೆ. ತನ್ನ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾದ ಕ್ಷೌರಿಕನ ಮೇಲೇಕೆ ಕೀಳು ಭಾವನೆ..? ಅವನನ್ನು ಏಕೆ ಅಪಶಕುನ ಎನ್ನುತ್ತೀರಿ..? ಚಪ್ಪಲಿ ಹೊಲೆದು ಕೊಡಲು ಚಮ್ಮಾರನಿಲ್ಲದೇ ಇರುತ್ತಿದ್ದರೆ ಬರಿಗಾಲೇ ಗತಿ, ನಿಮ್ಮ ಪಾದಕ್ಕೆ ರಕ್ಷಣೆ ಕೊಡಲು ನಿಮಗೆ ಸಹಕರಿಸಿದ್ದಕ್ಕೆ ನೀವು ಕೀಳಾಗಿ ನೋಡುವಿರಾ…? ಬಟ್ಟೆ ಹೊಲೆಯುವ ದರ್ಜಿ ಉಡುಪಿನ ಕಲ್ಪನೆ ನೀಡದಿರುತ್ತಿದ್ದರೆ ನೀವು ಬೆತ್ತಲಾಗಿ ತಿರುಗಬೇಕಿತ್ತು.

                       ಪ್ರಸ್ತುತ ಜಾತಿ ಪದ್ಧತಿಯನ್ನು ಸುತ್ತಿಬಳಸದೆ ಅವರವರ ಗುಣ ಸ್ವಭಾವಗಳಿಗನುಸಾರ ಸಾಧ್ಯವಾದಷ್ಟು ಸರಳವಾಗಿ ಹೇಳ ಬಯಸುತ್ತೇನೆ. ಅಸ್ಪೃಶ್ಯ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬುವುದು ನಮ್ಮ ನಮ್ಮ ಸ್ವಭಾವಗಳಿಗನುಸಾರವಾಗಿ ಪ್ರಚಲಿತಗೊಂಡ ವರ್ಣಗಳು

ಅಸ್ಪೃಶ್ಯ

ದುಡಿಯುವ ಶಕ್ತಿಯಿದ್ದೂ ಬೇಡುವವ ಅಸ್ಪೃಶ್ಯ, ಸಾರ್ವಜನಿಕ ಸಂಪತ್ತನ್ನು ಲೂಟಿ ಹೊಡೆಯುವವ ಅಸ್ಪೃಶ್ಯರಲ್ಲಿ ಅಸ್ಪೃಶ್ಯ. ಬೇರೆಯವರಿಗಾಗಿ ಯಾವುದೇ ಕೆಲಸ ಮಾಡಲಾರರು ಆದರೆ ಬೇರೆಯವರು ದುಡಿದು ತನಗಾಗಿ ನೀಡಬೇಕೆಂಬ ನಿರೀಕ್ಷೆ. ಪರಾವಲಂಬಿಯಾಗಿ ಬೇರೆಯವರ ಬಳಿ ಭಿಕ್ಷೆ ಬೇಡುತ್ತಿರುತ್ತಾರೆ. ಇವರಿಗೆ ಸೇವಾ ಮನೋಭಾವವೆ ಇರೋದಿಲ್ಲ ಎಲ್ಲಾ ಶ್ಯೂನ್ಯ . ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಾರೆ. ದೇಶ ಸೇವೆ ಮಾಡುವ ಬದಲು ದೇಶವನ್ನು ಮಾರಿ ದೇಶವನ್ನು ವಿನಾಶದ ಅಂಚಿಗೆ ತರುವವರು ಅಸ್ಪೃಶ್ಯರಲ್ಲಿ ಅಸ್ಪೃಶ್ಯರು.

