ಇವರು ತಮ್ಮ ವೃತ್ತಿ ಬದುಕನ್ನು ಭಾರತೀಯ ಸೇನೆಯ ಮುಖಾಂತರ ಆರಂಭಿಸಿ, ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದರು. 1988ರಲ್ಲಿ ಕಚ್ಚೂರಿನಲ್ಲಿ ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಆರಂಭವಾದಾಗ, ಆರಂಭದ ದಿನಗಳಿಂದಲೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಜೊತೆಗೆ ಅವಿಶ್ರಾಂತ ದುಡಿದರು. ಭಂಡಾರಿ ಸಮಾಜದ ಕುಲದೈವ ಶ್ರೀ ನಾಗೇಶ್ವರ ದೇವರ ದೇವಸ್ಥಾನದ ಮಂದಿರ ನಿರ್ಮಾಣದ ರೂವಾರಿಯಾಗಿಯೂ ಗುರುತಿಸಿಕೊಂಡಿದ್ದರು. ಪ್ರಾರಂಭದ ದಿನಗಳಿಂದಲೂ ಭಂಡಾರಿ ಸಮಾಜದ ಒಗ್ಗಟ್ಟಿಗಾಗಿ, ಏಳಿಗೆಗಾಗಿ ಹಗಲಿರುಳೆನ್ನದೇ ನಿಸ್ವಾರ್ಥ ಸೇವೆಯನ್ನು ಮಾಡಿದ ಹಿರಿಯ ಜೀವವನ್ನು ನಾವು ಎಷ್ಟು ನೆನಪು ಮಾಡಿಕೊಂಡರು ಸಾಲದು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ನಾಗದೇವರಿಗೆ ವಿಶೇಷವಾದ ಪೂಜಾಕಾರ್ಯಗಳು ನೆರವೇರಲು ಅನುವು ಮಾಡಿಕೊಡುವ ಉದ್ದೇಶದಿಂದ ಸಂಪೂರ್ಣ ತಮ್ಮದೇ ಖರ್ಚಿನಲ್ಲಿ ಶ್ರೀ ನಾಗ ದೇವರ ಗರ್ಭಗುಡಿಯನ್ನು ನಿರ್ಮಿಸಿ ಕೊಟ್ಟಿರುವುದು ನಾವೆಲ್ಲಾ ಅವರಿಗೆ ಚಿರರುಣಿಯಾಗಿರಬೇಕಾದ ಸಂಗತಿಯೇ ಸರಿ.
ಜನಸ್ನೇಹಿ, ಜನಾನುರಾಗಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿದ ರೀತಿ ಮತ್ತು ಕೊಡುಗೈ ದಾನಿಯಾಗಿದ್ದ ಶ್ರೀ ಭೋಜರಾಜ ಭಂಡಾರಿಯವರು ನಮ್ಮ ಸಮಾಜಕ್ಕೆ ಮಾದರಿಯಾಗಿದ್ದರು. ಅವರ ವಿದಾಯ ನಮ್ಮ ಸಮಾಜಕ್ಕೆ ಆಘಾತವನ್ನು ಉಂಟುಮಾಡಿದೆ. ಅವರ ಪತ್ನಿ, ಪುತ್ರ ಮತ್ತು ಪುತ್ರಿಯರಿಗೆ, ಅವರ ಕುಟುಂಬ ವರ್ಗಕ್ಕೆ, ಅವರ ಅಪಾರ ಅಭಿಮಾನಿಗಳಿಗೆ, ಹಂಗಾರಕಟ್ಟೆ ಭಂಡಾರಿ ಕುಟುಂಬಸ್ಥರಿಗೂ ಮತ್ತು ಸಮಸ್ಥ ಭಂಡಾರಿ ಸಮಾಜದವರಿಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.
ಇದು ನಮ್ಮ “ಭಂಡಾರಿವಾರ್ತೆ” ತಂಡದ ಅಶ್ರುತರ್ಪಣ.