ಶೂದ್ರ

ಜಗತ್ತಿನಲ್ಲಿ ಇವರ ಸಂಖ್ಯೆಯೇ ಜಾಸ್ತಿ, ಶೂದ್ರಕುಲದಲ್ಲಿ ಹುಟ್ಟಿದರೆಂಬ ಕಾರಣಕ್ಕೆ ಅವರನ್ನು ಒಂದು ನಿರ್ದಿಷ್ಟ ರೀತಿಯ ಕರ್ಮಾಚರಣೆ ಮಾಡುವವರೆಂದು ನಾವೆಲ್ಲಾ ಭಾವಿಸಿದ್ದೇವೆಯೇ ಹೊರತು ತನ್ನ ಇರುವಿಕೆಯಿಂದ ಉನ್ನತ ಹಂತದ ಪ್ರಜ್ಞಾಮಟ್ಟದಲ್ಲಿ ಜೀವಿಸುತ್ತಿದ್ದರೆ ಆತ ಕೂಡ ಬ್ರಾಹ್ಮಣನೇ ಎಂದು ಭಾವಿಸಿಲ್ಲ. ಸದಾ ಇತರರನ್ನು ಆಕರ್ಷಿಸುವ ತವಕ. ಯಾವಾಗಲೂ ತನ್ನ ಮರ್ಯಾದೆ ಬಗ್ಗೆ ಚಿಂತಿಸುತ್ತಿರುತ್ತಾನೆ. ಮನಸ್ಸು ಸಮಸ್ಯೆಗಳ ಸಾಗರ, ವಿಚಲಿತಗೊಳಿಸುವ ಸನ್ನಿವೇಶಗಳನ್ನು ಸಮರ್ಪಕವಾಗಿ ನಿಭಾಯಿಸಲಾಗದೆ, ಹಾಗೆಯೇ ಬಿಡದೆ ಒದ್ದಾಡುತ್ತಿರುತ್ತಾನೆ. ಇನ್ನಷ್ಟು ಮತ್ತಷ್ಟು ಮಗದಷ್ಟು ಬೇಕು ಅನ್ನೋ ಹಂಬಲ, ಶ್ರಮದಿಂದ ದುಡಿಮೆ ಮಾಡಿಕೊಂಡು ಇನ್ನೊಬ್ಬರ ಹಾಗೆ ನಾನಾಗಬೇಕು ಎಂದು ದಿನವಿಡೀ ಕಷ್ಟ ಪಡುತ್ತಾನೆ. ಕಡಿಮೆ ಕೆಲಸ ಹೆಚ್ಚು ಸಂಪಾದಿಸುವ ಆಸಕ್ತಿ ಇಟ್ಟುಕೊಂಡಿರುತ್ತಾನೆ.


ವೈಶ್ಯ

ಒಂದು ದೇಶದ ವಿತ್ತ ಶಕ್ತಿಯ ಮೂಲವೇ ವೈಶ್ಯರು. ಸನ್ಮಾರ್ಗದಿಂದ ಧನಾರ್ಜನೆ ಮಾಡುವವನು ವೈಶ್ಯ. ಇಂತಹುದೇ ಕೆಲಸ ನಿರ್ವಹಿಸಿ ಬದುಕಬೇಕೆಂಬ ಕಟ್ಟುಪಾಡುಗಳಿಲ್ಲ. ಮಾಡುವ ಕೆಲಸವನ್ನು ಆಸಕ್ತಿಯಿಂದ ಆನಂದದಿಂದ ಮಾಡುವವನು ವೈಶ್ಯ. ಪ್ರಾಮಾಣಿಕತೆಯಿಂದ ಸಂಪಾದಿಸುವವ. ಅಬಲರಿಗೆ ಆಶ್ರಯ ನೀಡಿ ಸಶಕ್ತರನ್ನಾಗಿಸುವ ಉದಾರ ಗುಣವುಳ್ಳವನೂ ಆಗಿರುತ್ತಾನೆ. ಜವಾಬ್ದಾರಿಯುತ ಗುಣವಿರುತ್ತದೆ. ಯಾರೂ ಸರಿ ಇಲ್ಲ ಎಂದು ಜಗಳವಾಡುವ ಬದಲು ತನ್ನನ್ನು ತಾನು ಸರಿಪಡಿಸಿಕೊಳ್ಳುವುದರತ್ತ ಗಮನ ಹರಿಸುತ್ತಾನೆ.


ಕ್ಷತ್ರಿಯ

ನಿಸ್ವಾರ್ಥ ಮನಸ್ಥಿತಿಯುಳ್ಳವನು ಕ್ಷತ್ರಿಯ ತನ್ನ ಆಸೆ ಆಕಾಂಕ್ಷೆಯನ್ನು ಬದಿಗಿಟ್ಟು ಜನರ ರಕ್ಷಣೆ ಮಾಡುವವ ಕ್ಷತ್ರಿಯ. ಕ್ಷತ್ರಿಯನಿಗೆ ಪ್ರೇಮವೇ ದೇವರು. ತನ್ನ ಜೀವನವಿರುವುದು ತನ್ನನ್ನು ನಂಬಿದ ಸಮುದಾಯಕ್ಕೆ ಎನ್ನುತ್ತಾನೆ. ನ್ಯಾಯ ಹಾಗೂ ಸಮಾನಾವಕಾಶಗಳನ್ನು ಕಲ್ಪಿಸುವುದು ಇವನ ಮೂಲ ಮೌಲ್ಯಗಳು. ಶೋಷಣೆಗೆ ಒಳಗಾದವರ ಪರವಾಗಿ ನಿಂತು ಹೋರಾಡುವ ಮನಸ್ಥಿತಿಯುಳ್ಳವನಾಗಿರುತ್ತಾನೆ. ಒಂದು ಹೊಸ ವ್ಯವಸ್ಥೆಯನ್ನೇ ಹುಟ್ಟು ಹಾಕಬಲ್ಲ ಧೀರನಾಗಿರುತ್ತಾನೆ.

ಬ್ರಾಹ್ಮಣ

ಹಳ್ಳಿಯಿಂದ ಪಟ್ಟಣದತ್ತ ನಡೆಯುವವ ಶೂದ್ರನಾದರೆ, ಪಟ್ಟಣದಿಂದ ಹಳ್ಳಿಯತ್ತ, ಹಳ್ಳಿಯಿಂದ ನಿಸರ್ಗದತ್ತ ನಡೆಯುವವ ಬ್ರಾಹ್ಮಣ. ಶೂದ್ರನಾದವನಿಗೆ ಕೈತುಂಬಾ ದುಡ್ಡು ಸಿಗುವ ಕೆಲಸದ ಹುಚ್ಚು , ವೈಶ್ಯನಿಗೆ ಲಾಭ ತರಬಲ್ಲ ಸವಾಲುಗಳನ್ನು ಸ್ವೀಕರಿಸುವ ಹುಚ್ಚು, ಕ್ಷತ್ರಿಯನಿಗೆ ತನ್ನನ್ನು ನಂಬಿದವರಿಗೆ ಪ್ರಾಣವನ್ನೇ ನೀಡುವ ಹುಚ್ಚು, ಈ ಬ್ರಾಹ್ಮಣನಿಗೆ ಯಾರೂ ಮಾಡಲು ತಯಾರಿಲ್ಲದ ಆದರೆ ಎಲ್ಲರಿಗೂ ಅವಶ್ಯಕತೆ ಇರುವ ಕೆಲಸವನ್ನು ಕೈಗೊಳ್ಳುವ ಹುಚ್ಚು. ಜಗತ್ತಿಗೆ ಒಳಿತಾಗಬೇಕೆಂದು ದೇವರಲ್ಲಿ ಕೇಳಿ ಕೊಳ್ಳುವವ, ಸತ್ಯವೇ ದೇವರೆಂದು ಸಾಧನೆ ಮಾಡುತ್ತಿರುವವನು ಬ್ರಾಹ್ಮಣ. ತನಗೆ ಬೇಕಾಗಿರುವ ಆನಂದ ಎಲ್ಲರಿಗೂ ಸಿಗಲೆಂದು ಬೇಡುತ್ತಾನೆ.

“ಗುಣ ಮತ್ತು ಕೆಲಸಗಳಿಗನುಗುಣವಾಗಿ ನಾನು ಚತುರ್ವಣಗಳನ್ನು ಸೃಷ್ಟಿಸಿದ್ದೇನೆ” ಎಂದು ಭಗವಂತನಾದ ಶ್ರೀಕೃಷ್ಣನೇ ಗೀತೆಯಲ್ಲಿ ಉದ್ಧರಿಸಿದ್ದಾನೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಆಯಾ ಸಮಯದಲ್ಲಿ ಆಯಾ ವರ್ಣದವನಾಗಿ ಬದಲಾಗುತ್ತಾನೆ ಎಂದು ಹೇಳಬಹುದು. ಅವನು ಮಾಡುವ ಕೆಲಸ ಹಾಗೂ ಅವನ ಸಂಸ್ಕಾರ, ನಡವಳಿಕೆ ಅವನು ಯಾವ ವರ್ಣಕ್ಕೆ ಸೇರಿದವನು ಎಂದು ನಿರ್ಧರಿಸುತ್ತದೆ ಅಂತ ಹೇಳುತ್ತಾ ನನ್ನ ಲೇಖನಕ್ಕೆ ಪೂರ್ಣವಿರಾಮ ಇಡುತ್ತಿದ್ದೇನೆ.

ಧನ್ಯವಾದಗಳು

✍🏻 ಎಸ್ ಕೆ ಬಂಗಾಡಿ.

Leave a Reply

Your email address will not be published. Required fields are marked *